More

    ಜಿಲ್ಲಾಧಿಕಾರಿಗಳೇ ನಮ್ಮೂರಿಗೂ ಬನ್ನಿ! ಅಧಿಕಾರಿಗಳ ಆಗಮನದ ನಿರೀಕ್ಷೆಯಲ್ಲಿ ಗ್ರಾಮಸ್ಥರು

    ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ: ದೊಡ್ಡಬಳ್ಳಾಪುರ ತಾಲೂಕು ಸಾಸಲು ಹೋಬಳಿಯ ಹೊಸಹಳ್ಳಿಯಲ್ಲಿ್ಲ ಶನಿವಾರ ನಡೆದ ಜಿಲ್ಲಾಧಿಕಾರಿ ನಡಿಗೆ ಹಳ್ಳಿ ಕಡೆಗೆ ಕಾರ್ಯಕ್ರಮದ ಅಭೂತ ಯಶಸ್ಸಿನ ಬಳಿಕ ಜಿಲ್ಲೆಯಾದ್ಯಂತ ಜಿಲ್ಲಾಧಿಕಾರಿಗಳೇ ನಮ್ಮೂರಿಗೂ ಬನ್ನಿ ಎಂಬ ಗ್ರಾಮಸ್ಥರ ಒತ್ತಾಯ ಸಮೂಹ ಸನ್ನಿಯಂತಾಗಿದೆ.

    ಕಂದಾಯ ಇಲಾಖೆಯ ಸಣ್ಣಪುಟ್ಟ ಕೆಲಸಕ್ಕೂ ವರ್ಷಗಟ್ಟಲೇ ಚಪ್ಪಲಿ ಸವೆಸಿದ್ದ ಗ್ರಾಮಸ್ಥರು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಿಂದ ಉತ್ತೇಜಿತರಾಗಿದ್ದಾರೆ. ಅಧಿಕಾರಿಗಳನ್ನು ಹುಡುಕಿಕೊಂಡು ಹೋಗಿ ಸಲಾಮ್ ಹೊಡೆದರೂ ಯಾವುದೇ ಕೆಲಸವಾಗಲ್ಲ, ಆದರೆ ಅಧಿಕಾರಿಗಳೇ ಮನೆ ಬಾಗಿಲಿಗೆ ಬಂದು ಸ್ಥಳದಲ್ಲೇ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುತ್ತಿರುವುದು ಗ್ರಾಮೀಣರಿಗೆ ಇದು ಕನಸೋ ನನಸೋ ಎಂಬಂತಾಗಿದೆ. ಇದೇ ರೀತಿ ಎಲ್ಲ ಗ್ರಾಮಗಳಲ್ಲೂ ಅಧಿಕಾರಿಗಳೇ ವಾಸ್ತವ್ಯ ಹೂಡಿದರೆ ನಮ್ಮೆಲ್ಲ ಕೆಲಸಗಳು ಸರಾಗವಾಗುತ್ತವೆ, ವರ್ಷಗಟ್ಟಲೇ ಕಾದು ಕೆಲಸವಾಗದೆ ಕೈಚೆಲ್ಲಿ ಕುಳಿತಿದ್ದವರಿಗೆ ಈ ಕಾರ್ಯಕ್ರಮ ಟಾನಿಕ್ ನೀಡಿದಂತಾಗಿದೆ.

    ಕಟ್ಟಿಕೊಂಡಿದ್ದ ಮೋರಿಗಳಿಗೂ ಮುಕ್ತಿ: ಹೊಸಹಳ್ಳಿಯಲ್ಲಿ ಕಾರ್ಯಕ್ರಮ ನಿಗದಿಯಾಗುತ್ತಿದ್ದಂತೆ ಇಡೀ ಗ್ರಾಮದ ಚಿತ್ರಣವೇ ಬದಲಾಗಿದೆ. ವರ್ಷಗಳಿಂದ ಕಟ್ಟಿಕೊಂಡಿದ್ದ ಮೋರಿಗಳಲ್ಲಿ ನೀರು ಹರಿಯುತ್ತಿದೆ. ವಿವಿಧ ಇಲಾಖೆಯ ಅನೇಕ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಮೂಲಸೌಕರ್ಯ ಕೊರತೆ ಪಟ್ಟಿ ಮಾಡತೊಡಗಿದ್ದರು. ಜನರನ್ನು ಭೇಟಿ ಮಾಡಿ ಸಮಸ್ಯೆಗಳನ್ನು ಕಣ್ಣಾರೆ ಕಂಡು ಪರಿಹಾರಕ್ಕೆ ಮುಂದಾಗಿದ್ದರು. ಮುಖ್ಯವಾಗಿ ಕುಡಿವ ನೀರು, ರಸ್ತೆ ಇಕ್ಕೆಲಗಳ ದುರಸ್ತಿ ಸೇರಿ ಗ್ರಾಮದಲ್ಲಿನ ಅನೈರ್ಮಲ್ಯ ನಿವಾರಣೆಗೆ ಬೆವರು ಹರಿಸತೊಡಗಿದ್ದರು. ಗ್ರಾಮಸ್ಥರಿಗೂ ಸಹ ಇದು ಸೋಜಿಗದಂತೆ ಭಾಸವಾಗಿತ್ತು.

    ಹಬ್ಬದ ಸಂಭ್ರಮ: ಕಂದಾಯ ಸಚಿವರನ್ನೊಳಗೊಂಡ ಅಧಿಕಾರಿಗಳ ತಂಡ ಗ್ರಾಮಕ್ಕೆ ಆಗಮಿಸುತ್ತದೆ ಎಂಬ ಕಾರಣಕ್ಕೆ ಗ್ರಾಮದಲ್ಲಿ ಅಧಿಕಾರಿಗಳು ಹಬ್ಬದ ವಾತಾವರಣ ನಿರ್ವಿುಸಿದ್ದರು. ಸಣ್ಣಪುಟ್ಟ ಸಮಸ್ಯೆಗಳನ್ನು ಆಗಲೇ ಬಗೆಹರಿಸಿ ಸಚಿವರ ಮುಂದೆ ಆದಷ್ಟು ಸಮಸ್ಯೆಗಳು ಬರದಂತೆ ಮುಂಜಾಗ್ರತೆ ವಹಿಸಿದ್ದರು. ಕಂದಾಯ ಇಲಾಖೆಗೆ ಸಂಬಂಧಪಟ್ಟ ಕೆಲವೊಂದು ದಾಖಲೆಗಳಿಗೆ ವರ್ಷಗಟ್ಟಲೆ ಅಲೆದಾಡಿದ್ದ ಗ್ರಾಮಸ್ಥರಿಗೆ ಸಚಿವರ ಭೇಟಿಗೂ ಮುನ್ನವೇ ಮನೆಮನೆಗೆ ತಲುಪಿಸುವ ಕೆಲಸವಾಗಿತ್ತು. ಇದೆಲ್ಲವನ್ನು ಕಂಡ ಗ್ರಾಮಸ್ಥರು ಸರ್ಕಾರದ ವಿನೂತನ ಕಾರ್ಯಕ್ರಮಕ್ಕೆ ಅದ್ದೂರಿ ಸ್ವಾಗತವನ್ನೇ ಕೋರಿದ್ದರು. ಇದೆಲ್ಲ ಬೆಳವಣಿಗೆ ಜಿಲ್ಲೆಯಾದ್ಯಂತ ಮಿಂಚಿನ ಸಂಚಾರದಂತೆ ಹರಡುತ್ತಿದ್ದು, ಪ್ರತಿ ಗ್ರಾಮದಲ್ಲೂ ಇಂಥದ್ದೇ ಸಂದರ್ಭ ಒದಗಿಬಂದರೆ ಹೇಗೆ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಮುಂದಿನ ಬಾರಿಯಾದರೂ ನಮ್ಮ ಗ್ರಾಮದ ಕಡೆ ಬರಬಾರದೆ, ನಮ್ಮ ಗ್ರಾಮವನ್ನೇ ಆಯ್ಕೆ ಮಾಡಬಾರದೆ ಎಂಬ ನಿರೀಕ್ಷೆಗಳು ಕಂಡುಬರುತ್ತಿವೆ.

    ಹೋಬಳಿವಾರು ಆಯ್ಕೆ ಒಳಿತು: ಸರ್ಕಾರದ ಯೋಜನೆಗಳನ್ನು ಮನೆಬಾಗಿಲಿಗೆ ತಲುಪಿಸುವ ಮಹತ್ವಾಕಾಂಕ್ಷಿ ಯೋಜನೆಯಾದ ಜಿಲ್ಲಾಧಿಕಾರಿ ನಡಿಗೆ ಹಳ್ಳಿ ಕಡೆಗೆ ಕಾರ್ಯಕ್ರಮವನ್ನು ಪ್ರತಿ ತಿಂಗಳ ಮೂರನೇ ಶನಿವಾರಕ್ಕೆ ಸೀಮಿತಗೊಳಿಸಿದೆ. ಅಲ್ಲದೆ ಒಂದೊಂದೆ ಗ್ರಾಮ ಆಯ್ಕೆ ಮಾಡಿಕೊಳ್ಳುತ್ತಿದೆ. ಇದರ ಬದಲು ಹೋಬಳಿವಾರು ಹಮ್ಮಿಕೊಂಡರೆ ಸಾಕಷ್ಟು ಗ್ರಾಮದ ಸಾವಿರಾರು ಜನರಿಗೆ ಅನುಕೂಲವಾಗಲಿದೆ ಎಂಬ ವಾದ ಕೇಳಿಬರುತ್ತಿದೆ. ಜಿಲ್ಲೆಯಲ್ಲಿ 105 ಪಂಚಾಯಿತಿಗಳಿವೆ, ಒಂದೊಂದೇ ಗ್ರಾಮ ಆಯ್ಕೆ ಮಾಡಿಕೊಳ್ಳುವುದಕ್ಕಿಂತ ಪಂಚಾಯಿತಿವಾರು ಇಂತಿಷ್ಟು ಗ್ರಾಮಗಳನ್ನು ಆಯ್ಕೆ ಮಾಡಿ ಈ ಯೋಜನೆ ಸಾಕಾರಗೊಳಿಸುವ ಪ್ರಯತ್ನವಾಗಬೇಕು ಎಂಬ ಒತ್ತಾಯವೂ ಕೇಳಿಬರುತ್ತಿದೆ.

    ಸರ್ಕಾರದ ವಿನೂತನ ಪ್ರಯತ್ನ ನಿಜಕ್ಕೂ ಶ್ಲಾಘನೀಯ ದೊಡ್ಡಬಳ್ಳಾಪುರದ ಹೊಸಹಳ್ಳಿಯಲ್ಲಿ ನಡೆದ ಕಾರ್ಯಕ್ರಮದ ವರದಿ ಗಮನಿಸಿ ನಮ್ಮ ಗ್ರಾಮಕ್ಕೂ ಅಧಿಕಾರಿಗಳು ಬರಬಾರದೆ ಎನಿಸಿದೆ. ಕಚೇರಿಗಳಲ್ಲಿ ಅಧಿಕಾರಿಗಳನ್ನು ಮಾತನಾಡಿಸುವುದೇ ಕಷ್ಟ, ಆದರೆ ಇಲ್ಲಿ ಅಧಿಕಾರಿಗಳೇ ಬಂದು ನಮ್ಮನ್ನು ಮಾತನಾಡಿಸುತ್ತಾರೆ ಎಂಬುದೇ ದೊಡ್ಡ ಸೌಭಾಗ್ಯ.

    | ಕೃಷ್ಣಪ್ಪ, ಮುಗಬಾಳ ಪಂಚಾಯಿತಿ, ಹೊಸಕೋಟೆ

    ಈ ರೀತಿಯ ಯೋಜನೆಯಿಂದಾದರೂ ನಮ್ಮ ಗ್ರಾಮಗಳು ಉದ್ಧಾರವಾಗುವಂತಾಗಲಿ, ಗ್ರಾಮೀಣ ಜನರ ಅಲೆದಾಟ ತಪ್ಪಲಿ, ಅಧಿಕಾರಿಗಳು ಈ ಮೂಲಕವಾದರೂ ಜನರ ಸಮಸ್ಯೆಗೆ ತಕ್ಷಣ ಸ್ಪಂದಿಸುವಂತಾಗಲಿ, ನಮ್ಮ ಕಡೆಗೂ ಅಧಿಕಾರಿಗಳು ದಯಮಾಡಲಿ.

    | ರವೀಂದ್ರ, ಸೋಲದೇವನಹಳ್ಳಿ, ನೆಲಮಂಗಲ ತಾಲೂಕು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts