More

    ಅಧಿಕಾರಿಗಳ ಅಶಿಸ್ತಿಗೆ ಡಿಸಿ ಗರಂ

     ಕೋಲಾರ: ತಹಸೀಲ್ದಾರ್ ಕಚೇರಿ ಅವರಣದಲ್ಲಿ ಶಿಸ್ತು ಪಾಲನೆ ಹಾಗೂ ಕಚೇರಿಗಳಲ್ಲಿ ಸ್ವಚ್ಛತೆ ಕಾಪಾಡುವುದರಲ್ಲಿ ಅಧಿಕಾರಿಗಳು ಅಶಿಸ್ತು ಪ್ರದರ್ಶಿಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಅಕ್ರಂಪಾಷಾ ಗರಂ ಆದರು.

    ಪಟ್ಟಣದಲ್ಲಿ ಶುಕ್ರವಾರ ವಿವಿಧ ಕಾಮಗಾರಿಗಳ ಪರಿಶೀಲನೆ ನಡೆಸಿ, ಪಶುಪಾಲನ ಕಚೇರಿ, ತಹಸೀಲ್ದಾರ್ ಕಚೇರಿ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಾತನಾಡಿದರು.

    ತಹಸೀಲ್ದಾರ್ ಕಚೇರಿ ಆವರಣದಲ್ಲಿ ಹೆಚ್ಚಿನ ಸಾರ್ವಜನಿಕರು ಓಡಾಡುತ್ತಿದ್ದನ್ನು ಗಮನಿಸಿ, ಕಚೇರಿಯಲ್ಲಿ ಸಾರ್ವಜನಿಕರ ಅರ್ಜಿಗಳನ್ನು ಸ್ವೀಕರಿಸಲು ಇನ್ನು ಎರಡು ಪ್ರತ್ಯೇಕ ಕೌಂಟರ್‌ಗಳನ್ನು ತೆರೆಯಲು ಸೂಚಿಸಿದರು. ಸಾರ್ವಜನಿಕರ ಅರ್ಜಿಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಬೇಕು ಎಂದು ತಿಳಿಸಿದರು.

    ಕಚೇರಿ ಆವರಣದಲ್ಲಿ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸಿರುವುದನ್ನು ಕಂಡು ಬೇಸರ ವ್ಯಕ್ತಪಡಿಸಿದ ಅವರು, ದ್ವಿಚಕ್ರವಾಹನಗಳನ್ನು ಸರದಿ ಸಾಲಿನಲ್ಲಿ ನಿಲ್ಲಿಸುವಂತೆ ತಿಳಿಸಿದರು. ಅಧಿಕಾರಿಗಳ ಕಾರುಗಳನ್ನು ಹೊರತುಪಡಿಸಿ ಬೇರೆ ಯಾವುದೇ ಕಾರುಗಳನ್ನು ಇಲ್ಲಿ ನಿಲ್ಲಿಸದಂತೆ ನೋಡಿಕೊಳ್ಳಬೇಕು. ಅದಕ್ಕಾಗಿ ಹೋಂಗಾರ್ಡ್‌ಅನ್ನು ನೇಮಿಸಲು ಅಧಿಕಾರಿಗೆ ಸೂಚಿಸಿದರು.

    ಇದೇ ವೇಳೆ ಪಶುಪಾಲನಾ ಇಲಾಖೆ ಕಚೇರಿಗೆ ಭೇಟಿ ನೀಡಿದ ವೇಳೆ ಪಶುಪಾಲನಾ ಅಧಿಕಾರಿ, ಇಲಾಖೆ ಪ್ರವೇಶಕ್ಕೆ ಅಡ್ಡಿಯಾಗಿರುವ ಸಾರ್ವಜನಿಕ ಶೌಚಗೃಹ ತೆರವಿಗೆ ಮನವಿ ಮಾಡಿದರು. ಶೌಚಗೃಹ ಶಿಥಿಲಾವಸ್ಥೆಯಲ್ಲಿ ಇರುವುದರಿಂದ ಬೇರೆಡೆಗೆ ಸ್ಥಳಾಂತರ ಮಾಡಲು ಸೂಚಿಸಿದರು.
    ಪೊಲೀಸ್ ಅಧಿಕಾರಿಯೊಂದಿಗೆ ವಾತನಾಡಿ, ಅಪಘಾತಕ್ಕೆ ಒಳಗಾದ ಹಾಗೂ ಇತರ ಪ್ರಕರಣಗಳಿಗೆ ಸಂಬಂಧಿಸಿದ ವಾಹನಗಳನ್ನು ತೆರವುಗೊಳಿಸಬೇಕು. ತಹಸೀಲ್ದಾರ್ ಕಚೇರಿ ಮುಂಭಾಗದಲ್ಲಿರುವ ಅಂಬೇಡ್ಕರ್ ಪಾರ್ಕ್‌ನಲ್ಲಿ ಸ್ವಚ್ಛತೆ ಕಾಪಾಡಬೇಕು ಎಂದು ಹೇಳಿದರು.  ತಹಸೀಲ್ದಾರ್ ಜಿ.ಎನ್.ಸುಧೀಂದ್ರ, ವೃತ್ತ ನಿರೀಕ್ಷಕ ಎಂ.ಬಿ.ಮೆಹಬೂಬ್ ಗೊರವನಕೊಳ್ಳ, ಪಶುಪಾಲನ ಸಹಾಯಕ ನಿರ್ದೇಶಕ ಮಂಜುನಾಥರೆಡ್ಡಿ, ಡಾ.ವಿಶ್ವನಾಥ್, ಉಪ ತಹಸೀಲ್ದಾರ್ ಕೆ.ಎಲ್.ಜಯರಾಮ್, ಶಿರಸ್ತೇದಾರ್ ಬಲರಾಮಚಂದ್ರೇಗೌಡ, ಆರ್‌ಐ ಮುನಿರೆಡ್ಡಿ, ಪುರಸಭೆ ಇಂಜಿನಿಯರ್ ಶ್ರೀನಿವಾಸ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts