More

  ಶೂನ್ಯ ಬಡ್ಡಿಯಲ್ಲಿ ಮಹಿಳಾ ಸ್ವ-ಸಹಾಯ ಸಂಘಗಳಿಗೆ 1 ರೂ. ಲಕ್ಷ ಸಾಲ

  ಮುಳಬಾಗಿಲು: ಅಂಚೆ ಕಚೇರಿ ಸೇರಿ ವಾಣಿಜ್ಯ ಬ್ಯಾಂಕ್‌ಗಳಲ್ಲಿ ಉಳಿತಾಯ ಖಾತೆ ತೆರೆದು ಠೇವಣಿ ಇಟ್ಟಿರುವ ಪ್ರತಿ ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರು ಡಿಸಿಸಿ ಬ್ಯಾಂಕ್‌ನಲ್ಲಿ ಖಾತೆ ತೆರೆದು ಠೇವಣಿ ಇಟ್ಟರೆ ಹೆಚ್ಚಿನಬಡ್ಡಿ ನೀಡುವ ಜತೆಗೆ ಶೂನ್ಯಬಡ್ಡಿಯಲ್ಲಿ ಒಂದು ಲಕ್ಷ ರೂ. ಸಾಲ ವಿತರಿಸಲಾಗುವುದು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹೇಳಿದರು.

   

  ತಾಲೂಕಿನ ನಂಗಲಿ ಗ್ರಾಮದಲ್ಲಿ ಬುಧವಾರ ಪ್ರಾಥಮಿಕ ಪತ್ತಿನ ವ್ಯವಸಾಯ ಸೇವಾ ಸಹಕಾರ ಸಂಘದಿಂದ ಡಿಸಿಸಿ ಬ್ಯಾಂಕ್ ಸಹಯೋಗದಲ್ಲಿ 143 ಮಹಿಳಾ ಸ್ವಸಹಾಯ ಸಂಘಗಳ 1430 ಸದಸ್ಯರಿಗೆ 6.87 ಕೋಟಿ ರೂ. ಸಾಲ ವಿತರಣೆ ಮಾಡಿ ಮಾತನಾಡಿ, ಡಿಸಿಸಿ ಬ್ಯಾಂಕ್ ಕಾರ್ಯ ಚಟುವಟಿಕೆಗಳ ಬಗ್ಗೆ ಕೆಲವರು ವಿನಾಕಾರಣ ಗೊಂದಲ ಸೃಷ್ಟಿಸಿ ಟೀಕೆ ಮಾಡುತ್ತಾರೆ. ಈ ಬಗ್ಗೆ ಚಿಂತಿಸದೆ ಶೂನ್ಯಬಡ್ಡಿಯಲ್ಲಿ ಮಹಿಳೆಯರಿಗೆ ಸಾಲ ನೀಡಬೇಕೆಂಬ ಸಂಕಲ್ಪದೊಂದಿಗೆ ಕಾರ್ಯನಿರ್ವಹಿಸುತ್ತಿದ್ದೇವೆ ಎಂದರು.

   

  ಪ್ರತಿ ವಾರ ಕಡ್ಡಾಯವಾಗಿ ನಿರ್ದಿಷ್ಟ ದಿನ ಸಂಘದ ಸದಸ್ಯರು ಸಭೆ ನಡೆಸಿ ನಡಾವಳಿ ನಮೂದು ಮಾಡಬೇಕು ಮತ್ತು ಪಡೆದಿರುವ ಸಾಲವನ್ನು ಸುಲಭವಾಗಿ ಮರುಪಾವತಿ ಮಾಡಿ ಮತ್ತಷ್ಟು ಸಾಲ ಪಡೆಯಬೇಕು. ಪ್ರತಿಯೊಬ್ಬರೂ ಸಾಲ ಪಡೆಯುವಾಗ 500 ರೂ. ವಿಮೆ ಮಾಡಿಸಿಕೊಳ್ಳಬೇಕು. ಒಂದೊಮ್ಮೆ ಸಾಲ ಮಾಡಿದ ಮಹಿಳೆ ಮೃತಪಟ್ಟರೆ ಅಂತಹವರ ಸಾಲವನ್ನು ವಿಮೆಯಿಂದ ಜಮೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಹಾಗೂ ಮೃತರ ಕುಟುಂಬಕ್ಕೆ ನೆರವಿಗೆ ಅನುಕೂಲವಾಗುತ್ತದೆ ಎಂದರು.

   

  ರಾಜ್ಯ ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಎಂ.ಸಿ.ನೀಲಕಂಠೇಗೌಡ ಮಾತನಾಡಿ, ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳು ಬರಗಾಲದಿಂದ ತತ್ತರಿಸಿದ್ದು, ಕೃಷಿ ಮತ್ತು ಕುಡಿಯುವ ನೀರಿಗೆ ಅಭಾವ ಉಂಟಾಗಿದೆ. ರೈತರ ಜೀವನಾಡಿಯಾಗಿದ್ದ ಹೈನುಗಾರಿಕೆ ಸಂಕಷ್ಟಕ್ಕೆ ಒಳಗಾಗುತ್ತಿದೆ. ಹಾಲಿಗೂ ಬರ ಉಂಟಾಗುತ್ತಿದೆ. ನೀರನ್ನು ಕಡಿಮೆ ಬಳಸುವ ಜತೆಗೆ ಹೈನುಗಾರಿಕೆಯನ್ನು ಕೈ ಬಿಡಬಾರದು. ಕೃಷಿ ಆಧಾರಿತ ಉಪ ಕಸುಬುಗಳ ಮೂಲಕ ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು ಎಂದರು.

   

  ಡಿಸಿಸಿ ಬ್ಯಾಂಕ್ ಎಂಡಿ ರವಿ ಮಾತನಾಡಿ, 1 ಸಾವಿರ ಕೋಟಿ ರೂ. ಸಾಲವನ್ನು ಮಹಿಳೆಯರಿಗೆ ವಿತರಿಸಿದ್ದು, ಮುಳಬಾಗಿಲು ತಾಲೂಕಿನಲ್ಲಿ 26 ಸಾವಿರ ಮಹಿಳೆಯರಿಗೆ ನೀಡಲಾಗಿದೆ. ಮರುಪಾವತಿ ಪ್ರಮಾಣ ಶೇ.98 ಇದೆ. ಆದರೆ ಬೇರೆ ಸಾಲ ಪಡೆದವರು ಮರುಪಾವತಿಯಲ್ಲಿ ಶೇ.93 ಮಾತ್ರ ಮರುಪಾವತಿ ಮಾಡಿದ್ದು, ಹಲವಾರು ಬಾರಿ ಪಾವತಿಗೂ ಸತಾಯಿಸಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಸಾಲವನ್ನು ಎಷ್ಟು ಆಸಕ್ತಿಯಿಂದ ಪಡೆಯುತ್ತೀರೋ ಅಷ್ಟೇ ಪ್ರಾಮಾಣಿಕತೆಯಿಂದ ಮರುಪಾವತಿ ಮಾಡಬೇಕು ಎಂದರು.

   

  ನಂಗಲಿ ವಿಎಸ್‌ಎಸ್‌ಎನ್ ಅಧ್ಯಕ್ಷ ದೇವೇಂದ್ರಗುಪ್ತ, ಗ್ರಾಪಂ ಅಧ್ಯಕ್ಷ ಕೃಷ್ಣಪ್ಪ, ಮಾಜಿ ಅಧ್ಯಕ್ಷ ಜಿ.ಆರ್.ವಿಶ್ವನಾಥರೆಡ್ಡಿ, ಸದಸ್ಯ ತೊಂಡಹಳ್ಳಿ ಕೃಷ್ಣಪ್ಪ, ವಿಎಸ್‌ಎಸ್‌ಎನ್ ಕಾರ್ಯನಿರ್ವಾಹಕರಾದ ನಂಗಲಿ ಸಿ.ಎಸ್.ಚಂದ್ರಶೇಖರ್ ಸುಬ್ರಹ್ಮಣ್ಯಂ, ಮಲ್ಲನಾಯಕನಹಳ್ಳಿ ಎನ್.ಶ್ರೀನಾಥ್, ಮಂಡಿಕಲ್ ಕೆ.ಎಂ.ಗೋಪಾಲ್, ಮಿಟ್ಟೂರು ಕೆ.ಶಂಕರಪ್ಪ, ಮೋತಕಪಲ್ಲಿ ಭಾಸ್ಕರ್ ಮತ್ತಿತರರು ಇದ್ದರು.

   

  ಹೆಣ್ಣು ಮಕ್ಕಳು ಮಾದರಿ: ಗೃಹಬಳಕೆ ವಸ್ತುಗಳನ್ನು ವಿಎಸ್‌ಎಸ್‌ಎನ್ ಮೂಲಕ ಬಡ್ಡಿ ರಹಿತವಾಗಿ ಕಡಿಮೆ ಬೆಲೆಗೆ ವಿತರಿಸಲಾಗುತ್ತಿದೆ. ಕಂತುಗಳ ರೀತಿಯಲ್ಲಿ ಮರುಪಾವತಿಗೆ ಅವಕಾಶ ಮಾಡಿದ್ದು, ಉಪಯೋಗ ಮಾಡಿಕೊಳ್ಳಬೇಕು. ಮಹಿಳೆಯರು ಮರುಪಾವತಿಯಲ್ಲಿ ಪ್ರಾಮಾಣಿಕತೆ ಮೆರೆದಿರುವುದರಿಂದ ಡಿಸಿಸಿ ಬ್ಯಾಂಕ್ ಲಾಭದಾಯಕವಾಗಿದೆ. ಪೋಲು ಮಾಡದೆ ಸ್ವಾವಲಂಬಿ ಜೀವನ ಸಾಗಿಸುವ ಹೆಣ್ಣು ಮಕ್ಕಳು ಮಾದರಿಯಾಗಿದ್ದು, ಇದನ್ನು ಮುಂದುವರಿಸಬೇಕು ಎಂದು ಗೋವಿಂದಗೌಡ ಹೇಳಿದರು.

  ರಾಜ್ಯೋತ್ಸವ ರಸಪ್ರಶ್ನೆ - 21

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts