More

    ರಕ್ಷಣಾ ಬಜೆಟ್ ವ್ಯರ್ಥ ವೆಚ್ಚವಲ್ಲ; ಮಾಜಿ ಸೈನಿಕರ ಅನಿಸಿಕೆ

    ರಕ್ಷಣಾ ಬಜೆಟ್ ವ್ಯರ್ಥ ವೆಚ್ಚವಲ್ಲ; ಮಾಜಿ ಸೈನಿಕರ ಅನಿಸಿಕೆಶಕ್ತರನ್ನು ಮಾತ್ರ ಜಗತ್ತು ಗೌರವಿಸುತ್ತದೆ. ಯಾವುದೇ ಒಂದು ಸಾರ್ವಭೌಮ ದೇಶ ಅಭೇದ್ಯ ಸೈನ್ಯ ಶಕ್ತಿಯಾಗದೇ ಅಂತಾರಾಷ್ಟ್ರೀಯ ಶಕ್ತಿ ಎಂದು ಗುರುತಿಸಿಕೊಳ್ಳಲು ಸಾಧ್ಯವಿಲ್ಲ. ದುರದೃಷ್ಟವಶಾತ್ ಸ್ವಾತಂತ್ರೊ್ಯೕತ್ತರದ ಪ್ರಾರಂಭದ ವರ್ಷಗಳಲ್ಲಿ ನಮ್ಮದು ‘ಶಾಂತಿಪ್ರಿಯ’ ದೇಶ ಎನ್ನುವ ಸಿದ್ಧಾಂತವನ್ನು ಪ್ರತಿಪಾದಿಸುವ ಭರದಲ್ಲಿ ನಾಯಕರು ಸೇನೆಯ ಸಶಕ್ತೀಕರಣಕ್ಕೆ ಪ್ರಾಮುಖ್ಯ ನೀಡಲಿಲ್ಲ. ಸೈನ್ಯ ಆಧುನೀಕರಣಕ್ಕೆ ಮಾಡುವ ಖರ್ಚು ವ್ಯರ್ಥ ವೆಚ್ಚ, ರಕ್ಷಣೆಯ ಬದಲು ಆ ಹಣವನ್ನು ಬಡವರ ಕಲ್ಯಾಣಕ್ಕೆ ಉಪಯೋಗ ಮಾಡಬೇಕು ಎನ್ನುವ ಒಣ ಆದರ್ಶದ ಮಾತುಗಳು ನಮ್ಮ ರಾಜಕೀಯ ನಾಯಕರ ಮಂತ್ರವಾದವು. ಬಡತನ ನಿವಾರಣೆ, ಸ್ವಾಸ್ಥ್ಯ ಸೇವೆಯಂತಹ ವಿಷಯಗಳು ನಮ್ಮ ಆದ್ಯತೆಯಾಗಬೇಕು ನಿಜ. ಆದರೆ ದೇಶದ ಮೇಲೆ ಕೆಟ್ಟದೃಷ್ಟಿ ಇಡುವ ದುಷ್ಟಶಕ್ತಿಗಳನ್ನು ಮಟ್ಟ ಹಾಕಬಲ್ಲ ಸೈನ್ಯಶಕ್ತಿ ಸಹ ನಮ್ಮ ಬಳಿ ಇರಬೇಕು ಎನ್ನುವುದನ್ನು ಮರೆಯಲಾಗದು.

    ಬಾಹ್ಯಶಕ್ತಿಯ ಆಕ್ರಮಣ ಎದುರಿಸಬೇಕಾದ ಸಂದರ್ಭದಲ್ಲಿ ಮಿತ್ರರಾಷ್ಟ್ರಗಳನ್ನಾಗಲೀ ಅಥವಾ ವಿಶ್ವಸಂಸ್ಥೆಯನ್ನಾಗಲೀ ನೆಚ್ಚಿ ಕೂರುವಂತಿಲ್ಲ ಎನ್ನುವ ಪಾಠವನ್ನು ಇತಿಹಾಸ ಈಗಾಗಲೇ ನಮಗೆ ಕಲಿಸಿದೆ. ರಕ್ಷಣಾ ಉತ್ಪಾದನಾ ಕ್ಷೇತ್ರದಲ್ಲಿ ಸ್ವಾವಲಂಬನೆಯ ದಾಪುಗಾಲಿಡಬೇಕಾದ ಸವಾಲು ಭಾರತದ ಮುಂದಿದೆ. ವಿದೇಶಗಳಿಂದ ಆಮದು ಮಾಡಿಕೊಂಡ ಶಸ್ತ್ರಾಸ್ತ್ರಗಳಿಂದ ನಮ್ಮ ಸೇನೆ ಸರ್ವಶ್ರೇಷ್ಠ ಸೇನೆ ಎನಿಸುವುದು ಸಾಧ್ಯವಿಲ್ಲ. ಹಾಗೆಂದು ಸಂಕಟದ ಸಮಯದಲ್ಲಿ ಆಮದು ಶಸ್ತ್ರಾಸ್ತ್ರಗಳಿಂದಲೇ ಸರಿ ಸೇನೆಯನ್ನು ಸುಸಜ್ಜಿತಗೊಳಿಸದಿದ್ದರೆ ಅದೊಂದು ಐತಿಹಾಸಿಕ ತಪ್ಪಾದೀತು.

    ನಮ್ಮ ರಕ್ಷಣಾ ವೆಚ್ಚದ ಬಹು ದೊಡ್ಡ ಭಾಗ ಸೈನಿಕರ ಸಂಬಳ ಮತ್ತು ಪೆನ್ಷನ್ ಬಾಬತ್ತಿಗೆ ಖರ್ಚಾಗುತ್ತಿದೆ ಎನ್ನುವುದು ಸತ್ಯ. ಈ ಬಾರಿಯ ಬಜೆಟ್​ನಲ್ಲಿ ರಕ್ಷಣಾ ವೆಚ್ಚಕ್ಕಾಗಿ 4.78 ಲಕ್ಷ ಕೋಟಿ ರೂ. ತೆಗೆದಿರಿಸಲಾಗಿದೆ ಮತ್ತು ಅದರಲ್ಲಿ 1.35 ಲಕ್ಷ ಕೋಟಿ ರೂ.ಗಳನ್ನು ಯುದ್ಧವಿಮಾನ, ಸಮರನೌಕೆ ಮತ್ತಿತರ ಶಸ್ತ್ರಾಸ್ತ್ರ ಖರೀದಿಗಾಗಿ ವಿನಿಯೋಗಿಸಲಾಗುವುದು. ಇದು ಕಳೆದ ಬಾರಿಗಿಂತ 22 ಸಾವಿರ ಕೋಟಿ ರೂಪಾಯಿಗಳಷ್ಟು ಅಧಿಕ ಎನ್ನುವುದು ಸಮಾಧಾನಕರ ಅಂಶವಾಗಿದೆ. ಆದಾಗ್ಯೂ ಚೀನಾದ ಕಡೆಯಿಂದ ಎದುರಿಸುತ್ತಿರುವ ಗಂಭೀರ ಬೆದರಿಕೆಯ ಹಿನ್ನೆಲೆಯಲ್ಲಿ ಇದು ಪರ್ಯಾಪ್ತ ಮೊತ್ತ ಎಂದು ಹೇಳಲು ಸಾಧ್ಯವಿಲ್ಲ. ಕರೊನಾ ಕಾರಣದಿಂದಾಗಿ ಸರ್ಕಾರ ಸ್ವಾಸ್ಥ್ಯ ಕ್ಷೇತ್ರಕ್ಕೆ ಅಧಿಕ ಹಣ ನೀಡಬೇಕಾದ ವಿವಶತೆ ಮತ್ತು ಆರ್ಥಿಕ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಬೇಕಾದ ಇಕ್ಕಟ್ಟಿನ ಸ್ಥಿತಿಯಲ್ಲಿದೆ.

    ಇತ್ತೀಚಿನ ವರ್ಷಗಳಲ್ಲಿ ಗಡಿಪ್ರದೇಶದಲ್ಲಿ ರಸ್ತೆಸಂಪರ್ಕ ಸಹಿತ ಮೂಲಸೌಕರ್ಯ ವೃದ್ಧಿಗೆ ಸಾಕಷ್ಟು ಆದ್ಯತೆ ನೀಡಲಾಗಿದೆ. ರಫೆಲ್ ಯುದ್ಧವಿಮಾನವನ್ನು ಖರೀದಿಸುವ ದೇಶಹಿತದ ನಿರ್ಧಾರವನ್ನು ರಾಜಕೀಕರಣಗೊಳಿಸಿದ ನಾಯಕರಿಗೆ ಸ್ವಾವಲಂಬನೆ ಮತ್ತು ಸ್ವದೇಶೀ ರಕ್ಷಣಾ ಉತ್ಪಾದನೆಗೆ ಒತ್ತು ನೀಡುವ ನಿರ್ಣಯಗಳ ಮೂಲಕ ಕೇಂದ್ರ ಸರ್ಕಾರ ಉತ್ತರ ನೀಡಿದೆ. ಸಾರ್ವಜನಿಕ ರಂಗದ ಎಚ್​ಎಎಲ್​ಗೆ  48 ಸಾವಿರ ಕೋಟಿ ರೂ. ಮೊತ್ತದ ಲಘು ಯುದ್ಧವಿಮಾನ ನಿರ್ವಣದ ಗುತ್ತಿಗೆ ನೀಡುವ ಮೂಲಕ ಸ್ವದೇಶೀ ಶಸ್ತ್ರಾಸ್ತ್ರ ನಿರ್ವಣಕ್ಕೆ ಪ್ರೋತ್ಸಾಹ ನೀಡುವ ಕ್ರಮ ಶ್ಲಾಘನೀಯ.

    ದಶಕಗಳಿಂದ ವಿದೇಶಿ ಕಮಿಷನ್ ಏಜೆಂಟ್​ಗಳ ಪ್ರಭಾವದಿಂದ ಶಸ್ತ್ರಾಸ್ತ್ರಗಳ ಆಮದು ಆದ್ಯತೆಯಾಗಿತ್ತು. ರಕ್ಷಣಾ ವಲಯದ ಸ್ವದೇಶೀ ಉದ್ಯಮಗಳ ವೃದ್ಧಿಯಿಂದ ಸೇನೆಯಿಂದ ನಿವೃತ್ತಿಯಾಗುತ್ತಿರುವ ಕುಶಲ ಸೈನಿಕರ ಪುನರ್ವಸತಿಯೂ ಸಾಧ್ಯವಾಗುತ್ತದೆ. ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ನಿರ್ಣಯಗಳು ದೂರದೃಷ್ಟಿಯದ್ದಾಗಿರುವುದು ಮತ್ತು ರಾಜಕೀಯದಿಂದ ಹೊರತಾಗಿರುವುದು ಅಪೇಕ್ಷಣೀಯ. ಸಾಮಾನ್ಯ ನಾಗರಿಕರು ಇಂತಹ ನಿರ್ಣಯಗಳನ್ನು ವಸ್ತುನಿಷ್ಠವಾಗಿ ನೋಡುವ ದೃಷ್ಟಿಕೋಣ ಬೆಳೆಸಿಕೊಳ್ಳಬೇಕಾಗಿದೆ.

    ರಕ್ಷಣಾ ಕ್ಷೇತ್ರದಂಥ ಸೂಕ್ಷ್ಮ ವಿಷಯದಲ್ಲಾದರೂ ರಾಜಕೀಯ ಹೇಳಿಕೆಗಳನ್ನು ನೀಡಬಾರದು. ಸರ್ಕಾರ ಮತ್ತು ಪ್ರತಿಪಕ್ಷದಲ್ಲಿ ಇರುವವರಿಗೆ, ಇತರ ರಾಜಕೀಯ ಪಕ್ಷಗಳಿಗೂ ದೇಶದ ಭದ್ರತೆ, ಸುರಕ್ಷೆ ಮೊದಲ ಆದ್ಯತೆ ಆಗಿರಬೇಕು. ಅದನ್ನು ನಿರ್ಲಕ್ಷಿಸಿದರೆ ಏನಾಗುತ್ತದೆ ಎಂಬುದಕ್ಕೆ 1962ರ ಘಟನೆ ಸಾಕ್ಷಿಯಾಗಿದೆ. ಎಲ್ಲ ರಂಗಗಳಲ್ಲೂ ಸ್ವಾವಲಂಬನೆಯ ಮಂತ್ರ ಮೊಳಗುತ್ತಿರಬೇಕಾದರೆ, ಆ ನಿಟ್ಟಿನಲ್ಲಿ ಪ್ರಯತ್ನಗಳು ಹೆಚ್ಚುತ್ತಿರಬೇಕಾದರೆ ರಕ್ಷಣೆ ವಿಷಯದಲ್ಲಿ ಉದಾಸೀನ ಸಲ್ಲ. ಕೋವಿಡ್ ಮಹಾಮಾರಿಯಿಂದಾದ ಆರ್ಥಿಕ ಹೊಡೆತದ ಸವಾಲನ್ನು ದೇಶ ಎದುರಿಸುತ್ತಿದೆ. ಜಾಗತಿಕವಾಗಿ ಬಲಹೀನವಾಗುತ್ತಿರುವ ಅಮೆರಿಕ ಮತ್ತು ಸೂಪರ್ ಪವರ್ ಸ್ಥಾನಕ್ಕೇರಲು ಹವಣಿಸುತ್ತಿರುವ ಚೀನಾ ನಮ್ಮ ರಕ್ಷಣಾ ಚಿಂತೆಯನ್ನು ಇನ್ನಷ್ಟು ಹೆಚ್ಚಿಸಿದೆ. ಅಗತ್ಯ ಎನಿಸಿದರೆ ರಕ್ಷಣೆಗೆ ಇನ್ನೂ ಹೆಚ್ಚಿನ ಮೊತ್ತ ನೀಡಬೇಕಾಗಬಹುದು. ಸರ್ಕಾರ ರಕ್ಷಣೆ, ಸ್ವಾಸ್ಥ್ಯ ಕ್ಷೇತ್ರಕ್ಕಾಗಿ ಪೆಟ್ರೋಲ್ ಮೇಲಿನ ಸುಂಕದಂತಹ ಆದಾಯ ಮೂಲಗಳನ್ನು ಉಪಯೋಗಿಸಿಕೊಳ್ಳುತ್ತದೆ ಎನ್ನುವ ಸಂಗತಿ ಹೆಚ್ಚಿನವರಿಗೆ ತಿಳಿದಿಲ್ಲ.

    ನಮ್ಮ ಸೈನಿಕರ ಶೌರ್ಯ-ಸಾಹಸ, ಕಷ್ಟಸಹಿಷ್ಣುತೆ ಎದುರಿಗೆ ವೈರಿಗಳು ನಿಲ್ಲಲು ಸಾಧ್ಯವಿಲ್ಲವಾದರೂ ಶಸ್ತ್ರಾಸ್ತ್ರಗಳಿಲ್ಲದೆ ಕಾದಾಡುವುದು ಸಾಧ್ಯವೇ? ದೇಶದ ರಕ್ಷಣೆಗೆ ಸಂಬಂಧಿಸಿದ ನಿರ್ಣಯಗಳ ಸೂಕ್ಷ್ಮತೆಯನ್ನು ಸಾಮಾನ್ಯ ನಾಗರಿಕರು ಅರಿತುಕೊಳ್ಳುವಂತಾಗಲಿ ಮತ್ತು ರಕ್ಷಣಾ ವೆಚ್ಚದ ಕುರಿತು ದಾರಿತಪು್ಪವ ಚಿಂತನೆ ಹರಿಯ ಬಿಡುವ ನಕಲಿ ಚಿಂತಕರ ಮಾತುಗಳಿಗೆ ಮರುಳಾಗದಿರಲಿ.

    (ಲೇಖಕರು ಮಾಜಿ ಸೈನಿಕರು, ಹವ್ಯಾಸಿ ಬರಹಗಾರರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts