More

    ಕುಸಿಯುತ್ತಿದೆ ಹೆಸರು ಕಾಳಿನ ದರ

    ಗದಗ: ಜಿಲ್ಲೆಯ ಪ್ರಮುಖ ಬೆಳೆ ಹೆಸರು ಕಾಳು ಉತ್ಪನ್ನ ದರ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು ರೈತರನ್ನು ಚಿಂತೆಗೀಡು ಮಾಡಿದೆ.
    ಕಳೆದ ಎರಡು ದಿನಗಳ ಅವಧಿಯಲ್ಲಿ 1000 ರೂ. ದರ ಕುಸಿತ ಕಂಡಿದ್ದು ರೈತಾಪಿ ವರ್ಗ ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ. ಶುಕ್ರವಾರ ಹೆಸರಿನ ದರ 6800 ರೂ., ಶನಿವಾರ 6100, ಸೋಮವಾರ 5900 ರೂ. ಹೀಗೆ ಮಾರುಕಟ್ಟೆಯಲ್ಲಿ ಹೆಸರು ಕಾಳು ದರ ಕುಸಿಯತೊಡಗಿದೆ. ಮಾರುಕಟ್ಟೆಗೆ ಹೆಚ್ಚು ಉತ್ಪನ್ನ ಆವಕವಾದರೆ ಕ್ರಮೇಣ ದರ ಬೀಳುತ್ತದೆ. ಇದಕ್ಕೆ ಏನನ್ನೂ ಮಾಡಲು ಆಗುವುದಿಲ್ಲ ಎಂದು ವರ್ತಕರು ಹೇಳುತ್ತಾರೆ. ‘ಹೀಗಾದರೆ ನಮ್ಮ ಬದುಕು ಕಷ್ಟವಾಗುತ್ತದೆ. ದರ ಕುಸಿತವನ್ನು ನಿಯಂತ್ರಿಸಬೇಕು’ ಎಂದು ರೈತರು ಆಗ್ರಹಿಸುತ್ತಿದ್ದಾರೆ.
    ಮೂರು ಎಕರೆಯಲ್ಲಿ ಹೆಸರು ಬಿತ್ತನೆ ಮಾಡಲಾಗಿದೆ. 6 ಸಾವಿರ ರೂ. ಬೀಜ, ಬಿತ್ತನೆಗೆ 2100 ರೂ., ಎಡೆ ಹೊಡೆಯಲು (2 ಗಳೆವು) 3 ಸಾವಿರ ರೂ., ಎರಡು ಸಲ ಔಷಧ ಸಿಂಪಡಿಸಿದ್ದು 3 ಸಾವಿರ ರೂ. ಹೆಸರು ಬುಡ್ಡಿ ಬಿಡಿಸಲು 14 ಸಾವಿರ ರೂ., ಮಷಿನ್ ಮೂಲಕ ಒಕ್ಕಲಿ ಮಾಡಲು 1400 ರೂ., ಎರಡು ಚೀಲ ಗೊಬ್ಬರ 3 ಸಾವಿರ ರೂ. ಹೆಸರು ಚೀಲವನ್ನು ಗದಗ ಎಪಿಎಂಸಿಗೆ ತರಲು 500 ರೂ. ಸೇರಿ 34ರಿಂದ 40 ಸಾವಿರ ರೂ. ಖರ್ಚಾಗುತ್ತದೆ. ಈ ಮೂರು ಎಕರೆ ಪ್ರದೇಶದಲ್ಲಿ 7 ಚೀಲ ಹೆಸರು ಉತ್ಪನ್ನ ಬಂದಿದ್ದು, ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲ್​ಗೆ 6100 ರೂ. ಮಾರಾಟ ಮಾಡಲಾಗಿದೆ. ಒಟ್ಟು ಆದಾಯ 57 ಸಾವಿರ ರೂ. ಆದಾಯ ಬಂದಿದೆ. ಇದರಲ್ಲಿ ಖರ್ಚಾಗಿರುವ ಮೊತ್ತ 40 ಸಾವಿರ ಕಳೆದರೆ ಕೇವಲ 17 ಸಾವಿರ ರೂ. ಉಳಿಯುತ್ತದೆ. ಈ ಹಣದಲ್ಲಿ ರೈತರು ಬದುಕು ಕಟ್ಟಿಕೊಳ್ಳುವುದು ಸವಾಲಾಗಿದ್ದು, ಕುಟುಂಬ ನಿರ್ವಹಣೆ, ಮನೆಯ ಇತರ ಖರ್ಚುಗಳು, ಆನಾರೋಗ್ಯ ಮತ್ತಿತರ ಸಮಸ್ಯೆಗಳಿಗೆ ಹಣ ಹೊಂದಿಸುವುದು ಕಷ್ಟವಾಗುತ್ತದೆ ಎಂದು ರೈತರು ಚಿಂತೆಗೀಡಾಗಿದ್ದಾರೆ. ಇಂತಹ ಸಮಯದಲ್ಲಿ ದರ ಕುಸಿತ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ ಎಂದು ಸಂಭಾಪುರದ ರೈತ ರಾಮನಗೌಡ ತಮ್ಮನಗೌಡ ಒತ್ತಾಯಿಸುತ್ತಿದ್ದಾರೆ.
    ಜಿಲ್ಲೆಯಲ್ಲಿ ಶೇ. 90ರಷ್ಟು ಬಿತ್ತನೆ: ಜಿಲ್ಲೆಯಲ್ಲಿ ಈ ವರ್ಷ ಉತ್ತಮ ಮಳೆ ಆಗಿದ್ದು, ಮುಂಗಾರು ಹಂಗಾಮಿನಲ್ಲಿ ಹೆಸರು ಬಿತ್ತನೆ ಮಾಡಲಾಗಿದೆ. ಉತ್ತಮ ಇಳುವರಿ ನಿರೀಕ್ಷೆ ಇದ್ದು ಕೂಡಲೆ ಹೆಸರು ಖರೀದಿ ಕೇಂದ್ರ ಆರಂಭಿಸಬೇಕು. ಪ್ರತಿ ಕ್ವಿಂಟಾಲ್​ಗೆ 7200 ರೂ. ಬೆಂಬಲ ಬೆಲೆ ನೀಡಬೇಕು. ಪ್ರತಿ ರೈತರಿಂದ 20 ಕ್ವಿಂಟಾಲ್ ಹೆಸರು ಖರೀದಿ ಮಾಡಬೇಕು ಎಂದು ರೈತರು ಒತ್ತಾಯಿಸುತ್ತಿದ್ದಾರೆ. ಈ ಕುರಿತು ಈಗಾಗಲೇ ಅನೇಕ ರೈತ ಪರ ಸಂಘಟನೆಗಳು ಬೆಂಬಲ ಬೆಲೆ ಯೋಜನೆಯಡಿ ಹೆಸರು ಖರೀದಿಸಬೇಕೆಂದು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ. ಆದರೆ, ಇಲ್ಲಿವರೆಗೆ ಖರೀದಿ ಕೇಂದ್ರಗಳು ಆರಂಭಿಸಿಲ್ಲ ಎಂದು ರೈತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಹೆಸರು ಪ್ರಮುಖ ಬೆಳೆಯಾಗಿದ್ದು, 1,27,800 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿಯ ಪೈಕಿ ಶೇ. 90ರಷ್ಟು ಬಿತ್ತನೆಯಾಗಿದೆ. 75 ದಿನಗಳ ಬೆಳೆ ಇದಾಗಿದೆ.

    ಹೆಸರು ಕಾಳಿನ ಬೆಲೆ ಕುಸಿಯತೊಡಗಿದ್ದು ಸರ್ಕಾರ ಕೂಡಲೆ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರ ಆರಂಭಿಸಿ ರೈತರಿಂದ ಹೆಸರು ಖರೀದಿಸಬೇಕು. ಪ್ರತಿ ಕ್ವಿಂಟಾಲ್​ಗೆ ಕನಿಷ್ಟ 7 ಸಾವಿರ ರೂ. ದರವನ್ನು ನಿಗದಿಪಡಿಸಬೇಕು.
    | ರಾಮನಗೌಡ ತಮ್ಮಗೌಡ, ಸಂಭಾಪುರ ಗ್ರಾಮದ ರೈತ
    ಹೆಸರು ಉತ್ಪನ್ನ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರ ಆರಂಭಿಸಲು ಜಿಲ್ಲಾಡಳಿತದಿಂದ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರದ ಆದೇಶದ ಬಂದ ಕೂಡಲೆ ಖರೀದಿ ಕೇಂದ್ರ ಆರಂಭಿಸಲಾಗುವುದು.
    | ರುದ್ರೇಶಪ್ಪ ಟಿ.ಎಸ್. ಜಂಟಿ ನಿರ್ದೇಶಕ, ಕೃಷಿ ಇಲಾಖೆ, ಗದಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts