More

    ಸುಗ್ರೀವಾಜ್ಞೆ ಆಧರಿಸಿ ಕೈಗೊಳ್ಳುವ ಕ್ರಮಗಳು ಅಂತಿಮ ಆದೇಶಕ್ಕೆ ಒಳಪಡಲಿದೆ ಎಂದ ಹೈಕೋರ್ಟ್

    ಬೆಂಗಳೂರು: ಕರ್ನಾಟಕ ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದು ರಾಜ್ಯ ಸರ್ಕಾರ 2ನೇ ಬಾರಿ ಹೊರಡಿಸಿರುವ ಸುಗ್ರೀವಾಜ್ಞೆ ಆಧರಿಸಿ ಕೈಗೊಳ್ಳುವ ಎಲ್ಲ ಕ್ರಮಗಳೂ ಸುಗ್ರೀವಾಜ್ಞೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಪಿಐಎಲ್‌ಗಳ ಕುರಿತು ನ್ಯಾಯಾಲಯ ನೀಡುವ ಅಂತಿಮ ಆದೇಶಕ್ಕೆ ಒಳಪಡಲಿದೆ ಎಂದು ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ.

    ಕಳೆದ ಜುಲೈನಲ್ಲಿ ಮೊದಲ ಬಾರಿಗೆ ಹೊರಡಿಸಿದ್ದ ಸುಗ್ರೀವಾಜ್ಞೆ ಪ್ರಶ್ನಿಸಿ ಭಾರತೀಯ ಕಿಸಾನ್ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಸಿ. ಗಂಗಾಧರಯ್ಯ, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಸಿದ್ದವು. ಈ ಮಧ್ಯೆ, ತಿದ್ದುಪಡಿ ವಿಧೇಯಕ್ಕೆ ವಿಧಾನ ಪರಿಷತ್‌ನಲ್ಲಿ ಅನುಮೋದನೆ ದೊರೆಯದ ಹಿನ್ನೆಲೆಯಲ್ಲಿ ಸರ್ಕಾರ ಎರಡನೇ ಬಾರಿ ಸುಗ್ರೀವಾಜ್ಞೆ ಹೊರಡಿಸಿತ್ತು. ಇದರಿಂದ, ಅರ್ಜಿಗಳನ್ನು ತಿದ್ದುಪಡಿ ಮಾಡಲು ಅವಕಾಶ ಕೋರಿ ಮಧ್ಯಂತರ ಅರ್ಜಿ ಸಲ್ಲಿಸಲಾಗಿತ್ತು.

    ಬುಧವಾರ ತಿದ್ದುಪಡಿ ಅರ್ಜಿ ಸಲ್ಲಿಸಲು ಅವಕಾಶ ನೀಡಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ್ ನೇತೃತ್ವದ ವಿಭಾಗೀಯ ಪೀಠ, ಈ ಎಲ್ಲ ಅರ್ಜಿಗಳ ಸಂಬಂಧ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿ, ಆಕ್ಷೇಪಣೆ ಸಲ್ಲಿಸಲು ಸೂಚಿಸಿತು. ಇದೇ ವೇಳೆ, ಸುಗ್ರೀವಾಜ್ಞೆ ಆಧರಿಸಿ ಕೈಗೊಳ್ಳುವ ಯಾವುದೇ ಕ್ರಮ ಹೈಕೋರ್ಟ್ ನೀಡುವ ಅಂತಿಮ ಆದೇಶಕ್ಕೆ ಒಳಪಡಲಿದೆ ಎಂದು ಸ್ಪಷ್ಟಪಡಿಸಿ ವಿಚಾರಣೆ ಮುಂದೂಡಿತು.

    ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಐಎಲ್ ಸಲ್ಲಿಸಿದ್ದ ಬಾಗಲಕೋಟೆ ಜಿಲ್ಲೆಯ ಇಳಕಲ್ ಮೂಲದ ಸಾಮಾಜಿಕ ಹೋರಾಟಗಾರ ನಾಗರಾಜ ಶೇಷಪ್ಪ ಹೊಂಗಲ್ ಹಾಗೂ ಬೆಂಗಳೂರಿನ ವಕೀಲೆ ಗೀತಾ ಮಿಶ್ರಾ ಸಹ ಈಗಾಗಲೇ ಎರಡನೇ ಸುಗ್ರೀವಾಜ್ಞೆ ಪ್ರಶ್ನಿಸಿ ತಿದ್ದುಪಡಿ ಅರ್ಜಿ ಸಲ್ಲಿಸಿದ್ದಾರೆ.

    ಪ್ರಕರಣವೇನು?: ಕರ್ನಾಟಕ ಭೂ ಸುಧಾರಣಾ ಕಾಯ್ದೆ-1961ಕ್ಕೆ ತಿದ್ದುಪಡಿ ತಂದು ಕಳೆದ ಜುಲೈನಲ್ಲಿ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿತ್ತು. ಆದರೆ, ವಿಧಾನ ಪರಿಷತ್‌ನಲ್ಲಿ ತಿದ್ದುಪಡಿ ವಿಧೇಯಕ್ಕೆ ಅನುಮೋದನೆ ದೊರೆಯದ ಹಿನ್ನೆಲೆಯಲ್ಲಿ ಎರಡನೇ ಬಾರಿ ಸುಗ್ರೀವಾಜ್ಞೆ ಹೊರಡಿಸಲಾಗಿತ್ತು. ಅದನ್ನು ಪ್ರಶ್ನಿಸಿರುವ ಅರ್ಜಿದಾರರು, ಎರಡನೇ ಸುಗ್ರೀವಾಜ್ಞೆಯಲ್ಲೂ ಖಾಸಗಿ ಕಂಪೆನಿಗಳು, ಟ್ರಸ್ಟ್‌ಗಳು ಖರೀದಿಸುವ ಜಮೀನಿನ ಪ್ರಮಾಣಕ್ಕೆ ಯಾವುದೇ ನಿರ್ಬಂಧ ವಿಧಿಸಿಲ್ಲ. ಇದು ಪರೋಕ್ಷವಾಗಿ ಜಮೀನು ಕಬಳಿಕೆಯನ್ನು ಉತ್ತೇಜಿಸುತ್ತದೆ. ತಿದ್ದುಪಡಿ ನಿಯಮವು ಸಂವಿಧಾನದ ಮೂಲ ಸ್ವರೂಪಕ್ಕೆ ಧಕ್ಕೆ ತಂದಿದೆ ಎಂದು ಆಕ್ಷೇಪಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts