More

    ಹೈದ್ರಾಬಾದ್ ಹುಡುಗಿಗೆ ಕೋಟಿ ಕೋಟಿ ಸಂಬಳ! ಟೆಕ್ ದೈತ್ಯ ಮೈಕ್ರೋಸಾಫ್ಟ್​ಗೆ ಭಾರತದ ಪ್ರತಿಭೆ ಆಯ್ಕೆ

    ಸರಸ್ವತಿ ಒಲಿದರೆ ಲಕ್ಷ್ಮೀ ತಾನಾಗಿಯೇ ಹಿಂದೆ ಬರುತ್ತಾಳೆ ಎಂಬ ಮಾತಿಗೆ ಹೈದರಾಬಾದ್ ಮೂಲದ ದೀಪ್ತಿ ನರ್ಕಟಿ ತಾಜಾ ಉದಾಹರಣೆ. ಅಮೆರಿಕದ ಬಹುರಾಷ್ಟ್ರೀಯ ಟೆಕ್ ದೈತ್ಯ ಮೈಕ್ರೋಸಾಫ್ಟ್ ಕಂಪನಿಯಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳುವ ಮೂಲಕ ಕರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಭವಿಷ್ಯದ ಬಗ್ಗೆ ಚಿಂತಿಸುತ್ತಿರುವ ಯುವ ಸಮೂಹಕ್ಕೆ ದೀಪ್ತಿ ಅವರು ಭರವಸೆಯಾಗಿದ್ದಾರೆ.

    | ಸುಚಿತ್ರಾ ಮುಳ್ಳೂರು

    ಜ್ಞಾನದಿಂದಲೇ ಸಂಪತ್ತು ಎಂಬುದನ್ನು ಸಾಬೀತು ಮಾಡಿರುವ ದೀಪ್ತಿ, ತನ್ನ ಪ್ರತಿಭೆಯಿಂದಲೇ ಮೈಕ್ರೋಸಾಫ್ಟ್ ಕಂಪನಿಯಲ್ಲಿ ವಾರ್ಷಿಕ 2 ಕೋಟಿ ರೂ. ಪ್ಯಾಕೇಜ್ ಸಂಬಳದ ಕೆಲಸವನ್ನು ಪಡೆದುಕೊಂಡಿದ್ದಾರೆ. ಇದಕ್ಕೂ ಮೊದಲು ತವರು ನೆಲದಲ್ಲೇ ಒಳ್ಳೆಯ ಉದ್ಯೋಗವೂ ದೊರಕಿತ್ತು. ಕೈತುಂಬ ಸಂಬಳವೂ ಬರುತ್ತಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಕುಟುಂಬದ ನಡುವೆಯೇ ಸಂತೋಷದ ಜೀವನ ನಡೆಸಬಹುದಾಗಿತ್ತು. ಆದರೆ, ದೀಪ್ತಿ ಇಷ್ಟಕ್ಕೆ ತೃಪ್ತಿಯಾಗದೇ ಗುರಿಯತ್ತ ಚಿತ್ತ ನೆಟ್ಟಿದ್ದರು. ಸಾಧಿಸುವ ಹಂಬಲದೊಂದಿಗೆ ಮುನ್ನಡೆದ ದೀಪ್ತಿ ಕೊನೆಗೂ ಗುರಿ ತಲುಪುವ ಮೂಲಕ ರಾಷ್ಟ್ರದ ಗಮನ ಸೆಳೆದಿದ್ದಾರೆ. ಫ್ಲೊರಿಡಾ ವಿವಿಯಲ್ಲಿ ಎಂಎಸ್ (ಕಂಪ್ಯೂಟರ್ಸ್) ಪೂರ್ಣಗೊಳಿಸಿರುವ ದೀಪ್ತಿ, ಮೇ 2ರಂದು ಕ್ಯಾಂಪಸ್ ಇಂಟರ್ವ್ಯೂನಲ್ಲಿ ಮೈಕ್ರೋಸಾಫ್ಟ್​ನ ಸಾಫ್ಟ್​ವೇರ್ ಡೆವಲಪ್​ವೆುಂಟ್ ಇಂಜಿನಿಯರ್ ಗ್ರೇಡ್-2 ಗ್ರೂಪ್​ಗೆ ಆಯ್ಕೆಯಾಗಿದ್ದಾರೆ. ಅಮೆರಿಕದಲ್ಲಿರುವ ಕಚೇರಿಯಲ್ಲಿ ಮೇ 17ರಿಂದಲೇ ಕೆಲಸ ಆರಂಭಿಸಿದ್ದಾರೆ. ಆಯ್ಕೆಯಾದ 300 ಅಭ್ಯರ್ಥಿಗಳಲ್ಲಿ ದೀಪ್ತಿಯದೇ ಅತ್ಯಧಿಕ ಪ್ಯಾಕೇಜ್.

    ಮೈಕ್ರೋಸಾಫ್ಟ್ ಲಿಂಕ್: ದೀಪ್ತಿ ಮೈಕ್ರೋಸಾಫ್ಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವುದು ಇದೇ ಮೊದಲೇನಲ್ಲ. 2014-2015ರಲ್ಲಿ ಮೈಕ್ರೋಸಾಫ್ಟ್ ವಿದ್ಯಾರ್ಥಿ ಸಹಾಯಕರಾಗಿ ಕೆಲಸ ಮಾಡಿದ್ದಾರೆ. ಒಸ್ಮಾನಿಯಾ ವಿವಿಯಲ್ಲಿ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಮುಗಿಸಿರುವ ದೀಪ್ತಿ ಮೊದಲು ಹೈದರಾಬಾದ್​ನ ಸಂಶೋಧನಾ ಕೇಂದ್ರದಲ್ಲಿ ತರಬೇತಿ ಪಡೆದರು. ಬಳಿಕ ಜೆಪಿ ಮೋರ್ಗನ್ ಕಂಪನಿಯಲ್ಲಿ ಇಂಟರ್ನ್ ಶಿಪ್ ಮಾಡಿದರು. ಎಂಎಸ್ ಪೂರ್ಣಗೊಳಿಸಲು ಫ್ಲೊರಿಡಾ ವಿವಿಗೆ ತೆರಳುವ ಮುನ್ನ 3 ವರ್ಷ ಜೆಪಿ ಮೋರ್ಗನ್ ಕಂಪನಿಯಲ್ಲಿ ಇಂಟೆಲಿಜೆಂಟ್ ಸಿಸ್ಟಮ್್ಸ ಮತ್ತು ಮೆಶಿನ್ ಲರ್ನಿಂಗ್ ಮ್ಯಾಥ್ಸ್ ಎಂಬ ಎರಡು ವಿಷಯಗಳಿಗೆ ಪದವಿ ಬೋಧನಾ ಸಹಾಯಕರಾಗಿ ಕೆಲಸ ಮಾಡಿದರು. ಉನ್ನತ ವ್ಯಾಸಂಗಕ್ಕೆ ಫ್ಲೊರಿಡಾ ಯೂನಿವರ್ಸಿಟಿ ವಿದ್ಯಾರ್ಥಿ ವೇತನ ನೀಡಿತು.

    ಪೊಲೀಸ್ ಆಯುಕ್ತರ ಶ್ಲಾಘನೆ: ದೀಪ್ತಿ ಸಾಧನೆಗೆ ಹೈದರಾಬಾದ್ ಪೊಲೀಸ್ ಆಯುಕ್ತ ಅಂಜನಿ ಕುಮಾರ್ ಟ್ವೀಟ್ ಮೂಲಕ ಹರ್ಷ ವ್ಯಕ್ತಪಡಿಸಿದ್ದಾರೆ. ವಿಶ್ವವೇ ಕೋವಿಡ್ ವಿರುದ್ಧ ಹೋರಾಡುತ್ತಿರುವಾಗ ನಮ್ಮ ಸಹೋದ್ಯೋಗಿ ಡಾ. ವೆಂಕಣ್ಣನವರ ಮಗಳು ದೀಪ್ತಿ, ಅಮೆರಿಕದಲ್ಲಿ 2 ಕೋಟಿ ರೂ. ಸಂಬಳದ ಉದ್ಯೋಗ ಪಡೆದಿದ್ದಾರೆ. ಇದು ನಾವೆಲ್ಲ ಹೆಮ್ಮೆ ಪಡುವ ಸಂಗತಿ ಎಂದಿದ್ದಾರೆ. ದೀಪ್ತಿ ತಂದೆ ವೆಂಕಣ್ಣ ಹೈದರಾಬಾದ್ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ವಿಧಿವಿಜ್ಞಾನ ತಜ್ಞ.

    ಕಂಪನಿಗಳಿಂದ ಆಫರ್
    ಸ್ನಾತಕೋತರ ಪದವಿ ಪೂರ್ಣಗೊಳಿಸುವ ಮೊದಲೇ ವಿಶ್ವವಿದ್ಯಾಲಯಕ್ಕೆ ಆಗಾಗ ಭೇಟಿ ನೀಡುತ್ತಿದ್ದ ಅಮೆರಿಕದ ವಿವಿಧ ಕಂಪನಿಗಳು ದೀಪ್ತಿಗೆ ಆಫರ್ ನೀಡಿದ್ದವು. ಗೋಲ್ಡ್​ಮನ್ ಸ್ಯಾಕ್ಸ್ ಮತ್ತು ಅಮೆಜಾನ್ ಸಹ ತಮ್ಮ ಸಂಸ್ಥೆಗೆ ಸೇರುವಂತೆ ದೀಪ್ತಿಗೆ ಒಳ್ಳೆಯ ಪ್ಯಾಕೇಜ್ ಆಫರ್ ಮಾಡಿದ್ದವು.

    ಸ್ವಾರ್ಥಕ್ಕೆ ಸೀಮಿತವಾಗಿಲ್ಲ ಈ ಪ್ರತಿಭೆ
    ಅಂಧ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಸಮಯಕ್ಕೆ ಸರಿಯಾಗಿ ನೆರವಾಗುವಂತಹ ಆಪ್ ಅಭಿವೃದ್ಧಿಪಡಿಸಲು ದೀಪ್ತಿ 2018ರಲ್ಲಿ ಐ ಅಂಡ್ ಐ ಹೆಸರಿನ ಎನ್​ಜಿಒಗೆ ಸ್ವಯಂಪ್ರೇರಿತರಾಗಿ ಸೇರಿದ್ದರು. ಕಳೆದ ವರ್ಷ ‘ತಂತ್ರಜ್ಞಾನದಲ್ಲಿ ಮಹಿಳೆಯರು’ ಹೆಸರಿನ ಗ್ರೇಸ್ ಹೋಪರ್ ಸಮ್ಮೇಳದಲ್ಲಿಯೂ ಸ್ವಯಂ ಸೇವಕರಾಗಿದ್ದರು. ಇದಲ್ಲದೆ, 2017ರಲ್ಲಿ ಅಶ್ರೇ ಅಕ್ರುತಿ ಎನ್​ಜಿಒಗಾಗಿ ವಿದ್ಯಾರ್ಥಿ ನಿರ್ವಹಣಾ ವ್ಯವಸ್ಥೆಯುಳ್ಳ ಆಪ್ ಅಭಿವೃದ್ಧಿಪಡಿಸಿದರು. ಪಠ್ಯಕ್ರಮ, ರಿಪೋರ್ಟ್ ಕಾರ್ಡ್ಸ್ ಮತ್ತು ಪ್ರಾಧ್ಯಾಪಕ ಹಾಗೂ ವಿದ್ಯಾರ್ಥಿ ವಿವರಗಳನ್ನು ಹಂಚಿಕೊಳ್ಳಲು ಈ ಆಪ್ ಬಳಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts