More

    ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಎತ್ತಿ ಹಿಡಿಯಿರಿ

    ರಾಯಚೂರು: ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಯುವಜನತೆಯ ಓಲೈಕೆ ಮಾಡುತ್ತಾ ವೋಟ್ ಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿವೆ. ಯುವಜನರು ತಮ್ಮ ಹಕ್ಕುಗಳ ಬಗ್ಗೆ ಜಾಗೃತರಾಗಿರಬೇಕು ಎಂದು ಎಐಡಿವೈಒ ರಾಜ್ಯಾಧ್ಯಕ್ಷ ಶರಣಪ್ಪ ಉದ್ಭಾಳ್ ಹೇಳಿದರು.

    ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದರು. ಭಾರತ ಹೆಚ್ಚಿನ ಸಂಖ್ಯೆಯ ಯುವಜನರನ್ನು ಹೊಂದಿರುವ ದೇಶವಾಗಿದೆ. ಆದರೆ ನಿರುದ್ಯೋಗ ಸೇರಿ ಹಲವು ಸಮಸ್ಯೆಗಳನ್ನು ಯುವಜನರು ಎದುರಿಸುತ್ತಿದ್ದಾರೆ. ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ 2.52 ಲಕ್ಷ ಹುದ್ದೆಗಳು ಖಾಲಿಯಿದ್ದು, ಒಂದು ಲಕ್ಷ ಉದ್ಯೋಗ ಭರ್ತಿ ಮಾಡುವುದಾಗಿ ಹೇಳಿದ್ದ ಸಿಎಂ ಬಸವರಾಜ ಬೊಮ್ಮಾಯಿ ಬಜೆಟ್‌ನಲ್ಲಿ ಅದಕ್ಕೆ ನಿರ್ದಿಷ್ಟ ಕ್ರಮಗಳನ್ನು ಘೋಷಣೆ ಮಾಡಿಲ್ಲ. ನಿರುದ್ಯೋಗ ಭತ್ಯೆ ನೀಡಿಲ್ಲ. ದೊಡ್ಡ ಕಂಪನಿಗಳು 1.5 ಲಕ್ಷ ಜನರನ್ನು ಉದ್ಯೋಗದಿಂದ ತೆಗೆದು ಹಾಕಿವೆ ಎಂದರು.

    ಯುವಜನರು ಜಾಗೃತರಾಗಿ ಚುನಾವಣಾ ಆಮಿಷಗಳಿಗೆ ಬಲಿಯಾಗದೆ ನಿಮ್ಮ ಹಿತಾಸಕ್ತಿಯನ್ನು ಎತ್ತಿ ಹಿಡಿಯುವವರನ್ನು ಬೆಂಬಲಿಸಬೇಕು. ಜವಾಬ್ದಾರಿಯುತವಾಗಿ ಮತ ಚಲಾಯಿಸುವ ಮೂಲಕ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು. ಖಾಲಿಯಿರುವ ಹುದ್ದೆಗಳ ಭರ್ತಿ, ಗುತ್ತಿಗೆ ಮತ್ತು ಹೊರಗುತ್ತಿಗೆಯಡಿ ದುಡಿಯುತ್ತಿರುವವರನ್ನು ಕಾಯಂಗೊಳಿಸಬೇಕು.
    ನಿರುದ್ಯೋಗ ಭತ್ಯೆ ನೀಡಬೇಕು. ಆನ್‌ಲೈನ್ ಬೆಟ್ಟಿಂಗ್ ದಂಧೆಗೆ ಕಡಿವಾಣ ಹಾಕಬೇಕು. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆ ತಡೆಗಟ್ಟಲು ಅಗತ್ಯ ಕ್ರಮಕೈಗೊಳ್ಳಲು ರಾಜಕೀಯ ಪಕ್ಷಗಳನ್ನು ಯುವಜನತೆ ಒತ್ತಾಯಿಸಬೇಕು ಎಂದು ಶರಣಪ್ಪ ಉದ್ಭಾಳ ಹೇಳಿದರು. ಜಿಲ್ಲಾಧ್ಯಕ್ಷ ಚನ್ನಬಸವ ಜಾನೇಕಲ್, ಪದಾಧಿಕಾರಿಗಳಾದ ವಿನೋದಕುಮಾರ, ಯಲ್ಲಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts