More

    ಲಾಕ್‌ಡೌನ್‌ನಿಂದ ಶುದ್ಧವಾಯ್ತು ಪರಿಸರ

    ಉಡುಪಿ / ಮಂಗಳೂರು: ಕರೊನಾ ಲಾಕ್‌ಡೌನ್‌ನಿಂದಾಗಿ ಉಭಯ ಜಿಲ್ಲೆಗಳಲ್ಲಿ ವಾಯು ಮಾಲಿನ್ಯ ಕಡಿಮೆಯಾಗಿ, ಪರಿಸರ ಶುದ್ಧವಾಗುತ್ತಿದೆ. ಶೇ.90ರಷ್ಟು ವಾಹನಗಳು ರಸ್ತೆಗೆ ಇಳಿಯದ ಪರಿಣಾಮ ವಾತಾವರಣದಲ್ಲಿ ಧೂಳಿನ ಕಣಗಳು, ಇಂಗಾಲದ ಮೊನಾಕ್ಸೈಡ್ ಹಾಗೂ ಗಂಧಕದ ಡೈ ಆಕ್ಸೈಡ್ ದೊಡ್ಡ ಮಟ್ಟದಲ್ಲಿ ಇಳಿಕೆಯಾಗಿದೆ.
    ಕೈಗಾರಿಕೆ, ರಸ್ತೆಯ ಧೂಳು, ರಸ್ತೆ ನಿರ್ಮಾಣ, ಕಟ್ಟಡ ಕಾಮಗಾರಿ, ವಾಹನಗಳ ಚಾಲನೆ ವೇಳೆ ಹೊರಹೊಮ್ಮುವ ಹೊಗೆಯಲ್ಲಿ ಇಂಗಾಲದ ಮೊನಾಕ್ಸೈಡ್ ಹಾಗೂ ಗಂಧಕದ ಡೈ ಆಕ್ಸೈಡ್‌ಗಳು ವಾಯು ಮಾಲಿನ್ಯ ಕಾರಣವಾಗುವ ಅಂಶಗಳು. ಜಿಲ್ಲೆಯಲ್ಲಿ ಒಟ್ಟು 4,52,665 ವಿವಿಧ ವಾಹನಗಳು ಆರ್‌ಟಿಓ ಕಚೇರಿಯಲ್ಲಿ ನೋಂದಣಿಯಾಗಿವೆ. ನಗರವೊಂದರಲ್ಲೇ ಲಕ್ಷಕ್ಕೂ ಅಧಿಕ ಸಂಖ್ಯೆಯ ವಾಹನಗಳು ಪ್ರತಿದಿನ ಓಡಾಡುತ್ತವೆ. ಶೇ.90ರಷ್ಟು ವಾಯುಮಾಲಿನ್ಯಕ್ಕೆ ವಾಹನಗಳು ಉಗುಳುವ ಹೊಗೆ ಪ್ರಮುಖ ಕಾರಣ ಎನ್ನುತ್ತಾರೆ ತಜ್ಞರು. ಸದ್ಯ ಇದಕ್ಕೆಲ್ಲ ಬ್ರೇಕ್ ಬಿದ್ದಿರುವ ಹಿನ್ನೆಲೆಯಲ್ಲಿ ಮಾಲಿನ್ಯ ಪ್ರಮಾಣ ಕಡಿಮೆಯಾಗಿದೆ.

    ಗಾಳಿಯಲ್ಲಿ ಧೂಳಿನ ಕಣಗಳ ಮಾಪನ
    ನಗರದ ಬೋರ್ಡ್ ಹೈಸ್ಕೂಲ್ ಆವರಣದಲ್ಲಿ ರಾಜ್ಯಮಾಲಿನ್ಯ ನಿಯಂತ್ರಣ ಮಂಡಳಿ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ನಿರಂತರ ಪರಿವೇಷ್ಟಕ ವಾಯು ಗುಣಮಟ್ಟ ಮಾಪನ ಕೇಂದ್ರದಲ್ಲಿ ಗಾಳಿಯಲ್ಲಿರುವ ಧೂಳಿನ ಕಣಗಳು, ಕಾರ್ಬನ್ ಮೊನಾಕ್ಸೈಡ್ ಹಾಗೂ ಸಲ್ಫಾರ್ ಡೈ ಆಕ್ಸೈಡ್‌ಗಳನ್ನು ಮಾಪನ ಮಾಡಲಾಗುತ್ತದೆ. ಇಲ್ಲಿರುವ ಪರ್ಟಿಕ್ಯುಲೆಟ್ ಮಾನಿಟರ್(ಪಿಎಂ)-2.5 ಯಂತ್ರ ಗಾಳಿಯಲ್ಲಿರುವ ಅತೀ ಸಣ್ಣ ಅಂದರೆ 2.5ಮೈಕ್ರೋ ಗ್ರಾಂ(ಎಂಜಿ) ಗಾತ್ರದ ಹಾಗೂ ಪಿಎಂ-10 ಯಂತ್ರವು 10ಎಂಜಿ ಗಾತ್ರದ ಧೂಳಿನ ಕಣಗಳನ್ನು ಮಾಪನ ಮಾಡುತ್ತದೆ. 2.5ಎಂಜಿ ಗಾತ್ರದ ಕಣಗಳು ಗಾಳಿಯಲ್ಲಿ 15-25 ಎಂಜಿ ಇದ್ದರೆ ಸುರಕ್ಷಿತ. 30-60ಎಂಜಿ ಇದ್ದರೆ ಸರಾಸರಿ ಮತ್ತು 60ಎಂಜಿಗಿಂತ ಮೇಲ್ಪಟ್ಟರೆ ಮಲಿನಯುಕ್ತ ಗಾಳಿ ಮತ್ತು 10 ಎಂಜಿ ಗಾತ್ರದ ಕಣಗಳು 15-25ಎಂಜಿ ಇದ್ದರೆ ಸುರಕ್ಷಿತ, 30-60ಎಂಜಿ ಇದ್ದರೆ ಸರಾಸರಿ, 60-100 ಎಂಜಿ ಇದ್ದರೆ ಅಲರ್ಟ್ ಹಾಗೂ 100 ಎಂಜಿಗಿಂತ ಹೆಚ್ಚಿದ್ದರೆ ಮಲಿನಯುಕ್ತ ಗಾಳಿ ಎಂದು ಪರಿಗಣಿಸಲಾಗುತ್ತದೆ.

    ಉಡುಪಿ ಪರಿಸರದ ಸ್ಥಿತಿಗತಿ
    ಪ್ರಸ್ತುತ ಉಡುಪಿ ನಗರದಲ್ಲಿ 2.5ಎಂಜಿ ಕಣಗಳು 2.00 ಎಂಜಿಯಷ್ಟಿದ್ದರೆ, 10 ಎಂಜಿ ಕಣಗಳು 10-15 ಎಂಜಿಯಷ್ಟಿದೆ. ಲಾಕ್‌ಡೌನ್‌ಗಿಂತ ಮೊದಲು ಮಾ.5ರಂದು 2.5 ಎಂಜಿ ಧೂಳಿನ ಕಣಗಳು 56 ಎಂಜಿಯಷ್ಟು ಇರುವುದು ವರದಿಯಾಗಿತ್ತು. 10 ಎಂಜಿ ಕಣಗಳು ಮಾ.1ರಂದು 77.18ರಷ್ಟು ಪ್ರಮಾಣದಲ್ಲಿ ಇದ್ದವು. 2.5. ಕಣಗಳು ಹಲವು ಬಾರಿ 60ಎಂಜಿಗಿಂತ ಮೀರಿದ್ದವು. ಆದರೆ 10 ಎಂಜಿ ಕಣಗಳು ಈವರೆಗೆ 100 ಮೀರಿಲ್ಲ ಎಂದು ಕೇಂದ್ರದ ವರದಿ ತಿಳಿಸುತ್ತದೆ. ಹೀಗೆ 60ಎಂಜಿಗಿಂತ ಹೆಚ್ಚಿದ್ದ ಸಣ್ಣ ಧೂಳಿನ ಕಣಗಳ ಪ್ರಮಾಣ ಈಗ ಕೇವಲ 2 ಎಂಜಿಗೆ ಇಳಿದಿರುವುದು ನಗರದ ವಾತಾವರಣ ಸುರಕ್ಷಿತವಾಗಿರುವುದಕ್ಕೆ ಸಾಕ್ಷಿಯಾಗಿದೆ.

    ಉಡುಪಿಯಲ್ಲಿ ಈ ಹಿಂದೆ ನಿಗದಿತ ಮಟ್ಟಕ್ಕಿಂತ ಮೀರಿದ್ದ ಧೂಳಿನ ಕಣಗಳ ಸಾಂದ್ರತೆ, ಇಂಗಾಲದ ಮೊನಾಕ್ಸೈಡ್ ಪ್ರಮಾಣ ಪ್ರಸ್ತುತ ವಾಹನಗಳ ಓಡಾಟ ಇಲ್ಲದಿರುವುದರಿಂದ ಸಾಕಷ್ಟು ಪ್ರಮಾಣದಲ್ಲಿ ಇಳಿಕೆಯಾಗಿದೆ. ಶೇ.90ರಷ್ಟು ವಾಯು ಮಾಲಿನ್ಯ ವಾಹನಗಳಿಂದ ಉಂಟಾಗುತ್ತಿದೆ. ವಾತಾವರಣದಲ್ಲಿ ಬೆರೆತ ದೂಳಿನ ಕಣಗಳಿಂದ ಮನುಷ್ಯನ ಆರೋಗ್ಯಕ್ಕೂ ಸಮಸ್ಯೆಯಾಗಲಿದೆ. ಶ್ವಾಸಕೋಸ, ಅಸ್ತಮ ದಂತಹ ಕಾಯಿಲೆ ಬಾಧಿಸುತ್ತದೆ.
    -ವಿಜಯ ಹೆಗ್ಡೆ, ಜಿಲ್ಲಾ ಪರಿಸರ ಅಧಿಕಾರಿ, ಉಡುಪಿ

    ಮಂಗಳೂರಿನಲ್ಲಿ ಶೇ.80ರಷ್ಟು ಇಳಿಕೆ
    ಮಂಗಳೂರು: ವಾಹನಗಳು, ಕೈಗಾರಿಕೆಗಳಿಂದ ಗಿಜಿಗುಡುತ್ತಿದ್ದ ಮಂಗಳೂರು ಲಾಕ್‌ಡೌನ್ ಹಿನ್ನೆಲೆಯಲ್ಲಿ ನಿರಾಳವಾಗಿದೆ. ಒಂದು ತಿಂಗಳ ಅವಧಿಯಲ್ಲಿ ಶಬ್ಧ, ವಾಯು ಸೇರಿದಂತೆ ಎಲ್ಲ ರೀತಿಯ ಮಾಲಿನ್ಯ ಪ್ರಮಾಣ ಶೇ.80ರಷ್ಟು ಇಳಿಕೆಯಾಗಿದೆ. ರಸ್ತೆ ಬದಿ ಮರ ಗಿಡಗಳು ಚಿಗುರಿ ನಳನಳಿಸುತ್ತಿದ್ದು, ಹೂ ಬಿಟ್ಟು ಕಂಗೊಳಿಸುತ್ತಿವೆ. ಮಂಗಳೂರಿನಲ್ಲಿ ವಾಹನಗಳು ಕಕ್ಕುವ ಹೊಗೆ, ಹೊರಡಿಸುವ ಸದ್ದು, ಕರ್ಕಶ ಹಾರ್ನ್, ಗ್ಯಾರೇಜ್‌ಗಳಲ್ಲಿ ಕಬ್ಬಿಣ ಗುದ್ದುವುದು, ಎಲ್ಲೆಂದರಲ್ಲಿ ಕಸ ಎಸೆಯುವುದು, ಉಗುಳುವುದು ಎಲ್ಲವೂ ಕಡಿಮೆಯಾಗಿದೆ.
    ವಾಹನಗಳ ಓಡಾಟವಿಲ್ಲದೆ ನೈಟ್ರಿಕ್ ಆಕ್ಸೈಡ್, ನೈಟ್ರೋಜನ್ ಆಕ್ಸೈಡ್ ಸೇರಿದಂತೆ ಎನ್‌ಒಎಕ್ಸೃ್ ಎಂದು ಕರೆಯಲ್ಪಡುವ ಎಲ್ಲ ನೈಟ್ರೋಜನ್ ಆಕ್ಸೈಡ್ ಕಂಟೆಂಟ್‌ಗಳು ಏಪ್ರಿಲ್‌ನಲ್ಲಿ ಶೇ.58.8ರಷ್ಟು ಇಳಿಕೆಯಾಗಿದೆ. ಸಲ್ಫರ್ ಡೈ ಆಕ್ಸೈಡ್ ಸೇರಿದಂತೆ ಎಸ್‌ಒಎಕ್ಸೃ್ ಎಂದು ಕರೆಯುವ ಎಲ್ಲ ತರಹದ ಸಲ್ಫರ್ ಪ್ರಮಾಣವೂ ಗಾಳಿಯಲ್ಲಿ ಕಡಿಮೆಯಾಗಿದೆ. ಫೆಬ್ರವರಿಗೆ ಹೋಲಿಸಿದರೆ ಏಪ್ರಿಲ್ ತಿಂಗಳಿನಲ್ಲಿ ಶೇ.6.2ರಷ್ಟು ಇಳಿಕೆಯಾಗಿದೆ. ಗಾಳಿಯಲ್ಲಿ ಸೇರಿರುವ ಕಾರ್ಬನ್ ಮೊನಾಕ್ಸೈಡ್ ಪ್ರಮಾಣದಲ್ಲಿಯೂ ಕುಸಿತ ಕಂಡು ಬಂದಿದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವರದಿಯಿಂದ ಇದು ಸ್ಪಷ್ಟವಾಗಿದೆ.

    ಲಾಕ್‌ಡೌನ್ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ವಾಹನ ಓಡಾಟ, ಕೈಗಾರಿಕೆಗಳು ಸ್ಥಗಿತಗೊಂಡಿರುವುದರಿಂದ ಮಾಲಿನ್ಯ ಪ್ರಮಾಣ ಸಾಕಷ್ಟು ಕಡಿಮೆಯಾಗಿದೆ. ಗಾಳಿಯಲ್ಲಿ ಕಾರ್ಬನ್ ಮೊನಾಕ್ಸೈಡ್, ಸಲ್ಫರ್ ಡೈ ಆಕ್ಸೈಡ್ ಹಾಗೂ ನೈಟ್ರಿಕ್ ಆಕ್ಸೈಡ್ ಪ್ರಮಾಣ ತಗ್ಗಿದೆ.
    ಕೀರ್ತಿ ಕುಮಾರ್, ನಿರ್ದೇಶಕರು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ದ.ಕ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts