More

    ಮೀನು ಮೌಲ್ಯವರ್ಧಿತ ಉತ್ಪನ್ನಗಳಿಗೆ ಬೇಡಿಕೆ

    ಮಂಗಳೂರು: ಸಿಹಿ ನೀರಿನ ಮೀನು ಸಂಸ್ಕರಿಸಿ ಮೌಲ್ಯವರ್ಧಿಸಿದ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದ್ದು, ಈ ಕಡೆಗೆ ಆಸಕ್ತರಾದವರಿಗೆ ಗರಿಷ್ಠ ಆದಾಯ ಗಳಿಸಬಹುದು ಎಂದು ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಪ್ರಧಾನ ವ್ಯವಸ್ಥಾಪಕ ಮಹೇಶ್ ಕುಮಾರ್ ಹೇಳಿದರು.

    ಗುರುವಾರದಿಂದ ಮೂರು ದಿನಗಳ ಕಾಲ ನಡೆಯಲಿರುವ ಮೀನು ಸಂಸ್ಕರಣೆ ಮತ್ತು ಮೌಲ್ಯ ವರ್ಧಿತ ಮೀನು ಉತ್ಪನ್ನಗಳ ಕುರಿತ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ಸಮುದ್ರದ ಮೀನು ಮಾತ್ರವಲ್ಲದೆ, ಒಳನಾಡಿನಲ್ಲಿ ಸಿಗುವ ಸಿಹಿ ನೀರಿನ ಮೀನಿನಿಂದಲೂ ಉಪ ಉತ್ಪನ್ನಗಳನ್ನು ತಯಾರಿಸಬಹುದಾಗಿದೆ. ತಾಜಾ ಮೀನಿನ ಜತೆಗೆ ಮೌಲ್ಯ ವರ್ಧಿತ ಉತ್ಪನ್ನಗಳಾದ ಚಟ್ನಿ, ಉಪ್ಪಿನಕಾಯಿ, ಸಂಡಿಗೆ, ಚಕ್ಕುಲಿ ಮೊದಲಾದ ವುಗಳಿಗೆ ಬೇಡಿಕೆ ಹೆಚ್ಚಾಗಿದೆ. ಮೀನುಗಾರಿಕಾ ರೈತ ಉತ್ಪಾದಕ ಸಂಸ್ಥೆಗಳ ಮೂಲಕವೂ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆಗೆ ಪೂರೈಸಬಹುದಾಗಿದೆ ಎಂದರು.

    ಮೀನುಗಾರಿಕಾ ಮಹಾವಿದ್ಯಾಲಯದ ಸಹ ವಿಸ್ತರಣಾ ನಿರ್ದೇಶಕ ಡಾ.ಎಸ್.ಆರ್.ಸೋಮಶೇಖರ್ ಮಾತನಾಡಿ, ವಿಶ್ವದಲ್ಲಿ ಶೇ.80ರಷ್ಟು ತಾಜಾ ಮೀನು ಆಹಾರ ರೂಪದಲ್ಲಿ ಸೇವನೆಯಾಗುತ್ತಿದೆ. ಉಳಿದ ಶೇ.20ರಷ್ಟು ಮಾತ್ರ ಸಂಸ್ಕರಣೆಗೆ ಬಳಕೆಯಾಗುತ್ತದೆ. ಆದ್ದರಿಂದ ಬೃಹತ್ ವಾಣಿಜ್ಯ ಉದ್ಯಮವಾಗಿ ಬೆಳೆಸಲು ಹೆಚ್ಚಿನ ಅವಕಾಶವಿದೆ ಎಂದರು.

    ಚಾಮರಾಜನಗರದ ಮೀನುಗಾರಿಕಾ ರೈತ ಉತ್ಪಾದಕರ ಸಂಘದ ಅಧ್ಯಕ್ಷ ಲಿಂಗರಾಜು ಮತ್ತು ಪಿಎಂಎ್ಎಂಇ ಯೋಜನೆಯ ಜಿಲ್ಲಾ ಸಂಪನ್ಮೂಲ ವ್ಯಕ್ತಿ ಸತೀಶ್ ಮಾಬೆನ್ ಉಪಸ್ಥಿತರಿದ್ದರು.

    ಮೀನುಗಾರಿಕಾ ಮಹಾವಿದ್ಯಾಲಯದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ.ಬಿ.ಮಂಜ ನಾಯ್ಕ ಕಾರ್ಯಕ್ರಮದ ಕುರಿತು ವಿವರ ನೀಡಿ, ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕ ಗಣೇಶ್ ಪ್ರಸಾದ್ ವಂದಿಸಿದರು. ವಿದ್ಯಾರ್ಥಿನಿಯರಾದ ಭೂಮಿಕಾ ಮತ್ತು ಪ್ರಿಯಾಂಕಾ ಕಾರ್ಯಕ್ರಮ ನಿರೂಪಿಸಿದರು. ಕರಾವಳಿ ಹಾಗೂ ಒಳನಾಡು ಮೀನುಗಾರಿಕೆಗೆ ಸಂಬಂಧಿಸಿದ 50 ಮಂದಿ ಶಿಬಿರಾರ್ಥಿಗಳು ಭಾಗವಹಿಸಿದ್ದರು.

    ಅಮೆರಿಕನ್ ಹಾರ್ಟ್ ಸೊಸೈಟಿ ಪ್ರಕಾರ ವಾರದಲ್ಲಿ ಎರಡು ಬಾರಿ ಮೀನು ಸೇವನೆ ಮಾಡುವುದರಿಂದ ರಕ್ತದೊತ್ತಡ ಸ್ಥಿರವಾಗಿರುವುದರೊಂದಿಗೆ ಹೃದಯಾಘಾತ ಪ್ರಮಾಣ ಕಡಿಮೆಯಾಗುತ್ತದೆ. ಮಕ್ಕಳಲ್ಲಿ ಕಂಡು ಬರುವ ಅಪೌಷ್ಟಿಕತೆ ಸಮಸ್ಯೆಯಿಂದಲೂ ಮುಕ್ತಿ ಪಡೆಯಬಹುದು.
    – ಡಾ.ಎಚ್.ಎನ್.ಆಂಜನೇಯಪ್ಪ ಮೀನುಗಾರಿಕಾ ಮಹಾವಿದ್ಯಾಲಯದ ಡೀನ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts