More

    ದುಗ್ಗಮ್ಮನ ಜಾತ್ರೆಗೆ ರಂಗೇರಿಸಿದ ಟಗರು ಕಾಳಗ  ಹೊರ ರಾಜ್ಯ, ವಿವಿಧ ಜಿಲ್ಲೆಗಳ ಜನರು ಭಾಗಿ 

    ದಾವಣಗೆರೆ: ಅತ್ತ ಟಗರುಗಳು ಕಾಲು ಕೆದರಿ ದೂಳೆಬ್ಬಿಸಿ ಎದುರಾಳಿಗೆ ಡಿಚ್ಚಿ ಹೊಡೆಯುತ್ತಿದ್ದರೆ, ರಾಜಭಟರಂತೆ ಹಿಂಬಾಲಿಸುತ್ತಿದ್ದ ಮಾಲೀಕರು ಅವುಗಳನ್ನು ಹಿಡಿಯುವಲ್ಲಿ ಕಸರತ್ತು ಮಾಡುತ್ತಿದ್ದರು! ಸಂಘಟಕರು ಧ್ವನಿವರ್ಧಕಗಳಲ್ಲಿ ಕೂಗಿ ಹಾಜರಾತಿ ಹಾಕುತ್ತಿದ್ದರೆ, ಜಮಾವಣೆಯಾಗಿದ್ದ ಸಹಸ್ರಾರು ಜನರು ಶಿಳ್ಳೆ-ಕೇಕೆ ಹಾಕಿ ಪ್ರೋತ್ಸಾಹಿಸುತ್ತಿದ್ದರು.ದೇವರಾಜ ಅರಸು ಬಡಾವಣೆಯ ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಟಗರು ಕಾಳಗದ ಚಿತ್ರಣವಿದು. ನಗರದೇವತೆ ಶ್ರೀ ದುರ್ಗಾಂಬಿಕಾ ದೇವಿ ಜಾತ್ರೆ ಅಂಗವಾಗಿ ಗುರುವಾರ ಆರಂಭವಾಗಿದ್ದ ಈ ಪ್ರದರ್ಶನ ಎರಡನೇ ದಿನವೂ ರಂಗೇರಿತ್ತು.ಟಗರು ಕಾಳಗಕ್ಕೆ ಮೂರು ದಶಕದ ಇತಿಹಾಸವಿದೆ.  ಕಳೆದ ಬಾರಿ ಗಲಾಟೆಯಾಗಿದ್ದರಿಂದ ಈ ಸಲ ರದ್ದುಪಡಿಸುವ ಬಗ್ಗೆ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಲಾಯಿತು. ಟಗರುಪ್ರಿಯರ ಒತ್ತಡದ ಮೇರೆಗೆ ಮುಂದುವರಿಸಲಾಯಿತು. ಮೈದಾನದ ಸುತ್ತ ಪ್ರೇಕ್ಷಕರ ಗ್ಯಾಲರಿ ಸಿದ್ಧಪಡಿಸಲಾಗಿತ್ತು. ಸ್ಪರ್ಧಾ ಕಣದೊಳಗೆ ಅನಗತ್ಯ ಪ್ರವೇಶ ನಿರ್ಬಂಧಿಸಿ ಬ್ಯಾರಿಕೇಡ್ ಅಳವಡಿಸಲಾಗಿತ್ತು.  ದಾವಣಗೆರೆ, ವಿಜಯನಗರ, ಚಿತ್ರದುರ್ಗ, ಹಾವೇರಿ, ಶಿವಮೊಗ್ಗ, ಗದಗ, ಬಾಗಲಕೋಟೆ, ಬೆಂಗಳೂರು ಜಿಲ್ಲೆಗಳಲ್ಲದೆ ನೆರೆಯ ಹೈದ್ರಾಬಾದ್, ಮಹಾರಾಷ್ಟ್ರಗಳಿಂದಲೂ ನೆಚ್ಚಿನ ಟಗರುಗಳನ್ನು ಮಾಲೀಕರು ಕರೆ ತಂದಿದ್ದರು.ಮೊದಲ ದಿನ 54 ಮರಿಕುರಿ, ಎರಡು ಹಲ್ಲಿನ 152, ಶುಕ್ರವಾರ ನಾಲ್ಕು ಹಲ್ಲಿನ 88 ಟಗರು ಕಾದಾಟದಲ್ಲಿ ಭಾಗಿಯಾಗಿದ್ದವು. ನಂತರ ಆರು -ಎಂಟು ಹಲ್ಲುಗಳ ಟಗರುಗಳ ಸ್ಪರ್ಧೆ ನಡೆಯಿತು. ಕೆಲವು ದೈತ್ಯ ಮೈಕಟ್ಟಿನ ಹಾಗೂ ಚಾಕಚಕ್ಯತೆಯ ಪ್ರದರ್ಶನ ನೀಡಿದ ಕೆಲವು ಟಗರುಗಳ ಪ್ರದರ್ಶನಕ್ಕೆ ಅಲ್ಲಿದ್ದ ಜನರು ಫಿದಾ ಆದರು.ಕೆಲವು ರೌಂಡ್ಸ್ ಗೆದ್ದು ಬೀಗಿದ ಟಗರುಗಳನ್ನು ನೆರಳಿನತ್ತ ಕರೆದೊಯ್ದ ಮಾಲೀಕರು ಟವೆಲ್‌ನಿಂದ ಗಾಳಿ ಬೀಸಸದರು. ಅದರ ತಲೆ-ಬೆನ್ನು, ಕಾಲುಗಳನ್ನು ನೇವರಿಸಿದರು. ಇನ್ನೂ ಕೆಲವರು ಇಂಜೆಕ್ಷನ್ ಟೂಬ್ ಮೂಲಕ ನೀರುಣಿಸುತ್ತಿದ್ದರು.ಬಿಸಿಲಿನಿಂದ ನಿತ್ರಾಣವಾಗದಿರಲು ಕೆಲ ಟಗರುಗಳಿಗೆ ಹಸಿ ಬಟ್ಟೆಯನ್ನು ಹೊದಿಸಲಾಗಿತ್ತು. ಸೋತ ಟಗರುಗಳನ್ನೂ ಮಾಲೀಕರು ಬೈಕ್, ಆಟೋಗಳಲ್ಲಿರಿಸಿ ಕರೆದೊಯ್ಯುತ್ತಿದ್ದರು. ಕೆಲವು ಹೆದರಿ ಜನರತ್ತ ಓಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.ಟಗರುಗಳ ಹೆಸರು ಮೂರನೇ ಬಾರಿಗೆ ಕೂಗಿ ಸ್ಪರ್ಧೆಗೆ ಆಹ್ವಾನಿಸುತ್ತಿದ್ದ ಸಂಘಟಕರು ‘ಎಲ್ಲಿದೆಯಪ್ಪಾ ಟಗರು, ತಗೊಂಡು ಬರ‌್ರಪ್ಪಾ, ನಮಗಿದು ಕಡೆಯ ಅವಕಾಶ’ ಎಂದು ಹೇಳುತ್ತಿದ್ದರು. 12ಕ್ಕೂ ಹೆಚ್ಚು ಮಂದಿ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು.ಬಿಸಿಲಿನ ಧಗೆ ಹೆಚ್ಚಿದ್ದರಿಂದ ಪ್ರೇಕ್ಷಕರು ಅಲ್ಲಿದ್ದ ಕುಡಿವ ನೀರಿನ ಬಾಟಲು, ಮಜ್ಜಿಗೆ, ಜ್ಯೂಸ್, ಐಸ್‌ಕ್ರೀಂ, ಸೋಡಾ, ಕಲ್ಲಂಗಡಿ ಇತರೆ ಹಣ್ಣುಗಳತ್ತ ಮೊರೆ ಹೋದರು. ಅಲ್ಲಿದ್ದ ತಿಂಡಿಯಂಗಡಿ, ಕುರುಕಲು ತಿಂಡಿ, ಗೂಡಂಗಡಿಗಳಿಗೂ ಭರ್ಜರಿ ವ್ಯಾಪಾರ ಆಯಿತು.

    ಆಕರ್ಷಕ ಹೆಸರುಗಳು

    ಕಾಳಗಕ್ಕೆ ಬಂದಿದ್ದ ಟಗರುಗಳ ಹೆಸರುಗಳು ಮೋಡಿ ಮಾಡಿದವು. ಅಡವಿ, ಜಾಕಿ, ಅಭಿಮನ್ಯು, ಜೂನಿಯರ್ ಕರಿಯ, ಸುಲ್ತಾನ್ ಶೇರ್ವಾ, ಸಾಮ್ರಾಟ್, ಬೆಂಗಳೂರು ಭೈರವ, ಸಲಗ, ಏಕಾಂಗಿ, ಚೌಡೇಶ್ವರಿ ಪ್ರಸನ್ನ, ರಾಕೆಟ್, ಹನುಮಾನ್ ಕಾಳಿ, ಗೂಳಿ, ರಾಯಣ್ಣ ಎಕ್ಸ್‌ಪ್ರೆಸ್, ಬುಲೆಟ್ ಬಜರಂಗಿ, ಬೆಳ್ಳಿಚುಕ್ಕೆ, ತೇಜಸ್ವಿನಿ ರಾಮ, ಉಡುಗಿರಿ ಮಚ್ಚ, ಕತ್ತಲಗೆರೆ ದುರ್ಗಿ, ವಾಲ್ಮೀಕಿ ಸಿಂಹ, ಡಿ-ಬಾಸ್.

    ಶನಿವಾರವೂ ಮುಂದುವರಿಕೆ

    ನಿರೀಕ್ಷೆಗೂ ಮೀರಿ ಜನರು ಸೇರಿದ್ದರಿಂದ ನಿಯಂತ್ರಿಸುವಲ್ಲಿ ಪೊಲೀಸರು ಹರಸಾಹಸ ಪಡಬೇಕಾಯಿತು. ಆರು, ಎಂಟು ಹಲ್ಲಿನ ಪಂದ್ಯಾಟಗಳು ಶುಕ್ರವಾರವೇ ಮುಗಿಯಬೇಕಿತ್ತು. ಆದರೆ ಜನಸಂದಣಿಯಿಂದಾಗಿ ಶನಿವಾರಕ್ಕೆ ಮುಂಡೂಡಲ್ಪಟ್ಟವೆ ಎಂದು ದೇವಸ್ಥಾನ ಸಮಿತಿಯವರು ತಿಳಿಸಿದರು.

    ಗ್ರಾಮೀಣ ಕ್ರೀಡೆಗೆ ಬೇಡ ಅಡ್ಡಿ

    ತಮಿಳುನಾಡಿನಲ್ಲಿ ನಿರ್ಬಂಧವಿದ್ದ ಜಲ್ಲಿಕಲ್ಲು ಕ್ರೀಡೆ ಹಾಗೂ ದಕ್ಷಿಣ ಕನ್ನಡದಲ್ಲಿದ್ದ ಕಂಬಳ ಕ್ರೀಡೆಗೆ ಸರ್ಕಾರಗಳು ಅನುಮತಿ ನೀಡಿವೆ. ಇದೇ ರೀತಿಯಲ್ಲಿ ಟಗರು ಕಾಳಗ ಕೂಡ ಗ್ರಾಮೀಣ ಕ್ರೀಡೆ. ಇದಕ್ಕೆ ಯಾರೂ ಅಡ್ಡಿ ಮಾಡಬಾರದು ಎಂದು ದೇವಸ್ಥಾನ ಸಮಿತಿ ಮುಖಂಡ ಕರಿಗಾರ್ ಬಸಪ್ಪ ಆಗ್ರಹಿಸಿದರು.

    ಕಮದೋಡು ಜಾಕಿ ಪ್ರಥಮ

    ರಾಣೆಬೆನ್ನೂರು ತಾಲೂಕು ಕಮದೋಡು ಗ್ರಾಮದ ಜಾಕಿ ಟಗರು ನಾಲ್ಕು ಹಲ್ಲಿನ ವಿಭಾಗದ ಕಾದಾಟದಲ್ಲಿ ಜಯ ಸಾಧಿಸಿತು. ಅದರ ಮಾಲೀಕರಿಗೆ 50 ಸಾವಿರ ರೂ. ಬಹುಮಾನ ನೀಡಲಾಯಿತು. ಚಂದ್ರಗುತ್ತೆಮ್ಮ ಬೆಳ್ಳೂಡಿ ಸಲಗ (30 ಸಾವಿರ ರೂ.) ದ್ವಿತೀಯ, ಅಂಡಸಂತು ಪ್ರಕೃತಿಪ್ರಿಯ (20 ಸಾವಿರ ರೂ.) ತೃತೀಯ, ಟಿವಿ ಸ್ಟೇಷನ್ ಭೂತ (10 ಸಾವಿರ ರೂ.)ಚತುರ್ಥ ಬಹುಮಾನ ಪಡೆದವು.2 ಹಲ್ಲುಗಳ ಟಗರುಗಳ ವಿಭಾಗದಲ್ಲಿ ರಾಕಿಂಗ್ ಸ್ಟಾರ್ ಕೆಎಂಆರ್ (40 ಸಾವಿರ ರೂ.) ಪ್ರಥಮ, ಎಂಬಿ ಕೇರಿಯ ಮರಿಚುಕ್ಕಿ (30 ಸಾವಿರ ರೂ.) ದ್ವಿತೀಯ, ಚೌಡೇಶ್ವರಿ ಭೂತ ಪ್ರಸನ್ನ, ಭೂತ ಜಾಕಿ 555 ತೃತೀಯ (20 ಸಾವಿರ ರೂ.), ಬಂಜೂಬಜಾರ್‌ನ ರಿಟರ್ನ್ ಬ್ರೂಸ್ಲಿ (10 ಸಾವಿರ ರೂ.) ತೃತೀಯ ಬಹುಮಾನ ಪಡೆದವು.ಮರಿಕುರಿ ವಿಭಾಗದಲ್ಲಿ ಉಚ್ಚೆಂಗೆಮ್ಮ ಪ್ರಸನ್ನ, ದುರ್ಗಾ ಪರಮೇಶ್ವರಿ (ಮಾರಿ), ನೀಲಗುಂದದ ದುರ್ಗಾಶಕ್ತಿ ಕಾಳಿ ಹಾಗೂ ಹದಡಿಯ ಡಾನ್ ಕ್ರಮವಾಗಿ 20 ಸಾವಿರ, 15 ಸಾವಿರ, 10 ಸಾವಿರ ಹಾಗೂ 5 ಸಾವಿರ ರೂ. ಬಹುಮಾನ ಪಡೆದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts