More

    ಹಣ್ಣುಗಳಿಗೆ ಭರ್ಜರಿ ಡಿಮಾಂಡ್, ಬೆಲೆ ಹೆಚ್ಚಳ, ಆವಕ ಕಡಿಮೆ

    ಹರೀಶ್ ಮೋಟುಕಾನ, ಮಂಗಳೂರು

    ಕರಾವಳಿಯಲ್ಲಿ ದಿನದಿಂದ ದಿನಕ್ಕೆ ಬಿಸಿಲ ಬೇಗೆ ಹೆಚ್ಚುತ್ತಿದೆ. ಪ್ರತಿಯೊಬ್ಬರೂ ಹಣ್ಣಿನ ರಸ, ತಂಪು ಪಾನೀಯಗಳಿಗೆ ಮೊರೆ ಹೋಗುತ್ತಿರುವುದು ಸಾಮಾನ್ಯ. ಆ ಕಾರಣದಿಂದಲೇ ರಸಭರಿತ ಹಣ್ಣುಗಳಿಗೆ ಡಿಮಾಂಡ್. ಪೂರೈಕೆ ಕಡಿಮೆಯಾಗಿರುವುದರಿಂದ ದರವೂ ಅಧಿಕ.

    ಜ್ಯೂಸ್ ಮಾಡಲು ಹೆಚ್ಚಾಗಿ ಬಳಸುವ ಕಲ್ಲಂಗಡಿ, ಅನಾನಸು, ದ್ರಾಕ್ಷಿ, ಚಿಕ್ಕು, ಚಿಪ್ಪಡ್, ಕಿತ್ತಳೆ, ಮೂಸಂಬಿ, ಸೇಬು ಮುಂತಾದ ಹಣ್ಣುಗಳ ಬೇಡಿಕೆ ಹೆಚ್ಚಾಗಿದೆ. ಆದರೆ ಮಂಗಳೂರು ಮಾರುಕಟ್ಟೆಗೆ ಈ ಹಣ್ಣುಗಳ ಆವಕ ಕಡಿಮೆಯಾಗಿದೆ. ಇದರಿಂದಾಗಿ ಬೆಲೆ ಏರಿಕೆ ಅನಿವಾರ್ಯ ಎನ್ನುತ್ತಾರೆ ಮಂಗಳೂರಿನ ಮಲ್ಲಿಕಟ್ಟೆಯ ಹಣ್ಣು ವ್ಯಾಪಾರಿ ಉದಯ್.

    ಹಾಸನ, ಶಿವಮೊಗ್ಗ, ದಾವಣಗೆರೆ ಜಿಲ್ಲೆಗಳಿಂದ ಹೆಚ್ಚಾಗಿ ಕರಾವಳಿಗೆ ಹಣ್ಣುಗಳ ಪೂರೈಕೆಯಾಗುತ್ತದೆ. ವಿಜಯಪುರದಿಂದ ದ್ರಾಕ್ಷಿ ಬರುತ್ತಿದೆ. ಹಣ್ಣಿನ ಇಳುವರಿ ಈ ಬಾರಿ ತೀವ್ರ ಕುಸಿತಗೊಂಡಿದೆ. ಹಾಗಾಗಿ ಪೂರೈಕೆಯಲ್ಲಿ ಕೊರತೆಯಾಗಿದೆ. ಕರಾವಳಿಯಲ್ಲಿ ಬಿಸಿಲಿನ ಉರಿ ಜನರನ್ನು ಬಾಧಿಸುತ್ತಿದೆ. ಜನರು ತಂಪು ಪಾನೀಯ ಅಂಗಡಿಗಳಿಗೆ ತೆರಳಿ ಜ್ಯೂಸ್ ಕುಡಿಯುವ ಜತೆಗೆ ಹಣ್ಣು ಖರೀದಿಸಿ ಮನೆಯಲ್ಲೇ ಜ್ಯೂಸ್ ಮಾಡಿ ಕುಡಿಯುತ್ತಿದ್ದಾರೆ. ದರ ಹೆಚ್ಚಾದರೂ ಜ್ಯೂಸ್‌ಗೆ ಬಳಸುವ ಹಣ್ಣಿನ ವ್ಯಾಪಾರ ಜೋರಾಗಿಯೇ ಮುಂದುವರಿದಿದೆ.

    ಕಲ್ಲಂಗಡಿಗೆ ಬಹುಬೇಡಿಕೆ: ಕರಾವಳಿಯಲ್ಲಿ ಸಾಮಾನ್ಯವಾಗಿ ಮಾರುಕಟ್ಟೆ ಮತ್ತು ರಸ್ತೆಬದಿಗಳಲ್ಲಿ ಕಲ್ಲಂಗಡಿ ರಾಶಿ ಕಂಡುಬರುತ್ತಿದೆ. ಆದರೆ ಬಿಸಿಲಿನ ಪ್ರಖರತೆ ಹೆಚ್ಚಾದ ಬಳಿಕ ಕಲ್ಲಂಗಡಿ ರಾಶಿ ಕರಗಿದೆ. ಕಲ್ಲಂಗಡಿ ಹೆಚ್ಚು ಮಾರಾಟವಾಗುತ್ತಿದೆ. ಸಣ್ಣ ಗಾತ್ರದ ಕಲ್ಲಂಗಡಿ ಆಂಧ್ರಪ್ರದೇಶದಿಂದ ಬರುತ್ತದೆ. ದೊಡ್ಡ ಗಾತ್ರದ ಕಲ್ಲಂಗಡಿಯನ್ನು ಕುಂದಾಪುರದಿಂದ ತರಿಸಿಕೊಳ್ಳಲಾಗುತ್ತಿದೆ. ಬಿಸಿಲು ಹೆಚ್ಚಾದ ಕಾರಣ ಜನರು ಕಲ್ಲಂಗಡಿಯನ್ನು ಅಧಿಕ ಪ್ರಮಾಣದಲ್ಲಿ ಖರೀದಿಸುತ್ತಿದ್ದಾರೆ. ಬೇಸಿಗೆಯಲ್ಲಿ ಎಲ್ಲ ಬಗೆಯ ಹಣ್ಣುಗಳಿಗೆ ಉತ್ತಮ ಬೇಡಿಕೆ ಇರುತ್ತದೆ. ಆದರೆ ಪೂರೈಕೆ ಕಡಿಮೆ ಇರುವುದರಿಂದ ಖರೀದಿ ಅನಿವಾರ್ಯ. ಹೆಚ್ಚಿನ ಮಂದಿ ಮಾಲ್‌ಗಳಿಂದಲೇ ಹಣ್ಣುಗಳನ್ನು ಖರೀದಿಸುವುದರಿಂದ ಸಣ್ಣ ಅಂಗಡಿಯವರಿಗೆ ವ್ಯಾಪಾರ ಕಡಿಮೆ ಎಂದು ಯೆಯ್ಯಡಿಯ ಹಣ್ಣಿನ ವ್ಯಾಪಾರಿ ಜಲೀಲ್ ತಿಳಿಸಿದ್ದಾರೆ.

    ತಂಪು ಪಾನೀಯಗಳಿಗೂ ದರ ಏರಿಕೆ: ಸ್ಥಳೀಯವಾಗಿ ತಯಾರಿಸಲಾಗುವ ತಂಪು ಪಾನೀಯಗಳಿಗೂ ಬೇಡಿಕೆ ಹೆಚ್ಚಾಗಿದೆ. ತಯಾರಿ ವೆಚ್ಚ ಹೆಚ್ಚಾಗಿರುವುದರಿಂದ ದರವೂ ಹೆಚ್ಚಾಗಿದೆ. ಸೀಯಾಳಕ್ಕೂ ಉತ್ತಮ ಬೇಡಿಕೆ ಇದೆ. ಮಂಗಳೂರು ನಗರದಲ್ಲಿ ಸೀಯಾಳ ವ್ಯಾಪಾರದಲ್ಲೇ ನೂರಾರು ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ಮಸಾಲೆ ಮಜ್ಜಿಗೆ, ಲಿಂಬೆ, ಪುನರ್ಪುಳಿ, ಎಳ್ಳು ಮೊದಲಾದ ಜ್ಯೂಸ್‌ಗಳ ದರವೂ ಒಂದಷ್ಟು ಹೆಚ್ಚಾಗಿದೆ. ಆದರೆ ಬೇಡಿಕೆ ಕಡಿಮೆಯಾಗಿಲ್ಲ ಎನ್ನುತ್ತಾರೆ ವ್ಯಾಪಾರಸ್ಥರು.

    ದರ ಹೆಚ್ಚಳ (ಕೆ.ಜಿ.ಗೆ)
    ಹಣ್ಣು -ವಾರದ ಹಿಂದಿನ ದರ -ಪ್ರಸ್ತುತ ದರ
    ಆ್ಯಪಲ್- 180- 200
    ಕಿತ್ತಳೆ- 80 -120
    ದಾಳಿಂಬೆ- 150- 200
    ದ್ರಾಕ್ಷಿ- 80 -90
    ಚಿಕ್ಕು- 50 -60
    ಕಲ್ಲಂಗಡಿ- 15 -22
    ಅನಾನಾಸು- 15 -20
    ಪಪ್ಪಾಯಿ- 25 -35
    ಚಿಪ್ಪಡ್- 40 -50

    ಮಂಗಳೂರಿನಲ್ಲಿ ಬೇಸಿಗೆಯಲ್ಲಿ ಹಣ್ಣುಗಳ ವ್ಯಾಪಾರ ಭರ್ಜರಿಯಾಗಿರುತ್ತದೆ. ಅಂಗಡಿ, ಹೋಟೆಲ್‌ಗಳಲ್ಲಿ ಜ್ಯೂಸ್ ತಯಾರಿಗೆ ದೊಡ್ಡ ಮಟ್ಟದಲ್ಲಿ ಖರೀದಿಯಾಗುತ್ತದೆ. ಗ್ರಾಹಕರು ತಿನ್ನಲು ಹಾಗೂ ಜ್ಯೂಸ್ ಮಾಡಲು ಮನೆಗೆ ಕೊಂಡೊಯ್ಯುವ ಪ್ರಮಾಣವೂ ಹೆಚ್ಚಿರುತ್ತದೆ. ಬೇಡಿಕೆಗೆ ತಕ್ಕಂತೆ ಪೂರೈಕೆ ಇಲ್ಲದೆ, ದರ ಹೆಚ್ಚಾಗುತ್ತಿದೆ.

    ಉದಯ್
    ಹಣ್ಣು ವ್ಯಾಪಾರಿ, ಮಲ್ಲಿಕಟ್ಟೆ ಮಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts