More

    ವಿಧಾನಸಭಾ ಚುನಾವಣೆಗೆ ಜಿಲ್ಲಾಡಳಿತ ಸನ್ನದ್ಧ

    ದಾವಣಗೆರೆ: ಮೇ 10ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಜಿಲ್ಲಾಡಳಿತ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಹೇಳಿದರು.

    ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸಿದ್ಧತೆಗಳ ವಿವರವನ್ನು ನೀಡಿದರು. ಏ. 13ರಂದು ಚುನಾವಣಾ ಅಧಿಸೂಚನೆ ಹೊರಡಿಸಲಾಗುವುದು. ಏ. 20ಕ್ಕೆ ನಾಮಪತ್ರ ಸಲ್ಲಿಸಲು ಕೊನೆ ದಿನ. 21ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. 24ಕ್ಕೆ ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಕೊನೆ ದಿನ. ಮೇ 10ರಂದು ಮತದಾನ ನಡೆಯಲಿದೆ. 13ರಂದು ಮತಗಳ ಎಣಿಕೆ ಕಾರ್ಯ ನಡೆಯಲಿದೆ. ಮೇ 15ರೊಳಗೆ ಚುನಾವಣೆ ಮುಕ್ತಾಯವಾಗಲಿದೆ ಎಂದು ವಿವರಿಸಿದರು.

    ಮತದಾರರ ನೋಂದಣಿ ಹಾಗೂ ಮತದಾನದ ಮಹತ್ವದ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸಲು ಸ್ವೀಪ್ ಚಟುವಟಿಕೆ ಕೈಗೊಳ್ಳಲಾಗುವುದು. 18ರಿಂದ 19 ವರ್ಷದ ಯುವಕ ಯುವತಿಯರ ನೋಂದಣಿ ಪ್ರಕ್ರಿಯೆ ಹೆಚ್ಚಿಸುವ ನಿಟ್ಟಿನಲ್ಲಿ ಕಾಲೇಜು, ವಿವಿಗಳಲ್ಲಿ ಕ್ಯಾಂಪಸ್ ರಾಯಭಾರಿ ನೇಮಿಸಲಾಗಿದೆ. ಇದುವರೆಗೆ 18 ವರ್ಷ ಮೇಲ್ಪಟ್ಟ 30,091 ಯುವ ಮತದಾರರ ನೋಂದಣಿ ಮಾಡಲಾಗಿದೆ ಎಂದು ತಿಳಿಸಿದರು.

    ಚುನಾವಣೆಯನ್ನು ಶಾಂತಿಯುತವಾಗಿ ನಡೆಸುವ ನಿಟ್ಟಿನಲ್ಲಿ ಪೊಲೀಸ್ ಬಂದೋಬಸ್ತ್‌ಗೆ ಕ್ರಮ ತೆಗೆದುಕೊಳ್ಳಲಾಗುವುದು. ಜಿಲ್ಲೆಯಾದ್ಯಂತ ಪರವಾನಗಿ ಹೊಂದಿರುವ ಶಸ್ತ್ರಾಸ್ತ್ರಗಳನ್ನು ಸಂಬಂಧಿಸಿದ ಪೊಲೀಸ್ ಠಾಣೆಯಲ್ಲಿ ಠೇವಣಿ ಇರಿಸಲು ಆದೇಶ ಹೊರಡಿಸಲಾಗಿದೆ ಎಂದರು.

    ಆಯೋಗವು ಅಂಗವಿಕಲ, 80 ವರ್ಷ ಮೇಲ್ಪಟ್ಟ ಮತ್ತು ಕೋವಿಡ್ ಬಾಧಿತ ವ್ಯಕ್ತಿಗಳಿಗೆ ಮನೆಯಿಂದಲೇ ಅಂಚೆ ಮತಪತ್ರ ಮೂಲಕ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದರು.

    ಮಾದರಿ ನೀತಿ ಸಂಹಿತೆ: ಆಯೋಗವು ಚುನಾವಣೆ ವೇಳಾಪಟ್ಟಿ ಪ್ರಕಟಿಸುತ್ತಿದ್ದಂತೆ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದೆ. ಅದು ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. ಜಿಲ್ಲಾದ್ಯಂತ ವಿವಿಧ ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರಕ್ಕಾಗಿ ಅಳವಡಿಸಿರುವ ಫ್ಲೆಕ್ಸ್, ಬ್ಯಾನರ್, ಪೋಸ್ಟರ್‌ಗಳನ್ನು 48 ಗಂಟೆಯೊಳಗೆ ತೆರವುಗೊಳಿಸಲು ತಂಡ ರಚಿಸಲಾಗಿದೆ ಎಂದು ಹೇಳಿದರು.

    ಅಭ್ಯರ್ಥಿಗಳ ಚುನಾವಣಾ ವೆಚ್ಚ ಮಿತಿ: ಆಯೋಗವು ಚುನಾವಣೆಗೆ ಅಭ್ಯರ್ಥಿಗಳ ವೆಚ್ಚ ಮಿತಿ ಗರಿಷ್ಠ 40 ಲಕ್ಷ ರೂ. ನಿಗದಿಪಡಿಸಿದೆ. ಅಭ್ಯರ್ಥಿಗಳು ಅವರ ಚುನಾವಣಾ ವೆಚ್ಚಗಳ ವಿವರಗಳನ್ನು ನೋಡಿಕೊಳ್ಳಲು ಹೆಚ್ಚುವರಿಯಾಗಿ ವೆಚ್ಚ ಏಜೆಂಟರನ್ನು ನೇಮಕ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
    ಚುನಾವಣೆಯಲ್ಲಿ ಪ್ರಚಾರಕ್ಕಾಗಿ ಅಭ್ಯರ್ಥಿಯು ಬಳಸುವ ಎಲ್ಲ ವಾಹನಗಳಿಗೆ ಕಡ್ಡಾಯವಾಗಿ ಸಂಬಂಧಿಸಿದ ಚುನಾವಣಾಧಿಕಾರಿಯಿಂದ ಪರವಾನಗಿ ಪಡೆಯಬೇಕು ಎಂದು ಹೇಳಿದರು.

    ಮತಗಟ್ಟೆಗಳ ವಿವರ: ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 1683 ಮತಗಟ್ಟೆಗಳಿದ್ದು 2 ಹೆಚ್ಚುವರಿ ಮತಗಟ್ಟೆಗಳಿವೆ. ಅವುಗಳಿಗೆ 164 ಸೆಕ್ಟರ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಮತದಾನದ ದಿನ 840 ಮತಗಟ್ಟೆಗಳಲ್ಲಿ ಅಂತರ್ಜಾಲ ಸಂಪರ್ಕ ಬಳಸಿ ಮತದಾನ ಪ್ರಕ್ರಿಯೆಯನ್ನು ವೆಬ್‌ಕ್ಯಾಸ್ಟಿಂಗ್ ಮೂಲಕ ಚಿತ್ರೀಕರಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ಹೇಳಿದರು.
    ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 5 ಸಖಿ ಬೂತ್‌ಗಳು, ಅಂಗವಿಕಲರಿಗೆ 1 ಹಾಗೂ ಕೆಲವು ಕಡೆ ಮಾದರಿ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಈ ಬಾರಿ ಯುವ ಅಧಿಕಾರಿಗಳ ಮತಗಟ್ಟೆಗಳನ್ನು ಸ್ಥಾಪಿಸಲಿರುವುದು ವಿಶೇಷ ಎಂದು ತಿಳಿಸಿದರು.

    ಮತದಾರರ ವಿವರ: ಜಿಲ್ಲೆಯಲ್ಲಿ 7,15,168 ಪುರುಷರು, 7,12,510 ಮಹಿಳೆಯರು ಸೇರಿ ಒಟ್ಟು 14,28,262 ಒಟ್ಟು ಮತದಾರರಿದ್ದಾರೆ. 3241 ಬ್ಯಾಲಟ್ ಯೂನಿಟ್, 2274 ಕಂಟ್ರೋಲ್ ಯೂನಿಟ್, 2463 ವಿವಿಪ್ಯಾಟ್‌ಗಳನ್ನು ಮತದಾನ ಪ್ರಕ್ರಿಯೆಗೆ ಬಳಸಲಾಗುವುದು. ಅವುಗಳನ್ನು 2-3 ದಿನಗಳಲ್ಲಿ ವಿಧಾನಸಭಾ ಕ್ಷೇತ್ರಗಳಿಗೆ ಕಳಿಸಿ ಕೊಡಲಾಗುವುದು ಎಂದರು.

    ಜಿ.ಪಂ. ಸಿಇಒ ಡಾ.ಎ. ಚನ್ನಪ್ಪ, ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್, ಹೆಚ್ಚುವರಿ ಎಸ್ಪಿ ಆರ್.ಬಿ. ಬಸರಗಿ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts