More

    ಎ+ ಶ್ರೇಣಿಯಲ್ಲಿ ಉತ್ತೀರ್ಣರಾಗಲು ಪಣತೊಡಿ : ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿ ಆರ್.ಲತಾ ಕಿವಿಮಾತು

    ಚಿಕ್ಕಬಳ್ಳಾಪುರ : ಕಠಿಣ ಅಭ್ಯಾಸ ಮಾಡಿ ಪರೀಕ್ಷೆಯಲ್ಲಿ ಎ+ ಶ್ರೇಣಿಯಲ್ಲಿ ಉತ್ತೀರ್ಣರಾಗುವ ಮೂಲಕ ಜ್ಞಾನ ವೃದ್ಧಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಆರ್.ಲತಾ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

    ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಗುರುವಾರ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಪೂರ್ವ ಸಿದ್ಧತೆ ಕುರಿತು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ಎಲ್ಲರನ್ನೂ ಉತ್ತೀರ್ಣಗೊಳಿಸಲಾಗುತ್ತದೆ ಎಂಬ ಭಾವನೆಯಲ್ಲಿ ವಿದ್ಯಾರ್ಥಿಗಳು ಪೂರ್ವ ಅಭ್ಯಾಸದಲ್ಲಿ ನಿರ್ಲಕ್ಷ್ಯ ವಹಿಸಬಾರದು. ಈಗಾಗಲೇ ಪರೀಕ್ಷೆಯನ್ನು 2021ರ ಜುಲೈನ 3ನೇ ವಾರದಲ್ಲಿ ನಡೆಸುವುದರ ಬಗ್ಗೆ ಶಿಕ್ಷಣ ಸಚಿವರು ತಿಳಿಸಿದ್ದು ಇದಕ್ಕೆ ಜಿಲ್ಲೆಯ ಮಕ್ಕಳನ್ನು ಸಜ್ಜುಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

    ಪ್ರಸಕ್ತ ಸಾಲಿನಲ್ಲಿ 17,002 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ. ಪರೀಕ್ಷೆ ಬರೆದ ಎಲ್ಲ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಲಾಗುತ್ತದೆ. ಆದರೂ ವಿದ್ಯಾರ್ಥಿಗಳು ಸಮರ್ಪಕವಾಗಿ ಪರೀಕ್ಷಾ ಪೂರ್ವ ಅಭ್ಯಾಸ ಮಾಡಬೇಕು ಎಂದರು. ಪ್ರತಿ ಮಕ್ಕಳ ಓದುವಿಕೆ ಮತ್ತು ಅಭ್ಯಾಸದ ವೈಖರಿಯನ್ನು ಕಾಲಕಾಲಕ್ಕೆ ಪರಿಶೀಲಿಸಿ ಸೂಕ್ತ ಮಾರ್ಗದರ್ಶನ ನೀಡಬೇಕು. ಈ ನಿಟ್ಟಿನಲ್ಲಿ ಶಿಕ್ಷಕರು ಪ್ರಾಮಾಣಿಕವಾಗಿ ಶ್ರಮಿಸಬೇಕು. ಹಾಗೆಯೇ ಸಂಬಂಧಪಟ್ಟ ಮೇಲಧಿಕಾರಿಗಳು ನಿಗಾವಹಿಸಬೇಕು ಎಂದರು.

    1 ಡೆಸ್ಕ್ ಗೆ ಒಬ್ಬ ವಿದ್ಯಾರ್ಥಿಗೆ ಅವಕಾಶ ಕಲ್ಪಿಸಿದ್ದು ಕೊಠಡಿಗೆ ಕುಡಿಯುವ ನೀರು, ಗಂಡು ಮತ್ತು ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಾಲಯ, ಹೆಲ್ಪ್ ಡೆಸ್ಕ್, ಸ್ಯಾನಿಟೈಸರ್, ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಸೇರಿ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕು ಎಂದರು. ಯಾವುದೇ ವಿದ್ಯಾರ್ಥಿಯೂ ಗೈರಾಗದೆ ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸುವಂತಾಗಬೇಕು. ಇದಕ್ಕೆ ಶಿಕ್ಷಣ ಇಲಾಖೆಯೂ ಧೈರ್ಯ ತುಂಬಬೇಕು ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸಂಯೋಜನಾಧಿಕಾರಿಗಳು ಮತ್ತಿತರರು ಇದ್ದರು.

    2 ದಿನಗಳ ಪರೀಕ್ಷೆ ಎರಡೇ ಪೇಪರ್ : ಮೊದಲ ದಿನ ಭಾಷಾ ವಿಷಯಗಳು (ಪ್ರಥಮ ಭಾಷೆ, ದ್ವಿತೀಯ ಭಾಷೆ, ತೃತೀಯ ಭಾಷೆ) ಮತ್ತು ಎರಡನೇ ದಿನ ಕೋರ್ ವಿಷಯಗಳಲ್ಲಿ ( ಗಣಿತ, ವಿಜ್ಞಾನ, ಸಮಾಜ ವಿಜ್ಞಾನ) ಪರೀಕ್ಷೆ ನಡೆಯಲಿದೆ. ಪ್ರತಿ ವಿಷಯಕ್ಕೆ 40 ಅಂಕಗಳ ಬಹು ಆಯ್ಕೆ ಪ್ರಶ್ನೆಗಳಿದ್ದು, ಭಾಷಾ ವಿಷಯಗಳ ಪ್ರಶ್ನೆ ಪತ್ರಿಕೆಯು 120 ಅಂಕಗಳನ್ನು ಒಳಗೊಂಡಿರುತ್ತದೆ. ಒಂದು ಪ್ರಶ್ನೆಗೆ ಒಂದು ಅಂಕ ನಿಗದಿಪಡಿಸಿದ್ದ ಪರೀಕ್ಷಾ ಅವಧಿ-3 ಗಂಟೆ ಇರುತ್ತದೆ. ಪ್ರಶ್ನೆ ಪತ್ರಿಕೆಗಳು ಬಹು ಅಂಶ ಮಾದರಿ ಮತ್ತು ಸರಳ ನೇರ ಮಾದರಿ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಪ್ರತಿ ವಿಷಯಕ್ಕೂ ಸಂಬಂಧಿಸಿದಂತೆ ಪ್ರತ್ಯೇಕ ಒಎಂಆರ್ ಶೀಟ್ ಇದ್ದು, ಒಂದು ಪರೀಕ್ಷಾ ಕೊಠಡಿಯಲ್ಲಿ ಕನಿಷ್ಠ 12 ವಿದ್ಯಾರ್ಥಿಗಳನ್ನು ಕೂರಿಸಲಾಗುತ್ತದೆ. ಇದಕ್ಕೆ 6 ಅಡಿ ಅಂತರವಿರುವಂತೆ ಆಸನ ವ್ಯವಸ್ಥೆ ಮಾಡಲಾಗುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಕೆ.ಎಂ.ಜಯರಾಮರೆಡ್ಡಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts