More

    ರಕ್ಷಣಾ ಇಲಾಖೆಯ ಭೂಮಿ ಬಿಟ್ಟು ಕೊಡಿ

    ಬೆಳಗಾವಿ: ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಗೊಂಡಿರುವ, ವಾಣಿಜ್ಯ ವಹಿವಾಟಿನ ಕೇಂದ್ರ ಸ್ಥಾನವಾಗಿರುವ ಬೆಳಗಾವಿ ನಗರದಲ್ಲಿ ಐಟಿ ಪಾರ್ಕ್ ನಿರ್ಮಾಣಕ್ಕಾಗಿ ಜಾಗ ಮಂಜೂರಾತಿಗೆ ಆಗ್ರಹಿಸಿ ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ಕೆಎಲ್‌ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ನೇತೃತ್ವದ ಶಾಸಕರ ನಿಯೋಗ ಬೆಂಗಳೂರಿನಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಭೇಟಿ ಮಾಡಿ ಮನವಿ ಸಲ್ಲಿಸಿದೆ.

    ಕರ್ನಾಟಕ ಸರ್ಕಾರಕ್ಕೆ ಸೇರಿದ ನೂರಾರು ಎಕರೆ ಜಮೀನು ಬೆಳಗಾವಿ ನಗರದಲ್ಲಿ ರಕ್ಷಣಾ ಇಲಾಖೆ ವಶದಲ್ಲಿದೆ. ಐಟಿ ಪಾರ್ಕ್ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ರಕ್ಷಣಾ ಇಲಾಖೆ ಜಾಗ ಬಿಟ್ಟುಕೊಡದಿರುವ ಹಿನ್ನೆಲೆಯಲ್ಲಿ ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಳ್ಳುತ್ತಿವೆ. ರಕ್ಷಣಾ ಇಲಾಖೆ ವಶದಲ್ಲಿರುವ ಜಾಗವನ್ನು ಐಟಿ ಪಾರ್ಕ್ ಸ್ಥಾಪನೆಗೆ ಬಿಟ್ಟುಕೊಡಬೇಕು ಎಂದು ನಿಯೋಗ ಮನವಿ ಮೂಲಕ ವಿನಂತಿಸಿದೆ.

    ಬೆಳಗಾವಿ ನಗರದ 774 ಎಕರೆಯಲ್ಲಿ ಐ. ಟಿ. ಪಾರ್ಕ್ ನಿರ್ಮಾಣ ಮಾಡಲು ಕಳೆದ ವಿಧಾನಸಭೆ ಅಧಿವೇಶನದಲ್ಲಿ ಖಾಸಗಿ ನಿರ್ಣಯ ಮಂಡಿಸಲಾಗಿತ್ತು. ಸರ್ಕಾರವೂ ಒಪ್ಪಿಗೆ ಸೂಚಿಸಿತ್ತು. ಜತೆಗೆ ಉಪ ಮುಖ್ಯಮಂತ್ರಿ ಹಾಗೂ ಐಟಿ ಬಿಟಿ ಸಚಿವ ಡಾ.ಅಶ್ವತ್ಥನಾರಾಯಣ ಕೂಡ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿ ಮಾಡಿ, ಐಟಿ ಪಾರ್ಕ್ ನಿರ್ಮಾಣ ಮಾಡಲು ಸಹಕಾರ ಕೋರಿದ್ದರು. ಈ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಶಾಸಕರ ನಿಯೋಗವು ಕೇಂದ್ರ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ.

    ಬೆಳಗಾವಿ ನಗರದ 774 ಎಕರೆ ಜಾಗವು ಕರ್ನಾಟಕ ಸರ್ಕಾರಕ್ಕೆ ಸೇರಿದೆ. ಆ ಜಾಗ ರಕ್ಷಣಾ ಇಲಾಖೆಯ ಅಧೀನದಲ್ಲಿರುವುದರಿಂದ ಅದನ್ನು ಶೀಘ್ರ ಕರ್ನಾಟಕ ಸರ್ಕಾರಕ್ಕೆ ಹಸ್ತಾಂತರಿಸಿ, ಐಟಿ ಪಾರ್ಕ್ ನಿರ್ಮಾಣ ಮಾಡಲು ಸಹರಿಸಬೇಕು. ಐಟಿ ಪಾರ್ಕ್ ನಿರ್ಮಾಣದಿಂದ 1 ಲಕ್ಷ ಉದ್ಯೋಗಾವಕಾಶ ಸೃಷ್ಟಿಸಲಿವೆ. 50ಕ್ಕೂ ಹೆಚ್ಚು ಶಾಸಕರು ಸಹಿ ಮಾಡಿದ ಮನವಿ ಪತ್ರ ಸಲ್ಲಿಸಲಾಗಿದೆ ಎಂದು ಶಾಸಕ ಅಭಯ ಪಾಟೀಲ ತಿಳಿಸಿದ್ದಾರೆ. ನಿಯೋಗದಲ್ಲಿ ಶಾಸಕರಾದ ಅಭಯ ಪಾಟೀಲ, ಮಹಾಂತೇಶ ದೊಡಗೌಡರ,
    ಮಹಾದೇವಪ್ಪ ಯಾದವಾಡ ಇತರರು ಇದ್ದರು.

    ಸೈನಿಕ ಶಾಲೆ ಆರಂಭಿಸಲು ಒತ್ತಾಯ
    ಬೆಳಗಾವಿ ಜಿಲ್ಲೆಯಲ್ಲಿ ಸೈನಿಕ ಶಾಲೆ ಆರಂಭಿಸುವಂತೆ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಸಚಿವ ರಮೇಶ ಜಾರಕಿಹೊಳಿ ಒತ್ತಾಯಿಸಿದ್ದಾರೆ. ಕಿತ್ತೂರು ರಾಣಿ ಚೆನ್ನಮ್ಮ ಅವರ ಹೆಸರಿನಲ್ಲಿ ಹೆಣ್ಣು ಮಕ್ಕಳಿಗೆ ಮತ್ತು ಸಂಗೊಳ್ಳಿ ರಾಯಣ್ಣ ಹೆಸರಿನಲ್ಲಿ ಗಂಡು ಮಕ್ಕಳಿಗೆ ಬೆಳಗಾವಿ ಭಾಗದಲ್ಲಿ ಆದ್ಯತೆ ಮೇರೆಗೆ ಸೈನಿಕ ಶಾಲೆ ಪ್ರಾರಂಭಿಸಬೇಕು. ಶಾಲೆಗೆ ಬೇಕಾಗುವ ಸ್ಥಳವನ್ನು ಗುರುತಿಸಿ ನೀಡಲಾಗುವುದು ಎಂದು ಕೇಂದ್ರ ರಕ್ಷಣಾ ಸಚಿವರಿಗೆ ಮನವಿ ಮಾಡಿದರು. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೂ ಪತ್ರ ಬರೆದು ಮನವಿ ಸಲ್ಲಿಸಲಾಗುವುದು ಎಂದು ಸಚಿವ ರಾಜನಾಥ ಅವರಿಗೆ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts