More

    ಇಂದು ಮುಂಬೈ ಇಂಡಿಯನ್ಸ್‌ಗೆ ಡೆಲ್ಲಿ ಕ್ಯಾಪಿಟಲ್ಸ್ ಸವಾಲು

    ಚೆನ್ನೈ: ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ಎದುರು ಸೋಲನುಭವಿಸಿದ ಬಳಿಕ ಸತತ ಎರಡು ಪಂದ್ಯಗಳಲ್ಲಿ ಜಯ ದಾಖಲಿಸಿದ ವಿಶ್ವಾಸದಲ್ಲಿರುವ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್-14ರ ತನ್ನ ನಾಲ್ಕನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎದುರಿನ ಹೋರಾಟಕ್ಕೆ ಸಜ್ಜಾಗಿದೆ. ರಾಜಸ್ಥಾನ ರಾಯಲ್ಸ್ ಎದುರು ನೀರಸ ಬ್ಯಾಟಿಂಗ್‌ನಿಂದ ನಿರಾಸೆ ಅನುಭವಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಶಿಖರ್ ಧವನ್ ಅಬ್ಬರದ ಫಲವಾಗಿ ಪಂಜಾಬ್ ಕಿಂಗ್ಸ್ ಎದುರು ಗೆಲುವಿನ ಹಳಿಗೇರಿತ್ತು. 2020ರ ಆವೃತ್ತಿಯ ಫೈನಲಿಸ್ಟ್ ತಂಡಗಳ ಕದನ ಕುತೂಹಲ ಕೆರಳಿಸಿದೆ. ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಸುಲಭವಾಗಿ ಶರಣಾಗಿದ್ದ ಡೆಲ್ಲಿ ತಂಡಕ್ಕೆ ಸೇಡು ತೀರಿಸಿಕೊಳ್ಳುವ ಅವಕಾಶ ಲಭಿಸಿದೆ. ಮುಂಬೈನಲ್ಲಿ ಪಂಜಾಬ್ ತಂಡವನ್ನು ಮಣಿಸಿ ಚೆನ್ನೈಗೆ ಆಗಮಿಸಿರುವ ಡೆಲ್ಲಿ ಚೆಪಾಕ್ ಅಂಗಳದ ಮಂದಗಿತ ಪಿಚ್‌ಗೆ ಹೊಂದಿಕೊಳ್ಳಬೇಕಿದೆ. ನಾಯಕ ರೋಹಿತ್ ಶರ್ಮ ಹಾಗೂ ಕ್ವಿಂಟನ್ ಡಿಕಾಕ್ ಜೋಡಿ ಉತ್ತಮ ಆರಂಭ ನೀಡುತ್ತಿದ್ದರೂ ಮಧ್ಯಮ ಕ್ರಮಾಂಕ ಕೈಕೊಡುತ್ತಿರುವುದು ಮುಂಬೈಗೆ ಹಿನ್ನಡೆಯಾಗಿದೆ.

    * ಮುಂಬೈಗೆ ಕೈಕೊಡುತ್ತಿರುವ ಮಧ್ಯಮ ಕ್ರಮಾಂಕ
    ನಾಯಕ ರೋಹಿತ್ ಶರ್ಮ ಹಾಗೂ ಕ್ವಿಂಟನ್ ಡಿಕಾಕ್ ಜೋಡಿ ಉತ್ತಮ ಆರಂಭ ನೀಡುತ್ತಿದ್ದರೆ ಮಧ್ಯಮ ಕ್ರಮಾಂಕವೇ ತಂಡಕ್ಕೆ ಕೈಕೊಡುತ್ತಿದೆ. ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಕೈರಾನ್ ಪೊಲ್ಲಾರ್ಡ್, ಹಾರ್ದಿಕ್ ಪಾಂಡ್ಯ, ಕೃನಾಲ್ ಒಳಗೊಂಡ ಮಧ್ಯಮ ಕ್ರಮಾಂಕ ಬಲಿಷ್ಠವಾಗಿದ್ದರೂ ಇದುವರೆಗೂ ಸಂಘಟಿತವಾಗಿ ಸ್ಫೋಟಿಸಿಲ್ಲ. ಕಳೆದ ಪಂದ್ಯದಲ್ಲಿ ಕೈರಾನ್ ಪೊಲ್ಲಾರ್ಡ್ ಅಬ್ಬರದ ಫಲವಾಗಿ ಸನ್‌ರೈಸರ್ಸ್‌ ಎದುರು ಮುಂಬೈ ಸಾಧಾರಣ ಮೊತ್ತ ಕಲೆಹಾಕಿತ್ತು. ಜಸ್‌ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್ ಹಾಗೂ ರಾಹುಲ್ ಚಹರ್ ಒಳಗೊಂಡ ಬೌಲಿಂಗ್ ಪಡೆ ತಂಡಕ್ಕೆ ಆಧಾರವಾಗಿದೆ.

    * ಆತ್ಮವಿಶ್ವಾಸದಲ್ಲಿ ಡೆಲ್ಲಿ ಕ್ಯಾಪಿಟಲ್ಸ್
    ಪಂಜಾಬ್ ನೀಡಿದ ಬೃಹತ್ ಮೊತ್ತ ಬೆನ್ನಟ್ಟುವ ಮೂಲಕ ಸಲುಭ ಗೆಲುವು ದಾಖಲಿಸಿರುವ ಡೆಲ್ಲಿ ತಂಡ ಆತ್ಮವಿಶ್ವಾಸದಲ್ಲಿದೆ. ಆರಂಭಿಕರಾದ ಶಿಖರ್ ಧವನ್, ಪೃಥ್ವಿ ಷಾ ಉತ್ತಮ ಫಾರ್ಮ್‌ನಲ್ಲಿರುವುದೇ ತಂಡದ ಪ್ಲಸ್ ಪಾಯಿಂಟ್. ಮುಂಬೈನಲ್ಲಿ ಪಂಜಾಬ್ ತಂಡವನ್ನು ಮಣಿಸಿ ಚೆನ್ನೈಗೆ ಆಗಮಿಸಿರುವ ಡೆಲ್ಲಿ ಚೆಪಾಕ್ ಅಂಗಳದ ಮಂದಗಿತ ಪಿಚ್‌ಗೆ ಹೊಂದಿಕೊಳ್ಳಬೇಕಿದೆ. ಮಧ್ಯಮ ಕ್ರಮಾಂಕದಲ್ಲಿ ಅಜಿಂಕ್ಯ ರಹಾನೆ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳಬಹುದು. ರಬಾಡ, ಕ್ರಿಸ್ ವೋಕ್ಸ್ ಜೋಡಿ ವೇಗದ ವಿಭಾಗದಲ್ಲಿ ಉತ್ತಮ ನಿರ್ವಹಣೆ ತೋರುತ್ತಿದೆ. ವೋಕ್ಸ್ ಕೊಂಚ ಮಟ್ಟಿಗೆ ದುಬಾರಿಯಾಗುತ್ತಿದ್ದರೂ ವಿಕೆಟ್ ಕಬಳಿಸುತ್ತಿದ್ದಾರೆ. ದ.ಆಫ್ರಿಕಾದ ಮತ್ತೋರ್ವ ವೇಗಿ ಅನ್ರಿಚ್ ನೋಕಿಯಾ ಕೋವಿಡ್-19ರಿಂದ ಸುಧಾರಿಸಿಕೊಂಡು ತಂಡಕ್ಕೆ ವಾಪಸಾಗಿದ್ದಾರೆ.

    ಮುಂಬೈ ಇಂಡಿಯನ್ಸ್: ಸತತ ಎರಡು ಜಯ ದಾಖಲಿಸಿರುವ ಮುಂಬೈ ಇಂಡಿಯನ್ಸ್ ತಂಡದಲ್ಲಿ ಬದಲಾವಣೆ ನಿರೀಕ್ಷೆ ಇಲ್ಲ. ಹಿಂದಿನ ಪಂದ್ಯದಲ್ಲಿ ಆಡಿದ ತಂಡವನ್ನೇ ಉಳಿಸಿಕೊಳ್ಳುವ ಸಾಧ್ಯತೆಗಳಿವೆ.
    ಕಳೆದ ಪಂದ್ಯ: ಸನ್‌ರೈಸರ್ಸ್‌ ಎದುರು 13 ರನ್ ಜಯ
    ಡೆಲ್ಲಿ ಕ್ಯಾಪಿಟಲ್ಸ್: ಗೆಲುವಿನ ಲಯ ಕಂಡಿರುವ ಡೆಲ್ಲಿ ತಂಡದಲ್ಲೂ ಬದಲಾವಣೆ ಅಗತ್ಯವಿಲ್ಲ. ಆನ್ರಿಚ್ ನೋಕಿಯಾ ಕೋವಿಡ್-19ನಿಂದ ಸುಧಾರಿಸಿ ವಾಪಸಾಗಿರುವುದರಿಂದ ಕ್ರಿಸ್ ವೋಕ್ಸ್ ಬದಲಿಗೆ ಪರಿಗಣಿಸಬಹುದು. ಪಂಜಾಬ್ ಎದುರು ನಾಲ್ಕು ವೇಗಿಗಳಿಗೆ ಮಣೆ ಹಾಕಿ, ಏಕೈಕ ಸ್ಪಿನ್ನರ್‌ಗೆ ಅವಕಾಶ ನೀಡಲಾಗಿತ್ತು. ಹೆಚ್ಚುವರಿ ಸ್ಪಿನ್ನರ್‌ಗೆ ಅವಕಾಶ ನೀಡಿದರೆ ಲುಕ್‌ಮನ್ ಮೇರಿವಾಲ ಬದಲಿಗೆ ಅಮಿತ್ ಮಿಶ್ರಾ ಅಥವಾ ಕನ್ನಡಿಗ ಪ್ರವೀಣ್ ದುಬೆ ಅವಕಾಶ ಪಡೆಯಬಹುದು.
    ಕಳೆದ ಪಂದ್ಯ: ಪಂಜಾಬ್ ಎದುರು 6 ವಿಕೆಟ್ ಜಯ

    ಮುಖಾಮುಖಿ: 28
    ಮುಂಬೈ: 16
    ಡೆಲ್ಲಿ: 12
    ಆರಂಭ: ರಾತ್ರಿ 7.30
    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ 
    ==============

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts