More

    ಡಿಸಿಸಿ ಬ್ಯಾಂಕ್‌ನಿಂದ ಸಾಲ ಪಡೆಯಲು ಸಹಕಾರ ಸಂಘಗಳಲ್ಲಿ ನೋಂದಣಿ ಕಡ್ಡಾಯ

    ಶ್ರೀನಿವಾಸಪುರ: ಡಿಸಿಸಿ ಬ್ಯಾಂಕ್‌ನಿಂದ ನೀಡುವ ಸಾಲ ಅರ್ಹ ರೈತರಿಗೆ ಮಾತ್ರ ಸೇರಬೇಕು. ಇನ್ನು ಮುಂದೆ ಸಾಲ ಪಡೆಯಬೇಕಾದವರು ಸಹಕಾರ ಸಂಘಗಳಲ್ಲಿ ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯ ಎಂದು ಶಾಸಕ ಕೆ.ಆರ್.ರಮೇಶ್‌ಕುಮಾರ್ ಹೇಳಿದರು.

    ಶ್ರೀನಿವಾಸಪುರ ತಾಲೂಕಿನ ಅಡ್ಡಗಲ್‌ನಲ್ಲಿ ಗೌನಿಪಲ್ಲಿ, ಅಡ್ಡಗಲ್, ಯರಮೋರಪಲ್ಲಿ ಸೊಸೈಟಿಗಳ ವ್ಯಾಪ್ತಿಯಲ್ಲಿ ಬರುವ 528 ರೈತರಿಗೆ ಮಂಗಳವಾರ ಶೂನ್ಯಬಡ್ಡಿಯಲ್ಲಿ 4.75 ಕೋಟಿ ರೂ.ಗಳ ಸಾಲದ ಚೆಕ್ ವಿತರಿಸಿ ಮಾತನಾಡಿ, ಬಡ್ಡಿ ವ್ಯವಹಾರ, ಇಸ್ಪೀಟ್, ಜೂಜಾಟ ಆಡುವವರಿಗೆ ಸಾಲ ನೀಡುವುದಿಲ್ಲ. ಸಹಕಾರ ಸಂಘಗಳಲ್ಲಿ ಸಾಲ ಪಡೆಯಲು ಪ್ರತಿ ರೈತರು ಆಯಾ ಸಹಕಾರ ಸಂಘದಲ್ಲಿ ಷೇರುದಾರರಾಗಿರಬೇಕು, ಅಂತಹವರಿಗೆ ಮಾತ್ರ ಸಾಲ ನೀಡಲು ಶಿಪಾರಸು ಮಾಡಬೇಕು. ಜಮೀನು ಹೊಂದಿದ್ದೇವೆ ಎಂದು ಸಾಲ ಪಡೆದು ಬಡ್ಡಿ ವ್ಯವಹಾರ ನಡೆಸುವವರಿಗೆ ಸಹಕಾರ ಸಂಘಗಳಲ್ಲಿ ಜಾಗವಿಲ್ಲ. ಅಂತಹವರನ್ನು ನನ್ನ ಬಳಿ ಕರೆ ತರಬೇಡಿ ಎಂದು ಮುಖಂಡರಿಗೆ ಎಚ್ಚರಿಕೆ ನೀಡಿದರು.

    ಸಾಲ ಮರುಪಾವತಿ ಮಾಡಿರುವ ಸ್ತ್ರೀಶಕ್ತಿ ಸಂಘಗಳಿಗೆ ಸಂಕ್ರಾಂತಿಯೊಳಗೆ ಮತ್ತೆ ಸಾಲ ನೀಡಲಾಗುವುದು. ಈಗ ನೀಡುವ 50 ಸಾವಿರದ ಬದಲಾಗಿ ಒಂದು ಲಕ್ಷಕ್ಕೆ ಸಾಲದ ಪ್ರಮಾಣ ಹೆಚ್ಚಿಸಲಾಗುವುದು ಎಂದರು.

    ಶ್ರೀನಿವಾಸಪುರದಲ್ಲಿ ರೈತ ಬಜಾರ್ ಸ್ಥಾಪನೆ ಮಾಡುವ ಆಲೋಚನೆ ನನ್ನದು. ಇದನ್ನು ಪ್ರಾರಂಭಿಸಿ ರೈತರಿಗೆ ರಿಯಾಯಿತಿ ದರದಲ್ಲಿ ಕೃಷಿ ಉಪಕರಣ ಸೇರಿ ರೈತರಿಗೆ ಬೇಕಾಗುವ ಬಿತ್ತನೆ ಬೀಜ, ಔಷಧ, ರಸಗೊಬ್ಬರ ಒಂದೇ ಕಡೆ ಸಿಗುವಂತೆ ವ್ಯವಸ್ಥೆ ಮಾಡಲಾಗುವುದು. ದಿನಸಿ ಮತ್ತು ಬಟ್ಟೆ ಬಿಟ್ಟು ಉಳಿದಂತೆ ಎಲ್ಲ ಸಾಮಗ್ರಿಗಳು ಒಂದೇ ಕಡೆ ರೈತನಿಗೆ ಸಿಗುವಂತೆ ರೈತ ಬಜಾರು ಸ್ಥಾಪನೆ ಮಾಡಲಾಗುವುದು ಎಂದರು.

    ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ವೆಂಕಟರೆಡ್ಡಿ, ಎಸ್.ವಿ ಸುಧಾಕರ್, ಅಡ್ಡಗಲ್ ಸೊಸೈಟಿ ಅಧ್ಯಕ್ಷ ವೆಂಕಟರಾಮಿರೆಡ್ಡಿ, ಗೌನಿಪಲ್ಲಿ ಸೊಸೈಟಿ ಅಧ್ಯಕ್ಷ ಶಂಕರ್, ವೇಂಪಲ್ಲಿ ಸೊಸೈಟಿ ಅಧ್ಯಕ್ಷ ಮುನಿರೆಡ್ಡಿ, ಟಿಎಪಿಎಸ್‌ಎಂಎಸ್ ಅಧ್ಯಕ್ಷ ಬಗಲಘಟ್ಟ ಶ್ರೀನಿವಾಸರೆಡ್ಡಿ, ಗೌನಿಪಲ್ಲಿ ಸಿಇಒ ವೀರಪರೆಡ್ಡಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts