More

    ದೇಶೀಯ ರಕ್ಷಣಾ ಸಾಮಾಗ್ರಿಯ ಉತ್ಪಾದನೆಗೆ ನಿರ್ಧಾರ: ಸಚಿವ ರಾಜನಾಥ್​ ಸಿಂಗ್​ ಮಹತ್ವದ ಘೋಷಣೆ

    ನವದೆಹಲಿ: ಭಾನುವಾರ ಬೆಳಗ್ಗೆ ಕೇಂದ್ರದ ರಕ್ಷಣಾ ಸಚಿವಾಲಯ ಟ್ವೀಟ್ ಮಾಡಿ ಸೃಷ್ಟಿಸಿದ ಕುತೂಹಲಕ್ಕೆ ಕೊನೆಗೂ ತೆರೆಬಿದ್ದಿದೆ. ರಕ್ಷಣಾ ಸಾಮಾಗ್ರಿಯ ಉತ್ಪಾದನೆಗೆ ನಿರ್ಧಾರ ಮಾಡಲಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಟ್ವೀಟ್​ ಮೂಲಕ ಘೋಷಿಸಿದರು.

    ದೇಶೀಯ ಕಂಪನಿಗಳ ಜತೆ ರಕ್ಷಣಾ ಇಲಾಖೆ ಒಪ್ಪಂದ ಮಾಡಿಕೊಳ್ಳಲಿದೆ. ಮದ್ದು, ಗುಂಡು, ಫಿರಂಗಿ ಸೇರಿದಂತೆ 101 ವಿವಿಧ ಉಪಕರಣಗಳನ್ನು ದೇಶದಲ್ಲೇ ತಯಾರಿಸಲು ನಿರ್ಧಾರ ಮಾಡಲಾಗಿದೆ. ಇದರಿಂದ ಆತ್ಮನಿರ್ಭರ ಭಾರತಕ್ಕೆ ಉತ್ತೇಜನ ಸಿಗಲಿದೆ ಎಂದು ಹೇಳಿದರು.

    ಸೇನೆಯಲ್ಲಿ 2020 ರಿಂದ 2024ರ ಮಧ್ಯೆ ಮಹತ್ವದ ಕಾರ್ಯ ನಡೆಯಲಿದೆ. ಸಂಪೂರ್ಣವಾಗಿ ರಕ್ಷಣಾ ಸಾಮಾಗ್ರಿ ದೇಶದಲ್ಲೇ ಉತ್ಪಾದನೆ ಆಗಲಿದೆ. ಇದಕ್ಕಾಗಿ ಪ್ರತ್ಯೇಕ ಬಜೆಟ್​ ಮುಖ್ಯಸ್ಥರ ನೇಮಕ ಮಾಡಲಾಗುತ್ತದೆ ಎಂದು ರಕ್ಷಣಾ ಇಲಾಖೆ ತಿಳಿಸಿದೆ.

    ಪ್ರಧಾನಿ ನರೇಂದ್ರ ಮೋದಿ ಅವರು ಆರ್ಥಿಕತೆ, ಮೂಲಸೌಕರ್ಯ, ವ್ಯವಸ್ಥೆ, ಜನಸಂಖ್ಯೆ ಮತ್ತು ಬೇಡಿಕೆ ಎಂಬ ಐದು ಆಧಾರ ಸ್ತಂಭಗಳ ಮೇಲೆ ಸ್ವಾವಲಂಬಿ ಭಾರತಕ್ಕಾಗಿ ಸ್ಪಷ್ಟ ಕರೆ ನೀಡಿದ್ದಾರೆ. ಹೀಗಾಗಿ ಸ್ವಾವಲಂಬಿ ಭಾರತಕ್ಕಾಗಿ ‘ಆರ್ಮಿಆತ್ಮನಿರ್ಭರ ಭಾರತ್’ ಹೆಸರಿನ ವಿಶೇಷ ಆರ್ಥಿಕ ಪ್ಯಾಕೇಜ್ ಅನ್ನು ರಕ್ಷಣಾ ಇಲಾಖೆ ಘೋಷಿಸಿದೆ ಎಂದು ರಾಜನಾಥ್​ ಸಿಂಗ್​ ಟ್ವೀಟ್​ ಮಾಡಿದ್ದಾರೆ.

    ರಕ್ಷಣಾ ಇಲಾಖೆಯ ಈ ನಿರ್ಧಾರವು ಭಾರತೀಯ ರಕ್ಷಣಾ ಉದ್ಯಮಕ್ಕೆ ತಮ್ಮದೇ ಆದ ವಿನ್ಯಾಸ ಮತ್ತು ಅಭಿವೃದ್ಧಿ ಸಾಮರ್ಥ್ಯಗಳನ್ನು ಬಳಸಿಕೊಂಡು ಅಥವಾ ಸಶಸ್ತ್ರ ಪಡೆಗಳ ಅವಶ್ಯಕತೆಗಳನ್ನು ಪೂರೈಸಲು ಡಿಆರ್‌ಡಿಒ ವಿನ್ಯಾಸಗೊಳಿಸಿದ ಮತ್ತು ಅಭಿವೃದ್ಧಿಪಡಿಸಿದ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಪಟ್ಟಿಯಲ್ಲಿರುವ ವಸ್ತುಗಳನ್ನು ತಯಾರಿಸಲು ಇಂಡಸ್ಟಿಗಳಿಗೆ ಉತ್ತಮ ಅವಕಾಶವನ್ನು ನೀಡುತ್ತದೆ ಎಂದಿದ್ದಾರೆ.

    ಸೇನಾ ಪಡೆಗಳು, ಸಾರ್ವಜನಿಕ ಮತ್ತು ಖಾಸಗಿಯ ಎಲ್ಲ ಷೇರುದಾರರ ಜತೆ ಹಲವು ಸುತ್ತಿನ ಸಮಾಲೋಚನೆ ನಡೆಸಿದ ಬಳಿಕ ರಕ್ಷಣಾ ಇಲಾಖೆ ಸಾಮಾಗ್ರಿಗಳ ಪಟ್ಟಿಯನ್ನು ಸಿದ್ಧಪಡಿಸಿದೆ. ಮುಂದಿನ ದಿನಗಳಲ್ಲಿ 6 ರಿಂದ 7 ವರ್ಷ ದೇಶೀಯ ಉದ್ಯಮದ ಮೇಲೆ ಸುಮಾರು 4 ಲಕ್ಷ ಕೋಟಿ ರೂ.ಗಳ ಒಪ್ಪಂದಗಳನ್ನು ಮಾಡಲಾಗುವುದು ಎಂದು ಅಂದಾಜಿಸಿರುವುದಾಗಿ ರಾಜನಾಥ್​ ಸಿಂಗ್​ ತಿಳಿಸಿದ್ದಾರೆ.

    ಉತ್ಪಾದನೆಯಲ್ಲಿ ಸುಮಾರು 1,30,000 ಕೋಟಿ ರೂ. ಮೌಲ್ಯದ ಸಾಮಾಗ್ರಿಗಳನ್ನು ಆರ್ಮಿ ಮತ್ತು ವಾಯುಸೇನೆಗೂ ಹಾಗೂ 1,40,000 ಕೋಟಿ ರೂ. ಅನ್ನು ನೌಕಾಪಡೆಗೆ ನಿರೀಕ್ಷಿಸಲಾಗಿದೆ ಎಂದು ಹೇಳಿದ್ದಾರೆ.

    ಇದಕ್ಕೂ ಮುನ್ನ ಬೆಳಗ್ಗೆ 10 ಗಂಟೆಗೆ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಅವರು ಮಹತ್ವದ ಘೋಷಣೆ ಮಾಡಲಿದ್ದಾರೆ ಎಂದು ರಕ್ಷಣಾ ಇಲಾಖೆ ಟ್ವೀಟ್​ ಮಾಡಿತ್ತು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts