More

    ದೌರ್ಜನ್ಯಕ್ಕೊಳಗಾದವರಿಗೆ ಶೀಘ್ರ ನ್ಯಾಯ ನೀಡಿ ; ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಸೂಚನೆ

    ತುಮಕೂರು: ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದವರ ಮೇಲಿನ ದೌರ್ಜನ್ಯ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕು, ದೌರ್ಜನ್ಯ ನಡೆದ ತಕ್ಷಣವೇ ಪ್ರಕರಣ ದಾಖಲಿಸಿಕೊಂಡು ಸಂತ್ರಸ್ತರಿಗೆ ಪರಿಹಾರ ಒದಗಿಸಬೇಕು ಮತ್ತು ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಸೂಕ್ತ ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಸೂಚಿಸಿದರು.

    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲಾ ಜಾಗೃತಿ ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜನಾಂಗದವರ ಮೇಲೆ ದೌರ್ಜನ್ಯ ನಡೆದ ತಕ್ಷಣವೇ ಸಂಬಂಧಿಸಿದ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ಪೊಲೀಸ್ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ನೊಂದ ಸಂತ್ರಸ್ತರಿಗೆ ಸೂಕ್ತ ರಕ್ಷಣೆ ಒದಗಿಸಲು ಕ್ರಮವಹಿಸಬೇಕು ಎಂದರು.

    ಜಿಲ್ಲೆಯಲ್ಲಿ 2021ರ ಫೆಬ್ರವರಿಯಿಂದ ಜುಲೈ ಅಂತ್ಯದವರೆಗೆ ನಡೆದ ದೌರ್ಜನ್ಯ ಪ್ರಕರಣಗಳಲ್ಲಿ ನೊಂದ ಪರಿಶಿಷ್ಟ ಜಾತಿಯ 37 ಪ್ರಕರಣಗಳ ಪೈಕಿ 76 ಸಂತ್ರಸ್ತರಿಗೆ ಸೂಕ್ತ ಪರಿಹಾರ ಒದಗಿಸಿದ್ದು, ಬಾಕಿ ಪ್ರಕರಣಗಳಲ್ಲಿಯೂ ಪರಿಹಾರ ಒದಗಿಸಬೇಕು ಎಂದು ನಿರ್ದೇಶಿಸಿದರು.

    ನಕಲಿ ಜಾತಿ ಪ್ರಮಾಣಪತ್ರ ಸೃಷ್ಟಿಸಿಕೊಂಡು ಪರಿಶಿಷ್ಟ ಜಾತಿ, ವರ್ಗದ ಸೌಲಭ್ಯ ಪಡೆದಿರುವ ಹಾಗೂ ನಕಲಿ ಪ್ರಮಾಣ ಪತ್ರದಿಂದ ಸೌಲಭ್ಯ ಪಡೆದಿರುವುದು ದಾಖಲೆಗಳಿಂದ ಸಾಬೀತಾದಲ್ಲಿ ಅಂತಹವರ ವಿರುದ್ಧ ಶಿಸ್ತು ಕ್ರಮಕೈಗೊಳ್ಳಬೇಕು. ದೌರ್ಜನ್ಯ ಪ್ರಕರಣಗಳನ್ನು ಕಾಲ ಕಾಲಕ್ಕೆ ಇತ್ಯರ್ಥ ಪಡಿಸುವ ಮೂಲಕ ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಸಿಗುವಂತಾಗಬೇಕು ಎಂದರು.

    ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರ ಮೇಲೆ ನಡೆದ ಕೆಲವು ದೌರ್ಜನ್ಯ ಪ್ರಕರಣಗಳನ್ನು ತಕ್ಷಣವೇ ದಾಖಲಿಸಿಕೊಳ್ಳುವುದಿಲ್ಲ. ಹಾಗಾಗಿ ಪ್ರಕರಣ ನಡೆದ ವಿಚಾರ ಗಮನಕ್ಕೆ ಬಂದ ಮರುಕ್ಷಣವೇ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಸಭೆಯಲ್ಲಿದ್ದ ಜಿಲ್ಲಾ ಜಾಗೃತಿ ಉಸ್ತುವಾರಿ ಸಮಿತಿ ಸಭೆಯ ಸದಸ್ಯರು ಮನವಿ ಮಾಡಿದರು.

    ಪಾರದರ್ಶಕವಾಗಿ ಸೌಲಭ್ಯ ತಲುಪಿಸಿ: ದೌರ್ಜನ್ಯ ನಡೆದ ತಕ್ಷಣವೇ ಪ್ರಕರಣ ದಾಖಲಿಕೊಂಡು ಮುಂದಿನ ಕ್ರಮ ಕೈಗೊಳ್ಳುವ ಕಾರ್ಯ ಸೂಕ್ತ ರೀತಿಯಲ್ಲಿ ನಡೆಯುತ್ತಿದೆ. ದಾಖಲಿಸಿಕೊಳ್ಳದ ದೌರ್ಜನ್ಯ ಪ್ರಕರಣಗಳನ್ನು ಗಮನಕ್ಕೆ ತಂದರೆ ಸೂಕ್ತ ಕ್ರಮ ವಹಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರವಾಡ್ ತಿಳಿಸಿದರು. ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ನಡೆಯುತ್ತಿರುವ ಅವ್ಯವಹಾರದ ಬಗ್ಗೆ ಸಭೆಯಲ್ಲಿ ಜಿಲ್ಲಾಧಿಕಾರಿ ಮಾತನಾಡಿ, ವಿವಿಧ ಸೌಲಭ್ಯಗಳ ವಿತರಣೆಯಲ್ಲಿ ಹಗರಣ ನಡೆದಿದೆ ಎನ್ನಲಾದ ಆರೋಪ ಕೇಳಿಬಂದಿದ್ದು, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ ವ್ಯಾಪ್ತಿಯಲ್ಲಿ ಅರ್ಹ ಫಲಾನುಭವಿಗಳಿಗೆ ಸೌಲಭ್ಯಗಳು ಪಾರದರ್ಶಕ ರೀತಿಯಲ್ಲಿ ದೊರೆಯುವಂತೆ ನೋಡಿಕೊಳ್ಳಬೇಕು ಎಂದರು. ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ, ಉಪವಿಭಾಗಾಧಿಕಾರಿ ಅಜಯ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪ್ರೇಮಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts