More

    ಹಿಮೋಫಿಲಿಯಾ ರೋಗಿಗಳ ಮನೆ ಬಾಗಿಲಿಗೇ ವಾಹನ!

    ರಮೇಶ ಜಹಗೀರದಾರ್ ದಾವಣಗೆರೆ:
    ಸಾವಿರಾರು ರೋಗಿಗಳ ಜೀವನ ಹಿಂಡಿ ಹಿಪ್ಪೆ ಮಾಡಿರುವ ನಾಜೂಕು ಕಾಯಿಲೆ ‘ಹಿಮೋಫಿಲಿಯಾ’ಗೆ ಚಿಕಿತ್ಸೆ ದುಬಾರಿ ಅಷ್ಟೇ ಅಲ್ಲ, ನೋವಿನ ಜತೆಗೆ ಆಸ್ಪತ್ರೆ ತಲುಪುವುದೇ ದೊಡ್ಡ ಸವಾಲು. ಇದನ್ನು ಮನಗಂಡು ದಾವಣಗೆರೆಯ ಕರ್ನಾಟಕ ಹಿಮೋಫಿಲಿಯಾ ಸೊಸೈಟಿಯು ಸಂಚಾರಿ ಚಿಕಿತ್ಸಾ ಘಟಕದ ಸೌಲಭ್ಯವನ್ನು ಇದೇ ತಿಂಗಳಲ್ಲಿ ಆರಂಭಿಸುತ್ತಿದೆ.

    ಈ ಪ್ರಯತ್ನ ದೇಶದಲ್ಲೇ ಮೊದಲು ಎನ್ನಲಾಗುತ್ತಿದೆ. ಮಧ್ಯ ಕರ್ನಾಟಕದ ದಾವಣಗೆರೆಯಿಂದ ನೂರು ಕಿ.ಮೀ. ಸುತ್ತಳತೆಯಲ್ಲಿ ಬರುವ ನಾಲ್ಕೈದು ಜಿಲ್ಲೆಗಳ 400 ರೋಗಿಗಳಿಗೆ ಇದು ವರದಾನವಾಗಲಿದೆ. ನೆರೆಯ ಚಿತ್ರದುರ್ಗ, ಹಾವೇರಿ, ಶಿವಮೊಗ್ಗ, ವಿಜಯನಗರ, ಬಳ್ಳಾರಿ ಜಿಲ್ಲೆಗಳ ಗ್ರಾಮೀಣ ಪ್ರದೇಶದ ಹಿಮೋಫಿಲಿಯಾ ರೋಗಿಗಳು ತೀವ್ರ ರಕ್ತಸ್ರಾವದ ಸಂದರ್ಭದಲ್ಲಿ ಒಂದು ದೂರವಾಣಿ ಕರೆ ಮಾಡಿದರೆ ಸಾಕು ಮನೆ ಬಾಗಿಲಿಗೇ ವಾಹನ ಬರಲಿದೆ.

    ದೇಹದಲ್ಲಿ ರಕ್ತ ಹೆಪ್ಪುಗಟ್ಟದೇ ನಿರಂತರ ರಕ್ತಸ್ರಾವದಿಂದ ರೋಗಿಗಳು ಬಳಲುವ ಕಾಯಿಲೆಯೇ ಹಿಮೋಫಿಲಿಯಾ. ಕೊರತೆ ಆಗಿರುವ ಪ್ರೋಟೀನುಗಳನ್ನು ರಕ್ತಸ್ರಾವ ಆದಾಗ ಇಂಜೆಕ್ಷನ್ ಮೂಲಕ ನೀಡಲು ವಿಳಂಬವಾಗುತ್ತಿದೆ. ದೂರದ ಊರುಗಳಿಂದ ಬಂದು ಚಿಕಿತ್ಸೆ ಪಡೆಯಲು ರೋಗಿಗಳಿಗೆ ಕಷ್ಟವಾಗುತ್ತಿದೆ. ಇದು ಅಂಗವಿಕಲತೆಗೆ ದಾರಿಯಾಗುವ ಅಪಾಯವೂ ಇರುತ್ತದೆ. ಅದರಲ್ಲೂ ಮಾರಣಾಂತಿಕ ರಕ್ತಸ್ರಾವ ಆದಾಗ ಜೀವ ಉಳಿಸಿಕೊಳ್ಳಲು ಬೇಗನೆ ಫ್ಯಾಕ್ಟರ್ (ಔಷಧ) ನೀಡಬೇಕಾಗುತ್ತದೆ. ಒಂದು ನಿಮಿಷವೂ ವ್ಯರ್ಥವಾಗಬಾರದು. ಅದರಲ್ಲೂ ಮೆದುಳು, ಹೊಟ್ಟೆಯಲ್ಲಿ ರಕ್ತಸ್ರಾವವಾದಾಗ ಹೆಚ್ಚಿನ ಎಚ್ಚರಿಕೆ ವಹಿಸಬೇಕಾಗುತ್ತದೆ.

    ಸಂಚಾರಿ ವಾಹನ ರೋಗಿಯ ಮನೆಗೇ ಹೋಗುವುದರಿಂದ ಸಮಯ ಉಳಿತಾಯವಾಗುತ್ತದೆ. ಇಂಜೆಕ್ಷನ್ ನೀಡಿ ಅದೇ ವಾಹನದಲ್ಲಿ ಕೇಂದ್ರಕ್ಕೆ ಕರೆತಂದು ಮುಂದಿನ ಚಿಕಿತ್ಸೆ ನೀಡಲಾಗುವುದು.
    ದೇಹದೊಳಗೆ ರಕ್ತಸ್ರಾವವಾಗುವ ಮುನ್ಸೂಚನೆ ಗ್ರಹಿಸಲು ರೋಗಿಗಳಿಗೆ ಕಾರ್ಯಾಗಾರ ಮಾಡಿ ಮಾಹಿತಿ ನೀಡುವ ಯೋಜನೆಯನ್ನೂ ಕರ್ನಾಟಕ ಹಿಮೋಫಿಲಿಯಾ ಸೊಸೈಟಿ ಹಾಕಿಕೊಂಡಿದೆ. ಮೆದುಳಿನಲ್ಲಿ ರಕ್ತಸ್ರಾವವಾದರೆ ಐಸಿಯು ಬೇಕಾಗುತ್ತದೆ. ಅಂಥವರನ್ನು ಸಮೀಪದ ತುರ್ತು ಚಿಕಿತ್ಸಾ ಘಟಕಕ್ಕೆ ಕರೆದುಕೊಂಡು ಹೋಗಲಾಗುವುದು.

    ರೋಟರಿ ಸಂಸ್ಥೆಯ ನೆರವು: ಕರ್ನಾಟಕ ಹಿಮೋಫಿಲಿಯಾ ಸೊಸೈಟಿಯ ಈ ಯೋಜನೆಗೆ ಕೈಜೋಡಿಸಿರುವ ರೋಟರಿ ಫೌಂಡೇಷನ್ ಮತ್ತು ದಾವಣಗೆರೆಯ ರೋಟರಿ ದಕ್ಷಿಣ ಸಂಸ್ಥೆಯವರು ಸಂಚಾರಿ ಚಿಕಿತ್ಸಾ ವಾಹನಕ್ಕೆ ಬೇಕಾದ 31 ಲಕ್ಷ ರೂ. ನೀಡಿದ್ದಾರೆ. ಸುಸಜ್ಜಿತವಾದ ಈ ವಾಹನ ಹವಾನಿಯಂತ್ರಣ ವ್ಯವಸ್ಥೆ ಹೊಂದಿದೆ. ಜೀವರಕ್ಷಕ ಔಷಧಗಳು, ತುರ್ತು ಚಿಕಿತ್ಸೆ, ಸ್ಥಳಾಂತರದ ವ್ಯವಸ್ಥೆಯನ್ನು ಒಳಗೊಂಡಿದೆ. ಈ ಘಟಕದಲ್ಲಿ ಸ್ಟಾಫ್ ನರ್ಸ್, ಮೆಡಿಕೋ ಸೋಷಿಯಲ್ ವರ್ಕರ್ ಇರುತ್ತಾರೆ. ಚಾಲಕನಿಗೂ ಚಿಕಿತ್ಸೆಯ ಪ್ರಾಥಮಿಕ ಜ್ಞಾನ ಇರುವಂತೆ ತರಬೇತಿ ನೀಡಲಾಗಿದೆ.

    ಇದು 8-10 ವರ್ಷದ ಕನಸು. 32 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದೇವೆ, ಸರ್ಕಾರವೂ ಕೈಜೋಡಿಸಿದೆ. ಇಷ್ಟೆಲ್ಲ ಪ್ರಯತ್ನಗಳು ನಡೆದಿದ್ದರೂ, ಅಂಗವಿಕಲತೆ ತಡೆಗಟ್ಟಿ, ರೋಗಿಗಳನ್ನು ನೋವು ಮುಕ್ತಗೊಳಿಸುವಲ್ಲಿ ಸಂಪೂರ್ಣ ಯಶಸ್ಸು ಸಿಕ್ಕಿಲ್ಲ. ಹಾಗಾಗಿಯೇ ಸಂಚಾರಿ ಚಿಕಿತ್ಸಾ ಘಟಕದ ಕಲ್ಪನೆ ಬಂದಿತು. ಇದರಿಂದ ರೋಗಿಗಳಿಗೆ ಅರಿವು ಮೂಡಿಸುವುದು, ವೈದ್ಯರು, ನರ್ಸ್‌ಗಳಿಗೆ ತರಬೇತಿ ನೀಡಲು ಅನುಕೂಲವಾಗಲಿದೆ.
    ಡಾ.ಸುರೇಶ ಹನಗವಾಡಿ ಅಧ್ಯಕ್ಷರು,
    ಕರ್ನಾಟಕ ಹಿಮೋಫಿಲಿಯಾ ಸೊಸೈಟಿ, ದಾವಣಗೆರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts