More

    ಕಾಲೇಜು ಪುನರಾರಂಭಕ್ಕೆ ಕರೊನಾ ಮಾರ್ಗಸೂಚಿ ಅಡ್ಡಿ ; ಮೊದಲ ದಿನ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಕಾಲೇಜಿನತ್ತ ಮುಖ

    ತುಮಕೂರು : ಕರೊನಾ ಭೀತಿಯಿಂದ 8 ತಿಂಗಳು ಬಾಗಿಲು ಮುಚ್ಚಿದ್ದ ಪದವಿ, ಸ್ನಾತಕ ಪದವಿ ಕಾಲೇಜುಗಳ ಪುನರಾರಂಭಕ್ಕೆ ಕರೊನಾ ಮಾರ್ಗಸೂಚಿ ಅಡ್ಡಿಯಾಯಿತು. ಕರೊನಾ ಪರೀಕ್ಷೆ ಕಡ್ಡಾಯ ಹಿನ್ನೆಲೆಯಲ್ಲಿ ತರಗತಿ ಆರಂಭದ ಮೊದಲ ದಿನ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಕಾಲೇಜಿನತ್ತ ಮುಖಮಾಡಿದ್ದರು.

    ತುಮಕೂರು ವಿಶ್ವವಿದ್ಯಾಲಯದಡಿ 106 ಪದವಿ ಕಾಲೇಜುಗಳಿದ್ದು, 17 ಸಾವಿರಕ್ಕೂ ಹೆಚ್ಚು ಅಂತಿಮ ಪದವಿ ಹಾಗೂ ಸ್ನಾತಕ ಪದವಿ ವಿದ್ಯಾರ್ಥಿಗಳಿದ್ದಾರೆ. ಮಂಗಳವಾರ ಶೇ. 5-8 ವಿದ್ಯಾರ್ಥಿಗಳು ಕಾಲೇಜಿಗೆ ಹಾಜರಾಗಿದ್ದರು. ವಿದ್ಯಾರ್ಥಿಗಳ ಕೊರತೆಯಿಂದ ಮೊದಲ ದಿನ ತರಗತಿಗಳನ್ನು ಪ್ರಾರಂಭಿಸುವ ಸಾಹಸವನ್ನು ಅಧ್ಯಾಪಕ ವೃಂದ ಮಾಡಲಿಲ್ಲ.

    ಬಾರದ ವಿದ್ಯಾರ್ಥಿಗಳು: ಸರ್ಕಾರದ ಮಾರ್ಗಸೂಚಿ ಹಿನ್ನೆಲೆಯಲ್ಲಿ ಅಂತಿಮ ಪದವಿ, ಸ್ನಾತಕ ಪದವಿ ಕಾಲೇಜುಗಳಲ್ಲಿ ತರಗತಿಗಳನ್ನು ಆರಂಭಿಸಲು ಸರ್ಕಾರ ಆದೇಶಿಸಿದ ಹಿನ್ನೆಲೆಯಲ್ಲಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸ್ವಾಗತಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಪ್ರತಿ ಕೊಠಡಿ ಸ್ಯಾನಿಟೈಸ್, ಡೆಸ್ಕ್‌ಗಳ ಸ್ವಚ್ಛತೆ, ಪರಸ್ಪರ ಅಂತರ ಸೇರಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಮೊದಲ ದಿನ ವಿದ್ಯಾರ್ಥಿಗಳ ನಿರೀಕ್ಷೆಯಲ್ಲಿದ್ದ ಅಧ್ಯಾಪಕ ವೃಂದಕ್ಕೆ ತೀವ್ರ ನಿರಾಸೆಯಾಯಿತು.

    ಕರೊನಾ ಪರೀಕ್ಷೆ ವರದಿ ಕಡ್ಡಾಯ ಹಾಜರುಪಡಿಸಬೇಕಿದ್ದು 3-4 ದಿನಗಳಿಂದ ರಜೆ ಹಿನ್ನೆಲೆಯಲ್ಲಿ ಕರೊನಾ ನೆಗೆಟಿವ್ ಪಡೆಯದ ವಿದ್ಯಾರ್ಥಿಗಳು ಕಾಲೇಜುಗಳತ್ತ ಮುಖ ಮಾಡುವ ಧೈರ್ಯ ಮಾಡಲಿಲ್ಲ. ಪಾಲಕರ ಒಪ್ಪಿಗೆ ಪಡೆದಿರುವರಾದರೂ ಕರೊನಾ ಪರೀಕ್ಷೆಗೊಳಗಾದ ಹಿನ್ನೆಲೆಯಲ್ಲಿ ಗೈರಾದರು. ಕಾಲೇಜುವರೆಗೆ ಬಂದಿದ್ದ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಮನೆಗೆ ಮರಳಿದರು.

    ವಿವಿ ಸಿಬ್ಬಂದಿಗೆ ಮುಖ್ಯದ್ವಾರದಲ್ಲೇ ತಡೆ !: ಕಳೆದ 3 ದಿನಗಳಿಂದ ದೀಪಾವಳಿ ರಜೆ ಹಿನ್ನೆಲೆಯಲ್ಲಿ ಕರೊನಾ ಪರೀಕ್ಷೆ ಮಾಡಿಸಿಕೊಳ್ಳಲಾಗದ ವಿವಿ ಸಿಬ್ಬಂದಿಗೆ ತುಮಕೂರು ವಿವಿ ಪ್ರವೇಶ ದ್ವಾರದಲ್ಲೇ ತಡೆಹಿಡಿಯಲಾಯಿತು. ಈ ವೇಳೆ ವಿವಿ ಸಿಬ್ಬಂದಿ ಒತ್ತಾಯದ ಮೇರೆಗೆ ಜಿಲ್ಲಾ ಆಸ್ಪತ್ರೆಯಿಂದ ಕರೊನಾ ಪರೀಕ್ಷೆಗೆ ಗಂಟಲುದ್ರವ ಸಂಗ್ರಹಿಸಲು ಪ್ರಯೋಗಾಲಯ ಸಿಬ್ಬಂದಿಯನ್ನು ವಿವಿಗೆ ಕಳುಹಿಸಲಾಯಿತು. 380 ಕ್ಕೂ ಹೆಚ್ಚು ಬೋಧಕ, ಬೋಧಕೇತರ ಸಿಬ್ಬಂದಿ ವಿವಿಯಲ್ಲಿದ್ದು, ಬುಧವಾರ ಮಧ್ಯಾಹ್ನದ ಹೊತ್ತಿಗೆ ಎಲ್ಲರ ರಿಪೋರ್ಟ್ ಸಿಗಲಿದೆ.

    ಕರೊನಾ ಪರೀಕ್ಷೆಗೆ 5 ತಂಡ : ತುಮಕೂರು ನಗರದಲ್ಲಿ 5 ತಂಡಗಳನ್ನು ಕರೊನಾ ಪರೀಕ್ಷೆಗೆ ರೂಪಿಸಲಾಗಿದೆ. ಈ ತಂಡಗಳು ಕಾಲೇಜಿಗೆ ತೆರಳಿ ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳ ಗಂಟಲುದ್ರವ ಸಂಗ್ರಹಿಸಲಿವೆ. ಪ್ರತಿಯೊಬ್ಬ ಸಿಬ್ಬಂದಿ, ಅಂತಿಮ ವರ್ಷದ ವಿದ್ಯಾರ್ಥಿಗಳಿಗೂ ಕರೊನಾ ಪರೀಕ್ಷೆ ಮಾಡುವ ಸಿದ್ಧತೆಯನ್ನು ಜಿಲ್ಲಾ ಆರೋಗ್ಯ ಇಲಾಖೆ ಮಾಡಿಕೊಂಡಿದೆ.

    3-4 ದಿನ ರಜೆ ಹಿನ್ನೆಲೆಯಲ್ಲಿ ಕರೊನಾ ಪರೀಕ್ಷೆ ಮಾಡಿಸಿಕೊಳ್ಳಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಶೇ. 8 ವಿದ್ಯಾರ್ಥಿಗಳು ಮಾತ್ರ ಜಿಲ್ಲೆಯ ಪದವಿ ಕಾಲೇಜುಗಳಲ್ಲಿ ಮೊದಲ ದಿನ ಹಾಜರಾಗಿದ್ದಾರೆ. ಇನ್ನೆರಡು ದಿನಗಳಲ್ಲಿ ತರಗತಿಗಳು ಪೂರ್ಣ ಪ್ರಮಾಣದಲ್ಲಿ ನಡೆಯುವ ನಿರೀಕ್ಷೆಗಳಿವೆ. ಕಾಲೇಜಿಗೆ ಬರಲು ಇಚ್ಛಿಸದವರಿಗೆ ಆನ್‌ಲೈನ್ ತರಗತಿಗಳು ಮುಂದುವರಿಯಲಿವೆ.
    ಪ್ರೊ.ವೈ.ಎಸ್.ಸಿದ್ದೇಗೌಡ, ಕುಲಪತಿ, ತುಮಕೂರು ವಿವಿ

    ಖಾಸಗಿ ಕಾಲೇಜು ಸಿಬ್ಬಂದಿ, ಅಧ್ಯಾಪಕ ವೃಂದದ ಕರೊನಾ ಪರೀಕ್ಷೆಗೆ ಗಂಟಲು ದ್ರವ ಸಂಗ್ರಹಿಸಲು ಜಿಲ್ಲಾ ಆಸ್ಪತ್ರೆ ಸಿಬ್ಬಂದಿಯನ್ನು ಆಯಾ ಕಾಲೇಜುಗಳಿಗೆ ಕಳುಹಿಸಬೇಕು. ನಮ್ಮ ಸಿಬ್ಬಂದಿ ಸರ್ಕಾರಿ ಆಸ್ಪತ್ರೆಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಇನ್ನು ವಿದ್ಯಾರ್ಥಿಗಳಿಗೆ 3-4 ದಿನವಾದರೂ ಕರೊನಾ ಪರೀಕ್ಷಾ ವರದಿ ಸಿಕ್ಕಿಲ್ಲ. ಶುಕ್ರವಾರದಿಂದ ಪೂರ್ಣಪ್ರಮಾಣದ ತರಗತಿಗಳನ್ನು ಆರಂಭಿಸಲಾಗುವುದು.
    ಎನ್.ಬಿ.ಪ್ರದೀಪ್‌ಕುಮಾರ್, ಕಾರ್ಯದರ್ಶಿ, ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆ

    ಎಲ್ಲ ತಾಲೂಕು ಕೇಂದ್ರಗಳಲ್ಲೂ ಅಂತಿಮ ಪದವಿ ಕಾಲೇಜು ವಿದ್ಯಾರ್ಥಿಗಳು, ಅಧ್ಯಾಪಕರು, ಕಾಲೇಜು ಸಿಬ್ಬಂದಿಗೆ ಕರೊನಾ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿದೆ. ಮಂಗಳವಾರ ಒಂದೇ ದಿನ ಇಡೀ ಜಿಲ್ಲೆಯಲ್ಲಿ 1300ಕ್ಕೂ ಹೆಚ್ಚು ಮಂದಿ ಗಂಟಲು ದ್ರವ ಸಂಗಹಿಸಿದ್ದು 24-48 ಗಂಟೆಯೊಳಗೆ ಪರೀಕ್ಷಾ ವರದಿ ಮೊಬೈಲ್‌ಗೆ ರವಾನೆಯಾಗಲಿದೆ.
    ಡಾ.ನಾಗೇಂದ್ರಪ್ಪ, ಡಿಎಚ್‌ಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts