More

    ಶರನ್ನವರಾತ್ರಿ ಉತ್ಸವದಲ್ಲಿ ಧನಲಕ್ಷ್ಮೀ ದೇವಿಗೆ ಪೂಜೆ

    ಶಿವಮೊಗ್ಗ: ರವೀಂದ್ರನಗರ ಗಣಪತಿ ದೇವಾಲಯದಲ್ಲಿ ಅ.15 ರಿಂದ 29ರವರೆಗೆ ಶರನ್ನವರಾತ್ರಿ ಉತ್ಸವ ಹಮ್ಮಿಕೊಳ್ಳಲಾಗಿದೆ. ಈ ಬಾರಿ ಧನಲಕ್ಷ್ಮೀ ದೇವಿಯನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ. ದಸರಾ ಅಂಗವಾಗಿ ಸಂಗೀತ ಕಾರ್ಯಕ್ರಮ, ಆರೋಗ್ಯಕ್ಕೆ ಸಂಬಂಧಿಸಿದ ಉಪನ್ಯಾಸವನ್ನೂ ನಡೆಸಲಾಗುತ್ತಿದೆ.

    ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ದೇವಾಲಯ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಸ್.ಪಿ.ಶೇಷಾದ್ರಿ, ಸತತ 32 ವರ್ಷಗಳಿಂದ ವಿಶೇಷ ರೀತಿಯಲ್ಲಿ ದಸರಾ ಆಚರಿಸುತ್ತಿದ್ದೇವೆ. ಅ.15ರ ಬೆಳಗ್ಗೆ 6.30ಕ್ಕೆ ಧನಲಕ್ಷ್ಮೀ ದೇವಿ ಪ್ರತಿಷ್ಠಾಪನೆಯಾಗಲಿದೆ. ಲೋಕಕಲ್ಯಾಣಾರ್ಥವಾಗಿ ಹಮ್ಮಿಕೊಂಡಿರುವ ಶತಚಂಡಿಕಾಯಾಗದ ಆರಂಭವೂ ಇದೇ ಸಂದರ್ಭದಲ್ಲಿ ನೆರವೇರಲಿದೆ ಎಂದರು.
    ಪ್ರತಿ ದಿನ ಮಧ್ಯಾಹ್ನ 12.30ಕ್ಕೆ ಚಂಡಿಕಾಯಾಗದ ಪೂರ್ಣಾಹುತಿ ನೆರವೇರಲಿದೆ. ಅ.28ರಂದು ಯಾಗದ ಪೂರ್ಣಾಹುತಿ ಜರುಗಲಿದೆ. 29ರಂದು ಲಲಿತಾ ಸಹಸ್ರನಾಮಾರ್ಚನೆ, ಸಂಜೆ 4.30ಕ್ಕೆ ಧನಲಕ್ಷ್ಮೀ ದೇವಿಯ ರಾಜಬೀದಿ ಉತ್ಸವ ನೆರವೇರಲಿದೆ ಎಂದು ತಿಳಿಸಿದರು.
    ಪ್ರತಿ ದಿನ ಸಂಜೆ 5ರಿಂದ 6ರವರೆಗೆ ಸತ್ಸಂಗ, ನಾಟ್ಯ ಕಾರ್ಯಕ್ರಮ, ಸ್ಯಾಕ್ಸೋಫೋನ್ ವಾದನ, ಗಮಕ ವಾಚನ ಹಾಗೂ ವ್ಯಾಖ್ಯಾನ, ಸುಗಮ ಸಂಗೀತ ಕಾರ್ಯಕ್ರಮ ಮುಂತಾದವುಗಳನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಪಶ್ಚಿಮ ಬಂಗಾಳದಿಂದ ಆಗಮಿಸಿದ್ದ ಮಧುಸೂದನ್ ಪಾಲ್ ತಂಡದವರು ಧನಲಕ್ಷ್ಮೀ ದೇವಿಯ ವಿಗ್ರಹ ನಿರ್ಮಿಸಿದ್ದಾರೆ ಎಂದು ಮಾಹಿತಿ ನೀಡಿದರು.
    ಶತಚಂಡಿಕಾಯಾಗದಲ್ಲಿ 15ಕ್ಕೂ ಹೆಚ್ಚು ಋತ್ವಿಜರು ಭಾಗವಹಿಸುತ್ತಿದ್ದಾರೆ. ಯಾಗಕ್ಕೂ ಮುನ್ನ 100 ಸಪ್ತಶತಿ ಪಾರಾಯಣ, ಒಂದು ಲಕ್ಷ ಜಪ ಮಾಡಲಾಗುತ್ತದೆ. ಯಾಗದ ಸಂದರ್ಭದಲ್ಲಿ 100 ಮಂದಿ ಸುಹಾಸಿನಿಯರಿಗೆ ಬಾಗಿನ ನೀಡಲಾಗುವುದು ಎಂದು ಹೇಳಿದರು.
    ಅ.15ರ ಸಂಜೆ 6ಕ್ಕೆ ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶರನ್ನವರಾತ್ರಿ ಸಂದರ್ಭದಲ್ಲಿ ಪ್ರತಿ ದಿನ ಸಂಜೆ 6 ರಿಂದ 7.30ರವರೆಗೆ ತಜ್ಞ ವೈದ್ಯರು ವಿವಿಧ ಕಾಯಿಲೆಗಳ ಬಗ್ಗೆ, ಆರೋಗ್ಯ ಕಾಪಾಡಿಕೊಳ್ಳುವ ಕುರಿತು ಉಪನ್ಯಾಸ ನೀಡಲಿದ್ದಾರೆ ಎಂದರು.
    ಧರ್ಮದರ್ಶಿ ಉಮಾಪತಿ, ಮುಖ್ಯ ಅರ್ಚಕ ಶಂಕರನಾರಾಯಣ ಭಟ್, ಶನೈಶ್ಚರ ದೇವಾಲಯ ಟ್ರಸ್ಟ್‌ನ ಕಾರ್ಯದರ್ಶಿ ಸ.ನಾ.ಮೂರ್ತಿ, ಪ್ರಧಾನ ಅರ್ಚಕ ವಿನಾಯಕ ಬಾಯರಿ, ಆರ್ಟ್ ಆಫ್ ಲಿವಿಂಗ್‌ನ ಶಬರೀಶ್ ಕಣ್ಣನ್ ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts