More

    ಕಾಯಕ ಯೋಜನೆಯಲ್ಲಿ ಡಿಸಿಸಿ ಬ್ಯಾಂಕ್‌ನಿಂದ ಫಲಾನುಭವಿಗಳಿಗೆ ಸಾಲ ವಿತರಣೆ

    ಕೋಲಾರ: ಬಡವರ ಬಂಧು, ಕಾಯಕ ಯೋಜನೆಗಳ ಮೂಲಕ ಸ್ವಾಭಿಮಾನಿ ಬದುಕು ರೂಪಿಸಿಕೊಳ್ಳಲು ಡಿಸಿಸಿ ಬ್ಯಾಂಕ್‌ನಿಂದ ಪ್ರತಿ ಸಂಘಕ್ಕೆ 10 ಲಕ್ಷ ರೂ. ಸಾಲ ನೀಡಲಾಗುವುದು ಎಂದು ಶಾಸಕ ಕೆ.ಶ್ರೀನಿವಾಸಗೌಡ ಹೇಳಿದರು.

    ತಾಲೂಕಿನ ಚಿನ್ನಾಪುರ ಗ್ರಾಮದಲ್ಲಿ ಮಹಿಳಾ ಸ್ವಸಹಾಯ ಸಂಘಗಳಿಗೆ ಡಿಸಿಸಿ ಬ್ಯಾಂಕಿನಿಂದ ಬಡವರ ಬಂಧು, ಕಾಯಕ ಯೋಜನೆಗಳಡಿ ಶುಕ್ರವಾರ ಸಾಲದ ಚೆಕ್ ವಿತರಿಸಿ ಮಾತನಾಡಿ, ತಾಯಂದಿರು ಸ್ವಾಭಿಮಾನಿಯಾಗಿ, ಸ್ವಾವಲಂಬನೆ ಸಾಧಿಸಿ ಜೀವನ ಸಾಗಿಸಲು ನೀಡುವ ಸಾಲದ ಹಣ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

    ಡಿಸಿಸಿ ಬ್ಯಾಂಕ್ ಮಹಿಳೆಯರಿಗೆ ಅತಿ ಹೆಚ್ಚು ಸಾಲ ಸೌಲಭ್ಯ ನೀಡುವ ಮೂಲಕ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ ಹೆಗ್ಗಳಿಕೆಗೆ ಪಾತ್ರವಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಜನಪರ ಕಾರ್ಯಕ್ರಮ ರೂಪಿಸಿ ವಿವಿಧ ಸೌಲಭ್ಯ ಕಲ್ಪಿಸಲು ಚಿಂತಿಸಲಾಗುತ್ತಿದೆ. ಇದು ಬಡವರ ಬ್ಯಾಂಕ್. ಯಾರ‌್ಯಾರೋ ಬಾಯಿ ಚಪಲಕ್ಕೆ ಹೇಳುವ ವದಂತಿಗಳಿಗೆ ಕಿವಿಗೊಡದಿರಿ ಎಂದರು.

    ಟಿಎಪಿಸಿಎಂಎಸ್ ಅಧ್ಯಕ್ಷ ನಾಗನಾಳ ಸೋಮಣ್ಣ ಮಾತನಾಡಿ, ಕಾಯಕ ಯೋಜನೆಯಲ್ಲಿ ಪ್ರತಿ ಸಂಘಕ್ಕೆ ನೀಡುವ 10 ಲಕ್ಷ ರೂ.ಗಳಲ್ಲಿ 5 ಲಕ್ಷ ರೂ. ಬಡ್ಡಿರಹಿತವಾದುದು. ಉಳಿದ 5 ಲಕ್ಷಕ್ಕೆ ಶೇ.4ರಂತೆ ಬಡ್ಡಿ ವಿಧಿಸಲಾಗುವುದು ಎಂದರು.

    ಮಹಿಳಾ ಸಂಘದ ಪ್ರತಿನಿಧಿ ನಾರಾಯಣಮ್ಮ ಮಾತನಾಡಿ, ಈ ಹಿಂದೆ ನಬಾರ್ಡ್ ಬ್ಯಾಂಕ್ ಅಧಿಕಾರಿಗಳು ಗ್ರಾಮಕ್ಕೆ ಬಂದಿದ್ದ ವೇಳೆ ಹೈನುಗಾರಿಕೆಯನ್ನು ವೀಕ್ಷಿಸಿ ಬ್ಯಾಂಕ್‌ನಿಂದ ಅನುಕೂಲ ಮಾಡಿಕೊಡುವ ಭರವಸೆ ನೀಡಿದ್ದರು. ಅದರಂತೆ ಸಂಘದ ಪ್ರತಿ ಸದಸ್ಯೆಗೆ 1 ಲಕ್ಷ ರೂ. ಸಾಲಸೌಲಭ್ಯ ಕಲ್ಪಿಸಿರುವುದರಿಂದ ಸ್ವಾವಲಂಬಿ ಬದುಕಿಗೆ ನೆರವಾಗಲಿದೆ ಎಂದು ಹರ್ಷ ವ್ಯಕ್ತಪಡಿಸಿದರು.

    ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮಾತನಾಡಿ, ಚಿನ್ನಾಪುರ ಗ್ರಾಮದಲ್ಲಿ ಶೇ.80ರಷ್ಟು ದಲಿತ ಸಮುದಾಯದವರಿದ್ದಾರೆ. ಅನಕ್ಷರಸ್ಥರ ಸಂಖ್ಯೆ ಹೆಚ್ಚಿದ್ದರೂ ಸಾಲ ಮರುಪಾವತಿಯಲ್ಲಿನ ಇವರ ಪ್ರಾಮಾಣಿಕತೆ ಜಿಲ್ಲೆಗೆ ಮಾದರಿ. ಗ್ರಾಮದ ಹೆಣ್ಣು ಮಕ್ಕಳಿಗೆ ಮತ್ತಷ್ಟು ನೆರವು ಒದಗಿಸಲು ಡಿಸಿಸಿ ಬ್ಯಾಂಕ್ ಸಿದ್ಧವಿದೆ ಎಂದರು.

    ಬ್ಯಾಂಕ್ ನಿರ್ದೇಶಕ ಎಂ.ಎಲ್.ಅನಿಲ್ ಕುಮಾರ್, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಚಂಜಿಮಲೆ ರಮೇಶ್, ಅಣ್ಣಿಹಳ್ಳಿ ಎಸ್‌ಎಫ್ ಸಿಎಸ್ ಉಪಾಧ್ಯಕ್ಷ ನಾಗರಾಜ್, ಗ್ರಾಪಂ ಮಾಜಿ ಅಧ್ಯಕ್ಷ ಮಾರ್ಕೋಂಡಪ್ಪ, ಗೋವಿಂದಪ್ಪ, ಸದಸ್ಯೆ ಲಕ್ಷಮ್ಮ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts