ಭರತ್ ಶೆಟ್ಟಿಗಾರ್, ಮಂಗಳೂರು
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಜನರು ದೈನಂದಿನ ಊಟದ ಕೆಂಪು ಕುಚಲಕ್ಕಿಯನ್ನು ಪಡಿತರ ವ್ಯವಸ್ಥೆಯಡಿ ವಿತರಿಸುವ ಪ್ರಯತ್ನ ಇನ್ನೂ ಅಂತಿಮವಾಗಿಲ್ಲ. ಕೆಂಪು ಅಕ್ಕಿ ಪೂರೈಸುವುದಾಗಿ ಕೆಲ ತಿಂಗಳ ಹಿಂದೆ ಸಚಿವರು ಭರವಸೆ ನೀಡಿದ್ದರೂ, ಸದ್ಯಕ್ಕಂತೂ ಸಿಗುವುದು ಅನುಮಾನ.
ಕರಾವಳಿ ಜಿಲ್ಲೆಗಳ ಒಟ್ಟು ಕೆಂಪು ಕುಚ್ಚಲಕ್ಕಿಯ ಬೇಡಿಕೆ ವಾರ್ಷಿಕ 12 ಲಕ್ಷ ಕ್ವಿಂಟಾಲ್. ಈ ಬೇಡಿಕೆ ಪೂರೈಸಲು 20 ಲಕ್ಷ ಕ್ವಿಂಟಾಲ್ ಭತ್ತದ ಅಗತ್ಯವಿದೆ. ಆದ್ದರಿಂದ ಕೆಂಪು ಕುಚ್ಚಲಕ್ಕಿ ಪೂರೈಸಲು ರಾಜ್ಯದ ಎಂಒ 4, ಜಯ, ಅಭಿಲಾಷ, ಭದ್ರ ಕಜೆ, ಜ್ಯೋತಿ ಮುಂತಾದ ತಳಿಗಳನ್ನು ಖರೀದಿಸಲು ಕೇಂದ್ರ ಸರ್ಕಾರದ ಅನುಮತಿಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಷ್ಟು ಪ್ರಮಾಣದಲ್ಲಿ ಉತ್ಪಾದನೆ ಆಗುತ್ತಿಲ್ಲ. ಮಂಡ್ಯ, ಮೈಸೂರು, ರಾಮನಗರ, ಬೆಳಗಾವಿ, ಶಿವಮೊಗ್ಗ ಜಿಲ್ಲೆಗಳಿಂದ ಭತ್ತ ಖರೀದಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಸದ್ಯ ಮಂಡ್ಯ-ಮೈಸೂರು ಭಾಗದಲ್ಲಿ ಬೆಳೆಯಲಾಗಿದೆ. ಆದರೆ ಎಷ್ಟು ಪ್ರಮಾಣ, ಎಷ್ಟು ತಿಂಗಳು ಪೂರೈಕೆ ಮಾಡಬಹುದು ಎನ್ನುವ ಕುರಿತು ಇನ್ನಷ್ಟೇ ಅಂತಿಮ ನಿರ್ಧಾರ ಆಗಬೇಕಿದೆ ಎನ್ನುತ್ತಾರೆ ಆಹಾರ ಇಲಾಖೆ ಸಚಿವ ಉಮೇಶ್ ಕತ್ತಿ. ಕಳೆದ ವರ್ಷ ಜೋಳ, ಭತ್ತ ಸಿಗದೆ ಸಮಸ್ಯೆಯಾಗಿತ್ತು, ಕೊನೆಗೆ ಸಿಕ್ಕಿದ ರಾಗಿಯನ್ನು ಅಗತ್ಯವಿರುವಲ್ಲಿ ವಿತರಿಸಲಾಗಿದೆ ಎನ್ನುತ್ತಾರೆ ಸಚಿವರು.
ಕರಾವಳಿಗರಿಗೆ ಬಿಳಿ ಅಕ್ಕಿ ರುಚಿಸದು: ಪಡಿತರ ವ್ಯವಸ್ಥೆಯಡಿ ಕರಾವಳಿಗೆ ಪ್ರಸ್ತುತ ಬೆಳ್ತಿಗೆ ಮತ್ತು ಕುಚ್ಚಲಕ್ಕಿ ಮಾದರಿಯ ಬಿಳಿ ಅಕ್ಕಿ(ಪ್ಯಾರಾ ಬಾಯಿಲ್ಡ್)ಯನ್ನು ಪೂರೈಕೆ ಮಾಡಲಾಗುತ್ತಿದೆ. ಆದರೆ ಕರಾವಳಿಯಲ್ಲಿ ಬಹುಪಾಲು ಕಾರ್ಡ್‌ದಾರರಿಗೆ ಈ ಅಕ್ಕಿ ಸಹ್ಯವಾಗುವುದಿಲ್ಲ. ಕೆಂಪು ಕುಚಲಕ್ಕಿ ರೀತಿಯಲ್ಲಿ ಇದರ ಊಟ ನಿತ್ಯ ಸೇವನೆಗೆ ರುಚಿಸುವುದಿಲ್ಲ. ಆದ್ದರಿಂದ ಗ್ರಾಮೀಣ ಭಾಗದಲ್ಲಿ ಕೆಲವರು ಈ ಅಕ್ಕಿ ಪಡೆದುಕೊಳ್ಳಲು ಮುಂದಾಗುವುದಿಲ್ಲ. ಕೆಲವರು ಅಕ್ಕಿ ತೆಗೆದುಕೊಂಡು, ಮಾರಾಟ ಮಾಡುತ್ತಾರೆ. ಇದರಿಂದಾಗಿ ಪೂರೈಕೆ ಮಾಡಿದರೂ ವ್ಯರ್ಥ ಎನ್ನುವಂತಾಗಿದೆ. ಆದ್ದರಿಂದ ಕೆಂಪು ಕುಚಲಕ್ಕಿಯನ್ನೇ ವಿತರಿಸಬೇಕು ಎನ್ನುವ ಬೇಡಿಕೆ ಬಹಳ ಸಮಯದಿಂದ ಕೇಳಿಬರುತ್ತಿದೆ.
ಕರಾವಳಿಗೆ ಅಕ್ಕಿ ಪೂರೈಸಲು ಬೇಕಾದಷ್ಟು ಭತ್ತ ಲಭ್ಯವಾಗುತ್ತಿಲ್ಲ. ಹಾಗಾಗಿ ವಿತರಣೆಯಲ್ಲಿ ತಡವಾಗುತ್ತಿದೆ. ಸಾಕಷ್ಟು ಪ್ರಮಾಣದಲ್ಲಿ ಅಕ್ಕಿ ಸಿಗುವವರೆಗೆ ಬಿಳಿ ಅಕ್ಕಿಯನ್ನೇ ಪೂರೈಸುವುದು ಅನಿವಾರ್ಯವಾಗಿದೆ. ಮಂಡ್ಯ, ಮೈಸೂರು ಭಾಗದಲ್ಲಿ ಬೆಳೆದ ಅಕ್ಕಿಯನ್ನು ಖರೀದಿಸಿ ಪೂರೈಸಲು ವ್ಯವಸ್ಥೆ ಮಾಡಲಾವುದು.
ಉಮೇಶ್ ಕತ್ತಿ ಸಚಿವ, ಆಹಾರ ಇಲಾಖೆ
ಕೆಂಪು ಕುಚ್ಚಲಕ್ಕಿ ವಿತರಣೆ ನಿರ್ಧಾರ ಸರ್ಕಾರದ ಮಟ್ಟದಲ್ಲಿ ಆಗಬೇಕು. ಈ ಕುರಿತು ಪ್ರಕಿಯೆಗಳಷ್ಟೇ ನಡೆಯುತ್ತಿದ್ದು, ಅಂತಿಮ ನಿರ್ಧಾರವಾಗಿಲ್ಲ. ದ.ಕ.ಜಿಲ್ಲೆಯಲ್ಲಿ ಪಡಿತರ ವ್ಯವಸ್ಥೆಯಡಿ ವಿತರಣೆಗೆ ತಿಂಗಳಿಗೆ 5 ಸಾವಿರ ಮೆಟ್ರಿಕ್ ಟನ್ ಬೆಳ್ತಿಗೆ ಮತ್ತು ಬಿಳಿ ಅಕ್ಕಿ ವಿತರಿಸಲಾಗುತ್ತಿದೆ.
ಪಿ.ಆರ್.ರಮ್ಯಾ
ಉಪನಿರ್ದೇಶಕಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ