More

    ಡಕೋಟಾ ಆಂಬುಲೆನ್ಸ್​ಗೆ ಡಿಮೋಶನ್

    ಕಾರವಾರ: ಜಿಲ್ಲೆಯ ಕೆಲವು ಡಕೋಟಾ ಆಂಬುಲೆನ್ಸ್​ಗಳಿಗೆ ಇನ್ನು ಡಿಮೋಶನ್ ಸಿಗಲಿದೆ. ಇಷ್ಟು ದಿನ ರೋಗಿಗಳನ್ನು ಹೊತ್ತು ಸಾಗಿ ಜೀವ ಉಳಿಸುತ್ತಿದ್ದ ಆಂಬುಲೆನ್ಸ್​ಗಳಿನ್ನು ಶವ ಸಾಗಿಸುವ ಕಾರ್ಯಕ್ಕೆ ನಿಯೋಜನೆಯಾಗಲಿವೆ.
    ಕೋವಿಡ್ ಪರಿಣಾಮ ಜಿಲ್ಲೆಯ ಎಲ್ಲ ಶಾಸಕರು ತಮ್ಮ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ಆಂಬುಲೆನ್ಸ್​ಗಳನ್ನು ಆಸ್ಪತ್ರೆಗೆ ಕೊಡುಗೆಯಾಗಿ ನೀಡಿದ್ದಾರೆ. ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳ ಆಂಬುಲೆನ್ಸ್​ಗಳ ಸಂಖ್ಯೆ 17ಕ್ಕೆ ಏರಿಕೆಯಾಗಿದೆ. ಇದುವರೆಗೆ ಜಿಲ್ಲೆಯ ವಿವಿಧ ತಾಲೂಕು ಆಸ್ಪತ್ರೆಗಳಲ್ಲಿ ಒಂದೊಂದು ಹಾಗೂ ಜಿಲ್ಲಾ ಆಸ್ಪತ್ರೆಯಲ್ಲಿ 4 ಸೇರಿ 15 ಆಂಬುಲೆನ್ಸ್​ಗಳಿದ್ದವು. 1995ರಲ್ಲಿ ಖರೀದಿಸಿದ ಆಂಬುಲೆನ್ಸ್​ಗಳೂ ಜಿಲ್ಲೆಯ ವಿವಿಧ ತಾಲೂಕು ಆಸ್ಪತ್ರೆಗಳಲ್ಲಿ ಓಡಾಟ ನಡೆಸಿದ್ದವು. ‘ಬೇರೆ ಆಂಬುಲೆನ್ಸ್ ಇಲ್ಲದ ಕಾರಣ ಅವುಗಳನ್ನೇ ಬಳಸುತ್ತಿದ್ದೇವೆ. ಈಗ ಜಿಲ್ಲೆಯ ಎಲ್ಲ ತಾಲೂಕುಗಳಲ್ಲೂ ಶಾಸಕರು ಕೊಡುಗೆಯಾಗಿ ನೀಡಿದ ಆಂಬುಲೆನ್ಸ್​ಗಳನ್ನು ಬಳಸಲಾಗುವುದು. ಹಳೆಯ ಆಂಬುಲೆನ್ಸ್ ಅನ್ನು ನಗರ ಸ್ಥಳೀಯ ಸಂಸ್ಥೆಗೆ ನೀಡಿ, ಮುಕ್ತಿ ವಾಹನವಾಗಿ ಪರಿವರ್ತಿಸುವ ಬಗ್ಗೆ ಚಿಂತನೆ ನಡೆಸಿದ್ದೇವೆ ಎಂದು ಡಿಎಚ್​ಒ ಡಾ.ಶರದ್ ನಾಯಕ ತಿಳಿಸಿದ್ದಾರೆ.
    ತಂತ್ರಜ್ಞರ ಸಮಸ್ಯೆ: ಜಿಲ್ಲೆಯ ಸರ್ಕಾರಿ ವ್ಯವಸ್ಥೆಗೆ ಶಾಸಕಿ ರೂಪಾಲಿ ನಾಯ್ಕ ಮೊಟ್ಟ ಮೊದಲ ಬಾರಿಗೆ ಎರಡು ವೆಂಟಿಲೇಟರ್ ಇರುವ ಆಂಬುಲೆನ್ಸ್ ಹಸ್ತಾಂತರಿಸಿದ್ದಾರೆ. ಇದು ಬಹಳ ಅನುಕೂಲವಾಗಿದ್ದು, ಗಂಭೀರ ಪರಿಸ್ಥಿತಿಯಲ್ಲಿರುವ ರೋಗಿಗಳನ್ನು ಸಾಗಿಸಲು ಅನುಕೂಲವಾಗಿದೆ. ವೆಂಟಿಲೇಟೆರ್ ಆಂಬುಲೆನ್ಸ್​ಗಳಲ್ಲಿ ಒಂದು ಕ್ರಿಮ್್ಸ ಆಸ್ಪತ್ರೆ, ಇನ್ನೊಂದು ಅಂಕೋಲಾ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಲಿದೆ. ಇದರ ನಿರ್ವಹಣೆಗೆ ತಂತ್ರಜ್ಞರ ನೇಮಕ ಇದುವರೆಗೂ ಆಗದ ಕಾರಣ ಆಂಬುಲೆನ್ಸ್ ಓಡಾಟ ಆರಂಭಿಸಿಲ್ಲ ಎಂದು ಕ್ರಿಮ್್ಸ ಮಾಹಿತಿ ನೀಡಿದೆ. ವೆಂಟಿಲೇಟರ್ ಇರುವ ಆಂಬುಲೆನ್ಸ್​ನಲ್ಲಿ ತಂತ್ರಜ್ಞರನ್ನು ಕಳಿಸಿಕೊಡುವ ಬಗ್ಗೆ ಸರ್ಕಾರದಿಂದ ಯಾವುದೇ ಸ್ಪಷ್ಟ ಆದೇಶವಿಲ್ಲ. ಆದೇಶ ಇದ್ದಲ್ಲಿ ಕಾರ್ಯನಿರ್ವಹಣೆಗೆ ಹೆಚ್ಚು ಅನುಕೂಲ ಎನ್ನುತ್ತಾರೆ ಜಿಲ್ಲಾ ಸರ್ಜನ್ ಡಾ.ಶಿವಾನಂದ ಕುಡ್ತಲಕರ್.
    ಸಮರ್ಪಕ ನಿರ್ವಹಣೆ ಮಾಡಲಿ
    ಸರ್ಕಾರಿ ಆಸ್ಪತ್ರೆಗಳಲ್ಲಿ ಆಂಬುಲೆನ್ಸ್​ಗಳನ್ನು ಸರಿಯಾಗಿ ನಿರ್ವಹಣೆ ಮಾಡುವುದಿಲ್ಲ ಎಂಬ ಆರೋಪವಿದೆ. ಡೀಸೆಲ್ ಇಲ್ಲದೆ ರೋಗಿಗಳನ್ನು ಕೊಂಡೊಯ್ಯಲು ವಿಳಂಬವಾದ ಉದಾಹರಣೆಗಳೂ ಇವೆ. ಇನ್ನು ತಾಲೂಕು ಆಸ್ಪತ್ರೆಗಳಲ್ಲಿ ಗುತ್ತಿಗೆ ಆಧಾರದಲ್ಲಿ ಆಂಬುಲೆನ್ಸ್ ಚಾಲಕರನ್ನು ನೇಮಕ ಮಾಡಿಕೊಂಡಿದ್ದು, ಒಬ್ಬರೇ ಎರಡು ಮೂರು ರೂಟ್ ನಿರ್ವಹಿಸಬೇಕಾದ ಪರಿಸ್ಥಿತಿ ಇದೆ. ಈಗ ಬಂದ ಹೊಸ ಆಂಬುಲೆನ್ಸ್​ಗಳನ್ನಾದರೂ ಆರೋಗ್ಯ ಇಲಾಖೆ ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. ಸಕಾಲಕ್ಕೆ ರೋಗಿಗಳಿಗೆ ಲಭ್ಯವಾಗುವಂತೆ ಆಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

    ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಹಳೆಯದಾಗಿದ್ದ ಆಂಬುಲೆನ್ಸ್​ಗಳನ್ನು ಬದಲಾಯಿಸಿ ಇತ್ತೀಚೆಗೆ ಜನಪ್ರತಿನಿಧಿಗಳು ಕೊಡುಗೆಯಾಗಿ ನೀಡಲಾದ ಆಂಬುಲೆನ್ಸ್​ಗಳನ್ನು ಇಡಲಾಗುವುದು. ಇದರಿಂದ ಚಾಲಕರ ಕೊರತೆ ಉಂಟಾಗುವುದಿಲ್ಲ. ಕಾರವಾರದ ದೇವಳಮಕ್ಕಿ ಹಾಗೂ ಅಂಕೋಲಾದ ರಾಮನಗುಳಿಯಲ್ಲಿ ಎರಡು ಹೆಚ್ಚುವರಿ ಆಂಬುಲೆನ್ಸ್ ಬಂದಿದ್ದು, ಅವುಗಳಿಗೆ ಹೊಸ ಚಾಲಕರ ನೇಮಕ ಮಾಡಲಾಗುವುದು.
    ಡಾ.ಶರದ್ ನಾಯಕ
    ಡಿಎಚ್​ಒ, ಉತ್ತರ ಕನ್ನಡ
    ಕ್ರಿಮ್್ಸ ಆಸ್ಪತ್ರೆಗೆ ಶಾಸಕಿ ರೂಪಾಲಿ ನಾಯ್ಕ ವೆಂಟಿಲೇಟರ್ ಇರುವ ಆಂಬುಲೆನ್ಸ್ ನೀಡಿದ್ದು, ಸ್ವಾಗತಾರ್ಹ. ಅದು ರೋಗಿಗಳ ಬಳಕೆಗೆ ಲಭ್ಯವಾಗುವಂತೆ ನೋಡಿಕೊಳ್ಳುವುದು ಅವರ ಕರ್ತವ್ಯ. ಆಂಬುಲೆನ್ಸ್ ಕ್ರಿಮ್್ಸ ಆಸ್ಪತ್ರೆ ಸೇರಿ ಒಂದು ವಾರವಾದರೂ ಇದುವರೆಗೂ ರೋಗಿಗಳನ್ನು ಸಾಗಿಸುತ್ತಿಲ್ಲ ಎಂಬುದು ಬೇಸರದ ಸಂಗತಿ.
    ಕೆ. ಶಂಭು ಶೆಟ್ಟಿ
    ಜಿಲ್ಲಾ ಕಾಂಗ್ರೆಸ್ ವಕ್ತಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts