More

    ಪಾಲಿಕೆಯ ನಕಲಿ ದಾಖಲೆ ಸೃಷ್ಟಿಸಿ ವಂಚನೆ

    ದಾವಣಗೆರೆ: ಕಂದಾಯ ಅಧಿಕಾರಿಯ ಸಹಿ ಮತ್ತು ಸೀಲ್ ನಕಲು ಮಾಡಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಮಹಾನಗರ ಪಾಲಿಕೆಗೆ ಆದಾಯ ವಂಚನೆ ಮಾಡಿರುವ ಹಗರಣ ಬೆಳಕಿಗೆ ಬಂದಿದೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಹೊನ್ನಾಳಿ ತಾಲೂಕು ಮಾಸಡಿ ಗ್ರಾಮದ ಮಹೇಶ್ ಎ.ಬಿ, ದಾವಣಗೆರೆಯ ಗುರುರಾಜ್ ಮತ್ತು ವೆಂಕಟೇಶ್ ಎಂಬುವವರನ್ನು ಪೊಲೀಸರು ಬಂಧಿಸಿದ್ದು, ತನಿಖೆ ಆರಂಭಿಸಿದ್ದಾರೆ.

    ಶಾಮನೂರು ಸರ್ವೆ ನಂ. 208 ರಲ್ಲಿ ಆರ್.ನೇತ್ರಾವತಿ ಮತ್ತು ರಾಜೇಶ್ವರಿ ವಂಚನೆಗೆ ಒಳಗಾದವರು. ಇವರ ಪ್ರಕರಣದಲ್ಲಿ ನಕಲಿ ಖಾತೆ ಎಕ್ಸ್‌ಟ್ರಾೃಕ್ಟ್ ನೀಡಿರುವುದು ಪತ್ತೆಯಾಗಿದೆ. ಈ ಕುರಿತು ಪಾಲಿಕೆಯ ಕಂದಾಯ ಅಧಿಕಾರಿ ನಾಗರಾಜ್ ಪೊಲೀಸರಿಗೆ ದೂರು ನೀಡಿದ್ದಾರೆ.

    ನಕಲಿ ಮೊಹರು ಮತ್ತು ನಕಲಿ ಸಹಿ ಮಾಡಿ, ಮುಗ್ಧ ಜನರಿಂದ 20 ರಿಂದ 30 ಸಾವಿರ ರೂ. ಹಣ ಪಡೆದು ವಂಚಿಸಿರುವುದು ಪತ್ತೆಯಾಗಿದೆ.

    ಬುಧವಾರ ಸುದ್ದಿಗೋಷ್ಠಿಯಲ್ಲಿ ಪ್ರಕರಣದ ವಿವರ ನೀಡಿದ ಮೇಯರ್ ಬಿ.ಜಿ.ಅಜಯಕುಮಾರ್, ಮಧ್ಯವರ್ತಿಗಳ ಈ ಕೃತ್ಯದಲ್ಲಿ ಅಧಿಕಾರಿಗಳು ಸೇರಿದಂತೆ ಇನ್ನೂ ಹಲವರು ಶಾಮೀಲಾಗಿರುವ ಸಾಧ್ಯತೆಯಿದೆ. ದಾವಣಗೆರೆ ನಗರಸಭೆ ಇದ್ದಾಗಿನಿಂದಲೂ ಈ ಜಾಲ ಕಾರ್ಯ ನಿರ್ವಹಿಸುತ್ತಿರುವ ಅನುಮಾನವಿದೆ ಎಂದರು.

    ಪ್ರತ್ಯೇಕ ಸುದ್ದಿಗೋಷ್ಠಿ ನಡೆಸಿದ ಎಸ್ಪಿ ಹನುಮಂತರಾಯ, ವಶಪಡಿಸಿಕೊಳ್ಳಲಾದ ಸೀಲ್‌ಗಳು 2010, 2012ನೇ ವರ್ಷದ ಹಳೆಯವೂ ಇವೆ. ಹಾಗಾಗಿ ಬಹಳ ವರ್ಷಗಳಿಂದ ಈ ಕೃತ್ಯ ನಡೆಯುತ್ತಿರಬಹುದು ಎಂಬ ಶಂಕೆ ವ್ಯಕ್ತಪಡಿಸಿದರು.

    ಪಾಲಿಕೆಗೆ ಕಂದಾಯ ಪಾವತಿಸಲು ಬಂದ ಸಾರ್ವಜನಿಕರಿಂದ ಹಣ ಪಡೆದು ಪಾಲಿಕೆಗೆ ಜಮಾ ಮಾಡದೇ ಸ್ವಂತಕ್ಕೆ ಉಪಯೋಗಿಸಿರುವುದೂ ಬೆಳಕಿಗೆ ಬಂದಿದೆ.

    ದಕ್ಷಿಣ ವೃತ್ತದ ಸಿಪಿಐ ಎಚ್. ಗುರುಬಸವರಾಜ್ ನೇತೃತ್ವದಲ್ಲಿ ಪಿಎಸ್‌ಐ ಚಿದಾನಂದಪ್ಪ, ಎಎಸ್‌ಐ ಕೆ.ಎಲ್. ತಿಪ್ಪೇಸ್ವಾಮಿ, ಸಿಬ್ಬಂದಿ ರಾಜು, ಲೋಕನಾಯ್ಕ, ಚಂದ್ರಪ್ಪ ಅವರನ್ನು ಒಳಗೊಂಡ ತಂಡ ತನಿಖೆ ನಡೆಸುತ್ತಿದೆ. ಪಾಲಿಕೆಯ ದಾಖಲೆಗಳ ಕುರಿತು ವರದಿ ನೀಡುವಂತೆ ಆಯುಕ್ತರಿಗೆ ಕೇಳಿದ್ದೇವೆ ಎಂದು ತಿಳಿಸಿದರು.

    ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಮಾತನಾಡಿ, ಮನೆ ಕಂದಾಯ ಕಟ್ಟಲು ಬಂದವರಿಂದಲೂ ಹಣ ಪಡೆದು ವಂಚಿಸಲಾಗಿದೆ ಎಂದು ಹೇಳಿದರು. ನಗರ ಡಿವೈಎಸ್ಪಿ ನಾಗೇಶ ಐತಾಳ್ ಸುದ್ದಿಗೋಷ್ಠಿಯಲ್ಲಿದ್ದರು.

    ಪಾಲಿಕೆಯ ಕೊಳೆ ತೊಳೆಯುವೆ: ಮಹಾನಗರ ಪಾಲಿಕೆಯಲ್ಲಿ ಇನ್ನೂ ಕೆಲವು ಹಗರಣಗಳು ನಡೆದಿದ್ದು ಕೆಲ ದಿನಗಳಲ್ಲೇ ಅವುಗಳನ್ನು ಬೆಳಕಿಗೆ ತರುವೆ. ಪಾಲಿಕೆಯ ಕೊಳೆ ತೊಳೆಯುವೆ ಎಂದು ಮೇಯರ್ ಬಿ.ಜಿ. ಅಜಯಕುಮಾರ್ ತಿಳಿಸಿದರು. ಪಾಲಿಕೆಯ ಎಲ್ಲ ಶಾಖೆಗಳಲ್ಲಿ ಶುಲ್ಕಗಳ ವಿವರವನ್ನು ಬರೆದ ಫಲಕಗಳನ್ನು ಅಳವಡಿಸಲಾಗುವುದು. ಮಧ್ಯವರ್ತಿಗಳ ಹಾವಳಿ ತಪ್ಪಿಸಿ ಸಾರ್ವಜನಿಕರ ಕೆಲಸಗಳು ಸುಲಭವಾಗಿ ಆಗುವಂತೆ ಮಾಡುವುದಾಗಿ ಭರವಸೆ ನೀಡಿದರು. ‘ಇ-ಆಸ್ತಿ’ ವ್ಯವಸ್ಥೆಯನ್ನು ಜಾರಿಗೆ ತರುವ ಗುರಿಯಿದೆ ಎಂದರು.

    ಈ ಹಿಂದೆ ಖಾತೆ ಎಕ್ಸ್‌ಟ್ರಾೃಕ್ಟ್ ಮಾಡಿಸಿಕೊಂಡ ಸಾರ್ವಜನಿಕರು ತಾವು ಪಾವತಿಸಿದ ಕಂದಾಯದ ರಸೀದಿಗಳನ್ನು ತಂದು ಪಾಲಿಕೆಯಲ್ಲಿ ಪರಿಶೀಲನೆ ಮಾಡಿಸಿಕೊಳ್ಳಬೇಕು.
    ಬಿ.ಜಿ. ಅಜಯಕುಮಾರ್ ಮೇಯರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts