More

    ಡಿಸಿಸಿ ಬ್ಯಾಂಕ್ ಪ್ರಗತಿಗೆ ಶ್ರಮಿಸುತ್ತಿರುವ ನೌಕರರಿಗೆ ತುಟ್ಟಿಭತ್ಯೆ ಬಾಕಿ ಬಿಡುಗಡೆ

    ಕೋಲಾರ: ಡಿಸಿಸಿ ಬ್ಯಾಂಕ್ ಪ್ರಗತಿಗೆ ಶ್ರಮಿಸುತ್ತಿರುವ ಬ್ಯಾಂಕಿನ ನೌಕರರಿಗೆ ಆಡಳಿತ ಮಂಡಳಿಯಿಂದ ಅಗತ್ಯ ಸವಲತ್ತು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಭರವಸೆ ನೀಡಿದರು.

    ಭಾನುವಾರ ನಡೆದ ಡಿಸಿಸಿ ಬ್ಯಾಂಕ್ ನೌಕರರ ಸಹಕಾರ ಸಂಘದ ಸರ್ವಸದಸ್ಯರ ಸಭೆಯಲ್ಲಿ ಮಾತನಾಡಿ, ಬ್ಯಾಂಕ್ ನೌಕರರಿಗೆ ತುಟ್ಟಿಭತ್ಯೆ ಬಾಕಿ ಮೊತ್ತವನ್ನು ಬ್ಯಾಂಕ್ ಲಾಭಾಂಶದಲ್ಲಿ ನೀಡಲು ಅವಕಾಶವಿದ್ದು, ತುಟ್ಟಿಭತ್ಯೆ ಹಾಗೂ ಹಳೇ ವೇತನ ಶ್ರೇಣಿಯ ಬಾಕಿ ಹಣ ಮಂಜೂರು ಮಾಡಲು ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

    ನೌಕರರ ಸಹಕಾರ ಸಂಘಕ್ಕೆ ಶೇ.6 ಬಡ್ಡಿದರದಲ್ಲಿ ಸಾಲ ಸೌಲಭ್ಯ ಒದಗಿಸಲು ಬದ್ಧ. ಜತೆಗೆ ಸಂಘವು ವಸತಿ ಯೋಜನೆಗಾಗಿ 6 ಎಕರೆ ಭೂಮಿಯನ್ನು ಗುರುತಿಸಿದಲ್ಲಿ ಬಡಾವಣೆ ನಿರ್ಮಾಣಕ್ಕಾಗಿ ಬ್ಯಾಂಕಿನಿಂದ ಬಡ್ಡಿರಹಿತ ಸಾಲ ನೀಡಲಾಗುವುದು ಎಂದರು.

    ಜಿಲ್ಲೆಯ 204 ್ಯಾಕ್ಸ್‌ಗಳ (ಕೃಷಿ ಪತ್ತಿನ ಸಹಕಾರ ಸಂಘ) ಗಣಕೀಕರಣ ಕಾರ್ಯ ಅಂತಿಮಗೊಂಡಿದ್ದು, ಬ್ಯಾಂಕ್ ನೌಕರರ ಸಹಕಾರ ಸಂಘದಲ್ಲೂ ಗಣಕೀಕರಣಕ್ಕೆ ಅವಕಾಶ ನೀಡಿ, ಸಂಘಕ್ಕೆ ಲ್ಯಾಪ್‌ಟಾಪ್ ಒದಗಿಸಲು ಸಂಘದ ಅಧ್ಯಕ್ಷ ಹುಸೇನ್ ದೊಡ್ಡಮನಿ ಮಾಡಿದ ಮನವಿಗೆ ಒಪ್ಪಿಗೆ ನೀಡಿದರು.

    ಬ್ಯಾಂಕ್ ಉಳಿಸಲು ಸಿಬ್ಬಂದಿ ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು, ನಿಮ್ಮಿಂದ ಬ್ಯಾಂಕ್ ಉಳಿದಿದೆ, ಮುಂದೆಯೂ ಶ್ರದ್ಧೆಯಿಂದ ಕೆಲಸ ಮಾಡಿ ಬ್ಯಾಂಕ್ ಹಿತ ಕಾಪಾಡಬೇಕೆಂದ ಅವರು, ಈಗಾಗಲೇ ನೌಕರರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಮೊತ್ತದ ಆರೋಗ್ಯ ವಿಮೆ ಒದಗಿಸಲು ಕ್ರಮ ಕೈಗೊಂಡಿದ್ದು ಹಂತ-ಹಂತವಾಗಿ ನೌಕರರ ಇನ್ನಿತರ ಬೇಡಿಕೆಗಳನ್ನು ಈಡೇರಿಸುವೆ ಎಂದರು.

    ಸಂಘಕ್ಕೆ 1.14 ಲಕ್ಷ ಲಾಭ: ನೌಕರರ ಸಹಕಾರ ಸಂಘದ ಅಧ್ಯಕ್ಷ ಹುಸೇನಸಾಬ ಎಂ.ದೊಡ್ಡಮನಿ ಮಾತನಾಡಿ, ಸಂಘದಲ್ಲಿ ಈ ಸಾಲಿನಲ್ಲಿ 2.46 ಕೋಟಿ ರೂ. ವಹಿವಾಟು ನಡೆಸಿದ್ದೇವೆ, 55 ಲಕ್ಷ ಠೇವಣಿ ಸಂಗ್ರಹಿಸಿದ್ದು, 2.33 ಕೋಟಿ ರೂ. ಸಾಲ ವಿತರಿಸಲಾಗಿದೆ, 1.14 ಲಕ್ಷ ಲಾಭ ಬಂದಿದೆ ಎಂದು ಮಾಹಿತಿ ನೀಡಿದರು.

    ಸಂಘಕ್ಕೆ ಸಹಕಾರ ನೀಡಿರುವ ಬ್ಯಾಲಹಳ್ಳಿ ಗೋವಿಂದಗೌಡ ಅವರನ್ನು ಸನ್ಮಾನಿಸಲಾಯಿತು. ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಶಶಿಧರ್, ಬ್ಯಾಂಕ್ ನೌಕರರ ಸಹಕಾರ ಸಂಘದ ಉಪಾಧ್ಯಕ್ಷ ಸಿ.ವಿ.ರಾಮಕೃಷ್ಣಾರೆಡ್ಡಿ, ನಿರ್ದೇಶಕರಾದ ಖಲೀಮುಲ್ಲಾ, ಸಿ.ದಶರಥನ್, ಕೆ.ಬಿ.ವೆಂಕಟೇಶ್, ಎಂ.ಸಾದಪ್ಪ, ಜನಾರ್ದನ್, ಅರುಣ್ ಕುಮಾರ್, ಶ್ಯಾಮಲಾ, ಸಂಘದ ಕಾರ್ಯದರ್ಶಿ ಮಹೇಶ್ ಉಪಸ್ಥಿತರಿದ್ದರು.

    ನೌಕರರು ನಿವೃತ್ತಿ ನಂತರ ಜೀವನ ನಡೆಸಲು ಕಷ್ಟವಾಗದಿರಲು ನೂತನ ಪಿಂಚಣಿ ಯೋಜನೆಯಡಿ ಅವಕಾಶ ಕಲ್ಪಿಸಬೇಕು. ರಾಜ್ಯ ಸರ್ಕಾರ ತನ್ನ ನೌಕರರಿಗೆ ನೀಡಿರುವ ಶೇ.19.5 ತುಟ್ಟಿಭತ್ಯೆಯನ್ನು ಬ್ಯಾಂಕ್ ನೌಕರರಿಗೆ ನೀಡಬೇಕು.
    ಹುಸೇನಸಾಬ ಎಂ.ದೊಡ್ಡಮನಿ, ನೌಕರರ ಸಹಕಾರ ಸಂಘದ ಅಧ್ಯಕ್ಷ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts