More

    ಶಾಶ್ವತ ಚೆಕ್‌ಪೋಸ್ಟ್ ಬೇಡಿಕೆ

    ವಿಟ್ಲ: ಕರ್ನಾಟಕ ಕೇರಳ ಗಡಿಭಾಗದಲ್ಲಿದ್ದ ಚೆಕ್‌ಪೋಸ್ಟ್‌ಗಳ ಪೈಕಿ ಪ್ರಸ್ತುತ ಬೆರಳೆಣಿಕೆಯವು ಮಾತ್ರ ಕಾರ್ಯಾಚರಿಸುತ್ತಿವೆ. ಕಳ್ಳಸಾಗಾಟ, ಅಪರಾಧ ತಡೆಯುವ ನಿಟ್ಟಿನಲ್ಲಿ ಗಡಿ ಸಂಪರ್ಕದ ಪ್ರತಿ ರಸ್ತೆಯಲ್ಲಿ ಶಾಶ್ವತ ಪೊಲೀಸ್ ಚೆಕ್‌ಪೋಸ್ಟ್ ತೆರೆಯಬೇಕೆಂಬ ಬೇಡಿಕೆ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.

    ಗಡಿಭಾಗದಲ್ಲಿ ಅಕ್ರಮ ಚಟುವಟಿಕೆ ತಡೆಯುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಸಾಕಷ್ಟು ಕ್ರಮ ಕೈಗೊಂಡರೂ ಎಲ್ಲ ರಸ್ತೆಗಳಲ್ಲಿ ಚೆಕ್‌ಪೋಸ್ಟ್ ಇಲ್ಲದೇ ಇರುವುದರಿಂದ ಅಪರಾಧ ಚಟುವಟಿಕೆಗಳು ನಿರಾತಂಕವಾಗಿ ನಡೆಯುತ್ತಿವೆ. ನಗರಭಾಗದಲ್ಲಿ ಪೊಲೀಸ್ ಠಾಣೆಗಳಿದ್ದು, ಗಡಿಪ್ರದೇಶಕ್ಕೆ ತೆರಳಬೇಕಾದರೆ ಕನಿಷ್ಠ 15ರಿಂದ 20 ಕಿ.ಮೀ. ಕ್ರಮಿಸಬೇಕು. ಆ ಪ್ರದೇಶದ ಪೇಟೆಗಳನ್ನೇ ಗುರಿಯಾಗಿಸಿಕೊಂಡು ಅಪರಾಧ ಚಟುವಟಿಕೆಗಳು ನಡೆದು, ಆರೋಪಿಗಳು ಕೇರಳದಲ್ಲಿ ಅಡಗುವ ಪ್ರಮೇಯ ಹೆಚ್ಚು. ಇದರಿಂದ ಪೊಲೀಸ್ ಇಲಾಖೆಗೆ ಪ್ರಕರಣಗಳನ್ನು ಭೇದಿಸಲು ಹಚ್ಚಿನ ಒತ್ತಡ ಬೀಳುತ್ತದೆ.

    ದಕ್ಷಿಣ ಕನ್ನಡ ಜಿಲ್ಲೆಯಿಂದ ಕೇರಳ ಸಂಪರ್ಕಕ್ಕೆ 19ಕ್ಕೂ ಅಧಿಕ ಪ್ರಮುಖ ರಸ್ತೆಗಳಿದ್ದು, ಇದರಲ್ಲಿ ಕೇವಲ ತಲಪಾಡಿ ಹಾಗೂ ಸಾರಡ್ಕದ ಎರಡು ಕಡೆಗಳಲ್ಲಿ ಮಾತ್ರ ಪೊಲೀಸ್ ಇಲಾಖೆಯ ಅಧಿಕೃತ ತಪಾಸಣಾ ಕೇಂದ್ರಗಳಿವೆ. ಮಂಗಳೂರು ನಗರದ ಉಳ್ಳಾಲ ಭಾಗದಿಂದ 3, ಸುಳ್ಯದಿಂದ 4, ವಿಟ್ಲ ಹಾಗೂ ಪುತ್ತೂರು ಗ್ರಾಮಾಂತರ ಭಾಗದಿಂದ ತಲಾ 6 ಪ್ರಮುಖ ರಸ್ತೆಗಳಿಗೆ ಅಧಿಕೃತ ಚೆಕ್‌ಪೋಸ್ಟ್ ಅಗತ್ಯವಿದೆ.

    ಪ್ರಕರಣ ಪತ್ತೆ ಸವಾಲು: ಅಡ್ಯನಡ್ಕ ಪೇಟೆಯಲ್ಲಿ ನಡೆದ ಸರಣಿ ಕಳ್ಳತನ ಪ್ರಕರಣ, ಕುದ್ದುಪದವು ಪೆಟ್ರೋಲ್ ಪಂಪ್ ದರೋಡೆ ಪ್ರಕರಣ, ವಿಟ್ಲ ಪತ್ರಕರ್ತರ ಮನೆ ದರೋಡೆ ಪ್ರಕರಣಗಳು ನಡೆದು ವರ್ಷಗಳು ಉರುಳಿದರೂ ಆರೋಪಿಗಳು ಇನ್ನೂ ಪತ್ತೆಯಾಗಿಲ್ಲ. ಕನ್ಯಾನ, ಪೆರುವಾಯಿ ಭಾಗದಲ್ಲಿ ಅಪರಾಧ ಚಟುವಟಿಕೆ ಗಳನ್ನು ತಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರೂ, ನಿತ್ಯ ನಿಗಾ ಇಡಬೇಕಾದ್ದು ದೊಡ್ಡ ಸವಾಲು.

    ಸಿಬ್ಬಂದಿ ಕೊರತೆಗೆ ಪರಿಹಾರ: ಸ್ವಾತಂತ್ರೃಪೂರ್ವದ ಜನಸಂಖ್ಯೆಯ ಆಧಾರದಲ್ಲಿ ನೇಮಕವಾದ ಸಿಬ್ಬಂದಿಯನ್ನು ಹೆಚ್ಚಳ ಮಾಡುವ ಅನಿವಾರ್ಯತೆ ಇಲಾಖೆಗೆ ಇದೆ. ಗಡಿಭಾಗದ ಠಾಣೆಗಳಲ್ಲಿ ಸಾಗುವ ರಸ್ತೆಗಳಿಗೆ ಸರ್ಕಾರ ಶಾಶ್ವತ ಚೆಕ್‌ಪೋಸ್ಟ್ ಘೋಷಿಸುವುದರಿಂದ ಸಿಬ್ಬಂದಿ ಆ ಭಾಗದಲ್ಲಿ ಇರುವಂತಾಗುತ್ತದೆ. ಇದರಿಂದ ಅಕ್ಕಪಕ್ಕದ ಗ್ರಾಮಗಳಿಗೂ ಹೆಚ್ಚಿನ ಭದ್ರತೆ ಸಿಗುತ್ತದೆ. ಠಾಣೆಗಳ ಸಿಬ್ಬಂದಿ ಪ್ರತ್ಯೇಕವಾಗಿ ಕೆಲಸ ಕಾರ್ಯಕ್ಕೆ ಲಭಿಸಿ, ಸಿಬ್ಬಂದಿ ಕೊರತೆ ನೀಗಿಸಬಹುದು.

    ಚುನಾವಣೆ ಹಾಗೂ ಅಹಿತಕರ ಘಟನೆ ನಡೆದ ಸಂದರ್ಭ ಬರುವ ಚೆಕ್‌ಪೋಸ್ಟ್ ಗಳು ಬಳಿಕ ಮುಚ್ಚುತ್ತವೆ. ಅಂತಹ ಚೆಕ್‌ಪೋಸ್ಟ್‌ಗಳ ಬದಲು ಕರ್ನಾಟಕದಿಂದ ಕೇರಳಕ್ಕೆ ಕಳ್ಳ ಸಾಗಾಟ ತಡೆಯುವ ನಿಟ್ಟಿನಲ್ಲಿ ಶಾಶ್ವತ ತಪಾಸಣೆ ಕೇಂದ್ರ ಅಗತ್ಯ.
    ರಾಮಣ್ಣ ಶೆಟ್ಟಿ ಪಾಳಿಗೆ ನೆಲ ಜಲ ಸಂರಕ್ಷಣಾ ಸಮಿತಿ ಅಧ್ಯಕ್ಷ

    ವಿಟ್ಲ ಠಾಣೆಯ ಭಾಗದಲ್ಲಿ ಹೊರಗಡೆಯಿಂದ ಬಂದು ಅಪರಾಧ ಚಟುವಟಿಕೆಯಲ್ಲಿ ಭಾಗವಹಿಸಿದ ಪ್ರಸಂಗಗಳು ಹೆಚ್ಚಿವೆ. ಸರ್ಕಾರದ ಮಟ್ಟದಿಂದಲೇ ಅಧಿಕೃತವಾಗಿ ಮುಖ್ಯರಸ್ತೆಗಳಿಗೆ ಚೆಕ್‌ಪೋಸ್ಟ್ ಸಿಕ್ಕರೆ ಕಾನೂನು ಸುವ್ಯವಸ್ಥೆಯನ್ನು ಯಶಸ್ವಿಯಾಗಿ ನಿಭಾಯಿಸಬಹುದು.
    ಟಿ.ಡಿ.ನಾಗರಾಜ್ ಪೊಲೀಸ್ ವೃತ್ತ ನಿರೀಕ್ಷಕರು, ಬಂಟ್ವಾಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts