More

    ರೀಲ್ಸ್‌ನಲ್ಲಿ ಮುಳುಗದಿರಿ, ಎತ್ತರದ ಕನಸು ಕಾಣಿ    ಸುಧಾ ಬರಗೂರು ಹೇಳಿಕೆ  ಮಲ್ಲಿಕಾ ಸಾಂಸ್ಕೃತಿಕ ಮೇಳ

    ದಾವಣಗೆರೆ: ಕೇವಲ 5ಜಿ, ರೀಲ್ಸ್, ಫೇಸ್‌ಬುಕ್‌ನಲ್ಲಿ ಕಳೆದುಹೋಗದಿರಿ, ಜೀವನದಲ್ಲಿ ಏನನ್ನಾದರೂ ಸಾಧಿಸುವ ಮಹತ್ತರ ಕನಸು ಕಾಣಿ ಎಂದು ಹಾಸ್ಯ ಪ್ರಸ್ತುತಿಗಾರ್ತಿ ಸುಧಾ ಬರಗೂರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
    ಜಿ.ಎಂ. ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಎರಡು ದಿನಗಳ ‘ಮಲ್ಲಿಕಾ-24.0’ ಅಂತರ ಕಾಲೇಜುಗಳ ಸಾಂಸ್ಕೃತಿಕ ಮೇಳ ಉದ್ಘಾಟಿಸಿ ಮಾತನಾಡಿದರು.
    ದೇಶದ ದೊಡ್ಡ ವಿಜ್ಞಾನಿ, ರಾಷ್ಟ್ರಪತಿಯೂ ಆಗಿದ್ದ ಡಾ. ಎ.ಪಿ.ಜೆ.ಅಬ್ದುಲ್ ಕಲಾಂ ಅವರು ಸರಳವಾಗಿ ಬದುಕಿದ್ದರು. ಅವರಂತಹ ಧೋರಣೆ, ಜೀವನದ ದೃಷ್ಟಿಕೋನ ಬೆಳೆಸಿಕೊಳ್ಳಿ. ನಮ್ಮದೇ ಕನಸುಗಳಿಂದ ಎತ್ತರಕ್ಕೆ ಬೆಳೆಯಬೇಕು, ಬೇರೊಬ್ಬರ ಕನಸುಗಳಿಂದಲ್ಲ ಎಂದು ಸಲಹೆ ನೀಡಿದರು.
    ಪ್ರತಿಭಾವಂತ ವಿದ್ಯಾರ್ಥಿಗಳ ಬಳಿ ಅಂಕಗಳಿರುತ್ತವೆ, ಆದರೆ ಧೈರ್ಯವೇ ಇರುವುದಿಲ್ಲ. ನಾನು ಓದಿನಲ್ಲಿ ಹಿಂದಿದ್ದರೂ ಧೈರ್ಯ ನನ್ನಲ್ಲಿತ್ತು. ಕಂಡ ಕನಸಿನಂತೆ ಹಾಸ್ಯ ಭಾಷಣಕಾರ್ತಿಯಾದೆ. 23 ರಾಷ್ಟ್ರಗಳಲ್ಲಿ ಕಾರ್ಯಕ್ರಮ ನೀಡಿ ಬಂದಿದ್ದೇನೆ. ಹೀಗಾಗಿ ಹೆಣ್ಣುಮಕ್ಕಳಲ್ಲಿ ಕೀಳಿರಿಮೆ ಬೇಡ ಎಂದು ತಿಳಿಸಿದರು.
    ಶಿಕ್ಷಕ ವೃತ್ತಿ ಉಳಿದೆಲ್ಲ ಕಾಯಕಕ್ಕಿಂತಲೂ ಶ್ರೇಷ್ಠ. ಒಬ್ಬ ವೈದ್ಯ ಕೆಟ್ಟವನಾದಲ್ಲಿ ಒಬ್ಬ ರೋಗಿ ಸಾಯಬಹುದು. ಆದರೆ ಒಬ್ಬ ಉತ್ತಮ ಶಿಕ್ಷಕ ಸಮಾಜವನ್ನೇ ಉಳಿಸಬಲ್ಲ. ವೈದ್ಯ, ಇಂಜಿನಿಯರ್, ಐಪಿಎಸ್ ಅಧಿಕಾರಿ, ಉದ್ಯಮಿ ಹಾಗೂ ರಾಜಕಾರಣಿ ಎಲ್ಲರಿಗೂ ಶಿಕ್ಷಣ ನೀಡುವ ತಾಕತ್ತು ಟೀಚರ್‌ಗೆ ಇದೆ. ಈ ವೃತ್ತಿಗೌರವ ಇರಲಿ ಎಂದು ಹೇಳಿದರು.
    ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ ನಮ್ಮ ತಂದೆ ಜಿ.ಮಲ್ಲಿಕಾರ್ಜುನಪ್ಪ ಅವರಿಗೆ ಶಿಕ್ಷಣದ ಬಗ್ಗೆ ಪ್ರೀತಿ ಇದ್ದುದರಿಂದ ಭೀಮಸಮುದ್ರದಲ್ಲಿ ಪ್ರೌಢಶಾಲೆ ತೆರೆದಿದ್ದರು. ನಾನೂ ಸಹ ಬಾಲವಿಕಾಸ ಶಾಲೆಯನ್ನು ಆರಂಭಿಸಿದೆ. ಇಂದು ಜಿಎಂಐಟಿ ಕಾಲೇಜಿನಲ್ಲಿ ಬಂದ ಗಳಿಕೆಯನ್ನು ಇಲ್ಲಿನ ಅಭಿವೃದ್ಧಿಗೆ ಬಿಟ್ಟಿದ್ದೇವೆ, ಮನೆತನಕ್ಕೆ ಬಳಸುತ್ತಿಲ್ಲ ಎಂದು ಹೇಳಿದರು.
    ತಂದೆ ನಂತರ ನಾನೂ ರಾಜಕಾರಣಕ್ಕೆ ಬಂದೆ. ನಾಲ್ಕು ಬಾರಿ ಸಂಸದನಾದೆ. ಸೋಲಿಲ್ಲದ ಸರದಾರ ಆಗಬೇಕೆಂಬುದನ್ನು ಸಾಧಿಸಿದೆ. ಜೂ. 16ಕ್ಕೆ ನಾನು ಸಂಸದ ಸ್ಥಾನದಿಂದ ನಿವೃತ್ತಿಯಾಗಲಿದ್ದೇನೆ. ಪತ್ನಿ ಗಾಯತ್ರಿ ಈ ಬಾರಿ ಸ್ಪರ್ಧಿಸಿದ್ದು ಏನಾಗುತ್ತದೆ ಎಂಬುದನ್ನು ಜೂ.4 ರ ಫಲಿತಾಂಶ ಕಾದು ನೋಡಬೇಕು ಎಂದರು.
    ಪಾಲಕರು ಮಕ್ಕಳನ್ನು ಕಷ್ಟಪಟ್ಟು ಶಿಕ್ಷಣ ಕಲ್ಪಿಸುತ್ತಾರೆ. ಹೀಗಾಗಿ ವಿದ್ಯಾರ್ಥಿಗಳಲ್ಲಿ ಗುರಿ ಮುಖ್ಯ. ದೇಶಸೇವೆ, ಜನಸೇವೆ ಮಾಡುವ ಮನೋಭಾವ ಬಂದಾಗ ಮಾತ್ರ ಓದು ಸಾರ್ಥಕತೆ ಪಡೆಯಲಿದೆ ಎಂದು ತಿಳಿಸಿದರು.
    ಶ್ರೀಶೈಲ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಜಿ.ಎಂ. ಪ್ರಸನ್ನಕುಮಾರ್ ಮಾತನಾಡಿ ಕಾಲೇಜು ಹಂತದಲ್ಲಿ ನಾವು ವಿದ್ಯಾರ್ಥಿಗಳಿಗೆ ಏಣಿ ಹತ್ತಿಸಬಹುದು. ಆದರೆ ವಿದ್ಯಾರ್ಥಿಜೀವನದಲ್ಲಿ ಓದಿನ ಜತೆಗೆ ಶಿಸ್ತು, ಕಾನೂನುಗಳನ್ನು ಮನನ ಮಾಡಿಕೊಳ್ಳಬೇಕು ಎಂದು ಹೇಳಿದರು.
    ಆಡಳಿತಾಧಿಕಾರಿ ವೈ.ಯು. ಸುಭಾಶ್ಚಂದ್ರ, ವಿ.ವಿ. ಕುಲಪತಿ ಡಾ.ಎಸ್.ಆರ್.ಶಂಕಪಾಲ್, ಉಪಕುಲಪತಿ ಎಚ್.ಡಿ. ಮಹೇಶಪ್ಪ, ರಿಜಿಸ್ಟ್ರಾರ್ ಬಿ.ಎಸ್. ಸುನಿಲ್ ಕುಮಾರ್,  ಜಿ.ಎಂ.ಐ.ಟಿ. ಪ್ರಾಚಾರ್ಯ ಎಂ.ಬಿ. ಸಂಜಯ್ ಪಾಂಡೆ, ಜಿ.ಎಂ. ಪಾಲಿಟೆಕ್ನಿಕ್ ಪ್ರಾಂಶುಪಾಲ ಬಿ.ಆರ್.ಶ್ರೀರ್,  ಗಿರೀಶ್ ಬೋಳಕಟ್ಟಿ, ಶ್ವೇತಾ ಮರಿಗೌಡರ್, ಎಚ್.ಎಸ್.ಓಂಕಾರಪ್ಪ,  ವಿದ್ಯಾರ್ಥಿ ವಿಭಾಗದ ಕಾರ್ಯದರ್ಶಿ ಎಚ್.ಎಸ್.  ಕಿರಣ್ ಕುಮಾರ್, ಸಹ ಪ್ರಾಧ್ಯಾಪಕ ಎಂ. ಸಂತೋಷ್‌ಕುಮಾರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts