More

    ದ್ಯಾಮವ್ವದೇವಿ ಜಾತ್ರೆ ಇಂದಿನಿಂದ

    ಹಾವೇರಿ: ನಗರದ ಐತಿಹಾಸಿಕ ಪ್ರಸಿದ್ಧ ಗ್ರಾಮದೇವತೆ ಶ್ರೀ ದ್ಯಾಮವ್ವದೇವಿ ಜಾತ್ರಾ ಮಹೋತ್ಸವವನ್ನು 115 ವರ್ಷಗಳ ಬಳಿಕ ಫೆ. 21ರಿಂದ 28ರವರೆಗೆ ಆಚರಿಸಲಾಗುತ್ತಿದ್ದು, ಭಕ್ತರಲ್ಲಿ ಸಂಭ್ರಮ ಮನೆಮಾಡಿದೆ.

    ನಗರದ ಪ್ರಮುಖ ಬೀದಿಗಳು ತಳಿರು, ತೋರಣಗಳಿಂದ ಸಿಂಗಾರಗೊಳ್ಳುತ್ತಿವೆ. ಮುಖ್ಯಪ್ರವೇಶ ದ್ವಾರಗಳಲ್ಲಿ ಸ್ವಾಗತ ಕಮಾನುಗಳು, ಫ್ಲೆಕ್ಸ್​ಗಳ ಭರಾಟೆಯೂ ಜೋರಾಗಿದೆ.

    ಫೆ. 21ರಂದು ಅಂಕಿ ಹಾಕುವುದು ಹಾಗೂ ಪಡ್ಲಗಿ ತುಂಬಿಸುವ ಕಾರ್ಯಕ್ರಮದೊಂದಿಗೆ ಜಾತ್ರಾ ಮಹೋತ್ಸವ ಆರಂಭಗೊಳ್ಳಲಿದೆ. ನಗರದ ಹೃದಯ ಭಾಗ ಮಹಾತ್ಮ ಗಾಂಧಿ ರಸ್ತೆಯಲ್ಲಿ ದ್ಯಾಮವ್ವನ ಪಾದಗಟ್ಟೆ ಸ್ಥಳವಿದೆ. ಇದೇ ರಸ್ತೆಯಲ್ಲಿ ದ್ಯಾಮವ್ವ ದೇವಿ ಚೌತಮನಿಕಟ್ಟಿಯಿದ್ದು, ಜಾತ್ರೆ ವೇಳೆ ದ್ಯಾಮವ್ವದೇವಿ ಮೆರವಣಿಗೆಯಲ್ಲಿ ದೇವಸ್ಥಾನದಿಂದ ಹೊರಟು ಚೌತಮನಿಕಟ್ಟೆಗೆ ಬಂದು ಆಸೀನಳಾಗುತ್ತಾಳೆ. ಜಾತ್ರೆಯ ಎಲ್ಲ ರೀತಿಯ ವಿಶೇಷ ಪೂಜಾ ಕಾರ್ಯಗಳು ಇದೇ ಕಟ್ಟೆಯಲ್ಲಿ ನಡೆಯಲಿವೆ.

    ಫೆ. 26ರಂದು ಪ್ರಾಥಃಕಾಲ 5 ಗಂಟೆಗೆ ರಂಗ ಹೊಯ್ಯುವುದು, ಉಡಿ ತುಂಬಿಸುವುದು, ಹಣ್ಣು-ಕಾಯಿ ನೈವೇದ್ಯ, ಸಾರ್ವಜನಿಕರಿಂದ ವಿವಿಧ ಸೇವೆ, ಹರಕೆ, ಕಾಣಿ ಸಮರ್ಪಣೆ ನಡೆಯಲಿದೆ. ಫೆ. 27ರಂದು ಸಂಜೆ 5 ಗಂಟೆಗೆ ದೇವಿಯನ್ನು ಗಡಿಗೆ ಕಳುಹಿಸಲಾಗುತ್ತದೆ. ಜಾತ್ರೆ ಆಚರಣೆ ವರ್ಷ ನಗರದಲ್ಲಿ ಹೋಳಿ ಹಬ್ಬ ಆಚರಿಸದಿರಲು ತೀರ್ವನಿಸಲಾಗಿದೆ. ಆದರೆ, ಫೆ. 27ರ ಸಂಜೆ ಹುಕ್ಕೇರಿಮಠ ರಸ್ತೆಯಲ್ಲಿ ಕುಂಕುಮ, ಭಂಡಾರದಿಂದ ಓಕಳಿ ಆಡುವ ಸಂಭ್ರಮ ನಡೆಯಲಿದೆ.

    ಸಾಂಸ್ಕೃತಿಕ ಕಾರ್ಯಕ್ರಮ ಇಂದಿನಿಂದ: ಜೂನಿಯರ್ ಡಾ. ರಾಜ್​ಕುಮಾರ ಖ್ಯಾತಿಯ ಅಶೋಕ ಬಸ್ತಿ ಸಾಂಸ್ಕೃತಿಕ ಮಿತ್ರ ಮಂಡಳಿಯಿಂದ ಜಾತ್ರೆಯ ಅಂಗವಾಗಿ ಫೆ. 21ರಿಂದ 25ರವರೆಗೆ ಪ್ರತಿದಿನ ಮಧ್ಯಾಹ್ನ 3 ಹಾಗೂ ಸಂಜೆ 6ಕ್ಕೆ ನಾಟಕ ಹಾಸ್ಯೋತ್ಸವ, ವಿಸ್ಮಯ ಜಾದೂ ಪ್ರದರ್ಶನ ಸೇರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಗರದ ಗುರುಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಫೆ. 21ರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಚಿತ್ರನಟಿ ವಿನಯಪ್ರಸಾದ, 24ರಂದು ಚಿತ್ರನಟಿ ಭಾವನಾ, ರಾಜು ತಾಳಿಕೋಟಿ ಪಾಲ್ಗೊಳ್ಳುವರು. 25ರಂದು ಕುಂಟಕೋಣ ಮೂಕ ಜಾಣ ನಾಟಕ ಪ್ರದರ್ಶನಗೊಳ್ಳಲಿದೆ. ಫೆ. 21ರಿಂದ 25ರವರೆಗೆ ಪ್ರತಿದಿನವೂ ಜೂನಿಯರ್ ರಾಜ್​ಕುಮಾರ ಅಶೋಕ ಬಸ್ತಿ, ಕುದ್ರೋಳಿ ಗಣೇಶ ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

    ಅಂಕಿ ಹಾಕಿದ ಬಳಿಕ ಊರಿಂದ ಬೇರೆ ಊರಿಗೆ ಹೋಗಬಾರದು, ಪಾದರಕ್ಷೆ ಹಾಕಿಕೊಂಡು ಓಡಾಡಬಾರದು, ರೊಟ್ಟಿ ಮಾಡಬಾರದೆಂಬ ಅನೇಕ ಧಾರ್ವಿುಕ ನಿಯಮಗಳಿವೆ. ಊರು ದೊಡ್ಡದಿರುವುದರಿಂದ ಎಲ್ಲ ನಿಯಮಗಳನ್ನು ಇಡೀ ಶಹರಕ್ಕೆ ಅನ್ವಯಿಸಲು ಕಷ್ಟ. ಕಾರಣ ಎಲ್ಲ ಜನರಿಗೆ ತೊಂದರೆಯಾಗದಿರಲಿ ಎಂಬ ಕಾರಣಕ್ಕೆ ದ್ಯಾಮವ್ವನ ಗುಡಿ ಓಣಿಯಲ್ಲಿ ಅಂಕಿಹಾಕಿ ಇದರ ವ್ಯಾಪ್ತಿಯಲ್ಲಿ ಮಾತ್ರ ಕಟ್ಟುನಿಟ್ಟಿನ ಆಚರಣೆ ನಡೆಯಲಿದೆ. ಬೇರೆಡೆ ಇರುವ ಆಸಕ್ತ ಭಕ್ತರು ಆಚರಿಸಬಹುದು. ಯುಗಾದಿ ಹಬ್ಬದ ಬಳಿಕ ಹೊಸಮನೆ ನಿರ್ಮಾಣ ಕಾರ್ಯ, ಮದುವೆ ಕಾರ್ಯಗಳನ್ನು ನಡೆಸಬಹುದು.

    | ಅಶೋಕ ಮುದಗಲ್ಲ, ಗೌರವ ಕಾರ್ಯದರ್ಶಿ, ದೇವಸ್ಥಾನ ಸೇವಾ ಸಮಿತಿ

    ದ್ಯಾಮವ್ವ ದೇವಿಗೆ ಭಕ್ತರಿಂದ 3 ಕೆಜಿ ಬೆಳ್ಳಿಯ ಸಿಂಹದ ಮುಖ, 1.5 ಕೆಜಿಯಲ್ಲಿ ಕಿರೀಟ ಮಾಡಿಸಲಾಗಿದೆ. ಭಕ್ತರೊಬ್ಬರು ದೇವಿಗೆ ಬಂಗಾರದ ಕಣ್ಣು ಕೊಡಿಸಿದ್ದಾರೆ. 10 ಕೆಜಿಯಲ್ಲಿ ಪ್ರಭಾವಳಿ ಮಾಡಿಸುವ ಕಾರ್ಯವೂ ನಡೆದಿದ್ದು, ಯುಗಾದಿ ವೇಳೆಗೆ ಸಿದ್ಧಗೊಳ್ಳಲಿದೆ.

    | ಗಂಗಾಧರ ಹೂಗಾರ, ಗೌರವ ಕಾರ್ಯದರ್ಶಿ, ದೇವಸ್ಥಾನ ಸೇವಾ ಸಮಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts