More

    ಕರೊನಾತಂಕ ಮಧ್ಯೆ ಡೆಂಘೆ ಕಾಟ

    ಮಂಗಳೂರು: ದ.ಕ.ಜಿಲ್ಲೆಯಲ್ಲಿ ಒಂದೆಡೆ ಕರೊನಾ ಆತಂಕ, ಮತ್ತೊಂದೆಡೆ ವರ್ಷವೂ ಬರುವ ಮಾರಣಾಂತಿಕ ಡೆಂಘೆ ಕಾಟ ಶುರುವಾಗಿದೆ. ಈ ವರ್ಷ ಗ್ರಾಮಾಂತರ ಭಾಗದಲ್ಲಿ ಡೆಂಘೆ ತಲೆ ಎತ್ತಿದೆ.
    ಕಳೆದ ಎರಡು ತಿಂಗಳಲ್ಲಿ ಜಿಲ್ಲೆಯಲ್ಲಿ 50ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದ್ದರೆ ಜನವರಿಯಿಂದ ಈ ವರೆಗೆ 89 ಪ್ರಕರಣ ವರದಿಯಾಗಿವೆ. ಕೆಲ ದಿನಹಿಂದೆಯಷ್ಟೇ ಪುತ್ತೂರಿನ ಬೆಟ್ಟಂಪಾಡಿಯ ಓರ್ವ ಮಹಿಳೆ ಮೃತಪಟ್ಟಿದ್ದರು.
    ಕಳೆದ ವರ್ಷ ಇಡೀ ಜಿಲ್ಲೆಯನ್ನು ಡೆಂಘೆ ತಲ್ಲಣಗೊಳಿಸಿದ್ದು 1500ಕ್ಕೂ ಹೆಚ್ಚು ಮಂದಿ ಸೋಂಕಿಗೊಳಗಾಗಿ 13 ಮಂದಿ ಮೃತಪಟ್ಟಾಗ. ಮುಖ್ಯವಾಗಿ ಮಂಗಳೂರು ನಗರದಲ್ಲಂತೂ ವಾರ್ಡ್‌ವಾರು ಮನಪಾ ತಂಡ ರಚಿಸಿ ಮನೆಗಳಿಗೆ ಭೇಟಿ ಮಾಡಿ ಲಾರ್ವ ಪತ್ತೆ ಕಾರ್ಯ ನಡೆಸಬೇಕಾಗಿತ್ತು.

    ಈ ಬಾರಿ ಕರೊನಾ ಭೀತಿಯಲ್ಲಿ ಇರುವಾಗಲೇ ಡೆಂಘೆ ಪುತ್ತೂರು, ಬೆಳ್ತಂಗಡಿ, ಸುಳ್ಯ ವ್ಯಾಪ್ತಿಯಲ್ಲಿ ಕಾಣಿಸಿಕೊಂಡಿದೆ. ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮದಲ್ಲಿ 20ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಮೂಡುಬಿದಿರೆಯ ಶಿರ್ತಾಡಿ, ಮಂಗಳೂರಿನ ಬಜ್ಪೆ, ಜಪ್ಪು ಕುಡ್ಪಾಡಿ ಪ್ರದೇಶದಿಂದಲೂ ಪ್ರಕರಣ ಬಂದಿದೆ.
    ಸಾಮಾನ್ಯವಾಗಿ ಬೇಸಿಗೆಯ ಮಳೆಯಿಂದಾಗಿ ಟೈರು, ಹೂವಿನ ಚಟ್ಟಿ, ಸೀಯಾಳದ ಖಾಲಿ ಚಿಪ್ಪು, ನೀರು ನಿಲ್ಲುವಂತಹ ಯಾವುದೇ ವಸ್ತುಗಳಲ್ಲಿ ನೀರು ನಿಂತು ಅದರಲ್ಲಿ ಸೊಳ್ಳೆ ಮೊಟ್ಟೆ ಇಟ್ಟು ಸಂತಾನೋತ್ಪತ್ತಿ ಮಾಡುತ್ತದೆ. ಹೀಗೆ ಸಾವಿರಾರು ಸಂಖ್ಯೆಯಲ್ಲಿ ಹುಟ್ಟುವ ಈಡಿಸ್ ಈಜಿಪ್ಟೈ ಜಾತಿಯ ಸೊಳ್ಳೆಗಳೇ ಡೆಂಘೆ ಹರಡುವ ವಾಹಕಗಳು.
    ಪಶ್ಚಿಮ ಘಟ್ಟ ತಪ್ಪಲಿನ ಬೆಳ್ತಂಗಡಿ, ಪುತ್ತೂರು, ಸುಳ್ಯದಲ್ಲಿ ಮೇ ಅಂತ್ಯಕ್ಕೆ ಮಳೆ ಆರಂಭವಾಗಿದೆ. ಇದು ಮಾತ್ರವಲ್ಲದೆ ಸ್ಪ್ರಿಂಕ್ಲರ್‌ನಲ್ಲಿ ತೋಟಕ್ಕೆ ನೀರು ಹಾಯಿಸಲಾಗುತ್ತದೆ. ತೋಟದಲ್ಲಿ ಬೀಳುವ ಅಡಕೆ ಹಾಳೆಗಳಲ್ಲಿ ಸೊಳ್ಳೆ ಹುಟ್ಟಿಕೊಂಡು ಡೆಂಘೆ ಪ್ರಕರಣ ಏರಿಕೆಯಾಗುತ್ತದೆ ಎನ್ನುವುದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯರಿ ಅವರ ಅಭಿಮತ.

    ದ.ಕ ಜಿಲ್ಲೆಯಲ್ಲಿ ಡೆಂಘೆ
    2016ರಲ್ಲಿ 485 ಪ್ರಕರಣ, 1 ಸಾವು
    2017ರಲ್ಲಿ 136 ಪ್ರಕರಣ, 2 ಸಾವು
    2018ರಲ್ಲಿ 584 ಪ್ರಕರಣ, 3 ಸಾವು
    2019ರಲ್ಲಿ 1539 ಪ್ರಕರಣ, 13 ಸಾವು
    2020 89 ಪ್ರಕರಣ, 1 ಸಾವು (ಇದುವರೆಗೆ)

    ಉಡುಪಿ ದಿನಕ್ಕೆ ಒಂದೆರಡು ಪ್ರಕರಣ
    ಉಡುಪಿ ಜಿಲ್ಲೆಯಲ್ಲಿ ಸದ್ಯ ಡೆಂಘೆ ಜ್ವರ ಪ್ರಕರಣ ನಿಯಂತ್ರಣದಲ್ಲಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ದಿನಕ್ಕೆ ಒಂದೆರಡು ಪ್ರಕರಣ ವರದಿಯಾಗುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಈ ಸಮಯದಲ್ಲಿ ಡೆಂಘೆ ಪ್ರಕರಣ ಹೆಚ್ಚು ಇದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.
    ಬಾಧಿತರು ಶೀಘ್ರ ಗುಣಮುಖರಾಗುತ್ತಿದ್ದಾರೆ. ಡೆಂಘೆ ನಿಯಂತ್ರಣಕ್ಕೆ ಎಲ್ಲ ರೀತಿಯ ಕ್ರಮವನ್ನು ಕೈಗೊಳ್ಳಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಈ ವರ್ಷ ಇಲ್ಲಿವರೆಗೆ 72 ಡೆಂಘೆ ಪ್ರಕರಣ ವರದಿಯಾಗಿದೆ. ಜನವರಿಯಿಂದ ಏಪ್ರಿಲ್ ಅಂತ್ಯದವರೆಗೆ 48 ಪ್ರಕರಣ, ಮೇ ಮತ್ತು ಜೂನ್ ತಿಂಗಳ ಇಲ್ಲಿವರೆಗೆ 24 ಪ್ರಕರಣ ಕಾಣಿಸಿಕೊಂಡಿದೆ. 2018ರ ಡಿಸೆಂಬರ್ ಅಂತ್ಯದವರೆಗೆ ಒಟ್ಟು 228 ಹಾಗೂ 2019ರಲ್ಲಿ ಡಿಸೆಂಬರ್ ಅಂತ್ಯದವರೆಗೆ 280 ಡೆಂಘೆ ಪ್ರಕರಣ ದಾಖಲಾಗಿವೆ. ಈ ನಡುವೆ ಇತರೆ ಸಾಂಕ್ರಾಮಿಕ ಕಾಯಿಲೆಗಳ ಪ್ರಮಾಣ ಕಡಿಮೆ ಇದ್ದು, ಮಲೇರಿಯ 21 ಪ್ರಕರಣವಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಬೆಳ್ತಂಗಡಿಯ ನೆರಿಯ, ಪುತ್ತೂರಿನ ಬೆಟ್ಟಂಪಾಡಿಗೆ ನಮ್ಮ ತಂಡ ಭೇಟಿ ನೀಡಿ ಪರಿಶೀಲಿಸಿದೆ, ಮುಂದೆ ಆ ಪ್ರದೇಶದಲ್ಲಿ ಆಶಾ ಕಾರ್ಯಕರ್ತೆಯರು ಮನೆ ಮನೆ ಭೇಟಿ ನೀಡಿ ಜ್ವರದ ಸಮೀಕ್ಷೆ ನಡೆಸಲಿದ್ದಾರೆ. ಡೆಂಘೆ ಹರಡದಂತೆ ಕ್ರಮ ವಹಿಸಲಾಗುತ್ತದೆ.
    -ಡಾ.ರಾಮಚಂದ್ರ ಬಾಯರಿ, ಆರೋಗ್ಯಾಧಿಕಾರಿ, ದ.ಕ

    ಕಳೆದ ವರ್ಷ ಈ ಸಮಯಕ್ಕೆ ಹೋಲಿಸಿದಲ್ಲಿ ಡೆಂಘೆ ಪ್ರಕರಣ ಹೆಚ್ಚಿದೆ. ಇತರೆ ಸಾಂಕ್ರಮಿಕ ರೋಗಗಳು ಕಡಿಮೆ. ರೋಗ ಲಕ್ಷಣ ಇರುವವರು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರೀಕ್ಷೆ ಮಾಡಿಸಿ, ಚಿಕಿತ್ಸೆ ಪಡೆಯಬೇಕು. ಕೋವಿಡ್-19 ಒತ್ತಡದ ನಡುವೆಯೂ ಡೆಂಘೆ ಹರಡದಂತೆ ಕ್ರಮ ವಹಿಸಲಾಗುತ್ತಿದೆ. ಸೊಳ್ಳೆ ಉತ್ಪತ್ತಿ ತಾಣ ನಾಶ, ಸ್ವಚ್ಛತೆ ಮತ್ತು ಆರೋಗ್ಯ ಜಾಗೃತಿ ಕಾರ್ಯಕ್ಕೆ ಒತ್ತು ನೀಡುತ್ತಿದ್ದೇವೆ.
    ಡಾ.ಸುಧೀರ್ ಚಂದ್ರ ಸೂಡ
    ಡಿಎಚ್‌ಒ ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts