More

    ಡೆಲ್ಲಿ ಕ್ಯಾಪಿಟಲ್ಸ್‌ಗೆ ರಾಜಸ್ಥಾನ ರಾಯಲ್ಸ್ ಸವಾಲು

    ದುಬೈ: ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ತವಕದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಸತತ 4 ಸೋಲಿನ ಬಳಿಕ ಗೆಲುವಿನ ಹಾದಿಗೆ ಮರಳಿರುವ ರಾಜಸ್ಥಾನ ರಾಯಲ್ಸ್ ತಂಡಗಳು ಐಪಿಎಲ್-13ರಲ್ಲಿ ಬುಧವಾರ ನಡೆಯಲಿರುವ ಪಂದ್ಯದಲ್ಲಿ ಎದುರಾಗಲಿವೆ. ಹಿಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಎದುರು ಶರಣಾಗಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಗೆಲುವಿನ ಲಯಕ್ಕೆ ಮರಳುವ ಪ್ರಯತ್ನದಲ್ಲಿದೆ. ಬೆನ್ ಸ್ಟೋಕ್ಸ್ ಆಗಮನದಿಂದಾಗಿ ಉತ್ಸಾಹದಲ್ಲಿರುವ ರಾಜಸ್ಥಾನ ರಾಯಲ್ಸ್ ತಂಡ ಕಳೆದ ಪಂದ್ಯದಲ್ಲಿ ಸನ್‌ರೈಸರ್ಸ್‌ ಎದುರು ಗೆಲುವಿನ ಹಾದಿಗೆ ಮರಳಿದೆ. ಟೂರ್ನಿಯ ಕಳೆದ ಮುಖಾಮುಖಿಯಲ್ಲಿ ಡೆಲ್ಲಿ ತಂಡ 46 ರನ್‌ಗಳಿಂದ ರಾಜಸ್ಥಾನ ತಂಡವನ್ನು ಸೋಲಿಸಿತ್ತು.

    *ಡೆಲ್ಲಿಗೆ ಗೆಲುವಿನ ತವಕ
    ಸಂಘಟಿತ ಹೋರಾಟದ ಮೂಲಕ ಪ್ರಸಕ್ತ ವರ್ಷ ಬಲಿಷ್ಠ ತಂಡವಾಗಿ ಹೊರಹೊಮ್ಮಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ಪ್ರಬಲ ಪೈಪೋಟಿಗೆ ಸಜ್ಜಾಗಿದೆ. ಗಾಯದ ಸಮಸ್ಯೆಯಿಂದಾಗಿ ವಿಕೆಟ್ ಕೀಪರ್ ರಿಷಭ್ ಪಂತ್ ಒಂದು ವಾರ ಕಾಲ ಆಯ್ಕೆಗೆ ಅಲಭ್ಯರಾಗಿದ್ದಾರೆ. ಅನುಭವಿ ಬ್ಯಾಟ್ಸ್‌ಮನ್ ಶಿಖರ್ ಧವನ್ ಫಾರ್ಮ್‌ಗೆ ಮರಳಿದಿರುವುದು ಸಮಾಧಾನಕರ ಸಂಗತಿ. ಆದರೆ, ಪೃಥ್ವಿ ಷಾ ಕಳಪೆ ಫೀಲ್ಡಿಂಗ್ ಜತೆಗೆ ಅಸ್ಥಿರ ಬ್ಯಾಟಿಂಗ್ ನಿರ್ವಹಣೆ ನಾಯಕನ ಚಿಂತೆಗೆ ಕಾರಣವಾಗಿದೆ. ಬ್ಯಾಟಿಂಗ್ ಹಾಗು ಬೌಲಿಂಗ್ ಎರಡೂ ವಿಭಾಗಗಳಲ್ಲಿ ಸಮರ್ಥವಾಗಿದ್ದರೂ ತಂಡಕ್ಕೆ ಕಳಪೆ ಫೀಲ್ಡಿಂಗ್ ಹಿನ್ನಡೆಯಾಗಿದೆ. ಮುಂಬೈ ಎದುರು ಸೋತ ಬಳಿಕ ಸ್ವತಃ ನಾಯಕ ಶ್ರೇಯಸ್ ಅಯ್ಯರ್ ಇದನ್ನು ಹೇಳಿಕೊಂಡಿದ್ದರು. ರಿಷಭ್ ಅನುಪಸ್ಥಿತಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ವಿಭಾಗಕ್ಕೆ ಕೊಂಚ ಹಿನ್ನಡೆಯಾಗಿದೆ.

    *ಆತ್ಮವಿಶ್ವಾಸದಲ್ಲಿ ರಾಯಲ್ಸ್
    ಬೆನ್ ಸ್ಟೋಕ್ಸ್ ಆಗಮನದಿಂದಾಗಿ ಆತ್ಮವಿಶ್ವಾಸದ ಅಲೆಯಲ್ಲಿರುವ ರಾಜಸ್ಥಾನ ರಾಯಲ್ಸ್ ತಂಡ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ. ಸನ್‌ರೈಸರ್ಸ್‌ ಎದುರು ಬೆನ್ ಸ್ಟೋಕ್ಸ್‌ರನ್ನು ಆರಂಭಿಕರಾಗಿ ಕಣಕ್ಕಿಳಿಸಿ ಕೈಸುಟ್ಟುಕೊಂಡರೂ ಮಧ್ಯಮ ಕ್ರಮಾಂಕದಲ್ಲಿ ರಾಹುಲ್ ತೆವಾಟಿಯಾ ಹಾಗೂ ರಿಯಾನ್ ಪರಾಗ್ ತಂಡವನ್ನು ಗೆಲುವಿನ ದಡ ಸೇರಿಸಿತ್ತು. ಈ ಬಾರಿ ಬೆನ್ ಸ್ಟೋಕ್ಸ್ ಎಂದಿನಂತೆ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಸಾಧ್ಯತೆಗಳಿವೆ. ಮೊದಲ ಪಂದ್ಯದಲ್ಲಿ ಡೆಲ್ಲಿ ಎದುರು ಅನುಭವಿಸಿದ ಸೋಲಿಗೂ ರಾಜಸ್ಥಾನ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ. ನಾಯಕ ಸ್ಟೀವನ್ ಸ್ಮಿತ್ ಹಾಗೂ ಸಂಜು ಸ್ಯಾಮ್ಸನ್ ವೈಲ್ಯ ತಂಡವನ್ನು ಕಾಡುತ್ತಿದೆ. ಪ್ಲೇಆಫ್ ಆಸೆ ಜೀವಂತವಾಗಿರಿಸಿಕೊಳ್ಳಲು ರಾಜಸ್ಥಾನ ಪಾಲಿಗೆ ಅನಿವಾರ್ಯವಾಗಿದೆ.

    ಟೀಮ್ ನ್ಯೂಸ್
    ಡೆಲ್ಲಿ ಕ್ಯಾಪಿಟಲ್ಸ್: ಗಾಯಾಳು ರಿಷಭ್ ಪಂತ್ ಬದಲಿಗೆ ಆಸ್ಟ್ರೇಲಿಯಾದ ಅಲೆಕ್ಸ್ ಕ್ಯಾರಿ ಮತ್ತೊಮ್ಮೆ ವಿಕೆಟ್ ಕೀಪರ್ ಹೊಣೆ ನಿಭಾಯಿಸಬೇಕಿದೆ. ಹೀಗಾಗಿ ವಿದೇಶಿ ಕೋಟಾದಿಂದ ಶಿಮ್ರೋನ್ ಹೆಟ್ಮೆಯರ್ ಈ ಪಂದ್ಯದಿಂದಲೂ ಹೊರಗುಳಿಯಲಿದ್ದು, ಅಜಿಂಕ್ಯ ರಹಾನೆ ಮತ್ತೊಮ್ಮೆ ಕಣಕ್ಕಿಳಿಯಲಿದ್ದಾರೆ. ಉಳಿದಂತೆ, ತಂಡದಲ್ಲಿ ಹೆಚ್ಚಿನ ಬದಲಾವಣೆ ಇರುವುದಿಲ್ಲ.
    ಕಳೆದ ಪಂದ್ಯ: ಮುಂಬೈ ಇಂಡಿಯನ್ಸ್ ಎದುರು 5 ವಿಕೆಟ್ ಸೋಲು.

    ಸಂಭಾವ್ಯ ತಂಡ: ಪೃಥ್ವಿ ಷಾ, ಶಿಖರ್ ಧವನ್, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್ (ನಾಯಕ), ಮಾರ್ಕಸ್ ಸ್ಟೋಯಿನಿಸ್, ಅಲೆಕ್ಸ್ ಕ್ಯಾರಿ (ವಿಕೀ), ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ಆರ್. ಅಶ್ವಿನ್, ಕಗಿಸೊ ರಬಾಡ, ಅನ್ರಿಚ್ ನೋರ್ಜೆ.

    ರಾಜಸ್ಥಾನ ರಾಯಲ್ಸ್: ಹಿಂದಿನ ಪಂದ್ಯದಲ್ಲಿ ಗೆಲುವಿನ ಹಳಿ ಏರಿರುವ ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಹೆಚ್ಚಿನ ಬದಲಾವಣೆ ನಿರೀಕ್ಷಿಸುವಂತಿಲ್ಲ. ಸತತ ವೈಲ್ಯ ಅನುಭವಿಸುತ್ತಿರುವ ಕನ್ನಡಿಗ ರಾಬಿನ್ ಉತ್ತಪ್ಪ ಬದಲಿಗೆ ಮನನ್ ವೋಹ್ರಾ ತಂಡಕ್ಕೆ ವಾಪಸಾಗಬಹುದು.
    ಕಳೆದ ಪಂದ್ಯ: ಸನ್‌ರೈಸರ್ಸ್‌ ಎದುರು 5 ವಿಕೆಟ್ ಜಯ.

    ಸಂಭಾವ್ಯ ತಂಡ: ಬೆನ್ ಸ್ಟೋಕ್ಸ್, ಜೋಶ್ ಬಟ್ಲರ್ (ವಿಕೀ), ಸ್ಟೀವನ್ ಸ್ಮಿತ್ (ನಾಯಕ), ಸಂಜು ಸ್ಯಾಮ್ಸನ್, ರಾಬಿನ್ ಉತ್ತಪ್ಪ/ಮನನ್ ವೋಹ್ರಾ, ರಿಯಾನ್ ಪರಾಗ್, ರಾಹುಲ್ ತೆವಾಟಿಯಾ, ಜ್ರೋಾ ಆರ್ಚರ್, ಶ್ರೇಯಸ್ ಗೋಪಾಲ್, ಜೈದೇವ್ ಉನಾದ್ಕತ್, ಕಾರ್ತಿಕ್ ತ್ಯಾಗಿ.

    ಪಂದ್ಯ ಆರಂಭ: ರಾತ್ರಿ 7.30ಕ್ಕೆ
    ನೇರ ಪ್ರಸಾರ: ಸ್ಟಾರ್‌ಸ್ಪೋರ್ಟ್ಸ್ ನೆಟ್‌ವರ್ಕ್
    ಮುಖಾಮುಖಿ: 21, ಡೆಲ್ಲಿ ಕ್ಯಾಪಿಟಲ್ಸ್: 10, ರಾಜಸ್ಥಾನ ರಾಯಲ್ಸ್: 11.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts