More

    ತಟ್ಟೆ, ಲೋಟ ಬಡಿದು ಕೆಎಸ್‌ಆರ್‌ಟಿಸಿ ನೌಕರರ ಹೋರಾಟ

    ಶಿವಮೊಗ್ಗ: ಆರನೇ ವೇತನ ಆಯೋಗ ಜಾರಿಗೊಳಿಸುವಂತೆ ಆಗ್ರಹಿಸಿ ಕೆಎಸ್‌ಆರ್‌ಟಿಸಿ ಬಸ್ ನೌಕರರು ಆರನೇ ದಿನವೂ ಮುಷ್ಕರ ನಡೆಸಿದರು. ಈ ನಡುವೆ ನೌಕರರ ಕೂಟದ ಜಿಲ್ಲಾ ಘಟಕದಿಂದ ಪದಾಧಿಕಾರಿಗಳು ಸೋಮವಾರ ಡಿಸಿ ಕಚೇರಿ ಮುಂದೆ ಕುಟುಂಬ ಸಮೇತರಾಗಿ ತಟ್ಟೆ, ಲೋಟ ಬಡಿಯುವ ಮೂಲಕ ಪ್ರತಿಭಟನೆ ನಡೆಸಿದರು.
    ಕಳೆದ ಆರು ದಿನಗಳಿಂದ ಬಸ್ ಸಂಚಾರ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸುತ್ತಿದ್ದರೂ ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ. ಮುಷ್ಕರ ನಿರತರನ್ನು ಕರೆದು ಮಾತುಕತೆ ನಡೆಸುವ ಸೌಜನ್ಯವನ್ನೂ ತೋರುತ್ತಿಲ್ಲ ಎಂದು ಕುಟುಂಬಸ್ಥರು ಅಸಮಾಧಾನ ವ್ಯಕ್ತಪಡಿಸಿದರು.
    ಬೇಡಿಕೆ ಈಡೇರಿಸುವ ಬದಲಾಗಿ ನೌಕರರ ಮೇಲೆ ದೌರ್ಜನ್ಯ ನಡೆಸುವ ರೀತಿಯಲ್ಲಿ ವರ್ಗಾವಣೆ, ಕೆಲಸದಿಂದ ವಜಾ ಮಾಡುವ ನಿರ್ಧಾರ ಸರ್ಕಾರ ಕೈಗೊಳ್ಳುತ್ತಿದೆ. ಇಂತಹ ಬೆದರಿಕೆಗಳಿಗೆ ಹೆದರುವುದಿಲ್ಲ. ಇಂದಿನ ಬೆಲೆ ಏರಿಕೆಯಲ್ಲಿ ನೌಕರರ ಅಳಿವು-ಉಳಿವಿನ ಪ್ರಶ್ನೆ ಎದುರಾಗಿದೆ. ಎಲ್ಲ ಬೆಲೆಗಳು ಗಗನಕ್ಕೆ ಏರುತ್ತಿರುವುದರಿಂದ ಜೀವನ ನಿರ್ವಹಣೆ ಕಷ್ಟವಾಗುತ್ತಿದೆ. ಇದರಿಂದ ಸರ್ಕಾರ ಬೇಡಿಕೆಗೆ ಮನ್ನಣೆ ನೀಡಬೇಕು. 6ನೇ ವೇತನ ಆಯೋಗ ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.
    ಕೆಎಸ್‌ಆರ್‌ಟಿಸಿಯ ಕೆಲ ಅಧಿಕಾರಿಗಳು ಪ್ರತಿಭಟನಾನಿರತ ವೇಳೆ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದನ್ನು ಗಮನಿಸಿದ ನೌಕರರು ಆಕ್ರೋಶಗೊಂಡರು. ಕೂಟದ ರಾಜ್ಯ ಕಾರ್ಯದರ್ಶಿ ಸಂತೋಷ್‌ಕುಮಾರ್, ಪದಾಧಿಕಾರಿಗಳಾದ ಶ್ರೀನಿವಾಸ್, ಶಿವಕುಮಾರ್, ದೇವರಾಜ್, ಬಸವರಾಜ್, ಪರಶುರಾಮ್ ಸೇರಿ ಅವರ ಮಕ್ಕಳು, ಪತ್ನಿಯರು, ಪಾಲಕರು, ಪೋಷಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts