More

    ಮತದಾರರನ್ನು ಮರಳು ಮಾಡುವ ಪ್ರಣಾಳಿಕೆ: ಕುರುಬೂರು ಶಾಂತಕುಮಾರ್ ಟೀಕೆ

    ಮೈಸೂರು: ರಾಜಕೀಯ ಪಕ್ಷಗಳ ಪ್ರಣಾಳಿಕೆಗಳು, ಅಂಗೈಯಲ್ಲಿ ಆಕಾಶ ತೂರುವ, ಮತದಾರರನ್ನು ಮರಳು ಮಾಡುವ ಆಷಾಢಭೂತಿಯಂತಿವೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಟೀಕಿಸಿದರು.
    ರಾಜ್ಯದ ಬರಗಾಲದಲ್ಲಿ ಚುನಾವಣೆ ರೈತರ ದಿಕ್ಸೂಚಿ, ರೈತರ ಚಿಂತನ -ಮಂಥನ ಸಮಾವೇಶ ನಡೆಸಿ ರೈತ ಪ್ರಣಾಳಿಕೆ ಬಿಡುಗಡೆ ಮಾಡಿ ತೀರ್ಮಾನ ಪ್ರಕಟಿಸುತ್ತಿದ್ದೇವೆ. ಆದರೆ, ರೈತರಿಗೆ ಅನುಕೂಲವಾಗುವಂತಹ ಅಂಶಗಳನ್ನು ರಾಜಕೀಯ ಪಕ್ಷಗಳು ಪ್ರಣಾಳಿಕೆಯಲ್ಲಿ ತಿಳಿಸಿಲ್ಲ ಎಂದು ಸಂಘದ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ದೂರಿದರು.
    ರೈತರ ಹೆಸರಿನಲ್ಲಿ ಕಾರ್ಯನಿರ್ವಹಿಸುವ ರೈತ ಸಂಘಗಳು ರಾಜಕೀಯ ಪಕ್ಷಗಳ ಹಂಗಿನಲ್ಲಿ ಸಾಗಿ ಯಾವುದೋ ಪಕ್ಷಗಳ ಪರ ಪ್ರಚಾರ ಮಾಡುವ ಗುಲಾಮಗಿರಿ ಮಾಡಬಾರದು ಎಂದು ಟೀಕಿಸಿದರು.
    ಅಧಿಕಾರಕ್ಕೆ ಬರುವ ಪಕ್ಷಗಳು ದೆಹಲಿ ರೈತ ಹೋರಾಟ, ಒತ್ತಾಯಗಳ ಬಗ್ಗೆ ಬದ್ಧತೆ ತೋರುವ ಅಭ್ಯರ್ಥಿಗೆ ನಮ್ಮ ಬೆಂಬಲ. ಕೃಷಿ ಉತ್ಪನ್ನಗಳ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಕಾನೂನು ಜಾರಿ ಮಾಡಬೇಕು, ದೇಶದ ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು, 60 ವರ್ಷ ಕೃಷಿ ಸೇವೆ ಸಲ್ಲಿಸಿದ ರೈತರಿಗೆ ಪಿಂಚಣಿ ಯೋಜನೆ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
    ಸಂಸದರ ನಿಧಿಯನ್ನು ಕೆರೆಕಟ್ಟೆ, ಕಾಲುವೆಗಳ ಹೂಳು ತೆಗೆಯಲು ವಿನಿಯೋಗಿಸಬೇಕು, ಶಾಲಾ, ಆಸ್ಪತ್ರೆಗಳ ನಿರ್ಮಾಣ, ಕುಡಿಯುವ ನೀರು ಸೌಲಭ್ಯಕ್ಕೆ ಬಳಸುವುದಾಗಿ ಭರವಸೆ ನೀಡಬೇಕು. ದೇಶದ ರೈತರನ್ನು ಸಂರಕ್ಷಿಸಲು ಭಾರತ ವಿಶ್ವ ವ್ಯಾಪಾರ ಒಪ್ಪಂದದಿಂದ ಹೊರಗೆ ಬರಬೇಕು ಎಂದು ಒತ್ತಾಯಿಸಬೇಕು.
    ಫಸಲ್ ಬಿಮಾ ಯೋಜನೆ ಬದಲಾಯಿಸಿ ಪ್ರತಿ ರೈತರ ಹೊಲದ ಬೆಳೆವಿಮೆ ಜಾರಿಗೆ ತರಬೇಕು. ಬೆಳೆ ವಿಮೆ ಪರಿಹಾರ 30 ದಿನದ ಒಳಗೆ ಸಿಗುವಂತಾಗಬೇಕು. ನಕಲಿ ಬಿತ್ತನೆ ಬೀಜ, ನಕಲಿ ಗೊಬ್ಬರ, ನಕಲಿ ಕೀಟನಾಶಕ, ಮಾರಾಟಕ್ಕೆ ತಡೆಹಾಕಲು ಕಠಿಣ ಕಾನೂನು ಜಾರಿ, ರಸಗೊಬ್ಬರ, ಕೀಟನಾಶಕ, ಕೃಷಿ ಉಪಕರಣಗಳ ಮೇಲಿನ ಜಿಎಸ್‌ಟಿ ರದ್ದು ಮಾಡಬೇಕು, ರೈತರ ಕೃಷಿ ಭೂಮಿ ಬಂಡವಾಳಶಾಹಿಗಳ ಪಾಲಾಗುವುದನ್ನು ತಪ್ಪಿಸಲು ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ರದ್ದು ಮಾಡಬೇಕು, ರಾಜ್ಯ ಸರ್ಕಾರ ರೈತರಿಗೆ ನೀಡುತ್ತಿದ್ದ ಕೃಷಿ ಸಮ್ಮಾನ್ ಯೋಜನೆ ಹಣ ಮರು ಜಾರಿಗೊಳಿಸಬೇಕು, ಬಗರು ಹುಕುಂ ಸಾಗುವಳಿ ಮಾಡಿದ ಫಲಾನುಭವಿಗಳಿಗೆ ಭೂ ಸ್ವಾಧೀನ ಪತ್ರ ನೀಡಬೇಕು, ಎಲ್ಲ ಕೃಷಿ ಕಾರ್ಮಿಕರಿಗೆ ಸರ್ಕಾರಿ, ಖಾಸಗಿ, ಆಸ್ಪತ್ರೆಗಳಲ್ಲಿ ಉಚಿತ ಆರೋಗ್ಯ ವಿಮೆ ಸೌಲಭ್ಯ ನೀಡುವಂತ ಯೋಜನೆ ಜಾರಿಗೆ ತರಬೇಕು ಕೋರಿದರು.
    ಕಬ್ಬಿನ ಎಫ್‌ಆರ್‌ಪಿ ದರವನ್ನು ರೈತರ ಹೊಲದಲ್ಲಿನ ದರ ಎಂದು ನಿಗದಿಪಡಿಸಬೇಕು, ಕಬ್ಬನ್ನು ಬೆಳೆ ವಿಮೆ ವ್ಯಾಪ್ತಿಗೆ ತರಬೇಕು, ಕೃಷಿ ಸಾಲ ನೀತಿ ಬದಲಾಗಬೇಕು, ರೈತನ ಭೂಮಿ ಮೌಲ್ಯಕ್ಕೆ ಶೇ.75ರಷ್ಟು ಸಾಲ ನೀಡುವ ಯೋಜನೆ ಜಾರಿಗೆ ಬರಬೇಕು ಹಾಗೂ ಸಿಬಿಲ್ ಸ್ಕೋರ್ ರದ್ದು ಆಗಬೇಕು, ಅತಿವೃಷ್ಟಿ, ಅನಾವೃಷ್ಟಿ, ಮಳೆ ಹಾನಿ, ಬರ ಪರಿಹಾರ, ನಷ್ಟ ಎನ್‌ಡಿಆರ್‌ಎಫ್ ಮಾನದಂಡ ಬದಲಾಗಬೇಕು, ವೈಜ್ಞಾನಿಕ ಪರಿಹಾರ ಕೂಡಲೇ ಸಿಗುವಂತಾಗಬೇಕು, ಕಾಡಂಚಿನ ಭಾಗದಲ್ಲಿ ವನ್ಯಜೀವಿಗಳಿದ್ದ ಆಗುವ ಬೆಳೆ, ಮಾನವ ಹಾನಿ, ಸಂಘರ್ಷ ತಪ್ಪಿಸಲು ವೈಜ್ಞಾನಿಕ ಪರಿಹಾರ ನೀಡಬೇಕು. ಈ ಒತ್ತಾಯಗಳನ್ನು ಸ್ಪರ್ಧೆ ಮಾಡಿರುವ ಅಭ್ಯರ್ಥಿಗಳ ಮುಂದೆ ಇಡಲಾಗುವುದು ಎಂದು ತಿಳಿಸಿದರು.
    ಸಂಘದ ಮುಖಂಡರಾದ ಅತ್ತಹಳ್ಳಿ ದೇವರಾಜ್, ಬರಡನಪುರ ನಾಗರಾಜ್, ಕಿರಗಸೂರ್ ಶಂಕರ, ಉಡಿಗಾಲ ರೇವಣ್ಣ, ವಿವಿಧ ತಾಲೂಕು ಅಧ್ಯಕ್ಷರಾದ ಸಿದ್ದೇಶ್, ವೆಂಕಟೇಶ್, ವಿಜಯೇಂದ್ರ, ಸತೀಶ್, ನೀಲಕಂಠಪ್ಪ, ಕೆಂಡಗಣ್ಣಸ್ವಾಮಿ, ಪದಾಧಿಕಾರಿಗಳಾದ ಮೂಕಹಳ್ಳಿ ಮಹದೇವಸ್ವಾಮಿ, ಷಡಕ್ಷರಿ, ಅಂಬಳೆ ಮಂಜುನಾಥ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts