More

    ಹೊಸಬರಿಗೆಲ್ಲ ಸಿಗಲಿದೆ ಗುರುತಿನ ಚೀಟಿ: ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಮಾಹಿತಿ

    ಮಂಡ್ಯ: ಹೊಸದಾಗಿ ನೋಂದಣಿ ಮಾಡಿಕೊಂಡು ಮತದಾರರ ಪಟ್ಟಿಗೆ ಸೇರ್ಪಡೆಯಾಗಿರುವ ಯುವ ಮತದಾರರಿಗೆಲ್ಲ ಇನ್ನೆರಡು ದಿನದಲ್ಲಿ ಗುರುತಿನ ಚೀಟಿ ತಲುಪಲಿದೆ ಎಂದು ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಮಾಹಿತಿ ನೀಡಿದರು.
    ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 1,03,734 ಮತದಾರರ ಗುರುತಿನ ಚೀಟಿ ಮುದ್ರಿಸಿ ಅಂಚೆ ಮೂಲಕ ವಿತರಿಸಲಾಗಿದೆ. ಅಂತೆಯೇ ಬಾಕಿಯಿದ್ದ ಎಫಿಕ್ ಕಾರ್ಡ್‌ಗಳು ಮೇ.1ರಂದು ಜಿಲ್ಲೆಗೆ ಪೂರೈಕೆಯಾಗಿದೆ. ಅದರಂತೆ ಅಂಚೆ ಮೂಲಕ ಅರ್ಹ ಮತದಾರರ ಮನೆಗೆ ತಲುಪಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಿದರು.
    ಜಿಲ್ಲೆಯಲ್ಲಿ 900 ಮತಗಟ್ಟೆಗಳಲ್ಲಿ ಮತದಾನದ ದಿನ ವೆಬ್ಕ್ಯಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ. 429 ಮತಗಟ್ಟೆಗಳಿಗೆ ಮೈಕ್ರೋ ಅಬ್ಸರ್‌ವರ್‌ಗಳನ್ನು ನೇಮಕ ಮಾಡಲಾಗಿದೆ. ನಮೂನೆ 12 ಡಿ ರಲ್ಲಿ ಮತ ಚಲಾಯಿಸಲು ಅರ್ಜಿ ಸಲ್ಲಿಸಿದ ಅಗತ್ಯ ಸೇವೆಯಡಿ ಕಾರ್ಯ ನಿರ್ವಹಿಸುತ್ತಿರುವ 280 ಅರ್ಹ ಮತದಾರರು ಹಾಗೂ ಮತದಾನದ ದಿನಾಂಕದಂದು ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಸಿಬ್ಬಂದಿಗೆ ಮೇ.2, 3 ಹಾಗೂ 4 ರಂದು ಆಯಾ ಕ್ಷೇತ್ರದ ಚುನಾವಣಾಧಿಕಾರಿ ಕಚೇರಿಯಲ್ಲಿ ಅಂಚೆ ಮತಪತ್ರದ ಮೂಲಕ ಮತದಾನ ಮಾಡಲು ಮತಕೇಂದ್ರವನ್ನು ತೆರೆಯಲಾಗಿದೆ. ಮೇ.3 ರಿಂದ 5ರವರೆಗೆ ಮನೆಯಲ್ಲೇ ಮತದಾನ ಪ್ರಕ್ರಿಯೆ ನಡೆಯಲಿದೆ. ಜಿಲ್ಲೆಯಲ್ಲಿ 2630 ಜನ 80 ವರ್ಷ ಮೇಲ್ಪಟ್ಟವರು ಹಾಗೂ 778 ಅಂಗವಿಕಲರು ಮನೆಯಿಂದಲೇ ಮತದಾನ ಮಾಡಲಿದ್ದಾರೆ. ಇದಕ್ಕಾಗಿ 59 ತಂಡ ನಿಯೋಜಿಸಲಾಗಿದೆ ಎಂದು ವಿವರಿಸಿದರು.
    ಮತದಾನ ಮಾಡಿ ಪ್ರವಾಸಕ್ಕೆ ಬನ್ನಿ: ಚುನಾವಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗಬೇಕೆಂಬ ಸದುದ್ದೇಶದಿಂದ ಮೇ.10ರಂದು ಜಿಲ್ಲೆಯ ಪ್ರವಾಸಿತಾಣಗಳಿಗೆ ನಿರ್ಬಂಧ ವಿಧಿಸುವ ಬಗ್ಗೆ ಚಿಂತನೆ ಮಾಡಲಾಗುತ್ತಿದೆ ಎಂದು ಡಿಸಿ ಡಾ.ಎಚ್.ಎನ್.ಗೋಪಾಲಕೃಷ್ಣ ಹೇಳಿದರು.
    ಅರ್ಹ ಮತದಾರರು ಮತದಾನ ಮಾಡಿ ಜಿಲ್ಲೆಯಲ್ಲಿ ಪ್ರಮುಖ ಪ್ರವಾಸಿ ತಾಣಗಳಾದ ಕೆಆರ್‌ಎಸ್, ರಂಗನತಿಟ್ಟು, ಮುತ್ತತ್ತಿ, ಶಿವನಸಮುದ್ರಕ್ಕೆ ಬನ್ನಿ. ಇಲ್ಲದಿದ್ದರೆ ನಿರ್ಬಂಧವಿರಲಿದೆ. ಚುನಾವಣೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮೇ.8ರ ಸಂಜೆ 5ಗಂಟೆಯಿಂದ 11ರ ಬೆಳಗ್ಗೆ 10ಗಂಟೆವರೆಗೆ ಹಾಗೂ ಮತ ಎಣಿಕೆಯ ದಿನವಾದ 13ರಂದು ಬೆಳಗ್ಗೆ 6ಗಂಟೆಯಿಂದ 14ರ ಬೆಳಗ್ಗೆ 10ಗಂಟೆವರೆಗೆ ಜಿಲ್ಲಾದ್ಯಂತ ಎಲ್ಲ ತರಹದ ಮದ್ಯದಂಗಡಿ, ಬಾರ್ ಆ್ಯಂಡ್ ರೆಸ್ಟೋರೆಂಟ್/ಕ್ಲಬ್ಗಳನ್ನು ಮುಚ್ಚುವಂತೆ ಹಾಗೂ ಮದ್ಯ ಮಾರಾಟ, ಸಾಗಾಣಿಕೆ ಮತ್ತು ಶೇಖರಣೆಯನ್ನು ನಿಷೇಧಿಸಲಾಗಿದೆ. ಮೇ.10ರಂದು ಜಿಲ್ಲಾದ್ಯಂತ ನಡೆಯುವ ಎಲ್ಲ ರೀತಿಯ ಸಂತೆ, ಜಾತ್ರೆ, ಉತ್ಸವವನ್ನು ನಿಷೇಧಿಸಲಾಗಿದೆ ಎಂದು ವಿವರಿಸಿದರು.
    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಮಾತನಾಡಿ, ಚುನಾವಣಾ ಕರ್ತವ್ಯಕ್ಕೆಂದು ಜಿಲ್ಲೆಗೆ 20 ಸಿಎಪಿಎಫ್ ತಂಡಗಳನ್ನು ನಿಯೋಜನೆ ಮಾಡಲಾಗಿದೆ. ಅವರನ್ನು ಚೆಕ್‌ಪೋಸ್ಟ್ ಹಾಗೂ ಸ್ಟ್ರಾಂಗ್ ರೂಂ ರಕ್ಷಣಾ ಕೆಲಸಕ್ಕೆ ನಿಯೋಜಿಸಲಾಗಿದೆ ಎಂದರು.
    ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ಅಕ್ರಂ ಆಸೀಫ್, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಜಿಲ್ಲಾ ವಾರ್ತಾಧಿಕಾರಿ ಎಸ್.ಎಚ್.ನಿರ್ಮಲಾ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts