More

    ನ್ಯಾಯಸಮ್ಮತ ಚುನಾವಣೆಗೆ ಸಹಕಾರ ಕೋರಿದ ಡಿಸಿ

    ಚಿತ್ರದುರ್ಗ: ಅಕ್ರಮ ಮದ್ಯ ಸಾಗಣೆ ಸೇರಿ ವಿವಿಧ ಅಕ್ರಮಗಳನ್ನು ತಡೆಗಟ್ಟಿ, ನ್ಯಾಯ ಸಮ್ಮತ ವಿಧಾನಸಭಾ ಚುನಾವಣೆಗೆ ಸಹಕರಿಸುವಂತೆ ನೆರೆಯ ಆಂಧ್ರ ಪ್ರದೇಶ ರಾಜ್ಯದ ಅನಂತಪುರ ಜಿಲ್ಲೆ ಅಧಿಕಾರಿಗಳಿಗೆ ಡಿಸಿ ಜಿಆರ್‌ಜೆ ದಿವ್ಯಾಪ್ರಭು ಮನವಿ ಮಾಡಿದರು.

    ಚುನಾವಣೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮಗಳ ಕುರಿತು ಅನಂತಪುರ ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿ ಸೇರಿ ವಿವಿಧ ಅಧಿಕಾರಿಗಳೊಂದಿಗೆ ಶುಕ್ರವಾರ ನಡೆಸಿದ ವಿಡಿಯೊ ಸಂವಾದದಲ್ಲಿ ಮಾತನಾಡಿ, ಕರ್ನಾಟಕದಲ್ಲಿ ಶೀಘ್ರದಲ್ಲೇ ಚುನಾವಣೆ ಘೋಷಣೆಯಾಗಲಿದ್ದು, ಅಕ್ರಮಗಳ ತಡೆಗಾಗಿ ಜಿಲ್ಲಾದ್ಯಂತ ಅಂದಾಜು 35 ಚೆಕ್ ಪೋಸ್ಟ್ ಸ್ಥಾಪಿಸಲಾಗುವುದು ಎಂದರು.

    ಆಂಧ್ರಪ್ರದೇಶದೊಂದಿಗೆ ಜಿಲ್ಲೆಯ ಮೊಳಕಾಲ್ಮೂರು, ಚಳ್ಳಕೆರೆ ಹಾಗೂ ಹಿರಿಯೂರು ತಾಲೂಕುಗಳ ವ್ಯಾಪ್ತಿಯ ಅಂದಾಜು 150 ಕಿ.ಮೀ.ಗಡಿ ಪ್ರದೇಶವಿದ್ದು, ಚುನಾವಣೆ ಸಂದರ್ಭದಲ್ಲಿ ನಮ್ಮ ಜಿಲ್ಲೆಗೆ ಅಕ್ರಮವಾಗಿ ಮದ್ಯ, ವಿವಿಧ ಬಗೆಯ ಸಾಮಗ್ರಿಗಳ ಸಾಗಣೆ ಹಾಗೂ ಗೂಂಡಾಗಳು ಆಗಮಿಸಿ ಚುನಾವಣೆ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳಿವೆ.

    ಇಂತಹ ಅಕ್ರಮಗಳ ನಿಗಾ ಮತ್ತು ನಿಗ್ರಹಕ್ಕಾಗಿ ಗಡಿ ಭಾಗದ ಮೊಳಕಾಲ್ಮೂರು ತಾಲೂಕಿನ ಉಡೇವು, ಮಲ್ಲಸಮುದ್ರ, ಯದ್ದಲು ಬೊಮ್ಮನಹಟ್ಟಿ, ಪಾತಪ್ಪನಗುಡಿ, ಕಣಕುಪ್ಪೆ. ಚಳ್ಳಕೆರೆ ತಾಲೂಕಿನ ನಾಗಪ್ಪನಹಳ್ಳಿ ಗೇಟ್. ಹಿರಿಯೂರು ತಾಲೂಕಿನ ಖಂಡೇನಹಳ್ಳಿ ಹಾಗೂ ಪಿ.ಡಿ. ಕೋಟೆ ಕ್ರಾಸ್ ಸೇರಿ 8 ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗುವುದು.

    ಇದೇ ರೀತಿ ತಮ್ಮ ವ್ಯಾಪ್ತಿಯಲ್ಲೂ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿ ನಿಗಾ ವಹಿಸಬೇಕು. ಗಡಿ ಪ್ರದೇಶದಲ್ಲಿ ಗುರುತಿಸಿದ ರೌಡಿಶೀಟರ್‌ಗಳ ಮೇಲೆ ಹಾಗೂ ತಮ್ಮ ರಾಜ್ಯದ ಮತದಾರರರು, ನಮ್ಮ ಜಿಲ್ಲೆಯ ಮತಪಟ್ಟಿಗೆ ಹೆಸರು ಸೇರಿಸದಂತೆ ನಿಗಾ ವಹಿಸ ಬೇಕು. ಆಂಧ್ರಗಡಿಯಲ್ಲಿ ಮದ್ಯದ ಅಂಗಡಿಗಳಲ್ಲ್ಲಿ ಸರಾಸರಿಗಿಂತ ನಡೆಯುವ ಅಧಿಕ ವಹಿವಾಟನ್ನು ಗಮನಿಸಬೇಕೆಂದು ಕೋರಿದರು.

    ಅನಂತಪುರ ಜಿಲ್ಲಾಧಿಕಾರಿ ನಾಗಲಕ್ಷ್ಮೀ ಹಾಗೂ ಎಸ್‌ಪಿ ಡಾ.ಫಕೀರಪ್ಪ ಕಾಗಿನೆಲ್ಲಿ ಮಾತನಾಡಿ, ಚೆಕ್‌ಪೋಸ್ಟ್‌ಗಳ ಸ್ಥಾಪನೆಯೊಂದಿಗೆ ಅಕ್ರಮಗಳ ತಡೆಗೆ ಸಹಕರಿಸುವ ಭರವಸೆ ನೀಡಿದರು.

    ಚಿತ್ರದುರ್ಗ ಎಸ್‌ಪಿ ಕೆ.ಪರಶುರಾಮ್, ಅಗತ್ಯ ಮಾಹಿತಿ ವಿನಿಮಯ ಮಾಡಿಕೊಂಡರು. ಜಿಪಂ ಸಿ ಇಒ ಎಂ.ಎಸ್.ದಿವಾಕರ್, ಎಡಿಸಿ ಟಿ.ಜವರೇಗೌಡ, ಅಬಕಾರಿ ಡಿಸಿ ಡಾ.ಮಾದೇಶ್, ಕೃಷಿ ಇಲಾಖೆ ಜೆಡಿ ಪಿ.ರಮೇಶ್‌ಕುಮಾರ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts