More

    ಅದೃಷ್ಟದ ನೆಲ ತರಬಲ್ಲದೆ ಸಿದ್ದುಗೆ ಬಲ: ರಾಜಕೀಯ ಪಕ್ಷಗಳಿಗೆ ಮರುಹುಟ್ಟು ನೀಡಿದ ದಾವಣಗೆರೆ..

    | ನವೀನ ಎಂ.ಬಿ. ದಾವಣಗೆರೆ

    ರಾಜಕೀಯ ಪಕ್ಷಗಳಿಗೆ ಮರುಹುಟ್ಟು ನೀಡುತ್ತ ಬಂದಿರುವ ಸಮಾವೇಶಗಳ ನಗರಿ ದಾವಣಗೆರೆ ಇದೀಗ ಮತ್ತೊಂದು ಉತ್ಸವಕ್ಕೆ ಸಿದ್ಧವಾಗುತ್ತಿದೆ. ಮೆಲ್ನೋಟಕ್ಕೆ ಇದು ಸಿದ್ದರಾಮೋತ್ಸವ ಆಗಿದ್ದರೂ ಇದರ ಹಿಂದಿರುವುದು ಮಾತ್ರ ಅದೇ ಅಧಿಕಾರ ನಂಬಿಕೆಯ ಲೆಕ್ಕಾಚಾರ!

    ಮುಖ್ಯಮಂತ್ರಿ ಆದವರು ಚಾಮರಾಜನಗರಕ್ಕೆ ಹೋದರೆ ಅಧಿಕಾರ ಹೋಗುತ್ತದೆ ಎಂಬ ನಂಬಿಕೆ ರಾಜಕೀಯ ವಲಯದಲ್ಲಿ ಹೇಗೆ ಬೇರೂರಿದೆಯೋ ಹಾಗೆಯೇ ದಾವಣಗೆರೆ ನೆಲದಲ್ಲಿ ನಿಂತು ಚುನಾವಣಾ ಕಹಳೆ ಊದಿದರೆ ಅಧಿಕಾರ ಕಟ್ಟಿಟ್ಟ ಬುತ್ತಿ ಎಂಬ ವಿಶ್ವಾಸ, ನಂಬಿಕೆ ರಾಜಕೀಯ ಪಕ್ಷಗಳಿಗಿದೆ.

    ಮೈಸೂರು, ಬೆಂಗಳೂರು, ಹುಬ್ಬಳ್ಳಿಯಂಥ ನಗರಗಳನ್ನು ಪಕ್ಕಕ್ಕಿಟ್ಟು ದಾವಣಗೆರೆ ಆಯ್ಕೆ ಮಾಡಿಕೊಳ್ಳಲು ಇದೂ ಒಂದು ಕಾರಣವಿರಬಹುದು. ಭೌಗೋಳಿಕವಾಗಿ ಕರ್ನಾಟಕದ ಮಧ್ಯಭಾಗದಲ್ಲಿರುವ ಈ ಊರಿಗೆ ರಾಜ್ಯದ ಉತ್ತರ- ದಕ್ಷಿಣ ಭಾಗದಿಂದ ಜನರು ಬರಲು ಅನುಕೂಲವಾಗುತ್ತದೆ ಎಂಬ ಅಂಶವೂ ಹೌದಿರಬಹುದು.

    ಇತಿಹಾಸದ ಪುಟಗಳನ್ನು ತಿರುವಿ ಹಾಕುತ್ತ ಹೋದರೆ ರಾಜಕೀಯ ಪಕ್ಷಗಳಿಗೆ ಅಧಿಕಾರದ ಊಟ ಉಣಬಡಿಸಿದ ಅದೃಷ್ಟದ ನೆಲ ದಾವಣಗೆರೆ ಎಂಬುದು ಆಗಾಗ ಸಾಬೀತಾಗಿದೆ. ಹಾಗೆ ನೋಡಿದರೆ ಜನತಾ ಪರಿವಾರಕ್ಕೆ ಮರು ಹುಟ್ಟು ನೀಡಿದ್ದೇ ದಾವಣಗೆರೆ. ದಶ ದಿಕ್ಕುಗಳಿಂದ ದಾವಣಗೆರೆಗೆ ಸಮಾವೇಶವು 1994ರಲ್ಲಿ ಜನತಾದಳಕ್ಕೆ ಅಧಿಕಾರ ತಂದುಕೊಟ್ಟಿತು. ಇದಾದ ಮೇಲೆ ಹಲವು ಪಕ್ಷಗಳ ರಾಜಕೀಯ ಸಭೆ- ಸಮಾವೇಶಗಳ ಜಾತ್ರೆ ಇಲ್ಲಿ ನಡೆದಿದೆ. ಕಾಂಗ್ರೆಸ್, ಬಿಜೆಪಿ ಕೂಡ ತಮ್ಮ ಅದೃಷ್ಟ ಪರೀಕ್ಷಿಸಿ ಯಶಸ್ವಿಯಾಗಿವೆ.

    ಹೆಗಡೆ, ಗೌಡರು, ಪಟೇಲರಿಂದ ಹಿಡಿದು, ಎಸ್.ಎಂ. ಕೃಷ್ಣ, ಎಸ್.ಬಂಗಾರಪ್ಪ, ಬಿ.ಎಸ್.ಯಡಿಯೂರಪ್ಪ ಅವರವರೆಗೆ ಎಲ್ಲರಿಗೂ ಈ ನೆಲದ ಆಶೀರ್ವಾದ ಸಿಕ್ಕಿದೆ. ಇದೀಗ ಸಿದ್ದರಾಮೋತ್ಸವದ ಸರದಿ. ಈ ಉತ್ಸವ ಸಿದ್ದು ಕೈ ಬಲ ಪಡಿಸಬಲ್ಲದೇ ಎಂಬ ಪ್ರಶ್ನೆಗಳಿಗೆ ಬರಲಿರುವ ಚುನಾವಣೆಯಲ್ಲಿ ಉತ್ತರ ಸಿಗಲಿದೆ.

    ದಾವಣಗೆರೆ ಸಮಾವೇಶಗಳ ಹಿನ್ನೋಟ

    • 1980ರಲ್ಲಿ ದಾವಣಗೆರೆ ಪಕ್ಕದ ಕೊಂಡಜ್ಜಿಯಲ್ಲಿ ಎರಡು ದಿನ ಜನತಾ ಪಕ್ಷದ ಸಮಾವೇಶ ನಡೆದಿತ್ತು. ಬಿಹಾರದ ಕರ್ಪರಿ ಠಾಕೂರ್, ಜಾರ್ಜ್ ಫರ್ನಾಂಡೀಸ್, ರಾಮಕೃಷ್ಣ ಹೆಗಡೆ, ದೇವೇಗೌಡರು, ಜೆ.ಎಚ್. ಪಟೇಲ್, ನಜೀರ್ ಸಾಬ್ ಭಾಗವಹಿಸಿದ್ದರು.
    • 1994ರ ಚುನಾವಣೆ ಪೂರ್ವದಲ್ಲಿ ಹೆಗಡೆ- ಗೌಡರು- ಪಟೇಲರ ನೇತೃತ್ವದಡಿ ಜನತಾದಳ ದಶದಿಕ್ಕುಗಳಿಂದ ದಾವಣಗೆರೆಗೆ ಸಮಾವೇಶ ಆಯೋಜಿಸಿತ್ತು. ಅಭೂತಪೂರ್ವ ಗೆಲುವು ದಾಖಲಿಸಿ ಆಡಳಿತದ ಚುಕ್ಕಾಣಿ ಹಿಡಿದಿತ್ತು.
    • ಕಾಂಗ್ರೆಸ್​ನಿಂದ ಹೊರಬಂದ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಕೆಸಿಪಿ ಸಮಾವೇಶ ಸಂಘಟಿಸುವ ಮೂಲಕ ಮುಂದಿನ ಚುನಾವಣೆಯಲ್ಲಿ 10 ಸ್ಥಾನ ಗಳಿಸಿ ಕೈ ಪಾಳಯಕ್ಕೆ ಪೆಟ್ಟು ಕೊಟ್ಟಿದ್ದರು.
    • 1999ರಲ್ಲಿ ಎಸ್.ಎಂ.ಕೃಷ್ಣ ಅಧಿಕಾರಕ್ಕೆ ಬರುವ ಮುನ್ನ ಕಾಂಗ್ರೆಸ್ ಆಯೋಜಿಸಿದ್ದ ಸಮಾವೇಶದಲ್ಲಿ ಸೋನಿಯಾ ಗಾಂಧಿ ಭಾಷಣ ಮಾಡಿದ್ದರು. ಅದೇ ವರ್ಷ ಕೃಷ್ಣ ಪಾಂಚಜನ್ಯ ರಥವೇರಿ ಆಗಮಿಸಿದ್ದರು. ಆಗಲೂ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು.
    • ಬಂಗಾರಪ್ಪ ಬಿಜೆಪಿ ತೊರೆದು ಸಮಾಜವಾದಿ ಪಕ್ಷದ ಸೈಕಲ್ ತುಳಿದಾಗ ಉತ್ತರ ಪ್ರದೇಶದ ಆಗಿನ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಹಾಗೂ ಅಮರಸಿಂಗ್, ಜಯಮಾಲಾ, ಜಯಪ್ರದಾ ಅವರನ್ನು ಕರೆಸಿ ಸಮಾವೇಶ ಸಂಘಟಿಸಿದ್ದರು.
    • ಜನತಾದಳ ವಿಭಜನೆಯಾಗಿ ಜೆಡಿಯು ಪಕ್ಷವು ಎನ್​ಡಿಎ ಜತೆ ಕೈ ಜೋಡಿಸಿದಾಗ ದಾವಣಗೆರೆಯಲ್ಲಿ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಎಲ್.ಕೆ.ಆಡ್ವಾಣಿ – ಹೆಗಡೆ – ಪಟೇಲ್ ಭಾಗವಹಿಸಿದ್ದರು.
    • ದಾವಣಗೆರೆಯಲ್ಲಿ ಸಮವೇಶ ನಡೆಸುವಲ್ಲಿ ಬಿಜೆಪಿಯೂ ಹಿಂದೆ ಬಿದ್ದಿಲ್ಲ. ಟ್ವೆಂಟಿ- ಟ್ವೆಂಟಿ ಸರ್ಕಾರ ಪತನವಾದಾಗ ತುಮಕೂರಿನಿಂದ ರಥವೇರಿ ಬಂದಿದ್ದ ಯಡಿಯೂರಪ್ಪ ದಾವಣಗೆರೆಯಲ್ಲಿ ಸಮಾವೇಶ ನಡೆಸಿದ್ದರು. ಆನಂತರ ನಡೆದ ಚುನಾವಣೆಯಲ್ಲಿ ಅಧಿಕಾರದ ರುಚಿ ಅನುಭವಿಸಿದ್ದರು.
    • 80ರ ದಶಕದಲ್ಲಿ ಅಧಿಕಾರಕ್ಕೆ ಅಂದುಕೊಳ್ಳದೆ ಹೋದರೂ ಭಾರತೀಯ ಕಮ್ಯುನಿಸ್ಟ್ ಪಕ್ಷ ಕೂಡ ಸಮಾವೇಶ ಆಯೋಜಿಸಿತ್ತು.
    • 2012ರಲ್ಲಿ ಕಾಗಿನೆಲೆ ಸ್ವಾಮೀಜಿ ನೇತೃತ್ವದಲ್ಲಿ ಸಿದ್ದರಾಮಯ್ಯ ಕುರುಬರ ಸಮಾವೇಶ ಮಾಡುವ ಮೂಲಕ ಸಮುದಾಯದ ಶಕ್ತಿ ಪ್ರದರ್ಶನ ಮಾಡಿದ್ದರು.

    ಸಿದ್ದರಾಮೋತ್ಸವಕ್ಕೆ ಬೊಮ್ಮಾಯಿ ಟಾಂಗ್

    ದಾವಣಗೆರೆ: ಶಿವಯೋಗಿ ಸಿದ್ಧರಾಮೇಶ್ವರ ದೇವರ ರಥೋತ್ಸವ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಸಿದ್ಧರಾಮೇಶ್ವರರು ಕಾಯಕದ ಮೂಲಕ ಅರಿವು ಮೂಡಿಸಿದರು. ಅವರ ವಚನಗಳು ಸತ್ಯ ದರ್ಶನ ಮಾಡಿಸುತ್ತವೆ ಎಂದು ಹೇಳಿದರು. ಸಿದ್ಧರಾಮೇಶ್ವರ ರಥೋತ್ಸವ ನಿತ್ಯೋತ್ಸವ ಆಗಬೇಕು. ಆಗ ಕಾಯಕ, ಶ್ರಮ, ಜ್ಞಾನ, ಬೆವರಿಗೆ ಗೌರವ ಬರುತ್ತದೆ, ದೇಶ ಕಟ್ಟುವ ಕೆಲಸವಾಗುತ್ತದೆ. ‘ಯಾವತ್ತೋ ಒಂದು ದಿನ ಉತ್ಸವ ಮಾಡುವುದಲ್ಲ. ನಿತ್ಯೋತ್ಸವ ಸಿದ್ದರಾಮೇಶ್ವರ ದೇವರಿಗೆ ಆಗಬೇಕು, ಮತ್ತೆ ಯಾರಿಗಾದರೂ ಮಾಡೀರಿ’ ಎನ್ನುವ ಮೂಲಕ ಸಿದ್ದರಾಮಯ್ಯ ಅವರ 75ನೇ ಜನ್ಮದಿನಾಚರಣೆಗೆ ಸಿಎಂ ಟಾಂಗ್ ಕೊಟ್ಟರು.

    ಸಿದ್ದರಾಮೋತ್ಸವದಿಂದ ನಮಗೆ ಆಪತ್ತಿಲ್ಲ. ನಾವು ಸಿದ್ದರಾಮ ದೇವರ ಆರಾಧಕರು. ದೇವರ ಉತ್ಸವವನ್ನು ನಿತ್ಯ ಮಾಡುತ್ತೇವೆ.

    | ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ

    ಕಾಂಗ್ರೆಸ್​ನಲ್ಲಿ ಅರ್ಧ ಡಜನ್​ಗೂ ಹೆಚ್ಚು ಸಿಎಂ ಆಕಾಂಕ್ಷಿಗಳಿದ್ದಾರೆ. ರಾಜ್ಯದಲ್ಲಿ ನಾವು ಮತ್ತೆ ಅಧಿಕಾರಕ್ಕೆ ಬರುವುದು ಖಚಿತ. ಶಾಸಕಾಂಗ ಪಕ್ಷದ ಸಭೆ ಹಾಗೂ ಸಂಸದೀಯ ಮಂಡಳಿ ತೀರ್ವನದಂತೆ ನಮ್ಮಲ್ಲಿ ನಾಯಕನ ಆಯ್ಕೆ ನಡೆಯಲಿದೆ. ಬೊಮ್ಮಾಯಿ ಅವರ ನಾಯಕತ್ವದಲ್ಲೇ ಚುನಾವಣೆ ಎದುರಿಸುತ್ತೇವೆ. ಸಿದ್ದರಾಮಯ್ಯ ತಮಿಳುನಾಡಿನಲ್ಲಿ ಪ್ರಶಸ್ತಿ ಸ್ವೀಕರಿಸುವ ವೇಳೆ ನೀಡಿದ ಹೇಳಿಕೆ ಭಾರತದ ಸಮಗ್ರತೆಗೆ ವಿರುದ್ಧವಾದುದು. ಕನ್ನಡವನ್ನು ಇನ್ನೊಂದು ಭಾಷೆ ವಿರುದ್ಧ ಎತ್ತಿ ಕಟ್ಟಬಾರದು.

    | ಸಿ.ಟಿ.ರವಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ

    ಇಂದು ಡಿಕೆಶಿ ಭವಿಷ್ಯ ನಿರ್ಧಾರ

    ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವಿಚಾರಣೆ ಪೂರ್ಣಗೊಂಡಿದ್ದು, ಮಂಗಳವಾರ ತೀರ್ಪು ಹೊರಬೀಳಲಿದೆ. ಈ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್ ದೆಹಲಿಗೆ ತೆರಳಲಿದ್ದು, ಕೋರ್ಟ್ ಕಲಾಪದಲ್ಲಿ ಹಾಜರಾಗುವರು. ಅಕ್ರಮ ಆಸ್ತಿ ಗಳಿಸಿದ್ದಾರೆಂಬ ದೂರಿನ ಆಧಾರದಲ್ಲಿ ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸಿತ್ತು, ಅವರು ಬಂಧನಕ್ಕೂ ಒಳಗಾಗಿ ತಿಹಾರ ಜೈಲಿನಲ್ಲಿ ಕೆಲಕಾಲ ಕಳೆದಿದ್ದರು. ಬಳಿಕ ಜಾಮೀನಿನ ಮೇಲೆ ಹೊರಬಂದಿದ್ದರು. ಜಾರಿ ನಿರ್ದೇಶನಾಲಯ ಜಾಮೀನು ಕೊಡುವುದಕ್ಕೆ ನ್ಯಾಯಾಲಯದಲ್ಲಿ ಆಕ್ಷೇಪಣೆ ಕೂಡ ಸಲ್ಲಿಸಿತ್ತು. ಮಂಗಳವಾರ ಸಂಜೆ ಅವರು ದೆಹಲಿಯಿಂದ ರಾಹುಲ್ ಗಾಂಧಿ ಜತೆ ಹುಬ್ಬಳ್ಳಿಗೆ ಆಗಮಿಸಲಿದ್ದಾರೆ.

    ಡಿಕೆಶಿಗೆ ಮೊಯ್ಲಿ ಪರೋಕ್ಷ ಎಚ್ಚರಿಕೆ

    ಬಾಗಲಕೋಟೆ: ಕಾಂಗ್ರೆಸ್​ನಲ್ಲಿ ಸಿಎಂ ಸ್ಥಾನಕ್ಕೆ ಕಿತ್ತಾಟ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ ವೀರಪ್ಪ ಮೊಯ್ಲಿ, ಆರೋಗ್ಯಕರ ಚರ್ಚೆ ನಡೆದರೆ ತೊಂದರೆಯಿಲ್ಲ. ಆದರೆ, ಅದು ಅನಾರೋಗ್ಯದ ದಾರಿ ಹಿಡಿಯಬಾರದು. ನಾನೇ ಸಿಎಂ ಎಂದು ಲೋನ್ಲಿ ವಾಕ್ ಆಗಬಾರದು. ಸಮುದಾಯದ ವಾಕ್ ಆಗಬೇಕು ಎಂದಿದ್ದಾರೆ. ಸಿಎಂ ಸ್ಥಾನಕ್ಕಾಗಿ ಜಾತಿ ಅಸ್ತ್ರ ಬಳಕೆ ಮಾಡುವುದು ನೂರಕ್ಕೆ ನೂರು ತಪ್ಪು. ನಮ್ಮ ಸಮುದಾಯದಿಂದ ನಾನೊಬ್ಬನೇ ಸಿಎಂ ಆಗಿದ್ದು. ಒಂದೇ ಜಾತಿಯಿಂದ ಸಿಎಂ ಆಗಲು ಸಾಧ್ಯವಿಲ್ಲ. ಇದನ್ನು ರಾಜ್ಯ ಕಾಂಗ್ರೆಸ್ ಮುಖಂಡರು ತಿಳಿದುಕೊಳ್ಳಬೇಕು ಎಂದು ಪರೋಕ್ಷವಾಗಿ ಡಿ.ಕೆ. ಶಿವಕುಮಾರ್ ಅವರಿಗೆ ಎಚ್ಚರಿಕೆ ನೀಡಿದರು.

    ಕೈ ಪ್ರಣಾಳಿಕೆ ಸಮಿತಿಗೆ ಪರಮೇಶ್ವರ್ ಅಧ್ಯಕ್ಷ

    ಬೆಂಗಳೂರು: ವಿಧಾನಸಭಾ ಚುನಾವಣೆಗೆ ತಯಾರಿ ನಡೆಸಿರುವ ಕಾಂಗ್ರೆಸ್ ‘ಪ್ರಣಾಳಿಕೆ, ಪಾಲಿಸಿ ಮತ್ತು ವಿಜನ್ ಸಮಿತಿ’ಗೆ ಕೆಪಿಸಿಸಿ ಮಾಜಿ ಅಧ್ಯಕ್ಷ ಜಿ.ಪರಮೇಶ್ವರ್ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿದೆ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಸೂಚನೆಯಂತೆ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಈ ಸಂಬಂಧ ಆದೇಶ ಹೊರಡಿಸಿದ್ದು, ಮಾಜಿ ಶಾಸಕ ಮಧು ಬಂಗಾರಪ್ಪ ಹಾಗೂ ಪ್ರೊ.ರಾಧಾಕೃಷ್ಣ ಸಮಿತಿ ಉಪಾಧ್ಯಕ್ಷರಾಗಿದ್ದಾರೆ. ಜಿ. ಪರಮೇಶ್ವರ್ ಉಳಿದ ಸದಸ್ಯರನ್ನು ನೇಮಿಸಿಕೊಂಡು, ಉಪ ಸಮಿತಿಗಳನ್ನು ರಚಿಸಿಕೊಳ್ಳಲಿದ್ದಾರೆ.

    ಅದೃಷ್ಟದ ನೆಲ ತರಬಲ್ಲದೆ ಸಿದ್ದುಗೆ ಬಲ: ರಾಜಕೀಯ ಪಕ್ಷಗಳಿಗೆ ಮರುಹುಟ್ಟು ನೀಡಿದ ದಾವಣಗೆರೆ..
    ದಾವಣಗೆರೆಯಲ್ಲಿ ಆ.3ರಂದು ನಡೆಯಲಿರುವ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಜನ್ಮ ದಿನಾಚರಣೆ ಸಮಾರಂಭಕ್ಕಾಗಿ ಅವರ ಅಭಿಮಾನಿಗಳಾದ ಮಲ್ಲಪ್ಪ ಕುರಡಗಿ, ನಾಗರಾಜ ಧರ್ಮರ, ಹಾಲಪ್ಪ ಮೆಕ್ಕಲಕಿ, ರಾಮಪ್ಪ ಪೂಜಾರ ಅವರು ರೋಣ ತಾಲೂಕಿನ ಇಟಗಿ ಗ್ರಾಮದ ಭೀಮಾಂಬಿಕೆ ದೇವಸ್ಥಾನದಲ್ಲಿ 20 ಕ್ವಿಂಟಾಲ್ ಬೂಂದಿ ಲಾಡುಗಳನ್ನು ತಯಾರಿಸಿದ್ದಾರೆ.

    ಹುಬ್ಬಳ್ಳಿಯಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ದಿಕ್ಸೂಚಿ ಸಭೆ ಇಂದು

    ಹುಬ್ಬಳ್ಳಿ: ಮುಂದಿನ ರಾಜ್ಯ ವಿಧಾನಸಭೆ ಚುನಾವಣೆಯನ್ನು ಎದುರಿಸಲು ಕೆಪಿಸಿಸಿ ರಾಜಕೀಯ ವ್ಯವಹಾರಗಳ ಸಮಿತಿ ಜುಲೈ 9ರಂದಷ್ಟೇ ರಚನೆಗೊಂಡಿದೆ. ಈ ಸಮಿತಿಯ ಪ್ರಥಮ ಸಭೆ ಹುಬ್ಬಳ್ಳಿಯಲ್ಲಿ ಆ. 2ರಂದು ಸಂಜೆ 8 ಗಂಟೆಗೆ ನಡೆಯಲಿದೆ. ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಸಭೆ ನಡೆಯಲಿರುವುದು ವಿಶೇಷ. ಮುಂದಿನ ರಾಜಕೀಯ ನಡೆಯ ಜತೆಗೆ ಪ್ರಮುಖ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಯಲಿದೆ. ಕೇವಲ 37 ಮಂದಿಗೆ ಅವಕಾಶ ಕಲ್ಪಿಸಲಾಗಿದೆ.

    ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ, ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ, ಕೇಂದ್ರದ ಮಾಜಿ ಸಚಿವ ಕೆ.ಎಚ್. ಮುನಿಯಪ್ಪ, ಮಾರ್ಗರೇಟ್ ಆಳ್ವಾ, ಮಾಜಿ ಸಚಿವರಾದ ಎಚ್.ಕೆ.ಪಾಟೀಲ್, ಆರ್.ವಿ. ದೇಶಪಾಂಡೆ, ಅಲ್ಲಂ ವೀರಭದ್ರಪ್ಪ, ದಿನೇಶ್​ಗುಂಡೂರಾವ್, ಕೆ.ಜೆ.ಜಾರ್ಜ್ , ಕೃಷ್ಣ ಬೈರೇಗೌಡ, ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಈಶ್ವರ್ ಖಂಡ್ರೆ, ಸಲೀಂ ಅಹ್ಮದ್, ಸತೀಶ್ ಜಾರಕಿಹೊಳಿ, ಧ್ರುವನಾರಾಯಣ, ಸಂಸದ ಡಿ.ಕೆ. ಸುರೇಶ್, ಶಾಸಕರಾದ ಯು.ಟಿ. ಖಾದರ್, ಮಾಜಿ ಸ್ಪೀಕರ್ ರಮೇಶ್​ಕುಮಾರ್, ಸುನಿಲ್ ಕಾನುಗೋಳು, ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್, ಎನ್.ಎಸ್.ಬೋಸರಾಜು, ಸಂದೀಪ್ ಸಭೆಯಲ್ಲಿ ಪಾಲ್ಗೊಳ್ಳುವರು. ವಿಶೇಷ ಆಹ್ವಾನಿತರಾಗಿ ಮಾಜಿ ಸಚಿವರಾದ ಎಚ್.ಆಂಜನೇಯ, ರಮಾನಾಥ ರೈ, ವಿನಯ್ಕುಮಾರ್ ಸೊರಕೆ, ರಾಣಿ ಸತೀಶ್, ಉಮಾಶ್ರೀ , ಲಕ್ಷ್ಮೀ ಹೆಬ್ಬಾಳ್ಕರ್, ಡಾ.ಅಂಜಲಿ ನಿಂಬಾಳ್ಕರ್ ಪಾಲ್ಗೊಳ್ಳಲಿದ್ದಾರೆ.

    ಮೊದಲ ಅವಧಿಯಲ್ಲಿ ರಾಹುಲ್: ಖುದ್ದು ರಾಹುಲ್ ಗಾಂಧಿ ಅವರು ಈ ಸಭೆ ನಡೆಸುತ್ತಿರುವುದರಿಂದ ಮಹತ್ವ ಪಡೆದಿದೆ. ಸುಮಾರು ಒಂದೂವರೆ ಗಂಟೆ ಕಾಲ ನಡೆಯುವ ಸಭೆಯಲ್ಲಿ ಮೊದಲ ಅವಧಿಯಲ್ಲಿ ಮಾತ್ರ ರಾಹುಲ್ ಗಾಂಧಿ ಪ್ರಮುಖರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಮುಂದಿನ ಚುನಾವಣೆಗೆ ಹೇಗೆಲ್ಲ ಅಣಿಯಾಗಬೇಕು? ಎಂಥವರಿಗೆ ಟಿಕೆಟ್ ನೀಡಬೇಕು? ಚುನಾವಣೆಗೂ ಮುನ್ನ ಕೈಗೊಳ್ಳಬೇಕಾದ ಹೋರಾಟಗಳ ಬಗ್ಗೆ ತಿಳಿಹೇಳಲಿದ್ದಾರೆ. ಬಳಿಕ ಸಭೆಯಿಂದ ನಿರ್ಗಮಿಸಲಿದ್ದು, ಕೆ.ಸಿ. ವೇಣುಗೋಪಾಲ್ ಸಭೆ ಮುನ್ನಡೆಸಲಿದ್ದಾರೆಂಬ ಮಾಹಿತಿ ವಿಜಯವಾಣಿಗೆ ಲಭ್ಯವಾಗಿದೆ.

    ಮಹತ್ವದ ಮೀಟಿಂಗ್: ಕೆಪಿಸಿಸಿ ರಾಜಕೀಯ ವ್ಯವಹಾರಗಳ ಸಮಿತಿ ರಚನೆಗೊಂಡ ಕೇವಲ 20 ದಿನಗಳೊಳಗಾಗಿ ಸಭೆ ನಡೆಯುತ್ತಿದೆ. ವಿಧಾನಸಭೆ ಚುನಾವಣೆಗೆ ದಿಕ್ಸೂಚಿ ಆಗಲಿರುವುದರಿಂದ ಸಭೆ ಮಹತ್ವ ಪಡೆದುಕೊಂಡಿದೆ. ಪ್ರಮುಖವಾಗಿ ಟಿಕೆಟ್ ವಿಚಾರವಾಗಿ ಪಕ್ಷದ ನಿಲುವು ಏನು ಎನ್ನುವ ಬಗ್ಗೆ ಆಕಾಂಕ್ಷಿಗಳಲ್ಲಿ ಕುತೂಹಲ ಮನೆ ಮಾಡಿದೆ.

    ಜಿರಳೆ ಸಾಯಿಸಲು ಹೋಗಿ ಆರು ವರ್ಷದ ಬಾಲಕಿಯ ಸಾವಿಗೆ ಕಾರಣನಾದ ಮನೆ ಮಾಲೀಕ!

    ಮನೆ ಮೇಲೇ ಕುಸಿದ ಗುಡ್ಡ, ಮಕ್ಕಳಿಬ್ಬರು ಮಣ್ಣಿನಡಿ ಸಿಲುಕಿ ಸಾವು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts