More

    ಡಿಡಿಪಿಐ ಹುದ್ದೆ ಖಾಲಿ ಇದೆ…!

    ಶರಣು ಪಾಟೀಲ
    ವಿಜಯಪುರ: ಕಳೆದ ಜೂನ್ 8 ರಂದು ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಉಪ ನಿರ್ದೇಶಕರ ಹುದ್ದೆಗಾಗಿ ಇಬ್ಬರು ಅಧಿಕಾರಿಗಳ ನಡುವೆ ಕುರ್ಚಿಗಾಗಿ ಹೊರಾಟವೇ ನಡೆದಿತ್ತು…! ಆದರೆ ಇದುವರೆಗೂ ಡಿಡಿಪಿಐ ಹುದ್ದೆಯೇ ಖಾಲಿ ಇದೆ…!

    ಹೌದು. ಅಂದು ವಿಜಯಪುರ ಡಿಡಿಪಿಐ ಆಗಿದ್ದ ಉಮೇಶ ಶಿರಹಟ್ಟಿಮಠ ಅವರನ್ನು ಹೊಸ ಸರ್ಕಾರ ಬೆಂಗಳೂರಿಗೆ ಮುಂಬಡ್ತಿ ನೀಡಿ ವರ್ಗಾವಣೆಗೊಳಿಸಿತ್ತು. ಅವರ ಸ್ಥಾನಕ್ಕೆ ಬಳ್ಳಾರಿ ಜಿಲ್ಲೆಯ ಕೂಡ್ಲಗಿ ಬಿಇಒ ಆಗಿದ್ದ ಯುವರಾಜ್ ನಾಯಕ ಎಂಬುವರನ್ನು ಮುಂಬಡ್ತಿ ನೀಡಿ ಸರ್ಕಾರ ವಿಜಯಪುರ ಡಿಡಿಪಿಐ ಕಚೇರಿಗೆ ವರ್ಗಾವಣೆ ಮಾಡಿತ್ತು.

    ಆದೇಶದಂತೆ ಜೂನ್ 8ರಂದು ಹೊಸ ಡಿಡಿಪಿಐ ಆಗಿ ವರ್ಗಾವಣೆಗೊಂಡಿದ್ದ ಯುವರಾಜ್ ನಾಯಕ ಅಧಿಕಾರ ಸ್ವೀಕರಿಸಲು ಖುಷಿಯಿಂದ ಕಚೇರಿಗೆ ಬಂದಿದ್ದರೆ. ಆದರೆ ಸರ್ಕಾರದ ಆದೇಶದ ಪ್ರಕಾರ ಡಿಡಿಪಿಐ ಆಗಿದ್ದ ಶಿರಹಟ್ಟಿಮಠ ಅವರಿಗೆ ಜೂನ್ 30ರಂದು ಅಧಿಕಾರ ಹಸ್ತಾಂತರ ಮಾಡುವಂತೆ ಸೂಚನೆ ಇತ್ತು. ಹೀಗಾಗಿ ಅವರು ಅಧಿಕಾರ ಹಸ್ತಾಂತರಕ್ಕೆ ಸುತಾರಾಂ ಒಪ್ಪಲಿಲ್ಲ. ಅವಧಿ ಮುಗಿದ ನಂತರ ವರ್ಗಗೊಳ್ಳುವುದಾಗಿ ಹೇಳಿದ್ದರು.

    ಇದು ಕೆಲ ಗಂಟೆಗಳ ಕಾಲ ಗೊಂದಲದ ವಾತಾವರಣ ಮೂಡಿತ್ತಲ್ಲದೇ ಡಿಡಿಪಿಐ ಕಚೇರಿಗೆ ಪೊಲೀಸ್ ಬಿಗಿಭದ್ರತೆ ಒದಗಿಸಲಾಗಿತ್ತು. ಸ್ವತಃ ಪೊಲೀಸ್ ಅಧಿಕಾರಿಗಳೇ ಇಬ್ಬರು ಅಧಿಕಾರಿಗಳ ಮಧ್ಯೆ ಸಂಧಾನಕ್ಕೆ ಮುಂದಾಗಿದ್ದರು. ಕೊನೆಗೆ ಅಧಿಕಾರ ಹಸ್ತಾಂತರವಾಗದ ಕಾರಣ ಯುವರಾಜ್ ನಾಯಕ ಬಂದ ದಾರಿಗೆ ಸುಂಕವಿಲ್ಲವೆಂದು ವಾಪಸ್ ತೆರಳಿದ್ದರು. ವಿಶೇಷವೆಂದರೆ ಅಂದಿನಿಂದ ಡಿಡಿಪಿಐ ಶಿರಹಟ್ಟಿಮಠ ಎಲ್ಲಾದರೂ ಬೇರೊಬ್ಬ ಅಧಿಕಾರಿ ತಮ್ಮ ಸ್ಥಾನ ಆಕ್ರಮಿಸಿಕೊಂಡು ಹೋಗುತ್ತಾರೋ ಎನ್ನುವ ಹೆದರಿಕೆಗೆ ತಮ್ಮ ಚೇಂಬರ್‌ಗೆ ಬೀಗ ಹಾಕಿಕೊಂಡೇ ಹೊರಗಡೆ ಹೋಗುತ್ತಿದ್ದರು.

    ಹೊಸಬರು ಬರಲೇ ಇಲ್ಲ

    ಸದ್ಯ ಕಳೆದ ಜೂನ್ 30 ರಂದು ಸರ್ಕಾರದ ಆದೇಶದಂತೆ ಡಿಡಿಪಿಐ ಉಮೇಶ ಶಿರಹಟ್ಟಿಮಠ ಮುಂಬಡ್ತಿಗೊಂಡು ಬೆಂಗಳೂರು ಜಂಟಿ ನಿರ್ದೇಶಕರ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದ್ದಾರೆ. ಆದರೆ ಇವರ ಸ್ಥಾನಕ್ಕೆ ವರ್ಗಾವಣೆಗೊಂಡಿದ್ದ ಯುವರಾಜ್ ನಾಯಕ ಅವರನ್ನು ಸರ್ಕಾರ ಬೇರೆಡೆ ವರ್ಗಾವಣೆ ಮಾಡಿದೆ ಎಂಬ ಮಾಹಿತಿ ಇದೆ.

    ಹೀಗಾಗಿ ಡಿಡಿಪಿಐ ಕಚೇರಿಯಲ್ಲಿರುವ ಬಿಇಒ ಎಂ.ಎ. ಗುಳೇದಗುಡ್ಡ ತಾತ್ಕಾಲಿಕವಾಗಿ ಪ್ರಭಾರಿ ಉಪನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಆದರೆ ಕಾಯಂ ಉಪ ನಿರ್ದೇಶಕರಿಲ್ಲದೇ ಡಿಡಿಪಿಐ ಕಚೇರಿಗೆ ಬರುವ ಶಿಕ್ಷಕರು ಹೈರಾಣಾಗಿದ್ದಾರೆ. ಡಿಡಿಪಿಐ ಹುದ್ದೆಗೆ ಸಾಕಷ್ಟು ಅಧಿಕಾರಿಗಳು ಬರುವ ಪ್ರಯತ್ನದಲ್ಲಿದ್ದು, ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಬಿ. ಪಾಟೀಲರ ಅಂಗಳದಲ್ಲಿದ್ದು ಅವರು ಯಾರಿಗೆ ಹಸಿರುನಿಶಾನೆ ನೀಡುತ್ತಾರೋ ಕಾದು ನೋಡಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts