More

    ದೆಹಲಿ ಚುನಾವಣಾ ಫಲಿತಾಂಶ ಬಗ್ಗೆ ಕೇಳಿದ್ದಕ್ಕೆ ಮೂರೇ ಪದವನ್ನಾಡಿ ತಲೆ ಮೇಲೆ ಕೈಯಿಟ್ಟು ಹೊರಟ ಬಿಹಾರ ಸಿಎಂ

    ನವದೆಹಲಿ: ಅರವಿಂದ್​ ಕೇಜ್ರಿವಾಲ್​ ನೇತೃತ್ವದ ಆಮ್​ ಆದ್ಮಿ ಪಕ್ಷ ಭರ್ಜರಿ ಬಹುಮತ ಸಾಧಿಸಿ ಮೂರನೇ ಅವಧಿಗೆ ಅಧಿಕಾರ ಚುಕ್ಕಾಣಿ ಹಿಡಿದಿದೆ. ಇದೀಗ ದೆಹಲಿ ಫಲಿತಾಂಶ ಇದೇ ವರ್ಷ ಎದುರಾಗಲಿರುವ ಬಿಹಾರದ ವಿಧಾನಸಭೆ ಚುನಾವಣೆ ಮೇಲೆ ಬೀಳಲಿದೆಯೇ ಎಂಬ ಸಣ್ಣ ನಡುಕ ಸಿಎಂ ನಿತೀಶ್​ ಕುಮಾರ್​ಗೆ ಶುರುವಾಗಿದೆ. ಇಂದು ದೆಹಲಿ ಫಲಿತಾಂಶದ ನಡುವೆ ಪ್ರತಿಕ್ರಿಯಿಸಿ ಕೇವಲ ಮೂರೇ ಪದವನ್ನು ಹೇಳಿ ತಲೆಯ ಮೇಲೆ ಕೈಯಿಟ್ಟು ಹೊರ ನಡೆದಿದ್ದು ಕುತೂಹಲ ಮೂಡಿಸಿದೆ.

    ಬಿಜೆಪಿ ಐಕಾನ್​ ದೀನ ದಯಾಳ ಉಪಾಧ್ಯಾಯ ಅವರ ಸಂಸ್ಮರಣಾ ದಿನ ಹಿನ್ನೆಲೆಯಲ್ಲಿ ಬಿಹಾರದ ಉಪ ಮುಖ್ಯಮಂತ್ರಿ ಸುಶೀಲ್​ ಕುಮಾರ್​ ಮೋದಿ ಅವರೊಂದಿಗೆ ಕಾರ್ಯಕ್ರಮದ ವೇದಿಕೆ ಹಂಚಿಕೊಂಡರು. ಕಾರ್ಯಕ್ರಮದ ಬಳಿಕ ದೆಹಲಿ ಚುನಾವಣಾ ಫಲಿತಾಂಶ ಕುರಿತು ಸುದ್ದಿಗಾರರ ಪ್ರಶ್ನೆಗೆ, ಜನತಾ ಮಾಲೀಕ್​ ಹೈ (ಜನರೇ ಮಾಲೀಕರು ) ಎಂಬ ಮೂರು ಪದವನ್ನಷ್ಟೇ ಹೇಳಿ ತಲೆ ಮೇಲೆ ಕೈಯಿಟ್ಟುಕೊಂಡು ಅಲ್ಲಿಂದ ಹೊರ ನಡೆದರು.

    ದೆಹಲಿ ಚುನಾವಣೆಯಲ್ಲಿ ಪ್ರಧಾನಿ ಮೋದಿ ಹಾಗೂ ಅಮಿತ್​ ಷಾ ಅಂತಹ ನಾಯಕರೇ ಪ್ರಚಾರ ನಡೆಸಿದರು ಹೀನಾಯ ಸೋಲು ಅನುಭವಿಸಿರುವುದು ನಿತೀಶ್​ ಅವರಿಗೆ ಕೊಂಚ ನಡುಕ ಶುರುವಾಗಿದೆ ಎನ್ನಲಾಗಿದೆ.

    ಬಿಜೆಪಿ ಮೈತ್ರಿಯೊಂದಿಗೆ ಸಂಯುಕ್ತ ಜನತಾದಳ(ಜೆಡಿಯು) ಕೂಡ ದೆಹಲಿಯ ಎರಡು ಸ್ಥಾನಗಳಲ್ಲಿ ಸ್ಪರ್ಧಿಸಿತ್ತು. ಆದರೆ, ನಿತೀಶ್​ ಮೂರು ಕ್ಷೇತ್ರಗಳಲ್ಲಿ ಮಾತ್ರ ಪ್ರಚಾರ ನಡೆಸಿದ್ದರು. ಆದರೆ, ಸ್ಪರ್ಧಿಸಿದ್ದ ಎರಡು ಕ್ಷೇತ್ರದಲ್ಲೂ ಜೆಡಿಯು ಭಾರಿ ಅಂತರದಿಂದ ಹೀನಾಯ ಸೋಲು ಕಂಡಿದೆ. ಅಲ್ಲದೆ, ಕೇಜ್ರಿವಾಲ್​ ಹಣಿಯಲು ಇದೇ ಮೊದಲ ಬಾರಿಗೆ ಜೆಡಿಯುಯೊಂದಿಗೆ ಬಿಜೆಪಿ ಸೇರಿಕೊಂಡಿತ್ತು. ಸಮಾವೇಶವೊಂದರಲ್ಲಿ ಕೇಜ್ರಿವಾಲ್​ ವಿರುದ್ಧ ವಾಗ್ದಾಳಿ ನಡೆಸಿದ್ದ ನಿತೀಶ್​, ದೆಹಲಿಯಲ್ಲಿ ಕೇವಲ ಉಚಿತ ಸೌಲಭ್ಯಗಳ ಬಗ್ಗೆ ಮಾತ್ರ ಮಾತನಾಡುತ್ತಿದ್ದರೆ. ಆದರೆ, ಯಾವುದೇ ನಿಜವಾದ ಅಭಿವೃದ್ಧಿಯನ್ನು ಮಾಡಿಲ್ಲ ಎಂದು ಕೇಜ್ರಿವಾಲ್​ ವಿರುದ್ಧ ಕಿಡಿಕಾರಿದ್ದರು.

    ಜೆಡಿಯು ಉಪಾಧ್ಯಕ್ಷರಾಗಿದ್ದ ಹಾಗೂ ಚುನಾವಣಾ ಚಾಣಕ್ಯ ಎಂದೇ ಪ್ರಖ್ಯಾತಿಯಾಗಿದ್ದ ಪ್ರಶಾಂತ್​ ಕಿಶೋರ್​ ಕೇಜ್ರಿವಾಲ್​ಗೆ ಸಾಥ್​ ನೀಡಿದ್ದಾರೆ. ವಿಪರ್ಯಾಸವೆಂದರೆ ಬಿಜೆಪಿಯೊಂದಿಗಿನ ಸಖ್ಯ ಹಾಗೂ ಸಿಎಎ ಕಾಯ್ದೆಯಲ್ಲಿ ವಿಭಿನ್ನ ನಿಲುವಿನಿಂದಾಗಿ ನಿತೀಶ್​ ಕುಮಾರ್​ ಜೆಡಿಯು ಉಪಾಧ್ಯಕ್ಷ ಸ್ಥಾನದಿಂದ ಪ್ರಶಾಂತ್​ ಕಿಶೋರ್​ ಅವರನ್ನು ಕಿತ್ತುಹಾಕಿದ್ದರು. ಇದೀಗ ದೆಹಲಿಯ ಚುನಾವಣೆಯಲ್ಲೂ ಪ್ರಶಾಂತ್​ ಕಿಶೋರ್​ ಕಮಾಲ್​ ಮಾಡಿರುವುದು ನಿತೀಶ್​ಗೆ ಸ್ವಲ್ಪ ಚಿಂತಿಸುವಂತೆ ಮಾಡಿದೆ.

    ಫೆ. 8ರಂದು ದೆಹಲಿಯ 70 ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ಇಂದು ಪ್ರಕಟವಾದ ಫಲಿತಾಂಶದಲ್ಲಿ ಆಪ್​ 62 ಸ್ಥಾನಗಳಲ್ಲಿ ಜಯಭೇರಿ ಬಾರಿಸಿ ಮೂರನೇ ಅವಧಿಗೆ ದೆಹಲಿ ಗದ್ದುಗೆ ಏರಿದೆ. ಬಿಜೆಪಿ 8 ಸ್ಥಾನಗಳಿಗೆ ಮಾತ್ರ ತೃಪ್ತಿಪಟ್ಟುಕೊಂಡಿದ್ದು, ಕಾಂಗ್ರೆಸ್​ ಖಾತೆ ತೆರೆಯದೇ ಹೀನಾಯವಾಗಿ ಸೋತಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts