More

    ಜನವರಿ 8ರಂದು ಬಿಸಿಎಂ, ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ಭೇಟಿ

    ಕೋಲಾರ: ರಾಜ್ಯ ವಿಧಾನಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ಜ.8ರಂದು ಜಿಲ್ಲೆಗೆ ಭೇಟಿ ನೀಡಲಿದ್ದು, ಸೂಕ್ತ ಮಾಹಿತಿಯೊಂದಿಗೆ ಕಡ್ಡಾಯವಾಗಿ ಹಾಜರಿರುವಂತೆ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಅಧಿಕಾರಿಗಳಿಗೆ ಸೂಚಿಸಿದರು.

    ಜಿಪಂ ಸಭಾಂಗಣದಲ್ಲಿ ಶುಕ್ರವಾರ ಕರೆದಿದ್ದ ಸಭೆಯಲ್ಲಿ ಮಾತನಾಡಿ, ಎಸ್.ಕುಮಾರ ಬಂಗಾರಪ್ಪ ನೇತೃತ್ವದ 19 ಜನರ ಸಮಿತಿ ಮುಳಬಾಗಿಲಿಗೆ ಭೇಟಿ ನೀಡಿ ಬೆಳಗ್ಗೆ 10ಕ್ಕೆ ಜಿಪಂ ಸಭಾಂಗಣದಲ್ಲಿ ಸಭೆ ನಡೆಸಲಿದೆ ಎಂದರು.

    ಬಿಸಿಎಂ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಸತಿ ನಿಲಯಗಳು, ಶೈಕ್ಷಣಿಕ ಪ್ರಗತಿ, 2009-17ರವರೆಗಿನ ಸಮುದಾಯ ಭವನಗಳ ಮಾಹಿತಿ, ದೇವರಾಜ ಅರಸು ಅಭಿವೃದ್ಧಿ ನಿಗಮ, ವಿಶ್ವಕಕರ್ಮ ಅಭಿವೃದ್ಧಿ ನಿಗಮ, ವಿವಿಧ ಇಲಾಖೆಗಳಲ್ಲಿ ಸಮುದಾಯಕ್ಕಿರುವ ಯೋಜನೆಗಳ ಪ್ರಗತಿ, ಕಾಮಗಾರಿಗಳ ಭೌತಿಕ ಮತ್ತು ಆರ್ಥಿಕ ಪ್ರಗತಿಯ ಮಾಹಿತಿಗಳೊಂದಿಗೆ ಅಧಿಕಾರಿಗಳು ಹಾಜರಾಗಬೇಕೆಂದು ತಾಕೀತು ಮಾಡಿದರು.

    ವಕ್ಫ್ ಬೋರ್ಡ್‌ನ 1004 ಆಸ್ತಿಗಳ ಪೈಕಿ ಕಂದಾಯ ಇಲಾಖೆಯಿಂದ 248 ಆಸ್ತಿಗಳ ಖಾತೆ ಉಪವಿಭಾಗಾಧಿಕಾರಿಗೆ, ಆರ್‌ಡಿಪಿಆರ್ ವ್ಯಾಪ್ತಿಯ 198 ಆಸ್ತಿಗಳ ಖಾತೆ ಮಾಡಲು ಪಿಡಿಒಗಳಿಗೆ ಹಾಗೂ ನಗರದಲ್ಲ್ಲಿರುವ 117 ಆಸ್ತಿಗಳ ಖಾತೆ ಮಾಡಿಸುವ ಜವಾಬ್ದಾರಿಯನ್ನು ನಗರಾಭಿವೃದ್ಧಿ ಕೋಶಕ್ಕೆ ವಹಿಸಿದರು.

    10 ಎಕರೆ ಜಮೀನು: ವಿಶ್ವಕರ್ಮ ಸಮುದಾಯಕ್ಕೆ ಸಂಬಂಧಿಸಿದಂತೆ ಮಾಲೂರಿನ ಶಿವಾರಪಟ್ಟಣದಲ್ಲಿ ಶಿಲ್ಪಕಲಾ ಕೇಂದ್ರ ಸ್ಥಾಪನೆಗೆ ಅವಶ್ಯವಿರುವ 10 ಎಕರೆ ಜಮೀನು ಮಂಜೂರು ಮಾಡಲಾಗುತ್ತಿದೆ ಎಂದರು.

    ಬಿಸಿಎಂ ಜಿಲ್ಲಾ ಅಧಿಕಾರಿ ರಾಜಣ್ಣ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಮೈಲಾರಪ್ಪ ಇಲಾಖೆಯ ಮಾಹಿತಿ ನೀಡುತ್ತಾ ಜ. 6ರಂದು ಸಮಿತಿಗೆ ಬುಕ್‌ಲೆಟ್ ತಲುಪಿಸಬೇಕಿರುವುದರಿಂದ ಇಲಾಖೆಗಳು ನಮೂನೆ ಪ್ರಕಾರ ತಕ್ಷಣ ಮಾಹಿತಿ ನೀಡುವಂತೆ ಕೋರಿದರು.

    ಜಿಲ್ಲೆಯಲ್ಲಿ ನಿವೇಶನ ರಹಿತ 9056 ಮಂದಿಗೆ ನಿವೇಶನ ಕಲ್ಪಿಸಲು ಗ್ರಾಪಂವಾರು ಗುರುತಿಸಿರುವ ನಿವೇಶನಗಳ ಬಗ್ಗೆ ಬಂಗಾರಪೇಟೆ ತಾಲೂಕಿನ ಮಾಹಿತಿ ನೀಡಲು ಅಧಿಕಾರಿಗಳು ತಡಬಡಾಯಿಸಿದ್ದಲ್ಲದೆ ಆನ್‌ಲೈನ್‌ನಲ್ಲಿ ದಾಖಲಾಗದ, ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಆದ ವಿಳಂಬದಿಂದ ಸರ್ವೇ ಪಟ್ಟಿಯಿಂದ ಅನೇಕರು ಹೊರಗಿರುವ ಬಗ್ಗೆ ಗಮನಕ್ಕೆ ತಂದರು.

    ಸಿಡಿಮಿಡಿಗೊಂಡ ಡಿಸಿ, ನೀವು ಬಡವರ ವಿರೋಧಿ ಕೆಲಸ ಮಾಡುತ್ತಿದ್ದೀರಿ, ಚುನಾವಣೆ ಎಂಬ ದೊಡ್ಡ ಪದ ಹೇಳುವುದು ಬಿಡಿ, ಮಾರ್ಚ್‌ಗೆ ಮುನ್ನ ಫೆಬ್ರವರಿಯಲ್ಲಿ ಕೆಲಸ ಮುಗಿಸಿಕೊಡಲು ಪಿಡಿಒ ಮಹಾಶಯರಿಗೆ ಏನಾಗಿತ್ತು? ಇದರಲ್ಲೇನು ರಾಕೆಟ್ ವಿಜ್ಞಾನ ಇದೆಯೇ? ಕೋಳಿ ಮೊದಲೋ, ಮೊಟ್ಟೆ ಮೊದಲೋ ಎನ್ನುವುದನ್ನು ಬಿಡಿ, ವಿಡಿಯೋ ಕಾನ್ಫರೆನ್ಸ್, ಸಭೆಗಳಲ್ಲಿ ಪದೇ ಪದೆ ಹೇಳಿದರೂ ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.

    ಜಿಪಂ ಸಿಇಒ ಎಚ್.ವಿ. ದರ್ಶನ್, ಉಪ ಕಾರ್ಯದರ್ಶಿ ಸಂಜೀವಪ್ಪ, ಎಎಸ್ಪಿ ಎಸ್. ಜಾಹ್ನವಿ, ಉಪವಿಭಾಗಾಧಿಕಾರಿ ಸೋಮಶೇಖರ್ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts