More

    ಡಿಸಿಸಿ ಬ್ಯಾಂಕ್ ಚುನಾವಣೆ, ಅವಿರೋಧ ಆಯ್ಕೆಗೆ ಯತ್ನ

    ಬೆಳಗಾವಿ: ರಾಜ್ಯದಲ್ಲಿಯೇ ಅತಿದೊಡ್ಡದಾದ ಮತ್ತು ಲಾಭದಲ್ಲಿರುವ ಜಿಲ್ಲೆಯ ಪ್ರತಿಷ್ಠಿತ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಗೆ ಎಲ್ಲ ನಿರ್ದೇಶಕರನ್ನು ಅವಿರೋಧವಾಗಿ ಆಯ್ಕೆ ಮಾಡಲು ತೆರೆಮರೆಯಲ್ಲಿ ತೀವ್ರ ಕಸರತ್ತು ನಡೆಯುತ್ತಿದೆ.

    ಶತಮಾನೋತ್ಸವದ ಹೊಸ್ತಿಲಲ್ಲಿರುವ ಬೆಳಗಾವಿ ಜಿಲ್ಲಾ ಮಧ್ಯವರ್ತಿ ಸಹಕಾರಿ ಬ್ಯಾಂಕ್ (ಡಿಸಿಸಿ)ಗೆ ಇದೇ ನ. 6ರಂದು ಮುಂದಿನ 5 ವರ್ಷಗಳಿಗಾಗಿ ನೂತನ ಆಡಳಿತ ಮಂಡಳಿಗೆ (16 ಸ್ಥಾನಗಳಿಗೆ) ಚುನಾವಣೆ ನಡೆಯಬೇಕಿದೆ. ಈಗಾಗಲೇ ಜಿಲ್ಲೆಯ ಬಿಜೆಪಿಯಲ್ಲಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಬಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಮತ್ತು ಮಾಜಿ ಸಚಿವ ಉಮೇಶ ಕತ್ತಿ ಬಣ ಎಂದು ಎರಡು ಗುಂಪುಗಳಾಗಿವೆ.

    ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿಯಲ್ಲಿ ಗುಂಪುಗಾರಿಕೆ ಮಾಡಿ, ಬೇರೆ ಪಕ್ಷಗಳಿಗೆ ಲಾಭ ಮಾಡಿಕೊಡುವುದಕ್ಕಿಂತ ಹೊಂದಾಣಿಕೆ ಮೂಲಕವೇ ಅವಿರೋಧ ಆಯ್ಕೆ ಮಾಡಿ, ಇತಿಹಾಸ ನಿರ್ಮಿಸೋಣ ಎಂದು ಜಿಲ್ಲೆಯ ಹಿರಿಯ ಆರ್‌ಎಸ್‌ಎಸ್ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಅವಿರೋಧ ಆಯ್ಕೆಗಾಗಿ ಶನಿವಾರ ಸಂಜೆ ಅಥಣಿಯಲ್ಲಿ ಹಿರಿಯ ಆರ್‌ಎಸ್‌ಎಸ್ ಮುಖಂಡ ಅರವಿಂದರಾವ್ ದೇಶಪಾಂಡೆ ನೇತೃತ್ವದಲ್ಲಿ ಕರೆದ ಸಭೆ ಬಹುತೇಕ ಯಶಸ್ವಿಯಾಗಿದೆ.

    ಸಂಘಟನೆಗೆ ಅನುಕೂಲ: ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು, ವೈಯಕ್ತಿಕ ಪ್ರತಿಷ್ಠೆ ಹಾಗೂ ಭಿನ್ನಾಭಿಪ್ರಾಯ ಬದಿಗಿಟ್ಟು ಪಕ್ಷದ ಹಿತದೃಷ್ಟಿಯಿಂದ ತಾವೆಲ್ಲರೂ ಒಂದಾಗಿ ಚುನಾವಣೆಯಲ್ಲಿ ಗೆಲ್ಲಬೇಕು. ಎಲ್ಲರೂ ಒಂದಾಗಿ ಹೋದರೆ, ಪಕ್ಷದ ಬೆಳವಣಿಗೆಗೆ ಹಾಗೂ ಸಂಘಟನೆಗೆ ಮತ್ತಷ್ಟು ಅನುಕೂಲವಾಗಲಿದೆ ಎಂದು ಅರವಿಂದರಾವ ದೇಶಪಾಂಡೆ ಅವರು ಕಿವಿಮಾತು ಹೇಳಿದ್ದಾರೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

    ಶನಿವಾರ ಮಧ್ಯಾಹ್ನ ಸಭೆಗೂ ಮುನ್ನ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ಅರವಿಂದರಾವ ದೇಶಪಾಂಡೆ ಅವರು ಜಿಲ್ಲೆಯ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚಿಸಿದರು. ಬಿಜೆಪಿ ಬಲವರ್ಧನೆಗಾಗಿ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಸಮಾಲೋಚಿಸಿದರು.

    ಸಂಜೆ ನಡೆದ ಸಭೆಯಲ್ಲಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಸಂಸದ ಅಣ್ಣಾಸಾಹೇಬ ಜೊಲ್ಲೆ, ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ, ಮಾಜಿ ಸಂಸದ ಹಾಗೂ ಡಿಸಿಸಿ ಬ್ಯಾಂಕ್‌ನ ಅಧ್ಯಕ್ಷರಾಗಿದ್ದ ರಮೇಶ ಕತ್ತಿ, ಮಾಜಿ ಸಚಿವ ಉಮೇಶ ಕತ್ತಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಸೇರಿದಂತೆ ಅನೇಕ ಹಿರಿಯರು ಸಭೆಯಲ್ಲಿ ಪಾಲ್ಗೊಂಡಿದ್ದರು.

    ಮುಂದಿನವಾರ ಮತ್ತೊಂದು ಸಭೆ: ಜಿಲ್ಲೆಯ ಹಿರಿಯ ನಾಯಕರೆಲ್ಲರೂ ಸೇರಿಕೊಂಡು, ಮುಂದಿನ ವಾರ ಮಾತುಕತೆ ನಡೆಸಿಸಲಿದ್ದಾರೆ. ಈ ಸಭೆಯಲ್ಲಿ ಜಿಲ್ಲೆಯ ಬಿಜೆಪಿ ಹಿರಿಯ ಶಾಸಕರು, ಸಂಸದರು, ಮಾಜಿ ಸಂಸದರು ಸೇರಿದಂತೆ ಜಿಲ್ಲೆಯ ಹಿರಿಯ ಮುಖಂಡರೆಲ್ಲರೂ ಭಾಗವಹಿಸಲಿದ್ದಾರೆ. ಹೊಂದಾಣಿಕೆ ಮೂಲಕವೇ ಅವಿರೋಧ ಆಯ್ಕೆ ಮಾಡಿ, ಡಿಸಿಸಿ ಬ್ಯಾಂಕ್‌ನ ಅಧಿಕಾರ ಹಿಡಿಯಲು ರಣತಂತ್ರ ಹೆಣೆಯಲಾಗಿದೆ. ಈ ಸಭೆಯಲ್ಲಿ ಅಂತಿಮ ತೀರ್ಮಾನ ಹೊರಬೀಳಲಿದೆ.

    ಭಾರತೀಯ ಜನತಾ ಪಕ್ಷದ ಬಲವರ್ಧನೆಗಾಗಿ ಜಿಲ್ಲೆಯ ಬಿಜೆಪಿ ಮುಖಂಡರು, ತಮ್ಮ ವೈಯಕ್ತಿಕ ಪ್ರತಿಷ್ಠೆಗಳನ್ನು ಬದಿಗಿಟ್ಟು, ಡಿಸಿಸಿ ಬ್ಯಾಂಕ್ ಚುನಾವಣೆಯನ್ನು ಅವಿರೋಧವಾಗಿ ಆಯ್ಕೆ ಮಾಡಿ, ರಾಜ್ಯದ ಜನತೆಗೆ ಹೊಸ ಸಂದೇಶ ರವಾನೆ ಮಾಡಬೇಕು.
    |ಅರವಿಂದರಾವ ದೇಶಪಾಂಡೆ ಆರ್‌ಎಸ್‌ಎಸ್ ಹಿರಿಯ ಮುಖಂಡ

    | ರಾಯಣ್ಣ ಆರ್.ಸಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts