More

    ತೆರಿಗೆ ಹೆಚ್ಚಿಸದಿರಲು ನಿರ್ಣಯ

    ಚಿತ್ರದುರ್ಗ: ತೆರಿಗೆ ಹೊರೆ ಹೆಚ್ಚುತ್ತಿದ್ದು, ಜನರ ಮೇಲೆ ಮತ್ತಷ್ಟು ಬರೆ ಎಳೆಯುವುದು ಸೂಕ್ತವಲ್ಲ. ಆದ್ದರಿಂದ ಈ ಬಾರಿ ಬೇಡ ಎಂಬ ಸದಸ್ಯರ ಕೂಗಿಗೆ ನಗರಸಭೆ ಸಾಮಾನ್ಯ ಸಭೆ ಮನ್ನಣೆ. ನಗರಸಭೆ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ತೆರಿಗೆ ಹೆಚ್ಚಸಿರಲು ನಿರ್ಣಯ ಕೈಗೊಂಡಿತು.

    ಕನಿಷ್ಠ 3ರಿಂದ ಗರಿಷ್ಠ 5ರವರೆಗೆ ತೆರಿಗೆ ಹೆಚ್ಚಿಸಬೇಕು. 1 ಸಾವಿರ ರೂ.ಗೆ ಶೇ.3 ಮತ್ತು ವಾಣಿಜ್ಯ ಚಟುವಟಿಕೆಗೆ 4ರಷ್ಟು ತೆರಿಗೆ ವಿಧಿಸಬೇಕೆಂಬ ನಿಯಮವಿದೆ ಎಂಬುದಾಗಿ ಅಧಿಕಾರಿಗಳು ಗಮನಕ್ಕೆ ತಂದಾಗ, ಈಗಾಗಲೇ ವಿಧಿಸಿರುವ ತೆರಿಗೆ ಹೆಚ್ಚಾಗಿದೆ. ಆದ್ದರಿಂದ ಯಾವುದಕ್ಕೂ ಹೆಚ್ಚಿಸಬಾರದು ಎಂದು ಪಟ್ಟು ಹಿಡಿದರು. ಇದಕ್ಕೆ ಸಮ್ಮತಿ ವ್ಯಕ್ತವಾಯಿತು.

    ಜೈನುಲ್ಲಾಬ್ದಿನ್ ಮಾತನಾಡಿ, 25ನೇ ವಾರ್ಡಿನ ಜನರಿಗೆ ಸಮರ್ಪಕ ನೀರು ಪೂರೈಸಲು ಒಂದು ಕೊಳವೆಬಾವಿ ಕೊರೆಸಿ ಎಂಬುದಾಗಿ ಐದಾರು ಸಾಮಾನ್ಯ ಸಭೆಗಳಲ್ಲಿ ಪ್ರಸ್ತಾಪಿಸಿ, ಬೇಡಿಕೊಂಡರು ಈವರೆಗೂ ಈಡೇರಿಸಿಲ್ಲ. ಮೂರುವರೆ ವರ್ಷದಿಂದ ಭರವಸೆ ಕೇಳಿ ಸಾಕಾಗಿ ಹೋಗಿದೆ. ನೀರು ಇಲ್ಲದೆ ಜನ ನಿತ್ಯ ಪರಿತಪಿಸುತ್ತಿದ್ದಾರೆ. ಚುನಾಯಿಸಿ ಕಳುಹಿಸಿದ ಮತದಾರರಿಗೆ ಮುಖ ತೋರಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಳಲು ತೋಡಿಕೊಂಡರು.

    ತೆರಿಗೆ ಪಾವತಿಸಿದ ಮೇಲೆ ಜನರಿಗೆ ಮೂಲಸೌಲಭ್ಯ ಕಲ್ಪಿಸಬೇಕಾದ್ದು ನಗರಸಭೆ ಕರ್ತವ್ಯ. ಆದರೆ, ಇಲ್ಲಿ ಆ ಕೆಲಸವಾಗುತ್ತಿಲ್ಲ. ಕಂದಾಯ ವಸೂಲಿ ಮಾಡಲು ಬಂದರೆ ಸುಮ್ಮನೆ ಕೂರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

    ಕೆಲ ವಾರ್ಡ್‌ಗಳಿಗೆ ಅನುದಾನ ನೀಡಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುತ್ತಿದ್ದು, ಇನ್ನೂ ಕೆಲವೆಡೆ ನೀಡದೆ ತಾರತಮ್ಯ ಧೋರಣೆ ಅನುಸರಿಸಲಾಗುತ್ತಿದೆ. ಇದು ಪ್ರಜಾಪ್ರಭುತ್ವ ವಿರೋಧಿ ನಿಲುವಲ್ಲವೆ ಎಂದು ಮೀನಾಕ್ಷಿ ಪ್ರಶ್ನಿಸಿದರು.

    ನಸರುಲ್ಲಾ ಮಾತನಾಡಿ, ಸದಸ್ಯರು ಹೇಳಿದ ಯಾವ ಕೆಲಸಗಳು ನಗರಸಭೆಯಲ್ಲಿ ಆಗುತ್ತಿಲ್ಲ. ಹಣ ಕೊಟ್ಟರಷ್ಟೇ ಕೆಲಸ ಎಂಬಂತಾಗಿದೆ. ಸದಸ್ಯರು ಕಚೇರಿಗೆ ಖುದ್ದಾಗಿ ನೀಡುವ ಆಸ್ತಿ ವರ್ಗಾವಣೆ ಕಡತ ಕಳೆದುಹೋಗುತ್ತಿದೆ. ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

    ಖರ್ಚು ವೆಚ್ಚಗಳ ಕುರಿತು ಸಮರ್ಪಕ ಮಾಹಿತಿ ಇಲ್ಲದೆ, ಹಲವು ಗೊಂದಲಗಳಿವೆ. ಈ ಹಿಂದೆ ವಸ್ತುಗಳ ಖರೀದಿಯಲ್ಲಿ ಬೆಲೆ ವ್ಯತ್ಯಾಸದ ಕಾರಣಕ್ಕೆ ಅಧ್ಯಕ್ಷರೊಬ್ಬರು ಕಾನೂನು ಹೋರಾಟ ನಡೆಸುವಂತಾಗಿದೆ. ಆದ್ದರಿಂದ ಸೂಕ್ತ ಮಾಹಿತಿ ನೀಡಿ. ಈ ಸಭೆಯ ನಡವಳಿಯ ಖರ್ಚು ವೆಚ್ಚಗಳ ಅನುಮೋದನೆಗೆ ನನ್ನ ವಿರೋಧವಿದೆ ಎಂದಾಗ ಮಂಜುನಾಥ್ ಗೊಪ್ಪೆ ಸೇರಿ ಕೆಲವರು ಧನಿಗೂಡಿಸಿದರು. ಅಧ್ಯಕ್ಷೆ ತಿಪ್ಪಮ್ಮ, ಉಪಾಧ್ಯಕ್ಷೆ ಶ್ರೀದೇವಿ, ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್, ಪೌರಾಯುಕ್ತ ಶ್ರೀನಿವಾಸ್, ವ್ಯವಸ್ಥಾಪಕಿ ಮಂಜುಳಾ ಇದ್ದರು.

    ಕೋಟ್
    ಅಧಿಕಾರಿಗಳು ಸಮರ್ಪಕವಾಗಿ ಯಾವ ಕೆಲಸ ಮಾಡುತ್ತಿಲ್ಲ. ಆಶ್ವಾಸನೆಗಳೇ ಹೆಚ್ಚಾಗಿವೆಯೇ ಹೊರತು ಕಾರ್ಯರೂಪಕ್ಕೆ ಬರುತ್ತಿಲ್ಲ. ಇದರಿಂದ ಏನು ಪ್ರಯೋಜನವಿಲ್ಲ.
    ಭಾಸ್ಕರ್, ಸದಸ್ಯ

    ಕೋಟ್
    ಭೀಮಸಮುದ್ರ ರಸ್ತೆಗೆ ಈಗಾಗಲೇ ಅನುದಾನ ನೀಡಿದ್ದು, ಕಾಂಕ್ರಿಟ್ ರಸ್ತೆ ಕಾಮಗಾರಿಯಾಗಿದೆ. ಈಗ ಪುನಃ ಅದೇ ಮಾರ್ಗಕ್ಕೆ ಕೋಟಿಗಟ್ಟಲೇ ಹಣ ನೀಡಬೇಕು. ಮೇಲ್ನೋಟಕ್ಕೆ ಇದರಲ್ಲಿ ದುರುದ್ದೇಶ ಅಡಗಿದೆ.
    ಮಂಜುನಾಥ್ ಗೊಪ್ಪೆ, ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts