More

    ದಾವಣಗೆರೆಯಲ್ಲಿ ಹರ್ ಘರ್ ತಿರಂಗಾ ಯಾತ್ರೆ

    ದಾವಣಗೆರೆ: ಕ್ವಿಟ್ ಇಂಡಿಯಾ ಚಳವಳಿಯ 80ನೇ ವರ್ಷಾಚರಣೆ ಅಂಗವಾಗಿ ಬಿಜೆಪಿ ದಕ್ಷಿಣ ವಿಧಾನಸಭಾ ಕ್ಷೇತ್ರದ ವತಿಯಿಂದ ನಗರದಲ್ಲಿ ತಿರಂಗಾ ಯಾತ್ರೆ ನಡೆಯಿತು. ದಾವಣಗೆರೆಯಲ್ಲೂ ಹೋರಾಟ ನಡೆದು 6 ಮಂದಿ ಬ್ರಿಟಿಷರ ಗುಂಡೇಟಿಗೆ ಬಲಿಯಾದರೆಂದು ಬಿಜೆಪಿ ಮುಖಂಡರು ಈ ವೇಳೆ ಸ್ಮರಿಸಿದರು.

    ದುರ್ಗಾಂಬಿಕಾ ದೇವಸ್ಥಾನ ಆವರಣದಲ್ಲಿ ಮೇಯರ್ ಜಯಮ್ಮ ಗೋಪಿನಾಯ್ಕ ಯಾತ್ರೆಗೆ ಚಾಲನೆ ನೀಡಿದರು. ಎಸ್‌ಕೆಪಿ ರಸ್ತೆ, ವಸಂತ ಚಿತ್ರಮಂದಿರ ರಸ್ತೆ ಮೂಲಕ ರೇಣುಕ ಮಂದಿರ ಹಾದು ಮಹಾನಗರ ಪಾಲಿಕೆ ತಲುಪಿತು.

    ಅಲ್ಲಿನ ಹುತಾತ್ಮರ ಸ್ಮಾರಕಕ್ಕೆ ಮಾಲಾರ್ಪಣೆ ಮಾಡಲಾಯಿತು. ಮಾರ್ಗದುದ್ದಕ್ಕೂ ಕಾರ್ಯಕರ್ತರು ಮಹಾತ್ಮ ಗಾಂಧಿ, ಭಗತ್‌ಸಿಂಗ್, ಸಂಗೊಳ್ಳಿ ರಾಯಣ್ಣ ಹಾಗೂ ಸ್ವಾತಂತ್ರ್ಯ ಸೇನಾನಿಗಳಿಗೆ ಜೈಕಾರ ಕೂಗಿದರು.

    ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಕರೆಯಂತೆ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಆ.13ರಿಂದ 15ರವರೆಗೆ ಪ್ರತಿ ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಮೂಲಕ ದೇಶಪ್ರೇಮ ಪ್ರದರ್ಶಿಸಬೇಕೆಂದು ಹೇಳಿದರು.

    1942ರ ಕ್ವಿಟ್ ಇಂಡಿಯಾ ಚಳವಳಿ ವೇಳೆ ದಾವಣಗೆರೆಯಲ್ಲೂ ಹೋರಾಟ ನಡೆಯಿತು. ಗಡಿಯಾರ ಕಂಬದ ಬಳಿ ಅಂದು ನಡೆದ ಗೋಲಿಬಾರ್‌ನಲ್ಲಿ ಆರು ಮಂದಿ ಬ್ರಿಟಿಷರ ಗುಂಡೇಟಿಗೆ ಮಡಿದರು. ಅವರ ಸ್ಮರಣಾರ್ಥವಾಗಿ ದಾವಣಗೆರೆಯ ಹುತಾತ್ಮರ ಸ್ಮಾರಕ ಸ್ಥಾಪನೆಯಾಗಿದೆ ಎಂದು ಸ್ಮರಿಸಿದರು.

    ಮಾಜಿ ಮೇಯರ್ ಬಿ.ಜಿ.ಅಜಯಕುಮಾರ್ ಮಾತನಾಡಿ, ಹರ್ ಘರ್ ತಿರಂಗಾ ಅಭಿಯಾನವನ್ನು ಪ್ರತಿಯೊಬ್ಬ ಭಾರತೀಯರೂ ಮನೆಗಳಲ್ಲಿ ರಾಷ್ಟ್ರಧ್ವಜ ಹಾರಿಸುವ ಮೂಲಕ, ಹಬ್ಬದಂತೆ ಆಚರಿಸಬೇಕು ಎಂದು ಹೇಳಿದರು.

    ಮಾಜಿ ಮೇಯರ್ ಗಾಯಿತ್ರಿಬಾಯಿ ಖಂಡೋಜಿರಾವ್, ಪಾಲಿಕೆ ಸದಸ್ಯರಾದ ಆರ್.ಎಲ್.ಶಿವಪ್ರಕಾಶ್, ರಾಕೇಶ್ ಜಾಧವ್, ಸೋಗಿ ಶಾಂತಕುಮಾರ್, ದೂಡಾ ಮಾಜಿ ಸದಸ್ಯೆ ದೇವೀರಮ್ಮ, ಮುಖಂಡರಾದ ಎಲ್.ಡಿ.ಗೋಣೆಪ್ಪ, ಪಿ.ಸಿ.ಶ್ರೀನಿವಾಸ್, ಶಿವನಗೌಡ ಪಾಟೀಲ್, ಎನ್.ರಾಜಶೇಖರ್, ಧನುಷ್, ಪ್ರಹ್ಲಾದ್ ತೇಲ್ಕರ್ ಇತರರಿದ್ದರು.

    ಈಗಿನದ್ದು ನಕಲಿ ಕಾಂಗ್ರೆಸ್: ದೇಶಕ್ಕಾಗಿ ಹೋರಾಟ ಮಾಡಿದ ಸ್ವಾತಂತ್ರ್ಯ ಸೇನಾನಿಗಳು, ರೈತರನ್ನು ಪ್ರತಿ ನಾಗರಿಕರೂ ಸ್ಮರಿಸಬೇಕು. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಗಾಂಧೀಜಿ ಕಾಲದ ಮೂಲ ಕಾಂಗ್ರೆಸ್‌ಗೂ, ಅಧಿಕಾರದಾಹದ ಈಗಿನ ನಕಲಿ ಕಾಂಗ್ರೆಸ್‌ಗೂ ವ್ಯತ್ಯಾಸವಿದೆ. ಎಲ್ಲ ಯೋಜನೆಗೂ ಗಾಂಧಿ ಕುಟುಂಬದ ಹೆಸರನ್ನೇ ನಾಮಕರಣ ಮಾಡುವುದು ಈಗಿನ ಕಾಂಗ್ರೆಸ್ ಚಾಳಿಯಾಗಿದೆ. ಸಿದ್ದರಾಮಯ್ಯ ಅವರಿಗೆ ರಾಷ್ಟ್ರ ಧ್ವಜದಲ್ಲಿನ ಬಣ್ಣಗಳ ಬಗ್ಗೆ ಅರಿವಿಲ್ಲ ಎಂದು ಜಿಲ್ಲಾ ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ಯಶವಂತರಾವ್ ಟೀಕಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts