More

    ಮಗ್ಗ ನೇಕಾರರಿಗೆ ಡಿಮಾಂಡ್ ; ಬೇಡಿಕೆ ಇದ್ದರೂ ಪೂರೈಸಲಾಗದ ಸ್ಥಿತಿ

    ತಿಪಟೂರು : ಲಾಕ್‌ಡೌನ್‌ನಿಂದ ಬೇಡಿಕೆ ಇಲ್ಲದೆ ಖಾಲಿ ಹೊಡೆಯುತ್ತಿದ್ದ ಮಗ್ಗಗಳು, ಈಗ ಬೇಡಿಕೆ ಬಂದಿದ್ದರೂ ಮಗ್ಗ ಚಲಾಯಿಸುವವರು ಇಲ್ಲದೆ ಪರಿತಪಿಸುತ್ತಿವೆ. ಇದರಿಂದ ಮಗ್ಗ ನೇಕಾರರಿಗೆ ಡಿಮಾಂಡ್ ಎನ್ನುವ ಸ್ಥಿತಿ ಉಂಟಾಗಿದೆ.

    ಲಾಕ್‌ಡೌನ್ ಪರಿಣಾಮ ಪ್ರಮುಖ ಮಾರುಕಟ್ಟೆಯಾದ ಬೆಂಗಳೂರಿಗೆ ಇಲ್ಲಿಂದ ಸರಬರಾಜು ಆಗುತ್ತಿದ್ದ ಅಸಲಿ ರೇಷ್ಮೆ ಸೀರೆ, ಬೆಂಗಳೂರು ರೇಷ್ಮೆ, ಆರ್ಟ್ ಸಿಲ್ಕ್ ಮತ್ತು ರೇಷ್ಮೆ ಸೀರೆಗಳಿಗೆ ಬೇಡಿಕೆ ಕುಸಿದು, ಕೊಳ್ಳುವವರಿಲ್ಲದೆ ಕೇಳಿದಷ್ಟು ಬೆಲೆಗೆ ಕೊಟ್ಟು ಸಂಕಷ್ಟಕ್ಕೆ ಸಿಲುಕಿದ್ದ ಹಳೇಪಾಳ್ಯದ ನೇಕಾರರಿಗೆ ಈಗ ಅದೃಷ್ಟ ಖುಲಾಯಿಸಿದೆ. ಸರ್ಕಾರ, ಶುಭ ಸಮಾರಂಭಗಳನ್ನು ನಡೆಸಲು, ದೇವಾಲಯಗಳನ್ನು ತೆರೆಯಲು ಅನುಮತಿ ನೀಡಿದ ನಂತರ ಸೀರೆಗಳಿಗೆ ಬೇಡಿಕೆ ಬಂದಿದೆ.

    ಈ ಹಿಂದೆ ಅಂಗಡಿ ಬಾಗಿಲಿಗೆ ಸೀರೆ ಸರಬರಾಜು ಮಾಡುತ್ತೇವೆಂದರೂ ನಿರಾಕರಿಸುತ್ತಿದ್ದ ಬೆಂಗಳೂರಿನ ವರ್ತಕರು ಈಗ ಹಳೇಪಾಳ್ಯಕ್ಕೆ ಲಗ್ಗೆ ಇಡುತ್ತಿದ್ದಾರೆ. ಇನ್ನೂ ಹೆಚ್ಚಿನ ಬೆಲೆ ನೀಡುತ್ತೇವೆ, ಸೀರೆ ಪೂರೈಸಿ ಎಂದು ಬೇಡಿಕೆ ಸಲ್ಲಿಸುತ್ತಿದ್ದಾರೆ. ಆದರೆ ಬೇಡಿಕೆಗೆ ತಕ್ಕಂತೆ ಸೀರೆ ಪೂರೈಸಲು ಸಾಧ್ಯವಾಗುತ್ತಿಲ್ಲ. ಕಾರಣ, ಲಾಕ್‌ಡೌನ್ ಸಂದರ್ಭದಲ್ಲಿ ಮಗ್ಗಗಳು ನಿಂತ ಪರಿಣಾಮ ಕೃಷಿ ಹಾಗೂ ಬೇರೆ ಬೇರೆ ಕ್ಷೇತ್ರಗಳಿಗೆ ಉದ್ಯೋಗ ಅರಸಿ ಹೋದ ತಾಲೂಕಿನ ಸುಮಾರು 15 ಸಾವಿರ ಮಂದಿ ಅಲ್ಲಿಯೇ ನೆಲೆ ನಿಂತಿದ್ದಾರೆ. ಲಕ್ಷಗಟ್ಟಲೆ ಮುಂಗಡ ಹಣ ಕೊಡುತ್ತೇವೆಂದರೂ ಮಗ್ಗದ ಕಡೆ ಯಾರೂ ಸುಳಿಯುತ್ತಿಲ್ಲ.

    ನೌಕರರನ್ನು ನೆಚ್ಚಿ 2 ರಿಂದ 20 ಮಗ್ಗಕ್ಕೆ ಬಂಡವಾಳ ಹೂಡಿದ್ದ ಮಾಲೀಕರು ಕೆಲಸಗಾರರಿಲ್ಲದೆ ಮಗ್ಗಗಳನ್ನು ಸ್ಥಗಿತಗೊಳಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲ ಮಾಲೀಕರು ಕುಲ ಕಸುಬು ಬಿಡಲಾರದೆ ಸೀರೆ ತಯಾರಿಕೆಯಲ್ಲಿ ತೊಡಗಿದ್ದಾರೆ.

    ಲಾಕ್‌ಡೌನ್ ಸಂದರ್ಭದಲ್ಲಿ ಬ್ಯಾಂಕ್, ಗ್ರಾಮಿಣ ಕೂಟ, ಫೈನಾನ್ಸ್ ಅವರಿಂದ ಸಾಲ ವಸೂಲಿಗೆ ಇನ್ನಿಲ್ಲದ ಕಿರುಕುಳ ಅನುಭವಿಸಿದೆವು. ಈಗ ಉತ್ತಮ ಬೇಡಿಕೆ ಇದೆ. ಆದರೆ, ಕೆಲಸಗಾರರು ಸಿಗುತ್ತಿಲ್ಲ. ಕೈತುಂಬಾ ಕೂಲಿ. ಲಕ್ಷಾಂತರ ಹಣ ಮುಂಗಡ ಕೊಡುತ್ತೇವೆಂದರೂ ಕೆಲಸದವರು ವಾಪಸ್ ಬರುತ್ತಿಲ್ಲ. ಇದೆಲ್ಲಾ ಕರೊನಾ ಮಹಾಮಾರಿಯ ಪರಿಣಾಮ.
    ಎಚ್.ಪಿ.ರಂಗನಾಥ್, ವಿದ್ಯುತ್ ಮಗ್ಗ ಮಾಲೀಕ, ತಿಪಟೂರು

    ಕರೊನಾದಿಂದ ಬೇರೆ ಕೆಲಸ ಅರಸಿ ಹೋದ ಕೆಲವರು ಅಲ್ಲಲ್ಲೇ ನೆಲೆ ನಿಂತಿದ್ದಾರೆ. ಇನ್ನೂ ಕೆಲವರು ತೋಟ, ಹೊಲದ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಇವರನ್ನು ನೆಚ್ಚಿ ಲಕ್ಷಾಂತರ ಬಂಡವಾಳ ಹೂಡಿ ಹಾಕಲಾಗಿರುವ ಮಗ್ಗಗಳನ್ನು ಸ್ಥಗಿತಗೊಳಿಸುವ ದುಸ್ಥಿತಿ ಬಂದಿದೆ.
    ಜಿ.ಆರ್.ಮಂಜುನಾಥ್, ಮಾಜಿ ನಗರಸಭೆ ಸದಸ್ಯ ಹಳೇಪಾಳ್ಯ,

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts