More

    ಪಿಯು ಫಲಿತಾಂಶ ಶೇ.5.24ರಷ್ಟು ಏರಿಕೆ* ದಾವಣಗೆರೆ ಜಿಲ್ಲೆಗೆ ಶೇ.80.96 ರಿಸಲ್ಟ್, 21ನೇ ಸ್ಥಾನ

    ದಾವಣಗೆರೆ: ದಾವಣಗೆರೆ ಜಿಲ್ಲೆಗೆ ಈ ಬಾರಿಯ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶೇ. 80.96ರಷ್ಟು ಫಲಿತಾಂಶ ಲಭಿಸಿದ್ದು 32 ಶೈಕ್ಷಣಿಕ ಜಿಲ್ಲೆಗಳ ಪೈಕಿ 21ನೇ ಸ್ಥಾನ ಅಲಂಕರಿಸಿದೆ.
    ಕಳೆದ ಬಾರಿ ಶೇ.75.72ರಷ್ಟು ರಿಸಲ್ಟ್ ಪಡೆದಿತ್ತು. ಕಳೆದ ಬಾರಿಗಿಂತ ಶೇ. 5.24ರಷ್ಟು ರಿಸಲ್ಟ್ ಪ್ರಮಾಣ ಏರಿಕೆಯಾಗಿದ್ದರೂ, ಹಳೆಯ ಸ್ಥಾನವನ್ನೇ ಕಾಯ್ದುಕೊಂಡಿದೆ.
    19,644 ಹೊಸಬರು, 422 ಖಾಸಗಿ ಸೇರಿ 20,066 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿದ್ದರು. ಇದರಲ್ಲಿ ಪರೀಕ್ಷೆ ಬರೆದ 15904 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
    ಕಲಾ ವಿಭಾಗ ಶೇ.57.83ರಷ್ಟು ಫಲಿತಾಂಶ ಸಾಧಿಸಿದ್ದು,  ಶೇ.45 ಬಾಲಕರು, ಶೇ.66.46ರಷ್ಟು ಬಾಲಕಿಯರು ತೇರ್ಗಡೆಯಾಗಿದ್ದಾರೆ. ವಾಣಿಜ್ಯ ವಿಭಾಗ ಶೇ 76.22 ರಿಸಲ್ಟ್ ಪಡೆದಿದ್ದು ಶೇ 65.5 ಬಾಲಕರು, ಶೇ 80.8 ಹೆಣ್ಣುಮಕ್ಕಳು ಪಾಸಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಶೇ 91.13 ಫಲಿತಾಂಶ ಬಂದಿದ್ದು ಶೇ 91.39 ಬಾಲಕರು, ಶೇ 88.69 ಬಾಲೆಯರು ಉತ್ತೀರ್ಣರಾಗಿದ್ದಾರೆ.
    ನಗರ ವಿದ್ಯಾರ್ಥಿಗಳಿಗೆ ಹೋಲಿಸಿದರೆ ಗ್ರಾಮೀಣ ಅಭ್ಯರ್ಥಿಗಳು ಶೇ.1.1ರಷ್ಟು ಮೇಲುಗೈ ಸಾಧಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಶೇ 73.65 ಬಾಲಕರು, ಶೇ 84.6 ಹೆಣ್ಣುಮಕ್ಕಳು, ನಗರ ಪ್ರದೇಶದಲ್ಲಿ  ಶೇ.74.41 ಬಾಲಕರು, ಶೇ.81.37ರಷ್ಟು ಹೆಣ್ಣುಮಕ್ಕಳು ತೇರ್ಗಡೆಯಾಗಿದ್ದಾರೆ.
    * ಸೆಂಚುರಿ ಸಾಧನೆ:
    ದಾವಣಗೆರೆ ಲೇಬರ್ ಕಾಲನಿಯ ಅಂಜುಂ ಪದವಿ ಪೂರ್ವ ಕಾಲೇಜು, ಜೈನ್ ಪಪೂ ಕಾಲೇಜು, ಅನ್‌ಮೋಲ್ ಪದವಿ ಪೂರ್ವ ಕಾಲೇಜು,  ಶ್ರೀ ಗೀತಂ ಪದವಿ ಪೂರ್ವ ಕಾಲೇಜು ಸಂಪೂರ್ಣ 100ರಷ್ಟು ಫಲಿತಾಂಶ ಪಡೆದಿವೆ.
    ಟಾಪರ್‌ಗಳು
    ವಿಜ್ಞಾನ ವಿಭಾಗದಲ್ಲಿ ಲೋಕಿಕೆರೆ ರಸ್ತೆಯ ಸರ್‌ಎಂವಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಮೊಹಮ್ಮದ್ ಸುಹೇಲ್, ಅಮೃತ ದೊಡ್ಡ ಬಸಪ್ಪನವರ್, ಎಚ್.ಎಸ್. ಅನನ್ಯಾ, ಆಕಾಶ್ ಸಿ.ಪಾಟೀಲ್ ಇವರು 593 ಅಂಕ (ಶೇ 98.83 ರಷ್ಟು)ದೊಂದಿಗೆ ಟಾಪರ್ ಸ್ಥಾನವನ್ನು ಹಂಚಿಕೊಂಡಿದ್ದಾರೆ.
    ಕಲಾ ವಿಭಾಗದಲ್ಲಿ ಹರಿಹರದ ಶ್ರೀಮತಿ ಗಿರಿಯಮ್ಮ ಕಾಂತಪ್ಪ ಮಹಿಳಾ ಪದವಿ ಪೂರ್ವ ಕಾಲೇಜಿನ ಪಿ.ಕೆ. ಹೀನಾಬಾನು 591 ಅಂಕ (ಶೇ 98.5) ಟಾಪರ್ ಆಗಿದ್ದಾರೆ.
     ವಾಣಿಜ್ಯ ವಿಭಾಗದಲ್ಲಿ ದಾವಣಗೆರೆ ತಾಲೂಕು ಗೋಪನಾಳು ಸರ್ಕಾರಿ ಪದವಿ ಪೂರ್ವ ಕಾಲೇಜಿನ ರೇಷ್ಮಾ ಬಾನು 589 ಅಂಕ ಪಡೆದು ಶೇ 98.16 ರಷ್ಟು ಫಲಿತಾಂಶದೊಂದಿಗೆ ಜಿಲ್ಲೆಗೆ ಮೊದಲಿಗರಾಗಿದ್ದಾರೆ.
    ನಾಲ್ವರಿಗೂ ವೈದ್ಯರಾಗುವ ಹಂಬಲ
    ಪಿಯು ಫಲಿತಾಂಶದಲ್ಲಿ ವಿಜ್ಞಾನ ವಿಭಾಗದಲ್ಲಿ 593 (ಶೇ.98.83ರಷ್ಟು) ಸಮಾನ ಅಂಕ ಪಡೆದು ಜಿಲ್ಲೆಗೆ ಮೊದಲಿಗರಾದ ಸರ್ ಎಂವಿ ಸಂಯುಕ್ತ ಪಪೂ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳಿಗೂ ವೈದ್ಯರಾಗುವ ಹಂಬಲ ಇದೆ. ಪತ್ರಿಕೆಯೊಂದಿಗೆ ಮಾತನಾಡಿ ಈ ವಿಚಾರ ಹಂಚಿಕೊಂಡರು.
    ಒಂದು ದಿನ ಹೆಚ್ಚು, ಮತ್ತೊಂದು ದಿನ ಕಡಿಮೆ ಓದಿದರೆ ಸಾಲದು. ನಿಯಮಿತವಾಗಿ ನಿರಂತರವಾಗಿ ಓದುವ ಕ್ರಮ ಅಭ್ಯಾಸ ಮಾಡಿಕೊಂಡಲ್ಲಿ ವಿದ್ಯಾರ್ಥಿಗಳು ಹೆಚ್ಚು ಅಂಕ ಪಡೆಯುವುದು ಸರಳ ಎಂಬುದಾಗಿ ದಾವಣಗೆರೆಯ ಮೊಹಮ್ಮದ್ ಸುಹೈಲ್ ವಿದ್ಯಾರ್ಥಿಗಳಿಗೆ ಓದಿನ ಟಿಪ್ಸ್ ನೀಡಿದರು.
    ವಾಹನ ಮಾರಾಟ ಉದ್ಯಮ ನಡೆಸುತ್ತಿರುವ ಮಹಮ್ಮದ್ ನಸ್ರುಲ್ಲಾ- ಸಲ್ಮಾಬಿ ದಂಪತಿ ಪುತ್ರನಾದ ಸುಹೈಲ್, ರಸಾಯನಶಾಸ್ತ್ರ-ಗಣಿತ ಹಾಗೂ ಜೀವಶಾಸ್ತ್ರ ಹಾಗೂ ಕನ್ನಡದಲ್ಲಿ ಪೂರ್ಣ 100 ಅಂಕ, ಭೌತಶಾಸ್ತ್ರ-97, ಇಂಗ್ಲಿಷ್‌ನಲ್ಲಿ 96 ಅಂಕ ಪಡೆದಿದ್ದಾನೆ.

    ದಿನದಲ್ಲಿ ಐದು ತಾಸು ಓದಿನಲ್ಲಿ ತೊಡಗಿಸಿಕೊಳ್ಳುತ್ತಿದ್ದೆ. ಕಾಲೇಜಿನಲ್ಲಿ ಉಪನ್ಯಾಸಕರು ಮಾಡಿದ ಪಾಠ, ಪಠ್ಯಕ್ರಮ ಹೊರತಾಗಿ ಬೇರೇನನ್ನೂ ಓದಲಿಲ್ಲ. ಟ್ಯೂಷನ್ ಹೋಗಲಿಲ್ಲ. ಪರೀಕ್ಷೆಯ ಒಂದೂವರೆ ತಿಂಗಳ ಮುನ್ನ ಹೆಚ್ಚು ಓದಿ ಮನನ ಮಾಡಿಕೊಂಡೆ. ಟಾಪರ್ ಆಗುವ ನಿರೀಕ್ಷೆ ಇತ್ತು ಎಂದು ಅನಿಸಿಕೆ ಹಂಚಿಕೊಂಡರು ಅಮೃತಾ ದೊಡ್ಡ ಬಸಪ್ಪನವರ.
    ಹಾವೇರಿಯಲ್ಲಿನ ಎಆರ್‌ಎಸ್‌ಐ ಆಗಿರುವ ಧರ್ಮರಾಜ್ ಹಾಗೂ ಅಲ್ಲಿನ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ಗಿರಿಜಾ ದಂಪತಿಯ ಪುತ್ರಿಯದ ಅಮೃತಾ, ಭೌತಶಾಸ್ತ್ರ-ರಸಾಯನಶಾಸ್ತ್ರ ಹಾಗೂ ಜೀವಶಾಸ್ತ್ರದಲ್ಲಿ ಪೂರ್ಣ 100, ಗಣಿತ ಹಾಗೂ ಕನ್ನಡದಲ್ಲಿ 99, ಇಂಗ್ಲಿಷ್‌ನಲ್ಲಿ 95 ಅಂಕ ಗಳಿಸಿದ್ದಾರೆ.

    ಕಾಲೇಜಿನಲ್ಲಿ ಪ್ರಿಪರೇಟರಿ ಎಕ್ಸಾಂ ಜತೆಗೆ ಸೆಲ್ಫ್ ಪ್ರಿಪರೇಟರಿ ಪರೀಕ್ಷೆಗಳೂ ನಡೆಯುತ್ತಿದ್ದವು. ಬಹುತೇಕ ಸಮಸ್ಯೆಗಳನ್ನು ಅಲ್ಲೇ ಪರಿಹರಿಸಿಕೊಳ್ಳಲು ನೆರವಾಯಿತು. ಹಳೆಯ ಪ್ರಶ್ನೆಪತ್ರಿಕೆಗಳನ್ನೂ ಬಿಡಿಸುವ ಅವಕಾಶ ಸಿಕ್ಕಿತ್ತು. ಓದಿನ ಜತೆಗೆ ಪ್ರಯೋಗಿಕವಾಗಿ ಆಲೋಚಿಸಬೇಕು ಎಂದು ಹೇಳಿದರು ತುಮಕೂರು ಮೂಲದ ಎಚ್. ಎಸ್. ಅನನ್ಯಾ.
    ತಂದೆ ಎಚ್.ಟಿ. ಶಶಿಧರ್- ಎನ್.ಎಂ. ಶೀತಲ್ ಮಗಳಾದ ಅನನ್ಯ, ಎರಡು ವರ್ಷದ ಹಿಂದೆ ತಂದೆ ತೀರಿದ ಬಳಿಕ ಚಿಕ್ಕಪ್ಪ ಓದಿಸಿದ್ದನ್ನು ಸ್ಮರಿಸಿದರು. ರಸಾಯನಶಾಸ್ತ್ರ-ಗಣಿತ ಹಾಗೂ ಜೀವಶಾಸ್ತ್ರದಲ್ಲಿ ಪೂರ್ಣ 100 ಅಂಕ. ಭೌತಶಾಸ್ತ್ರ ಹಾಗೂ ಕನ್ನಡದಲ್ಲಿ ತಲಾ 99, ಇಂಗ್ಲಿಷ್‌ನಲ್ಲಿ 95 ಅಂಕ ಪಡೆದಿದ್ದಾರೆ.

    ಕಾಲೇಜು ತರಗತಿಗಳಲ್ಲಿ ಉಪನ್ಯಾಸಕರು ಮಾಡಿದ ಪಾಠ ಚೆನ್ನಾಗಿ ಅರ್ಥ ಮಾಡಿಕೊಂಡರೆ ಸಾಕು, ಹೆಚ್ಚುವರಿ ಓದು ಅಗತ್ಯ ಎನಿಸೋದಿಲ್ಲ. ನಾನು ದಿನಕ್ಕೆ ಎರಡು ತಾಸು ಅಧ್ಯಯನ ಮಾಡುತ್ತಿದ್ದೆ ಎಂದು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ್ ಮೂಲದ ಆಕಾಶ್ ಸಿ. ಪಾಟೀಲ್ ಹೇಳಿಕೊಂಡರು.
    ಗ್ರಂಥಪಾಲಕ ಚಂದ್ರಶೇಖರ ಗೌಡ ಪಾಟೀಲ್- ಲಕ್ಷ್ಮೀ ಪಾಟೀಲ್ ದಂಪತಿ ಪುತ್ರನಾದ ಆಕಾಶ್, ಭೌತಶಾಸ್ತ್ರ-ಗಣಿತ ಹಾಗೂ ಜೀವಶಾಸ್ತ್ರದಲ್ಲಿ ತಲಾ 100, ರಸಾಯನಶಾಸ್ತ್ರ, ಕನ್ನಡದಲ್ಲಿ 99, ಇಂಗ್ಲಿಷ್‌ನಲ್ಲಿ 95 ಅಂಕ ಗಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts