More

    ಜಡ್ಕಲ್‌ನಲ್ಲಿ ಡೆಂಘೆ ಜಡ್ಡಿನ ಹಾವಳಿ

    ಕುಂದಾಪುರ: ಕಳೆದೊಂದು ತಿಂಗಳಿಂದ ಜಡ್ಕಲ್ ಗ್ರಾಮದ ಮುದೂರಲ್ಲಿ ಡೆಂಘೆ ಜ್ವರದ ಹಾವಳಿಗೆ ಜನ ಬೆಚ್ಚಿದ್ದಾರೆ. ಪ್ರತಿದಿನ ಕುಂದಾಪುರ ತಾಲೂಕು ಸರ್ಕಾರಿ ಆಸ್ಪತ್ರೆಗೆ 50ಕ್ಕೂ ಮಿಕ್ಕಿ ರೋಗಿಗಳು ದಾಖಲಾಗುತ್ತಿದ್ದು, ಡೆಂಘೆ ಪೀಡಿತರಿಗೆ ವಿಶೇಷ ವಾರ್ಡ್ ತೆರೆದು ನೋಡಲ್ ಅಧಿಕಾರಿಯನ್ನು ನೇಮಕ ಮಾಡಲಾಗಿದೆ.
    ಉಡುಪಿ ಜಿಲ್ಲಾ ಆಸ್ಪತ್ರೆ, ಮಂಗಳೂರು ವೆನ್‌ಲಾಕ್ ಆಸ್ಪತ್ರೆಯಲ್ಲದೆ ಖಾಸಗಿ ಆಸ್ಪತ್ರೆಗಳಿಗೂ ಪೀಡಿತರು ದಾಖಲಾಗುತ್ತಿದ್ದು, ಕೊಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಒಂದು, ಜಡ್ಕಲ್ ಗ್ರಾಮದಲ್ಲಿ ಎರಡು ಆಂಬುಲೆನ್ಸ್ ನಿಯೋಜನೆ ಮಾಡಿದ್ದರೂ ರೋಗಿಗಳನ್ನು ಸಾಗಿಸಲು ಪರದಾಡುವಂತಾಗಿದೆ. ಮುದೂರು ಪರಿಸರದ 500ರಷ್ಟು ಜನ ಡೆಂಘೆ ಜ್ವರದಿಂದ ಬಳಲುತ್ತಿದ್ದು, ಪ್ರತಿ ಮನೆಯಲ್ಲಿ ಒಬ್ಬರಲ್ಲದಿದ್ದರೆ ಒಬ್ಬರಿಗೆ ಜ್ವರ ಬಾಧಿಸಿದೆ. ಕೆಲ ಮನೆಗಳಲ್ಲಿ ಎಲ್ಲರೂ ಆಸ್ಪತ್ರೆಗೆ ದಾಖಲಾಗಿರುವುದರಿಂದ ಮನೆಯಲ್ಲಿರುವ ಹಸುಗಳಿಗೆ ಹುಲ್ಲು ಹಾಕುವುದಕ್ಕೂ ಜನ ಇಲ್ಲದಂತಾಗಿದೆ!
    ವಿಪರೀತ ಡೆಂಘೆ ಪೀಡಿತ ಪ್ರದೇಶಕ್ಕೆ ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ., ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಾಗಭೂಷಣ ಉಡುಪ ಇತ್ತೀಚೆಗೆ ಭೇಟಿ ನೀಡಿದ್ದರು. ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಜತೆ 20 ಜನರ 10 ತಂಡ ಮಾಡಿದ್ದು, ಮುದೂರು ಪರಿಸರದಲ್ಲಿ ಮೊಕ್ಕಾಂ ಹೂಡಿದೆ. ಅಲ್ಲದೆ ಮೇಲುಸ್ತುವಾರಿಗೆ ಜಿಲ್ಲಾ ತಂಡ ಕೂಡ ಪ್ರತಿದಿನ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ.
    ಕುಂದಾಪುರ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಡೆಂೆ ಜ್ವರ ಬಾಧಿತರ ಚಿಕಿತ್ಸೆಗೆ ವಿಶೇಷ ವಾರ್ಡ್ ತೆರೆದಿದ್ದು, ಸಹಾಯಕ ವೈದ್ಯಾಧಿಕಾರಿ ಡಾ.ನಾಗೇಶ್ ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ.
    ಸಚಿವರ ಭೇಟಿಗೆ ಆಗ್ರಹ: ಮುದೂರು ಗ್ರಾಮದಲ್ಲಿ ಎರಡೂವರೆ ತಿಂಗಳಿಂದ ಡೆಂಘೆ ಹಾವಳಿಯಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರು ಈವರೆಗೆ ಭೇಟಿ ನೀಡದಿರುವುದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದಿದ್ದಾರೆ. ಕುಂದಾಪುರ ಸರ್ಕಾರಿ ಆಸ್ಪತ್ರೆ ಒಂದರಲ್ಲೇ 450 ಜನ ಒಳರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ. ಪ್ರಸಕ್ತ 40ರೊಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರತಿದಿನ ಡೆಂಘೆ ರೋಗಿಗಳು ಆಸ್ಪತ್ರೆಗೆ ದಾಖಲಾಗುತ್ತಿದ್ದು, ಮನೆಗೆ ಮನೆಯೇ ಖಾಲಿಯಾಗುತ್ತಿದೆ. ಆದರೆ ಜಿಲ್ಲೆಯ ಉಸ್ತುವಾರಿ ಸಚಿವರು ಇದ್ಯಾವುದರ ಬಗ್ಗೆ ಗಮನಹರಿಸಿಲ್ಲ ಹಾಗೂ ಆಸ್ಪತ್ರೆಗೆ ತೆರಳಿ ರೋಗಿಗಳ ಯೋಗ ಕ್ಷೇಮ ವಿಚಾರಿಸಿಲ್ಲ. ಉಸ್ತುವಾರಿ ಸಚಿವರು, ಶಾಸಕರು ವಿಶೇಷವಾಗಿ ಗಮನಹರಿಸಿ ಆರೋಗ್ಯ ಇಲಾಖೆಗೆ ಸೂಕ್ತ ಮಾರ್ಗದರ್ಶನ ನೀಡಿ ಅಗತ್ಯ ವ್ಯವಸ್ಥೆ ಕಲ್ಪಿಸಿ ರೋಗ ನಿಯಂತ್ರಣ ಮಾಡಬೇಕು ಎಂದು ದಲಿತ ಸಂಘರ್ಷ ಸಮಿತಿ ಉಡುಪಿ ಜಿಲ್ಲಾ ಘಟಕ ಆಗ್ರಹಿಸಿದೆ.
    ವಿಶ್ರಾಂತಿ ಅವಶ್ಯ: ಡೆಂಘೆ ಜ್ವರ ಪೀಡಿತರಿಗೆ ವಿಪರೀತ ಗಂಟು ನೋವು ಕಾಣಿಸಿಕೊಳ್ಳುವುದರಿಂದ ವಿಶ್ರಾಂತಿ ಮೊದಲ ಮದ್ದು. ಡೆಂಘೆ ಪೀಡಿತರ ಬ್ಲಡ್ ಪ್ಲೇಟ್ಲೆಟ್ ಕಡಿಮೆಯಾಗುವುದು ರೋಗದ ಮತ್ತೊಂದು ಮಾರಕ ಲಕ್ಷಣ. ಪ್ಲೇಟ್ಲೆಟ್ ತೀರ ಕಡಿಮೆಯಾದರೆ ರೋಗಿಗಳಿಗೆ ರಕ್ತ ನೀಡಬೇಕಾಗುತ್ತದೆ. ತಾಲೂಕು ಆಸ್ಪತ್ರೆ ಅವಶ್ಯವಿರುವ ರೋಗಿಗಳಿಗೆ ದಾನಿಗಳಿಂದ ರಕ್ತ ಕೊಡಿಸುವ ವ್ಯವಸ್ಥೆ ಮಾಡಿಕೊಂಡಿದೆ. ಕುಂದಾಪುರ ರಕ್ತನಿಧಿ ಕೇಂದ್ರದಿಂದ ಪ್ಲೇಟ್ಲೆಟ್ ವ್ಯವಸ್ಥೆ ಮಾಡಿದೆ. ಡೆಂಘೆ ಜ್ವರದಿಂದ ಓರ್ವ ಮಹಿಳೆ ಮೃತಪಟ್ಟಿದ್ದಾರೆ. ಡೆಂಘೆಯಿಂದ ಬಹು ಅಂಗಾಂಗ ವೈಫಲ್ಯ ಕೂಡ ಆಗಬಹುದು.

    ಡೆಂಘೆ ಸೊಳ್ಳೆ ಮೂಲಕವೇ ಹರಡುವುದರಿಂದ ಸೊಳ್ಳೆ ಹಾಗೂ ಸೊಳ್ಳೆ ಮೊಟ್ಟೆಗಳ ನಿರ್ಮೂಲನೆಗೆ ಮೊದಲ ಆದ್ಯತೆ ನೀಡಬೇಕು. ಹಗಲು ಮತ್ತು ಮುಸ್ಸಂಜೆ ಹೊತ್ತು ಹೆಚ್ಚಾಗಿ ಸೊಳ್ಳೆ ಕಡಿಯುವುದರಿಂದ ಕೈ, ಕಾಲುಗಳಿಗೆ ಸೊಳ್ಳೆ ನಿರೋಧಕ ಕ್ರೀಮ್ ಹಚ್ಚಿಕೊಳ್ಳುವ ಜತೆ ರಾತ್ರಿ ಸೊಳ್ಳೆ ಪರದೆ, ಸೊಳ್ಳೆ ಬತ್ತಿ ಬಳಸಬೇಕು, ಮನೆ ಬಳಿ ನೀರು ನಿಲ್ಲದಂತೆ ನೋಡಿಕೊಂಡು, ಪಾತ್ರೆ, ಟ್ಯಾಂಕ್ ಮುಚ್ಚಿಡಬೇಕು. ಸೊಳ್ಳೆ ನಿಯಂತ್ರಣವೇ ಡೆಂಘೆ ನಿಯಂತ್ರಣದ ಸೂತ್ರ. ರಬ್ಬರ್ ಟ್ಯಾಂಪಿಂಗ್ ಗೆರಟೆ ಸಹಿತ ನೀರು ನಿಂತ ಇತರ ವಸ್ತುಗಳನ್ನು ಖಾಲಿ ಮಾಡಿ, ಒರೆಸಿ ಇಡುವುದು ಒಳ್ಳೆಯದು. ಜ್ವರ ಮೈ ಕೈ ನೋವು ಇದ್ದರೆ ನಿರ್ಲಕ್ಷಿಸದೆ, ಚಿಕಿತ್ಸೆ ಪಡೆಯಬೇಕು. ಡೆಂಘೆಗೆ ಆಯಾ ವ್ಯಕ್ತಿಯ ರೋಗ ಲಕ್ಷಣ ನೋಡಿ ಚಿಕಿತ್ಸೆ ನೀಡಲಾಗುತ್ತದೆ ಹೊರತು ಪ್ರತ್ಯೇಕ ಚಿಕಿತ್ಸೆ ಇಲ್ಲ.
    | ಡಾ.ನಾಗೇಶ್
    ನೋಡಲ್ ಅಧಿಕಾರಿ, ಡೆಂಘೆ ವಾರ್ಡ್, ತಾಲೂಕು ಸರ್ಕಾರಿ ಆಸ್ಪತ್ರೆ ಕುಂದಾಪುರ

    10 ತಂಡದಿಂದ ಕಾರ್ಯಾಚರಣೆ

    ಮುದೂರಲ್ಲಿ ಡೆಂಘೆ ಹರಡುವ ಸೊಳ್ಳೆಗಳ ಉತ್ಪಾದನಾ ಮೂಲ ಇದೆ. ಮೊದಲ ಹಂತದಲ್ಲಿ ಮೂಲದ ಕ್ರಿಯಾಶೀಲತೆ ತಡೆಯುವ ಪ್ರಯತ್ನ ಮಾಡಿದ್ದು, ಎರಡನೇ ಹಂತದಲ್ಲಿ ತಹಬದಿಗೆ ತರುವ ಪ್ರಯತ್ನ ನಡೆಯುತ್ತಿದೆ. ಕಳೆದ ತಿಂಗಳಿಂದ ಕಾರ್ಯಾಚರಣೆ ನಡೆಯುತ್ತಿದ್ದು, ಮುದೂರು ಜಡ್ಕಲ್‌ನಲ್ಲಿ 10 ತಂಡ ನಿರಂತರ ಕೆಲಸ ಮಾಡುತ್ತಿದೆ. ಜ್ವರ ಸಮೀಕ್ಷೆ, ಕಾರ್ಡ್ ಟೆಸ್ಟ್ ಮಾಡಿ ಪಾಸಿಟಿವ್ ಬಂದವರನ್ನು ಆಸ್ಪತ್ರೆಗೆ ದಾಖಲಿಸಿ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಜಡ್ಕಲ್‌ನಲ್ಲಿ ಎರಡು, ಕೊಲ್ಲೂರಲ್ಲಿ ಒಂದು ಆಂಬುಲೆನ್ಸ್ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಲು ಕಾದಿರಿಸಲಾಗಿದೆ. ಆಸ್ಪತ್ರೆಯಲ್ಲಿ ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಪ್ರತಿದಿನ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸುತ್ತಿದ್ದೇನೆ. ಸೋರ್ಸ್ ನಿಯಂತ್ರಣಕ್ಕೆ ಬಂದ ನಂತರ ಡೆಂಘೆ ಕಡಿಮೆ ಆಗಲಿದೆ.
    | ಡಾ.ನಾಗಭೂಷಣ ಉಡುಪ
    ಜಿಲ್ಲಾ ಆರೋಗ್ಯಾಧಿಕಾರಿ, ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts