More

    ಡಿಸಿಸಿ ಬ್ಯಾಂಕ್​ನಲ್ಲಿ ಸಾಲ ಪಡೆಯೋಕೆ ಲಂಚ ಕೊಟ್ಟಿದ್ದಲ್ಲಿ ನಾನು ಜವಾಬ್ದಾರನಲ್ಲ ಅಂದ್ರು ಬ್ಯಾಂಕ್ ಅಧ್ಯಕ್ಷ

    ಕೋಲಾರ: ಸಾಲಕ್ಕಾಗಿ ಲಂಚ ಕೊಡುವುದು ಪಾಪದ ಕೆಲಸ, ಒಂದು ವೇಳೆ ರೈತರು ಡಿಸಿಸಿ ಬ್ಯಾಂಕಿನಿಂದ ಸಾಲ ಪಡೆಯಲು ಯಾರಿಗಾದರು ಲಂಚ ಕೊಟ್ಟಿದ್ದಲ್ಲಿ ನಾನು ಜವಾಬ್ದಾರನಲ್ಲ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಸ್ಪಷ್ಟಪಡಿಸಿದರು.

    ಸಾಲ ಯೋಜನೆ ಕುರಿತು ಬುಧವಾರ ಜಿಲ್ಲಾ ಸಹಕಾರ ಭವನದಲ್ಲಿ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯ ರೈತರೊಂದಿಗಿನ ಸಂವಾದ ನಡೆಸಿ, ಕೆಲ ರೈತರು ಸಾಲ ಮಂಜೂರಾತಿಗಾಗಿ ಮಧ್ಯವರ್ತಿಗಳಿಗೆ 50,000 ದಿಂದ 1 ಲಕ್ಷ ರೂ.ವರೆಗೆ ಲಂಚ ಕೊಟ್ಟಿರುವುದು ಗಮನಕ್ಕೆ ಬಂದಿದೆ ಎಂದು ಬೇಸರಿಸಿದರು.

    ಬ್ಯಾಂಕಿನಲ್ಲಿ ಸಾಲಕ್ಕೆ ಲಂಚ ಕೇಳುವ ಪದ್ಧತಿಯಿಲ್ಲ. ಯಾರಾದರು ಹಣ ಕೊಟ್ಟಿದ್ದರೆ ಕಡತಗಳಿಗೆ ಸಹಿ ಹಾಕುವುದಿಲ್ಲ. ಯೋಜನಾ ವರದಿ ಹಾಗೂ ಸಾಲಕ್ಕೆ ಆಸ್ತಿ ಅಡಮಾನಕ್ಕೆ ಸಂಬಂಧಿಸಿದ ದಾಖಲೆ ಸರಿಯಿದ್ದರೆ ಬಿಡಿಗಾಸೂ ಕೊಡಬೇಕಿಲ್ಲ. ಕಡತಗಳ ಪ್ರಮಾಣೀಕರಣ ಹಾಗೂ ಯೋಜನಾ ವರದಿಗೆ ಆಡಳಿತ ಮಂಡಳಿ 2500 ರೂ. ಶುಲ್ಕ ನಿಗದಿಪಡಿಸಿದೆ. ಇದಕ್ಕಿಂತ ಹೆಚ್ಚಿನ ಹಣ ಕೇಳುವಂತಿಲ್ಲ, ಯಾರಾದರು ಹಣ ನೀಡಿದ್ದರೆ ನೀವೇ ವಸೂಲಿ ಮಾಡಿಕೊಳ್ಳಿ ಎಂದು ಸೂಚಿಸಿದರು.

    ಚಂದ್ರಾರೆಡ್ಡಿ ಎಂಬುವವರು ಬ್ಯಾಂಕಿನಿಂದ 10 ಲಕ್ಷ ರೂ. ಸಾಲ ಮಂಜೂರಾದಲ್ಲಿ 1 ಲಕ್ಷರೂ.ಗಳನ್ನು ಷೇರು ಹಣವಾಗಿ ಕಡಿತಗೊಳಿಸಿ 9 ಲಕ್ಷ ರೂ. ನೀಡುವುದರಿಂದ ಬಡ್ಡಿ ಕಟ್ಟಲು ರೈತರಿಗೆ ಹೊರೆಯಾಗುತ್ತದೆ, ಪೂರ್ಣ ಮೊತ್ತವನ್ನು ಖಾತೆಗೆ ವರ್ಗಾವಣೆ ಮಾಡಬೇಕೆಂದು ಕೋರಿದಾಗ ನಿಯಮಾನುಸಾರ 10 ಲಕ್ಷಕ್ಕೆ ಒಂದು 1 ಲಕ್ಷ ರೂ. ಷೇರು ಬಂಡವಾಳವಾಗಿ ಕಡಿತಗೊಳಿಸಿದ್ದಕ್ಕೆ ಬಡ್ಡಿ ಹೊರೆ ಆಗುತ್ತದೆ ಎಂಬುದು ಸರಿಯಲ್ಲ, ಬ್ಯಾಂಕಿನ ಆರ್ಥಿಕ ಪ್ರಗತಿಗೆ ತಮ್ಮಿಂದಲೂ ಸಹಕಾರ ಬೇಕಲ್ಲವೇ ಎಂದು ರೈತರನ್ನು ಕೇಳಿದರು.

    ಸಾಲಕ್ಕೆ ಅರ್ಜಿಸಲ್ಲಿಸಿರುವ 150ಕ್ಕೂ ಹೆಚ್ಚು ಫಲಾನುಭವಿಗಳಿಗೆ 10ರಿಂದ 40 ಲಕ್ಷ ರೂ.ವರೆಗೆ ಸಾಲ ನೀಡಲು 100 ಕೋಟಿ ರೂ. ಅವಶ್ಯಕತೆಯಿದೆ. ರೈತರು ಪಡೆದ ಸಾಲವನ್ನು ಆರ್ಥಿಕಾಭಿವೃದ್ಧಿಗೆ ವಿನಿಯೋಗಿಸಿ ಸಕಾಲಕ್ಕೆ ಸಾಲದ ಕಂತು ಮರು ಪಾವತಿಸಿದರೆ ಬ್ಯಾಂಕಿಗೆ ನಷ್ಟವಾಗದು, ತಮಗೂ ಅಧಿಕ ಬಡ್ಡಿ ಕಟ್ಟುವ ಪರಿಸ್ಥಿತಿ ಉದ್ಭವಿಸುವುದಿಲ್ಲವೆ ಎಂದರು.

    ಸಬ್ಸಿಡಿ ಆಧಾರಿತ ಸಾಲ: ನೀರು, ಮೇವು ವ್ಯವಸ್ಥೆ ಹೊಂದಿರುವ ರೈತರಿಗೆ ಕುರಿ, ಕೋಳಿ, ಹಸು ಸಾಕಾಣಿಕೆಗೆ ಸಬ್ಸಿಡಿ ಆಧಾರಿತ ಸಾಲ ಸೌಲಭ್ಯ ಕಲ್ಪಿಸಬೇಕೆಂದು ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಯನ್ನು ಒಕ್ಕೊರಲಿನಿಂದ ಆಗ್ರಹಿಸಿದರು. ಆ.27ರ ಸಭೆಯಲ್ಲಿ ಭಾಗವಹಿಸಲಿರುವ ನಬಾರ್ಡ್ ಜನರಲ್ ಮ್ಯಾನೇಜರ್ ನಟರಾಜನ್ ಗಮನಕ್ಕೆ ಈ ವಿಷಯ ತರಬೇಕೆಂದು ರೈತರು ಅಧ್ಯಕ್ಷರನ್ನು ಒತ್ತಾಯಿಸಿದರು.

    ರೈತ ಶ್ರೀರಾಮರೆಡ್ಡಿ ಸಬ್ಸಿಡಿ ಆಧಾರಿತ ಸಾಲಕ್ಕೆ ಒತ್ತಾಯಿಸಿದರೆ, ನಿರ್ದೇಶಕ ಆನಂದರೆಡ್ಡಿ, ಬೇಗನೆ ಕೆಲಸವಾಗಲಿ ಎಂದು ಲಂಚ ಕೊಟ್ಟು ಇಕ್ಕಟ್ಟಿಗೆ ಸಿಲುಕಬೇಡಿ, ದಾಖಲೆಗಳ ಆಧಾರದ ಮೇಲೆ ಸೌಲಭ್ಯ ಪಡೆಯಿರಿ ಎಂದು ಕಿವಿಮಾತು ಹೇಳಿದರು. ಸಂವಾದದಲ್ಲಿ ಬ್ಯಾಂಕಿನ ಎಂಡಿ ರವಿ, ನಿರ್ದೇಶಕರಾದ ನಾರಾಯಣರೆಡ್ಡಿ, ಮೋಹನ್ ರೆಡ್ಡಿ, ಗೋವಿಂದರಾಜು, ನಾಗಿರೆಡ್ಡಿ, ವೆಂಕಟರೆಡ್ಡಿ ಹಾಗೂ ಹಿರಿಯ ಸಹಕಾರಿ ಮುನಿನಾರಾಯಣಪ್ಪ ಪಾಲ್ಗೊಂಡಿದ್ದರು, ಎಜಿಎಂ ಖಲೀಂವುಲ್ಲಾ ಉಪಸ್ಥಿತರಿದ್ದರು.

    ಸಕಾಲಕ್ಕೆ ಕಂತು ಮರುಪಾವತಿಸದಿದ್ದರೆ ಬಡ್ಡಿ ಹೆಚ್ಚುತ್ತದೆ, ಸುಸ್ತಿದಾರರಾದರೆ ಸಬ್ಸಿಡಿ ಸಿಗಲ್ಲ, ಸಾಲಕ್ಕೆ ನೀಡುವ ಲಂಚವನ್ನು ಡಿಸಿಸಿ ಬ್ಯಾಂಕಿನ ಉಳಿತಾಯ ಖಾತೆಗೆ ಜಮಾ ಮಾಡಿ, ಆದ್ಯತೆ ಮೇರೆಗೆ ಸಾಲ ಸಿಗುತ್ತದೆ. ಬ್ಯಾಂಕಿನಲ್ಲಿ ನಿಮ್ಮ ಷೇರು ಇದ್ದರೆ ಸೌಲಭ್ಯಗಳನ್ನು ಪಡೆಯಬಹುದು.
    ಯಲವಾರ ಸೊಣ್ಣೇಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts