More

    ಡೆಲ್ಲಿ ಕ್ಯಾಪಿಟಲ್ಸ್ ಎದುರು ಸೇಡು ತೀರಿಸಿಕೊಳ್ಳುವ ತವಕದಲ್ಲಿ ಕಿಂಗ್ಸ್ ಇಲೆವೆನ್

    ದುಬೈ: ಹಾಲಿ ಚಾಂಪಿಯನ್ ಮುಂಬೈ ಎದುರು ಡಬಲ್ ಸೂಪರ್ ಓವರ್‌ನಲ್ಲಿ ಜಯ ದಾಖಲಿಸಿದ ವಿಶ್ವಾಸದಲ್ಲಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಐಪಿಎಲ್-13ರ ತನ್ನ 10ನೇ ಪಂದ್ಯದಲ್ಲಿ ಟೇಬಲ್ ಟಾಪರ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ. ಟೂರ್ನಿಯ ಕಳೆದ ಮುಖಾಮುಖಿಯಲ್ಲಿ ಗೆಲುವಿನ ಸನಿಹದಲ್ಲಿ ಎಡವಿ ಸೂಪರ್ ಓವರ್‌ನಲ್ಲಿ ಡೆಲ್ಲಿ ತಂಡಕ್ಕೆ ಶರಣಾಗಿದ್ದ ಪಂಜಾಬ್ ತಂಡ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ. ಸತತ 5 ಸೋಲುಗಳ ಬಳಿಕ ಕಳೆದ 2 ಪಂದ್ಯಗಳಲ್ಲಿ ಜಯ ದಾಖಲಿಸಿರುವ ಕೆಎಲ್ ರಾಹುಲ್ ಬಳಗ ಇದೀಗ ಹ್ಯಾಟ್ರಿಕ್ ಗೆಲುವಿನೊಂದಿಗೆ ಪ್ಲೇಆಫ್ ಆಸೆ ವೃದ್ಧಿಸಿಕೊಳ್ಳುವ ಯತ್ನದಲ್ಲಿದೆ. ಶ್ರೇಯಸ್ ಅಯ್ಯರ್ ಬಳಗವೂ ಹ್ಯಾಟ್ರಿಕ್ ಗೆಲುವಿನೊಂದಿಗೆ ಅಗ್ರಸ್ಥಾನವನ್ನು ಭದ್ರಪಡಿಸಿಕೊಳ್ಳುವ ಹಂಬಲದಲ್ಲಿದೆ.

    * ಪಂಜಾಬ್‌ಗೆ ಡೆತ್ ಓವರ್ ಸಮಸ್ಯೆ
    ಹಿಂದಿನ ಎರಡು ಪಂದ್ಯಗಳಲ್ಲಿ ಆರ್‌ಸಿಬಿ ಹಾಗೂ ಮುಂಬೈ ಇಂಡಿಯನ್ಸ್ ಎದುರು ಜಯ ಸಾಧಿಸಿದ ವಿಶ್ವಾಸದಲ್ಲಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ, ಪ್ಲೇ-ಆಫ್ ಹಂತಕ್ಕೇರಲು ಲೀಗ್ ಹಂತದಲ್ಲಿ ಉಳಿದಿರುವ ಎಲ್ಲ 5 ಪಂದ್ಯಗಳಲ್ಲೂ ಗೆಲ್ಲಬೇಕಿದೆ. ಡೆತ್ ಓವರ್‌ಗಳಲ್ಲಿ ಬೌಲರ್‌ಗಳು ದುಬಾರಿಯಾಗುತ್ತಿರುವುದು, ಸ್ಟಾರ್ ಬ್ಯಾಟ್ಸ್‌ಮನ್ ಗ್ಲೆನ್ ಮ್ಯಾಕ್ಸ್‌ವೆಲ್ ಸತತ ವೈಫಲ್ಯ ತಂಡವನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಮಧ್ಯಮ ಕ್ರಮಾಂಕದಲ್ಲಿ ಶಕ್ತಿ ತುಂಬುವಂಥ ಬ್ಯಾಟ್ಸ್‌ಮನ್ ಕೊರತೆ ಕಾಡುತ್ತಿದೆ. ಆರಂಭಿಕರಾದ ಕೆಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಜೋಡಿಗೆ ಕ್ರಿಸ್ ಗೇಲ್ ಕೊಂಚ ಸಾಥ್ ನೀಡುತ್ತಿದ್ದಾರೆ. ಮೊಹಮದ್ ಶಮಿ ಹೊರತುಪಡಿಸಿ ಉಳಿದ ಬೌಲರ್‌ಗಳು ದುಬಾರಿಯಾಗುತ್ತಿದ್ದಾರೆ. ಅದರಲ್ಲೂ ಡೆತ್ ಓವರ್‌ಗಳಲ್ಲಿ ನಿರಾಯಾಸವಾಗಿ ರನ್ ಬಿಟ್ಟುಕೊಡುತ್ತಿರುವುದು ತಂಡದ ಹಿನ್ನಡೆಗೆ ಪ್ರಮುಖ ಕಾರಣ.
    * ಹ್ಯಾಟ್ರಿಕ್ ಗೆಲುವಿನ ವಿಶ್ವಾಸದಲ್ಲಿ ಡೆಲ್ಲಿ
    ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ಹ್ಯಾಟ್ರಿಕ್ ಗೆಲುವಿನ ಗುರಿಯಲ್ಲಿದೆ. ಅದ್ಭುತ ಬೌಲಿಂಗ್ ಲೈನ್ ಹೊಂದಿರುವ ಡೆಲ್ಲಿ ತಂಡಕ್ಕೆ ಉತ್ತಮ ಆರಂಭ ದಕ್ಕುತ್ತಿಲ್ಲ. ಟೂರ್ನಿಯ ಮೊದಲ ಪಂದ್ಯದಿಂದಲೂ ಆಡುತ್ತಿದ್ದರೂ ಯುವ ಬ್ಯಾಟ್ಸ್‌ಮನ್ ಪೃಥ್ವಿ ಷಾ ಸತತವಾಗಿ ವೈಫಲ್ಯರಾಗುತ್ತಿದ್ದಾರೆ. ಆದರೆ, ಸಿಎಸ್‌ಕೆ ಎದುರು ಐಪಿಎಲ್‌ನಲ್ಲಿ ಚೊಚ್ಚಲ ಶತಕ ಸಿಡಿಸಿದ ಶಿಖರ್ ಭರ್ಜರಿ ಫಾರ್ಮ್‌ನಲ್ಲಿರುವುದು ತಂಡದ ಪ್ಲಸ್ ಪಾಯಿಂಟ್. ನಾಯಕ ಶ್ರೇಯಸ್ ಅಯ್ಯರ್‌ಗೂ ಅಸ್ಥಿರ ನಿರ್ವಹಣೆ ಕಾಡುತ್ತಿದೆ. ವಿಕೆಟ್ ಕೀಪರ್ ರಿಷಭ್ ಪಂತ್ ಪೂರ್ಣ ಪ್ರಯಾಣದಲ್ಲಿ ಚೇತರಿಸಿಕೊಳ್ಳದಿರುವ ಕಾರಣ ಅಜಿಂಕ್ಯ ರಹಾನೆ ಕಣಕ್ಕಿಳಿಯಲಿದ್ದಾರೆ. ಪಂತ್ ಅನುಪಸ್ಥಿತಿಯಲ್ಲಿ ರಹಾನೆ 3 ಪಂದ್ಯಗಳನ್ನಾಡಿದ್ದರೂ ಗಮನಾರ್ಹ ನಿರ್ವಹಣೆ ಬಂದಿಲ್ಲ.

    ಟೀಮ್ ನ್ಯೂಸ್
    ಕಿಂಗ್ಸ್ ಇಲೆವೆನ್ ಪಂಜಾಬ್: ಸತತ 2 ಪಂದ್ಯಗಳಲ್ಲಿ ಗೆದ್ದಿರುವ ಪಂಜಾಬ್ ತಂಡದಲ್ಲಿ ಹೆಚ್ಚಿನ ಬದಲಾವಣೆ ನಿರೀಕ್ಷಿಸುವಂತಿಲ್ಲ. ಎಂ.ಅಶ್ವಿನ್ ಬದಲಿಗೆ ಕನ್ನಡಿಗ ಕೆ.ಗೌತಮ್ ವಾಪಸಾಗಬಹುದು.
    ಕಳೆದ ಪಂದ್ಯ: ಮುಂಬೈ ಎದುರು ಡಬಲ್ ಸೂಪರ್ ಓವರ್‌ನಲ್ಲಿ ಜಯ.

    ತಂಡ: ಕೆಎಲ್ ರಾಹುಲ್ (ನಾಯಕ, ವಿಕೀ), ಮಯಾಂಕ್ ಅಗರ್ವಾಲ್, ಕ್ರಿಸ್ ಗೇಲ್, ನಿಕೋಲಸ್ ಪೂರನ್, ಗ್ಲೆನ್ ಮ್ಯಾಕ್ಸ್‌ವೆಲ್, ದೀಪಕ್ ಹೂಡಾ, ಕ್ರಿಸ್ ಜೋರ್ಡಾನ್, ಎಂ.ಅಶ್ವಿನ್/ಕೆ.ಗೌತಮ್, ಮೊಹಮದ್ ಶಮಿ, ರವಿ ಬಿಷ್ಣೋಯಿ, ಅರ್ಷದೀಪ್ ಸಿಂಗ್.

    ಡೆಲ್ಲಿ ಕ್ಯಾಪಿಟಲ್ಸ್: ಗಾಯಾಳು ರಿಷಭ್ ಪಂತ್ ಫಿಟ್ ಆದರೆ, ತಂಡದಲ್ಲಿ 2 ಬದಲಾವಣೆ ಖಚಿತ. ರಿಷಭ್ ಜತೆಗೆ ಶಿಮ್ರೋನ್ ಹೆಟ್ಮೆಯರ್ ಕೂಡ ವಾಪಸಾಗಲಿದ್ದು, ಅಜಿಂಕ್ಯ ರಹಾನೆ ಹಾಗೂ ಅಲೆಕ್ಸ್ ಕ್ಯಾರಿ ಹೊರಗುಳಿಯಬೇಕಾಗುತ್ತದೆ.
    ಕಳೆದ ಪಂದ್ಯ: ಚೆನ್ನೈ ಸೂಪರ್ ಕಿಂಗ್ಸ್ ಎದುರು 5 ವಿಕೆಟ್ ಜಯ.

    ಸಂಭಾವ್ಯ ತಂಡ: ಪೃಥ್ವಿ ಷಾ, ಶಿಖರ್ ಧವನ್, ಅಜಿಂಕ್ಯ ರಹಾನೆ/ಶಿಮ್ರೋನ್ ಹೆಟ್ಮೆಯರ್, ಶ್ರೇಯಸ್ ಅಯ್ಯರ್ (ನಾಯಕ), ಮಾರ್ಕಸ್ ಸ್ಟೋಯಿನಿಸ್, ಅಲೆಕ್ಸ್ ಕ್ಯಾರಿ/ರಿಷಭ್ ಪಂತ್ (ವಿಕೀ), ಅಕ್ಷರ್ ಪಟೇಲ್, ಆರ್.ಅಶ್ವಿನ್, ತುಷಾರ್ ದೇಶಪಾಂಡೆ, ಕಗಿಸೊ ರಬಾಡ, ಅನ್ರಿಚ್ ನೋರ್ಜೆ.

    ಪಂದ್ಯ ಆರಂಭ: ರಾತ್ರಿ 7.30ಕ್ಕೆ
    ನೇರ ಪ್ರಸಾರ : ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್
    ಮುಖಾಮುಖಿ: 25, ಪಂಜಾಬ್: 14, ಡೆಲ್ಲಿ: 11

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts