More

    ಭವಿಷ್ಯದಲ್ಲಿ ಹೆಚ್ಚಲಿದೆ ಡಿಜಿಟಲ್ ಸೆಳೆತ; ಚಾಣಕ್ಯ ವಿವಿ ಕುಲಪತಿ ಪ್ರೊ.ಯಶವಂತ ಡೋಂಗ್ರೆ ಅಭಿಮತ

    ದಾವಣಗೆರೆ: ಡಿಜಿಟಲೀಕರಣ ಸಮಾಜದ ಡಿಜಿಟಲ್ ರೂಪಾಂತರದ ಪ್ರಕ್ರಿಯೆಯಾಗಿದೆ. ಮುಂದಿನ ದಿನಗಳಲ್ಲಿ ವ್ಯಾಪಾರೋದ್ಯಮ ಎಲ್ಲ ಗ್ರಾಹಕರನ್ನೂ ಡಿಜಿಟಲ್‌ನತ್ತ ಸೆಳೆದುಕೊಳ್ಳಲಿದೆ ಎಂದು ಎಂದು ಬೆಂಗಳೂರಿನ ಚಾಣಕ್ಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಯಶವಂತ ಡೋಂಗ್ರೆ ಹೇಳಿದರು.

    ದಾವಣಗೆರೆ ವಿಶ್ವವಿದ್ಯಾನಿಲಯ ವಾಣಿಜ್ಯ ಅಧ್ಯಯನ ವಿಭಾಗದಿಂದ ಐಸಿಎಸ್‌ಎಸ್‌ಆರ್ ಸಹಭಾಗಿತ್ವದಲ್ಲಿ ‘ಬ್ಯಾಂಕಿಂಗ್ 4.0: ಡಿಜಿಟಲೀಕರಣ ಮತ್ತು ರೂಪಾಂತರ’ ಕುರಿತು ಏರ್ಪಡಿಸಿರುವ ಎರಡು ದಿನಗಳ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.

    ಆಧುನಿಕ ಸಮಾಜದ ಜನರ ಜೀವನದ ಪ್ರತಿಯೊಂದು ಅಂಶವನ್ನು ಡಿಜಿಟಲ್ ಜಗತ್ತು ಪ್ರವೇಶಿಸುತ್ತಿದೆ. ಇದು ಜೀವನವನ್ನು ಸರಳೀಕರಿಸುವ ವಿನ್ಯಾಸವಾಗಿದೆ. ಉತ್ಪಾದನಾ ವೆಚ್ಚವನ್ನು ತಗ್ಗಿಸಿ ಕಾರ್ಮಿಕ ಉತ್ಪಾದಕತೆಯನ್ನು ಹೆಚ್ಚಿಸುತ್ತಿದೆ ಎಂದರು.

    ಸಮಯದ ಮೂಲಕ ಹಣ ನಿರ್ವಹಣೆ ನಡೆಯುತ್ತಿದೆ. ಕೃತಕ ಬುದ್ಧಿಮತ್ತೆ ಸಮಾಜದ ಮೂಲಭೂತ ಮೌಲ್ಯಗಳನ್ನು ಬದಲಾಯಿಸುತ್ತಿದೆ. ಜಾಲತಾಣಗಳಲ್ಲಿ ಉತ್ಪನ್ನ ಮತ್ತು ಸೇವೆ ಹುಡುಕುವ ಡಿಜಿಟಲ್ ಗ್ರಾಹಕರಾಗುತ್ತಿದ್ದೇವೆ ಎಂದು ವಿವರಿಸಿದರು.

    ಎಸ್‌ಬಿಐ ವಿಭಾಗೀಯ ಪ್ರಧಾನ ಪ್ರಬಂಧಕ ಪ್ರದೀಪ್ ನಾಯರ್ ಮಾತನಾಡಿ, ಡಿಜಿಟಲ್ ತಂತ್ರಜ್ಞಾನಗಳು ಗ್ರಾಹಕರು ಮತ್ತು ಬ್ಯಾಂಕ್ ನಡುವೆ ಆರಾಮದಾಯಕ ಮತ್ತು ವೇಗವಾದ ಸಂವಹನವನ್ನು ಒದಗಿಸುತ್ತವೆ. ಅಂತಹ ರೂಪಾಂತರವು ಉತ್ಪನ್ನಗಳು ಮತ್ತು ಸೇವೆಗಳ ಗುಣಮಟ್ಟವನ್ನು ಸುಧಾರಿಸುತ್ತದೆ. ಉತ್ಪಾದನೆಯನ್ನು ಸ್ವಯಂ ಚಾಲಿತಗೊಳಿಸುತ್ತದೆ ಹಾಗೂ ಆಂತರಿಕ ಮತ್ತು ಬಾಹ್ಯ ಸಂವಹನಗಳನ್ನು ಸರಳಗೊಳಿಸುತ್ತದೆ ಎಂದು ತಿಳಿಸಿದರು.

    ಅಧ್ಯಕ್ಷತೆ ವಹಿಸಿದ್ದ ದಾವಣಗೆರೆ ವಿಶ್ವವಿದ್ಯಾನಿಲಯ ಕುಲಪತಿ ಪ್ರೊ.ಬಿ.ಡಿ.ಕುಂಬಾರ ಮಾತನಾಡಿ, ಬ್ಯಾಂಕಿಂಗ್ ಕೇವಲ ಬ್ಯಾಂಕ್ ವ್ಯವಹಾರಕ್ಕೆ ಸೀಮಿತವಾಗಿಲ್ಲ. ಅದು ಆಧುನಿಕ ತಂತ್ರಜ್ಞಾನದ ಎಲ್ಲ ಕ್ಷೇತ್ರಗಳಲ್ಲೂ ವ್ಯಾಪಿಸಿದೆ ಎಂದರು.

    ಇಂದಿನ ಎಲ್ಲ ವ್ಯವಹಾರಗಳಲ್ಲಿ ಕೃತಕ ಬುದ್ಧಿಮತ್ತೆ, ಬ್ಲಾಕ್‌ಚೈನ್ ಮತ್ತಿತರರ ಡಿಜಿಟಲ್ ತಂತ್ರಜ್ಞಾನವೂ ಪ್ರಮುಖವಾಗಿ ಕೆಲಸ ಮಾಡುತ್ತಿದೆ. ಇದು ಪ್ರತಿಯೊಂದು ಹಂತದ ವ್ಯವಹಾರದ ಮೇಲೆ ನಿಗಾ ವಹಿಸಿ ಗ್ರಾಹಕ ಸ್ನೇಹಿಯಾಗಿ ಕೆಲಸ ಮಾಡಲು ನೆರವಾಗುತ್ತಿದೆ. ಬ್ಯಾಂಕಿಂಗ್ ವ್ಯವಹಾರ ನಡೆಸುವ ಎಲ್ಲರೂ ಇದರ ಅನುಕೂಲತೆ ಪಡೆಯಬೇಕು ಎಂದು ಹೇಳಿದರು.

    ಪರೀಕ್ಷಾಂಗ ಕುಲಸಚಿವ ಡಾ.ಕೆ.ಶಿವಶಂಕರ್, ವಾಣಿಜ್ಯ ನಿಕಾಯದ ಡೀನ್ ಪ್ರೊ.ಪಿ.ಲಕ್ಷ್ಮಣ, ಪ್ರಾಧ್ಯಾಪಕಿ ಪ್ರೊ.ಎಚ್.ಎಸ್.ಅನಿತಾ, ಭಾಗವಹಿಸಿದ್ದರು. ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ.ಸತ್ಯನಾರಾಯಣ ಸ್ವಾಗತಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts