More

    ಮಧ್ಯಕರ್ನಾಟಕದಲ್ಲಿ ಜೂ. ಇಂದಿರಾ ಮೇನಿಯಾ

    ದಾವಣಗೆರೆ: ದಾವಣಗೆರೆಗೆ 1980ರಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿ ಲೋಕಸಭಾ ಚುನಾವಣಾ ಪ್ರಚಾರದ ಹಿನ್ನೆಲೆಯಲ್ಲಿ ಆಗಮಿಸಿ, ನಗರದೇವತೆ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದರು. ಇದಾದ ಸುಮಾರು 44 ವರ್ಷದ ಬಳಿಕ ಅವರ ಮೊಮ್ಮಗಳು ಪ್ರಿಯಾಂಕ ಗಾಂಧಿ (ಜೂನಿಯರ್ ಇಂದಿರಾ) ಪ್ರಿಯಾಂಕ ಗಾಂಧಿ ಚೊಚ್ಚಲ ಬಾರಿಗೆ ಆಗಮಿಸಿ ಕಾರ್ಯಕರ್ತರ ಉತ್ಸಾಹ ಇಮ್ಮಡಿಗೊಳಿಸಿದರು.
    ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಪರ ನಗರದ ಹೈಸ್ಕೂಲ್ ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ಪ್ರಜಾಧ್ವನಿ-2 ಸಮಾವೇಶಕ್ಕೆ ಆಗಮಿಸಿದ್ದ ಪ್ರಿಯಾಂಕ ಗಾಂಧಿ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿಯೊಂದಿಗೆ ನೋಡುಗರ ಗಮನ ಸೆಳೆದರು.
    ನಿರೀಕ್ಷೆಯಂತೆ ಮಧ್ಯಾಹ್ನ 3-45ಕ್ಕೆ ಹೈಸ್ಕೂಲ್ ಮೈದಾನಕ್ಕೆ ಹಾಜರಾಗಬೇಕಿತ್ತು. ಬಿರುಬಿಸಿಲಿನಲ್ಲೂ ಕಾರ್ಯಕರ್ತರು ಮಧ್ಯಾಹ್ನ 1 ಗಂಟೆಗೆ ಸಮಾವೇಶಕ್ಕೆ ಹಾಜರಾಗಿ ಪ್ರಿಯಾಂಕ ಎದುರು ನೋಡುತ್ತಿದ್ದರು.
    ಗುಜರಾತ್ ಚುನಾವಣಾ ಪ್ರಚಾರದ ಹಿನ್ನೆಲೆಯಲ್ಲಿ ಪ್ರಿಯಾಂಕ, ಅಹಮದಾಬಾದ್‌ನಿಂದ ಶಿವಮೊಗ್ಗದ ಮೂಲಕವಾಗಿ ಹೆಲಿಕ್ಯಾಪ್ಟರ್‌ನಲ್ಲಿ ದಾವಣಗೆರೆ ಬಂದು, ಸಮಾವೇಶದ ವೇದಿಕೆ ಹತ್ತಿದಾಗ ಸಮಯ ಸಂಜೆ 5-04 ನಿಮಿಷವಾಗಿತ್ತು. ತಡವಾಗಿ ಬಂದಿದ್ದಕ್ಕೆ ಜನರ ಕ್ಷಮೆ ಕೇಳಿದರು. ಅವರ ಹಿಂದಿ ಭಾಷಣವನ್ನು ಶಾಸಕ ಶರತ್ ಬಚ್ಚೇಗೌಡ ಕನ್ನಡದಲ್ಲಿ ಅನುವಾದಿಸಿದರು.
    ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯ ಪದುಮನಾಭನ ಪಾದ ಭಜನೆ ಸುಖವಯ್ಯ.. ಎಂಬ ಪುರಂದರದಾಸರ ಹಾಡನ್ನು ಸ್ಮರಿಸಿದರು. ಗೃಹಲಕ್ಷ್ಮಿ ಯೋಜನೆೆ ಉದ್ಘಾಟನೆ ಮಾಡಿದ್ದಲ್ಲದೆ, ಸಿಎಂ ಹಾಗೂ ನನ್ನಿಂದ ಸಹಿ ಹಾಕಿಸಿದ್ದ ಪ್ರಿಯಾಂಕ ಇಂದು ದಾವಣಗೆರೆಗೆ ಬಂದಿರುವುದು ನಮ್ಮ ಭಾಗ್ಯ ಎಂದು ಹೇಳಿದರು. ಇದೇವೇಳೆ ಜರ್ಮನ್ ಸಿಲ್ವರ್‌ನ ಕಪ್ ಮಾದರಿಯ ಸ್ಮರಣಿಕೆಯೊಂದನ್ನು ಪ್ರಿಯಾಂಗ ಅವರಿಗೆ ನೀಡಿ ಗೌರವಿಸಲಾಯಿತು.
    ಅವು ಬರುವ ಮುನ್ನವೇ ಭಾಷಣ ಮಾಡಿದ ಸಿಎಂ ಸಿದ್ದರಾಮಯ್ಯ ಚಿಕ್ಕೋಡಿ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಆತುರದಲ್ಲಿ ಹೆಜ್ಜೆ ಹಾಕಿದರು. ಅವರಿಗೆ ಜಿಲ್ಲಾ ಕಾಂಗ್ರೆಸ್ ವತಿಯಿಂದ ಬೆಳ್ಳಿ ಗದೆ ನೀಡಿ ಗೌರವಿಸಲಾಯಿತು.
    ತುಮಕೂರಿನ ಮುತ್ತುರಾಜ್ ಎಂಬುವರು ಸಮಾವೇಶದ ಎದುರಿನ ವೇದಿಕೆಯಲ್ಲಿ ಮಹಾತ್ಮ ಗಾಂಧೀಜಿಯ ಛದ್ಮವೇಷದಲ್ಲಿ ಕೆಲ ಹೊತ್ತು ನಿಂತು ಗಮನ ಸೆಳೆದರು. ಸಿದ್ದರಾಮಯ್ಯ ಭಾಷಣದ ಹೊತ್ತಿಗೆ ಕೆಳಗಿಳಿದರು. ಕಾರ್ಯಕ್ರಮದಲ್ಲಿ ಕೆಲವಡೆ ಕಾರ್ಯಕರ್ತರ ನಡುವೆ ಗದ್ದಲ ನಡೆಯಿತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts